More

    ರಾಗಿ ಮಾರಾಟ, ನೋಂದಣಿಗೆ ಪರದಾಟ ; ಹುಳಿಯಾರು ಖರೀದಿ ಕೇಂದ್ರದಲ್ಲಿ ದೊಡ್ಡಹಿಡುವಳಿದಾರರ ಐಡಿ ಲಾಕ್

    ಹುಳಿಯಾರು: ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲು ಸೋಮವಾರ ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನೋಂದಣಿ ಆರಂಭವಾಯಿತು. ಆದರೆ ದೊಡ್ಡಹಿಡುವಳಿದಾರರ ಐಡಿ ಲಾಕ್ ಆಗಿರುವ ಪರಿಣಾಮ ನೋಂದಾಯಿಸಲು ಪರದಾಡುವಂತಾಯಿತು.

    ಮಾರುಕಟ್ಟೆಯಲ್ಲಿ ಕ್ವಿಂಟಾಲ್ ರಾಗಿಗೆ 1700 ರಿಂದ 1900 ರೂಪಾಯಿ ಇದ್ದಿದ್ದರಿಂದ ಸರ್ಕಾರ ನಫೆಡ್ ಕೇಂದ್ರ ತೆರೆಯುವುದನ್ನೇ ರೈತರು ಕಾದಿದ್ದರು. ಕ್ವಿಂಟಾಲ್ ರಾಗಿಗೆ 3377 ರೂ. ಬೆಂಬಲ ಬೆಲೆಯಲ್ಲಿ ನೋಂದಣಿ ಹಾಗೂ ಖರೀದಿಯನ್ನು ಏಕಕಾಲಕ್ಕೆ ಅಂದರೆ 2021ರ ಡಿ.28ರಂದು ಆರಂಭಿಸುವುದಾಗಿ ಆಹಾರ ಇಲಾಖೆ ತಿಳಿಸಿತ್ತಾದರೂ ಡಿ.28 ರಂದು ಖರೀದಿಸುವುದಿರಲಿ ನೋಂದಣಿ ಕಾರ್ಯವೇ ಹುಳಿಯಾರಿನಲ್ಲಿ ಆರಂಭವಾಗಿರಲಿಲ್ಲ.

    ನಿತ್ಯ ರೈತರು ಎಪಿಎಂಸಿಗೆ ಅಲೆಯುವುದು ಸಾಮಾನ್ಯವಾಗಿತ್ತು. ಸೋಮವಾರ ನೋಂದಣಿ ಪ್ರಕ್ರಿಯೆ ಆರಂಭಿಸುವುದಾಗಿ ತಿಳಿಸಿದ್ದರಿಂದ ಮುಂಜಾನೆಯಿಂದಲೇ ಪಹಣಿ, ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಹಾಗೂ ಫ್ರೂಟ್ಸ್ ಐಡಿ ಹಿಡಿದುಕೊಂಡು ಸಾಲಿನಲ್ಲಿ ರೈತರು ನಿಂತರು. ಸಣ್ಣ ಮತ್ತು ಅತೀ ಸಣ್ಣ ಹಿಡುವಳಿದಾರರು ನೋಂದಣಿ ಮಾಡಿಸಿ ಹಿಂದಿರುಗಿದರೆ ದೊಡ್ಡ ಹಿಡುವಳಿದಾರರು ನೋಂದಣಿಯಾಗದೆ ಪರದಾಡುತ್ತಿದ್ದರು.

    ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಠ 20 ಕ್ವಿಂಟಲ್ ರಾಗಿ ಖರೀದಿಸುವುದಾಗಿ ಸರ್ಕಾರ ತಿಳಿಸಿತ್ತು. ಅದರಂತೆ ದೊಡ್ಡಹಿಡುವಳಿದಾರರೂ 20 ಕ್ವಿಂಟಾಲ್ ರಾಗಿಯನ್ನಾದರೂ ಮಾರುವ ಆಸೆಯಿಂದ ನೋಂದಣಿಗಾಗಿ ಬಂದಿದ್ದರು. ಆದರೆ ಫ್ರೂಟ್ಸ್ ಸಾಫ್ಟ್‌ವೇರ್‌ನಲ್ಲಿ 4 ಎಕರೆಗಿಂತ ಹೆಚ್ಚಾಗಿರುವ ರೈತರ ನೊಂದಣಿ ಪ್ರಕ್ರಿಯೆ ಲಾಕ್ ಆಗಿದೆ. ಇದರಿಂದ ನೋಂದಣಿ ಮಾಡಿಸಲಾಗದೆ ದೊಡ್ಡಹಿಡುವಳಿದಾರರ ಆಕ್ರೋಶಕ್ಕೆ ಕಾರಣವಾಗಿದೆ.

    ಲಾಕ್ ಮಾಡಿರುವ ಉದ್ದೇಶವಾದರೂ ಏನು ?: ನೊಂದಣಿಗಾಗಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಕೊನೆಗೆ ನೋಂದಣಿ ಪ್ರಕ್ರಿಯೆ ಲಾಕ್ ಆಗಿದೆ, ಎನ್ನುತ್ತಿದ್ದಂತೆ ಖರೀದಿ ಅಧಿಕಾರಿಗಳ ಮೇಲೆ ರೈತರು ಎರಗಿದರು. ಈ ಹಿಂದಿನ ಎಲ್ಲ ರಾಗಿ ಖರೀದಿ ಸಂದರ್ಭದಲ್ಲೂ ದೊಡ್ಡಹಿಡುವಳಿದಾರರ ರಾಗಿ ಖರೀದಿಸಲಾಗಿತ್ತು. ಆದರೆ ಈಗ ಏಕಾಏಕಿ ಲಾಕ್ ಮಾಡಿರುವುದು ಸರಿಯಲ್ಲ. ಒಬ್ಬ ರೈತನಿಂದ ಗರಿಷ್ಠ 20 ಕ್ವಿಂಟಾಲ್ ಖರೀದಿಸುವುದಾಗಿ ನಿಗದಿ ಮಾಡಿದ ಮೇಲೂ ಲಾಕ್ ಮಾಡಿರುವ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದರು.
    ಸರ್ಕಾರ ರೈತರಲ್ಲಿ ತಾರತಮ್ಯ ಮಾಡುತ್ತಿದ್ದು, ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಬಳಿಯುತ್ತಿದೆ. ಒಂದೇ ಪಹಣಿಯಲ್ಲಿ ಇಬ್ಬರು ರೈತರ ಮೂರು ಮೂರು ಎಕರೆ ಜಮೀನು ಜಂಟಿಯಾಗಿರುತ್ತದೆ. ಹೀಗೆ 4 ಎಕರೆ ಮೇಲಿದೆ ಎಂದು ಲಾಕ್ ಮಾಡಿದರೆ ಇಬ್ಬರು ರೈತರಿಗೂ ಅನ್ಯಾಯ ಮಾಡಿದಂತಾಗುತ್ತದೆ. ಸರ್ಕಾರದ ಬೆಂಬಲೆ ಬೆಲೆ ಎಲ್ಲಾ ಬೆಳೆಗಾರರಿಗೂ ಸಿಗಬೇಕು. ಹಾಗಾಗಿ ತಕ್ಷಣ ದೊಡ್ಡಹಿಡುವಳಿದಾರರ ನೋಂದಣಿ ಅನ್‌ಲಾಕ್ ಮಾಡುವಂತೆ ಒತ್ತಾಯಿಸಿದರು.

    ಶಾಂತವಾದ ರೈತರು: ಗಲಾಟೆ ಶುರುವಾದ ಕೂಡಲೇ ಖರೀದಿ ಅಧಿಕಾರಿ ಶಿವರಾಜ್ ಅವರು ಆಹಾರ ಇಲಾಖೆ ಜಂಟಿ ನಿರ್ದೆಶಕರಾದ ಎಂ.ಸಿ.ಶ್ರೀನಿವಾಸಯ್ಯ ಅವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದಾಗ ಕೃಷಿ ಇಲಾಖೆಯವರೊಂದಿಗೆ ಮಾತನಾಡಿ ಸರಿಪಡಿಸುವ ಭರವಸೆ ಸಿಕ್ಕ ಮೇಲೆ ರೈತರು ಶಾಂತರಾದರು. ಅಲ್ಲದೆ ಇನ್ನೆರಡು ದಿನಗಳಲ್ಲಿ ಸಮಸ್ಯೆ ಇತ್ಯಾರ್ಥವಾಗದಿದ್ದರೆ ಪ್ರತಿಭಟನೆಯ ಹಾದಿ ತುಳಿಯಬೇಕಾಗುತ್ತದೆ ಎಂದು ಎಚ್ಚರಿಸಿ ವಾಪಸಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts