More

    ಪಾತಾಳಕ್ಕೆ ಕುಸಿದ ಅಂತರ್ಜಲ ! ಬರದ ನಡುವೆ ಬತ್ತುತ್ತಿದೆ ಅಳಿದುಳಿದ ಜೀವಜಲ ಖಾಲಿಯಾಗುತ್ತಿದೆ ಕೆರೆ, ಕಟ್ಟೆಗಳ ಒಡಲು

    ಕೇಶವಮೂರ್ತಿ ವಿ.ಬಿ. ಹಾವೇರಿ
    ಕಳೆದ ವರ್ಷ ಅತಿವೃಷ್ಠಿಯಿಂದ ಕಂಗೆಟ್ಟಿದ್ದ ಜಿಲ್ಲೆಯ ಜನತೆಗೆ ಈ ವರ್ಷ ಬರಸಿಡಿಲು ಬಂದೆರಗಿದೆ. ಮಳೆಯ ತೀವ್ರ ಕೊರತೆಯಿಂದಾಗಿ ಜಿಲ್ಲೆಯ ನದಿಗಳು, ಕೆರೆ, ಕಟ್ಟೆಗಳ ಒಡಲು ಖಾಲಿಯಾಗುತ್ತಿದೆ. ಇದರಿಂದಾಗಿ ಅಂತರ್ಜಲ ಮಟ್ಟ ಗರಿಷ್ಠ ಮಟ್ಟದಲ್ಲಿ ಪಾತಾಳಕ್ಕೆ ಕುಸಿಯುತ್ತಿದೆ. ಇದರಿಂದಾಗಿ ಕೃಷಿ ಭೂಮಿಯ ಜತೆಗೆ ಜನ, ಜಾನುವಾರುಗಳ ಗಂಟಲು ಒಣಗುತ್ತಿದೆ.
    2020ರ ಫೆಬ್ರವರಿ ತಿಂಗಳಲ್ಲಿ 11.88 ಮೀಟರ್ ಇದ್ದ ಅಂತರ್ಜಲ ಮಟ್ಟ, 2021ರ ಫೆಬ್ರವರಿಯಲ್ಲಿ 11.03 ಮೀ., 2022ರ ಫೆಬ್ರವರಿಯಲ್ಲಿ 10.09 ಮೀ., 2023ರ ಫೆಬ್ರವರಿಯಲ್ಲಿ 11.04 ಮೀ., 2024ರ ಫೆಬ್ರವರಿಯಲ್ಲಿ 20.14 ಮೀಟರ್‌ಗೆ ಇಳಿದಿದೆ. ಅಂದರೆ ಕೇವಲ ಒಂದೇ ವರ್ಷದಲ್ಲಿ ಬರೋಬ್ಬರಿ 9 ಮೀಟರ್‌ನಷ್ಟು ಅಂತರ್ಜಲ ಕುಸಿತ ಕಂಡಿದೆ.
    ಜಿಲ್ಲೆಯಲ್ಲಿ ತುಂಗಭದ್ರಾ, ವರದಾ, ಕುಮಧ್ವತಿ, ಧರ್ಮಾ ನದಿಗಳು ಹರಿಯುತ್ತವೆ. ಜಿಲ್ಲೆಯು ದಕ್ಷಿಣ ಪ್ರಸ್ಥಭೂಮಿಯಾಗಿದ್ದು, ರಾಜ್ಯದ ಮಧ್ಯ ಭಾಗದಲ್ಲಿದೆ. ಅರೆ ಮಲೆನಾಡು ಮತ್ತು ಅರೆ ಉಷ್ಣವಲಯ ಪ್ರದೇಶವಾಗಿದೆ. ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮೇ ತಿಂಗಳಿಂದ ಅಕ್ಟೋಬರ್‌ವರೆಗೆ ನೈಋತ್ಯ ಮುಂಗಾರು ಮಳೆ ಸುರಿಯುತ್ತದೆ. ನವೆಂಬರ್‌ನಿಂದ ಡಿಸೆಂಬರ್‌ವರೆಗೆ ಈಶಾನ್ಯ ಮುಂಗಾರಿನಲ್ಲಿ ಕಡಿಮೆ ಪ್ರಮಾಣದ ಮಳೆ ಸುರಿಯುತ್ತದೆ.
    2020ರ ಅಂತರ್ಜಲ ಮೌಲೀಕರಣದ ಪ್ರಕಾರ ಜಿಲ್ಲೆಯ ರಟ್ಟಿಹಳ್ಳಿ, ಬ್ಯಾಡಗಿ, ಹಿರೇಕೆರೂರ ಮತ್ತು ರಾಣೆಬೆನ್ನೂರ ತಾಲೂಕುಗಳಲ್ಲಿ ಅಂತರ್ಜಲ ಹೆಚ್ಚಾಗಿ ಬಳಕೆಯಾಗುತ್ತಿದೆ. ಉಳಿದ ತಾಲೂಕುಗಳಲ್ಲೂ ಬೋರ್‌ವೆಲ್‌ಗಳ ಮೇಲೆ ಹೆಚ್ಚಿನ ಅವಲಂಬನೆಯಾಗುತ್ತಿದೆ. ಹಾಗಾಗಿ, ಅನೇಕ ಬೋರ್‌ವೆಲ್‌ಗಳಲ್ಲಿ ನೀರಿನ ಸೆಲೆಯೂ ಕಣ್ಮರೆಯಾಗುತ್ತಿದೆ. ಹಲವು ಬೋರ್‌ವೆಲ್‌ಗಳು ಬತ್ತಿ ಹೋಗುತ್ತಿವೆ.
    ಇದರಿಂದಾಗಿ ಜಿಲ್ಲೆಯಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ಸದ್ಯಕ್ಕೆ ಇರುವ ನೀರು ಪೋಲಾಗದಂತೆ ಕಾಪಾಡುವುದು. ಮಿತವಾಗಿ ಬಳಸುವುದು ನಮ್ಮೆಲ್ಲರ ಮೇಲಿನ ಜವಾಬ್ದಾರಿಯಾಗಿದೆ. ಮಳೆ ನೀರು ಕೊಯ್ಲು, ಮತ್ತಿತರ ಯೋಜನೆಗಳ ಮೂಲಕ ಅಂತರ್ಜಲ ಹೆಚ್ಚಿಸುವ ಕಾರ್ಯದಲ್ಲಿ ಸರ್ಕಾರದ ಜತೆಗೆ ಸಾರ್ವಜನಿಕರೂ ತೊಡಗಿಸಿಕೊಳ್ಳಬೇಕಿದೆ.
    ಮಳೆ ಕೊರತೆ
    2023ರ ಜನವರಿಯಿಂದ ಮೇವರೆಗೆ ಜಿಲ್ಲೆಯಲ್ಲಿ 120 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಆದರೆ, ಕೇವಲ 83 ಮಿ.ಮೀ. ಮಳೆ ಸುರಿದಿದೆ. ಅಂದರೆ ಶೇ.31ರಷ್ಟು ಕೊರತೆಯಾಗಿದೆ. ಜೂನ್‌ನಲ್ಲಿ 119 ಮಿ.ಮೀ. ವಾಡಿಕೆ ಮಳೆಗೆ 48 ಮಿ.ಮೀ. ಮಳೆ ಸುರಿಯುವ ಮೂಲಕ ಶೇ.60ರಷ್ಟು ಮಳೆ ಕೊರತೆಯಾಗಿದೆ. ಸೆಪ್ಟೆಂಬರ್‌ನಲ್ಲಿ 107 ಮಿ.ಮೀ. ವಾಡಿಕೆ ಮಳೆಗೆ ಕೇವಲ 38 ಮಿ.ಮೀ. ಮಳೆ ಸುರಿಯಿತು. ಶೇ.63ರಷ್ಟು ಮಳೆ ಕೊರತೆ ಎದುರಾಗಿತ್ತು.
    ಮಲೆನಾಡ ಸೆರಗಲ್ಲೇ ಸೊರಗುತ್ತಿದೆ
    ಮಲೆನಾಡ ಸೆರಗು ಹಿರೇಕೆರೂರ, ಹಾನಗಲ್ಲ, ರಟ್ಟಿಹಳ್ಳಿ ಭಾಗದಲ್ಲಿ ಅಂತರ್ಜಲ ಮಟ್ಟ ವೇಗವಾಗಿ ಕುಸಿಯುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಪ್ರಸಕ್ತ ವರ್ಷದ ಫೆಬ್ರವರಿಯಲ್ಲಿ ಹಿರೇಕೆರೂರ ತಾಲೂಕಿನ ಅಂತರ್ಜಲ 35.20 ಮೀಟರ್‌ಗೆ ಕುಸಿದಿದ್ದರೆ, ಹಾವೇರಿ ತಾಲೂಕಲ್ಲಿ 24.90 ಮೀ., ರಟ್ಟಿಹಳ್ಳಿ 23.55 ಮೀ., ಹಾನಗಲ್ಲ 20.07 ಮೀಟರ್‌ಗೆ ಇಳಿದಿದೆ. ಮಲೆನಾಡ ಸೆರಗಲ್ಲೇ ಹೀಗಾರದರೆ ಈ ವರ್ಷದ ಬೇಸಿಗೆ ಕಳೆಯುವುದು ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲಿ ಕಾಡುತ್ತಿದೆ.

    ಕೋಟ್:
    ಅಂತರ್ಜಲ ಹೆಚ್ಚಳ ಕುರಿತು ಎಲ್ಲರೂ ಗಮನ ಹರಿಸಬೇಕು. ಮನರೇಗಾ ಯೋಜನೆಯಡಿ ಕೆರೆ ಹೂಳೆತ್ತುವುದು, ಎಲ್ಲ ಕರೆಗಳನ್ನು ತುಂಬಿಸುವ ಯೋಜನೆಗಳನ್ನು ಸಮರ್ಪಕವಾಗಿ ಮಾಡಬೇಕು. ಮಳೆನೀರು ಕೊಯ್ಲು ಯೋಜನೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ರೈತರು ಕಡಿಮೆ ನೀರಿನಲ್ಲಿ ಬೆಳೆಯುವ ಬೆಳೆಗಳನ್ನು ಬೆಳೆಯಬೇಕು. ಹನಿ ನೀರಾವರಿ ಯೋಜನೆ ಅಳವಡಿಸಿಕೊಳ್ಳಬೇಕು.
    – ಸಂತೋಷಪ್ಯಾಟಿ ಗಾಣಗೇರ, ಹಿರಿಯ ಭೂವಿಜ್ಞಾನಿ

    ಕೋಟ್:

    ಡಿಸೆಂಬರ್‌ನಲ್ಲಿ ಹಿಂಗಾರಿ ಬೆಳೆಯಾಗಿ ಒಂದು ಎಕರೆ ಚಂಡು ಹೂವು, ಎರಡು ಎಕರೆ ಗೋವಿನಜೋಳ ಬಿತ್ತನೆ ಮಾಡಿದ್ದೆವು. ಗೋವಿನ ಜೋಳ ಆಳೆತ್ತರಕ್ಕೆ ಬಂದಿತ್ತು. ಚಂಡು ಹೂವು ಚೆನ್ನಾಗಿ ಬಿಡುತ್ತಿತ್ತು. ಕಳೆದ ತಿಂಗಳ ಹಿಂದೆ ಕೊಳವೆಬಾವಿ ಬತ್ತಿ ಹೋದ ಪರಿಣಾಮ ಎಲ್ಲ ಗಿಡಗಳೂ ಒಣಗಿಹೋಗಿದೆ.
    – ಪರಮೇಶ ಬಡಿಗೇರ, ದಿಡಗೂರ ಗ್ರಾಮದ ರೈತ

    ತಾಲೂಕುವಾರು ಅಂತರ್ಜಲ ಮಟ್ಟದ ವಿವರ
    (ಫೆಬ್ರವರಿ ತಿಂಗಳಲ್ಲಿ. ಮೀಟರ್‌ಗಳಲ್ಲಿ)

    ತಾಲೂಕು 2020 2021 2022 2023 2024
    ಹಾವೇರಿ 14.27 13.23 12.82 15.34 24.90
    ರಾಣೆಬೆನ್ನೂರ 9.18 9.86 8.35 8.58 14.70
    ಹಿರೇಕೆರೂರ 15.26 12.58 12.98 2.65 35.20
    ರಟ್ಟಿಹಳ್ಳಿ 14.39 11.64 12.98 13.99 23.55
    ಬ್ಯಾಡಗಿ 11.64 9.93 9.30 9.54 16.49
    ಹಾನಗಲ್ಲ 12.68 12.00 11.05 12.31 20.07
    ಸವಣೂರ 12.08 13.98 11.95 9.42 17.58
    ಶಿಗ್ಗಾಂವಿ 5.57 4.49 5.06 6.47 8.63

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts