ಕೊಯಿಕ್ಕೋಡ್: ದೇಶದಲ್ಲೇ ವಿನೂತನ ಮದುವೆ ಸಂಭ್ರಮಕ್ಕೆ ದೇವರ ನಾಡು ಕೇರಳ ಸಾಕ್ಷಿಯಾಗಿದೆ. ಸೆ.4ರಂದು ದೇಶದ ಅತಿ ಕಿರಿಯ ಮೇಯರ್ ಆರ್ಯಾ ರಾಜೇಂದ್ರನ್ ಹಾಗೂ ಕೇರಳದ ಅತಿ ಕಿರಿಯ ಶಾಸಕ ಕೆ.ಎಂ. ಸಚಿನ್ ದೇವ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ತಿರುವನಂತಪುರದ ಎಕೆಜಿ ಹಾಲ್ನಲ್ಲಿ ಬೆಳಗ್ಗೆ 11 ಗಂಟೆಗೆ ನಡೆದ ಸರಳ ಮದುವೆ ಸಮಾರಂಭದಲ್ಲಿ ಇಬ್ಬರು ಸಪ್ತಪದಿ ತುಳಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಚಿವರು, ಪಕ್ಷದ ಕಾರ್ಯಕರ್ತರು, ಬಂಧು-ಬಳಗ ಹಾಗೂ ಸ್ನೇಹ ಬಳಗ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾದರು. ಸರಳವಾಗಿ ಮದುವೆ ಆಗುವುದಾಗಿ ಆಹ್ವಾನ ಪತ್ರಿಕೆಯಲ್ಲಿ ಮೊದಲೇ ಇಬ್ಬರು ಉಲ್ಲೇಖಿಸಿದ್ದರು. ಸೆ.6ರಂದು ಮದುವೆ ಆರತಕ್ಷತೆ ಕೋಯಿಕ್ಕೋಡ್ನ ಠಾಗೋರ್ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ.
ತಿರುವನಂತಪುರದ ಮೇಯರ್ ಆರ್ಯಾ ರಾಜೇಂದ್ರನ್ (21) ಹಾಗೂ ಬಲುಸ್ಸೆರಿ ಕ್ಷೇತ್ರದ ಶಾಸಕ ಕೆ.ಎಂ. ಸಚಿನ್ ದೇವ್ (28) ಕಳೆದ ಮಾರ್ಚ್ನಲ್ಲಿ ಇಬ್ಬರ ನಿಶ್ಚಿತಾರ್ಥ ನಡೆಯಿತು. ಕೇರಳದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಭಾರತೀಯ ಮಕ್ಕಳ ಸಂಘಟನೆಯ ವಿಭಾಗ ಬಾಲಸಂಗಮದಿಂದಲೂ ಇಬ್ಬರು ಪರಸ್ಪರ ಪರಿಚಿತರಾಗಿದ್ದಾರೆ. ಸಚಿನ್ ಕೇರಳ ವಿಧಾನಸಭೆಯ ಅತಿ ಕಿರಿಯ ಶಾಸಕನೆಂಬ ಹೆಗ್ಗಳಿಕೆ ಹೊಂದಿದ್ದಾರೆ. ಇನ್ನೊಂದೆಡೆ ಆರ್ಯಾ ರಾಜೇಂದ್ರನ್ ದೇಶದ ಕಿರಿಯ ಮೇಯರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಎಸ್ಎಫ್ಐ ಸಂಘಟನೆಯ ಅಖಿಲ ಭಾರತೀಯ ಜಂಟಿ ಕಾರ್ಯದರ್ಶಿಯಾಗಿರುವ ಶಾಸಕ ಸಚಿನ್ ದೇವ್, ಕೊಯಿಕ್ಕೋಡ್ನ ನೆಲ್ಲಿಕೋಡ್ ಮೂಲದವರು. ಎಸ್ಎಫ್ಐನ ರಾಜ್ಯ ಕಾರ್ಯದರ್ಶಿ ಆಗಿದ್ದ ಸಮಯದಲ್ಲಿ ಬಲುಸ್ಸೆರಿ ವಿಧಾನಸಭೆ ಚುನಾವಣೆಯಿಂದ ಸ್ಪರ್ಧಿಸಿದ್ದರು. ಸಚಿನ್ ಅವರು ಕೊಯಿಕ್ಕೂಡ್ ಸರ್ಕಾರಿ ಕಲಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಶಿಕ್ಷಣ ಮತ್ತು ಕೊಯಿಕ್ಕೋಡ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದಿದ್ದಾರೆ.
ಆರ್ಯಾ ರಾಜೇಂದ್ರನ್ ಅವರು 21ನೇ ವಯಸ್ಸಿನಲ್ಲೇ ತಿರುವನಂತಪುರದ ಆಲ್ ಸೇಂಟ್ಸ್ ಕಾಲೇಜಿನ ವಿದ್ಯಾರ್ಥಿಯಾಗಿರುವಾಗಲೇ ತಿರುವನಂತಪುರದ ಮೇಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. (ಏಜೆನ್ಸೀಸ್)
ಕೇವಲ 2 ರೂಪಾಯಿಗೆ ಭರ್ಜರಿ ನಾನ್ ವೆಜ್ ಊಟ! ಚಿಕನ್, ಮೊಟ್ಟೆಗಾಗಿ ಮುಗಿಬಿದ್ದ ಜನರು
ಬಾಲಿವುಡ್ ಟಾರ್ಗೆಟ್ ಆಗಿರುವುದೇಕೆ? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನಟಿ ಸ್ವರಾ ಭಾಸ್ಕರ್!
ಹಳಿ ಮೇಲೆ ನಿಂತು Instagram ರೀಲ್ಸ್ ಮಾಡುವಾಗ ರೈಲು ಡಿಕ್ಕಿ: ಹಾರಿ ಹೋಗಿ ಬಿದ್ದ ವಿದ್ಯಾರ್ಥಿಯ ಸ್ಥಿತಿ ಗಂಭೀರ