More

    ಮಳೆ ಬಂದರೆ ಕಷ್ಟ, ಬಾರದಿದ್ದರೆ ನಷ್ಟ ; ಕಟಾವಿಗೆ ಸಿದ್ಧವಾಗಿದೆ ಮುಂಗಾರು ರಾಗಿ

    ತಿಪಟೂರು : ತಾಲೂಕಿನಲ್ಲಿ ಮುಂಗಾರಿನ ರಾಗಿ ಬೆಳೆ ಕೊಯ್ಲು ಹಂತಕ್ಕೆ ಬಂದಿದೆ, ತಡವಾಗಿ ಬಿತ್ತನೆ ಮಾಡಲಾಗಿರುವ ರಾಗಿ ತೆನೆಗಟ್ಟುತ್ತಿದ್ದು ಮಳೆಗಾಗಿ ಕಾಯುತ್ತಿದೆ, ಸದ್ಯದ ಪರಿಸ್ಥಿತಿಯಲ್ಲಿ ಮಳೆ ಬಂದರೆ ಕಷ್ಟ, ಬಾರದಿದ್ದರೆ ನಷ್ಟ ಎಂಬಂತಹ ಅಡಕತ್ತರಿಯ ಪರಿಸ್ಥಿತಿ ಸೃಷ್ಟಿಯಾಗಿದೆ.

    ಮುಂಗಾರು ಹಂಗಾಮಿನ 18.500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾದ ರಾಗಿ ಬಹುತೇಕ ಕಟಾವಿಗೆ ಬಂದಿದೆ. ಬೆಳೆ ಸಮೀಕ್ಷೆ ವರದಿ ಅನುಸಾರ ಪ್ರತಿ ಎಕರೆಗೆ 12ರಿಂದ 15ಕ್ವಿಂಟಾಲ್ ಇಳುವರಿ ಬರುವ ನಿರೀಕ್ಷೆ ಇದೆ. ಈಗಾಗಲೇ ಹೊನ್ನವಳ್ಳಿ ಹೋಬಳಿಯ ಕೆಲವೆಡೆ ಕಟಾವು ಯಂತ್ರದ ಮೂಲಕ ಕೊಯ್ಲು ಪ್ರಾರಂಭಿಸಲಾಗಿದ್ದು, ಇತರೆಡೆ 10-15 ದಿನದ ನಂತರ ಕಟಾವಿಗೆ ಸಿದ್ಧತೆ ನಡೆದಿದೆ, ಮಳೆ ಬಾರದಿದ್ದರೇ ಒಳ್ಳೆಯದು ಎನ್ನುತ್ತಾರೆ ಕಟಾವಿನ ಸಿದ್ಧತೆಯಲ್ಲಿರುವ ರೈತರು.

    ಇನ್ನು ಪೂರ್ವ ಮುಂಗಾರಿನ ಹೆಸರು ಕಾಳು ಕಟಾವು ಮಾಡಿದ ನಂತರ ತಡವಾಗಿ ಅಂದಾಜು 2 ಸಾವಿರ ಹೆಕ್ಟೇರಿನಲ್ಲಿ ಬಿತ್ತನೆ ಮಾಡಲಾಗಿರುವ ರಾಗಿ ಪೈರು ಈಗ ತೆನೆೆಗಟ್ಟುವ ಹಂತದಲ್ಲಿದ್ದು, ಮಳೆಯ ನಿರೀಕ್ಷೆಯಲ್ಲಿದೆ. ಸದ್ಯ ಅಲ್ಪ ಪ್ರಮಾಣದ ಸೋನೆ ಮಳೆ ಬಂದರೂ ಪೈರು ನಳನಳಿಸುತ್ತದೆ.

    ಆದರೆ ನಿರೀಕ್ಷೆಗಿಂತ ಅಧಿಕ ಮಳೆ ಬಿದ್ದರೆ, ಈಗಾಗಲೇ ಕಟಾವಿಗೆ ಬಂದಿರುವ ರಾಗಿ ನೆಲಕಚ್ಚುವ ಸಾಧ್ಯತೆಗಳಿವೆ. ಪೈರು ನೆಲಕಚ್ಚಿದರೆ ಕಟಾವು ಕಷ್ಟವಾಗಲಿದ್ದು, ತೆನೆ ಬೆಳೆಯಲ್ಲೇ ಮೊಳಕೆಯೊಡೆಯುವ ಸಾಧ್ಯತೆಯೂ ಇದೆ. ಶೇ.90 ಬೆಳೆಗೆ ಮಳೆ ಅವಶ್ಯವಿಲ್ಲ. ಆದರೆ, ಉಳಿದ ಶೇ.10 ಬೆಳೆೆಗೆ ಮಳೆ ಅವಶ್ಯವಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಳೆ ಬಂದರೆ ಕಷ್ಟ, ಬಾರದಿದ್ದರೆ ನಷ್ಟ ಎಂಬಂತಾಗಿದೆ.

    ಬಿತ್ತನೆ ಪ್ರಮಾಣ :ತಾಲೂಕಿನಲ್ಲಿ 50,722 ಹೆಕ್ಟೇರ್ ಬಿತ್ತನೆ ಪ್ರದೇಶವಿದೆ, ಈ ಪೈಕಿ 23,590 ಹೆಕ್ಟೇರ್ ಕೃಷಿಯೋಗ್ಯ ಭೂಮಿ ಇದ್ದು, ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾದ ಕಾರಣ ನಿಗದಿತ ಗುರಿಗಿಂತಲೂ 26,475 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆ ಬಿತ್ತಲಾಗಿದೆ. ಈ ಪೈಕಿ 18,500 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ತೆನೆದೂಗುತ್ತಿದೆ.

    ಯಂತ್ರಗಳ ಸದ್ದು : ಮುಂಗಾರು ಹಂಗಾಮಿನ ಮಳೆ, ಬೆಳೆ ಸ್ಥಿತಿ ತಿಳಿದುಕೊಳ್ಳುವ ತಮಿಳುನಾಡು ಮೂಲದವರು ಈಗಾಗಲೇ ಜಿಲ್ಲೆಯಾದ್ಯಂತ ರಾಗಿ ಕಟಾವಿನ ಯಂತ್ರಗಳ ಸಮೇತ ಬೀಡು ಬಿಡುತ್ತಿದ್ದಾರೆ. ಪಕ್ಕದ ಚಿಕ್ಕನಾಯಕನಹಳ್ಳಿ, ತುರುವೆಕೆರೆ, ಅರಸೀಕೆರೆ ತಾಲೂಕಿನ ಜೆ.ಸಿ.ಪುರ, ತಿಪಟೂರು ತಾಲೂಕಿನೆಲ್ಲೆಡೆ ಅತ್ಯಾಧುನಿಕ ರಾಗಿ ಕಟಾವಿನ ಯಂತ್ರಗಳು ಸದ್ದು ಮಾಡುತ್ತಿವೆ.

    ಕಟಾವಿಗೆ ದರ ನಿಗದಿ :ಕಳೆದ ವರ್ಷ ರಾಗಿ ಕಟಾವಿಗೆ ಒಂದು ಗಂಟೆಗೆ 3 ರಿಂದ 4 ಸಾವಿರ ರೂ. ಹಣ ಪಡೆದ ನಿದರ್ಶನಗಳಿವೆ. ಇದನ್ನು ಮನಗಂಡ ಶಾಸಕ ಬಿ.ಸಿ.ನಾಗೇಶ್ ಕಳೆದ ವಾರ ತಹಸೀಲ್ದಾರ್ ಸಮ್ಮುಖದಲ್ಲಿ ರೈತರು, ಕಟಾವು ಯಂತ್ರದ ಮಾಲೀಕರು ಮತ್ತು ದಲ್ಲಾಳಿಗಳ ಸಭೆ ನಡೆಸಿ ಕರೊನಾ ಸಂಕಷ್ಟದಲ್ಲಿರುವ ರೈತರಿಗೆ ಅನ್ಯಾಯವಾಗದಂತೆ, ನ್ಯಾಯ ಸಮ್ಮತವಾಗಿ ಗಂಟೆಗೆ 2,500 ರೂ. ಪಡೆಯಬೇಕೆಂದು ನಿಗದಿ ಮಾಡಿದ್ದು ಎಲ್ಲರೂ ಒಪ್ಪಿದ್ದಾರೆ ಎನ್ನಲಾಗಿದೆ.

    ನಿಗದಿತ ಗುರಿಗಿಂತ ಹೆಚ್ಚು ಪ್ರದೇಶದಲ್ಲಿ ರಾಗಿ ಬಿತ್ತನೆ ಆಗಿದೆ. ಸದ್ಯದ ಸ್ಥಿತಿಯಲ್ಲಿ ಎಕರೆಗೆ 12 ರಿಂದ 15 ಕ್ವಿಂಟಾಲ್ ರಾಗಿ ಇಳುವರಿ ಬರುವ ನಿರೀಕ್ಷೆಯಿದೆ. ಕೈ ಕಟಾವಿನ ಖರ್ಚು ಲೆಕ್ಕ ಹಾಕಿದರೆ ಯಂತ್ರಗಳ ಮೂಲಕ ಕಟಾವು ಮಾಡಿಸುವುದರಿಂದ ಸಮಯ ಉಳಿತಾಯವಾಗಿ, ಅಂದೇ ರಾಗಿ ಕಣಜ ಸೇರುತ್ತದೆ. ರೈತರಿಗೆ ಶ್ರಮವೂ ತಪ್ಪುತ್ತದೆ.
    ಡಾ.ಎನ್.ಕೆಂಗೇಗೌಡ,
    ತಾಲೂಕು ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ತಿಪಟೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts