More

    ರಾಯಣ್ಣ ಮೂರ್ತಿ ಪ್ರತಿಷ್ಠಾಪಿಸಲು ಆಗ್ರಹ

    ಬೆಳಗಾವಿ: ತಾಲೂಕಿನ ಪೀರನವಾಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾನೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ವಿವಿಧ ಕನ್ನಡಪರ ಸಂಘಟನೆ, ರಾಯಣ್ಣ ಬ್ರಿಗೇಡ್, ಹಾಲುಮತ ಮಹಾಸಭಾದ ಸಂಘಟನೆ ಕಾರ್ಯಕರ್ತರು ಸೋಮವಾರ ಪ್ರತಿಭಟನಾ ರ‌್ಯಾಲಿ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    74ನೇ ಸ್ವಾತಂ್ರತ್ಯ ದಿನಾಚರಣೆ ಅಂಗವಾಗಿ ಆ. 15ರಂದು ಪೀರನವಾಡಿ ಗ್ರಾಮದ ವೃತ್ತದ ಬಳಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಆದರೆ, ಸ್ಥಳೀಯ ಪೊಲೀಸರು ಪ್ರತಿಷ್ಠಾಪನೆ ಮಾಡಿದ್ದ ಮೂರ್ತಿ ತೆರವು ಮಾಡಿದ್ದಾರೆ. ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ ವಿವಿಧ ಸಂಘಟನೆಗಳ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿಷಯದಲ್ಲಿ ಪೊಲೀಸರು ಅಡ್ಡಿಪಡಿಸುತ್ತಿರುವುದು ನ್ಯಾಯೋಚಿತವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರಾಯಣ್ಣ ಮೂರ್ತಿ ಪ್ರತಿಷ್ಠಾಪಿಸಲು ಆಗ್ರಹ

    ಹೋರಾಟದ ಎಚ್ಚರಿಕೆ: ಪೀರನವಾಡಿ ವೃತ್ತದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರ ಕ್ರಮ ಕೈಗೊಂಡು ದೇಶಭಕ್ತ ರಾಯಣ್ಣನಿಗೆ ಗೌರವ ಸಲ್ಲಿಸಬೇಕು. ಲಾಠಿ ಚಾರ್ಜ್ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಜಕೀಯ ಲಾಭಕ್ಕಾಗಿ ಮೂರ್ತಿ ಪ್ರತಿಷ್ಠಾಪನೆಗೆ ವಿರೋಧ ವ್ಯಕ್ತಪಡಿಸಿದರೆ ಕಠಿಣ ಹೋರಾಟದ ಮೂಲಕ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕಾಗುತ್ತದೆ ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದರು.

    ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ನವ ನಿರ್ಮಾಣ ಸೇನೆ, ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ರಾಜ್ಯ ಯುವ ಘಟಕ, ರಾಯಣ್ಣ ಬ್ರಿಗೇಡ್, ಹಾಲುಮತ ಮಹಾಸಭಾದ ವಿವಿಧ ಘಟಕಗಳ ನೇತೃತ್ವದಲ್ಲಿ ಬಾಗಲಕೋಟೆ, ಹಾವೇರಿ, ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಚಿಕ್ಕೋಡಿ, ಕಿತ್ತೂರು ಸೇರಿ ಹಲವೆಡೆಯಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಬಾಬು ಸಂಗೋಡಿ, ಮಹೇಶ ಶಿಂಗಿಹಳ್ಳಿ, ಮಾರುತಿ ಮರಡಿ, ಸೋಮು ಮಲ್ಲೂರ, ವಿನಾಯಕ ಕಟ್ಟಿಕಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts