More

    ಅಮ್ಮನ ವಿರುದ್ಧವೇ ದೂರು ದಾಖಲಿಸಿದ್ದ ಪುಟ್ಟ ಪೋರನಿಗೆ ಗೃಹ ಸಚಿವರಿಂದ ಸಿಕ್ತು ದೀಪಾವಳಿ ಗಿಫ್ಟ್!​

    ಭೋಪಾಲ್​: ಕ್ಯಾಂಡಿಗಳನ್ನು ತಿನ್ನಲು ನನ್ನಮ್ಮ ಬಿಡುತ್ತಿಲ್ಲ ಎಂದು ಪೊಲೀಸ್​ ಠಾಣೆಗೆ ತೆರಳಿ ತಾಯಿಯ ವಿರುದ್ಧವೇ ದೂರು ದಾಖಲಿಸಿ, ಭಾರಿ ಸುದ್ದಿಯಾದ ಮೂರು ವರ್ಷದ ಪುಟ್ಟ ಪೋರನಿಗೆ ಮಧ್ಯಪ್ರದೇಶದ ಸಚಿವರು ಭರ್ಜರಿ ಉಡುಗೊರೆಯೊಂದನ್ನು ನೀಡಿದ್ದಾರೆ.

    ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್​ ಮಿಶ್ರಾ ಅವರು ಮಗು ಹಮ್ಜಾಗೆ ದೀಪಾವಳಿ ಉಡುಗೊರೆಯಾಗಿ ಸೈಕಲ್ ಗಿಫ್ಟ್​ ನೀಡಿದ್ದಾರೆ. ಅಲ್ಲದೆ, ಚಾಕೋಲೆಟ್​ ಸೇರಿದಂತೆ ಬೇಕಾದಷ್ಟು ಸಿಹಿ ತಿನಿಸುಗಳನ್ನು ಸಹ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

    ಬುರ್ಹಾನ್​ಪುರ್​ನ ಡೆಡ್ತಲೈದಲ್ಲಿರುವ ಪೊಲೀಸ್​ ಠಾಣೆಗೆ ತೆರಳಿ, ಸಬ್​ ಇನ್ಸ್​ಪೆಕ್ಟರ್​ ಪ್ರಿಯಾಂಕಾ ನಾಯಕ್ ಅವರಿಗೆ ತಾಯಿಯ ವಿರುದ್ಧ ಮಗು ಹಮ್ಜಾ ದೂರು ನೀಡಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಗೃಹ ಸಚಿವರ ಗಮನಕ್ಕೆ ಬಂದಿತು. ಕೂಡಲೇ ಅವರು ಹಮ್ಜಾ ಜೊತೆ ವಿಡಿಯೋ ಕಾಲ್​ನಲ್ಲಿ ಮಾತನಾಡಿ ಗಿಫ್ಟ್​ ಕಳುಹಿಸಿಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಸೈಕಲ್​ ಮತ್ತು ಸಿಹಿತಿನಿಸುಗಳನ್ನು ಕಳುಹಿಸಿಕೊಟ್ಟಿದ್ದಾರೆ.

    ಘಟನೆ ಹಿನ್ನೆಲೆ ಏನು?
    ಅಮ್ಮ ನನ್ನ ಕ್ಯಾಂಡಿಗಳನ್ನು ಕದ್ದು, ನನ್ನ ಕಪಾಳಕ್ಕೆ ಬಾರಿಸಿದಳು ಎಂದು ಕುಪಿತಗೊಂಡ ಮಗು ಅಪ್ಪನ ಸಹಾಯದಿಂದ ಪೊಲೀಸ್​ ಠಾಣೆಗೆ ತೆರಳಿ ಅಮ್ಮನ ವಿರುದ್ಧವೇ ದೂರು ದಾಖಲಿಸಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ವಿಡಿಯೋದಲ್ಲಿ ಹಮ್ಜಾ, ಬುರ್ಹಾನ್​ಪುರ್​ನ ಡೆಡ್ತಲೈದಲ್ಲಿರುವ ಪೊಲೀಸ್​ ಠಾಣೆಗೆ ತೆರಳಿ, ಸಬ್​ ಇನ್ಸ್​ಪೆಕ್ಟರ್​ ಪ್ರಿಯಾಂಕಾ ನಾಯಕ್ ಅವರಿಗೆ ತನ್ನ ನೋವಿನ ಕತೆ ಹೇಳಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ನನ್ನ ಅಮ್ಮ ನನ್ನ ಕ್ಯಾಂಡಿಗಳನ್ನು ಕದ್ದಿದ್ದಾರೆ. ಆಕೆಯನ್ನು ಜೈಲಿಗೆ ಹಾಕಿ ಎಂದು ಮಗು, ಸಬ್​ ಇನ್ಸ್​ಪೆಕ್ಟರ್​ಗೆ ಹೇಳಿದೆ. ಮಗುವಿನ ಮುಗ್ಧತೆಯನ್ನು ನೋಡಿ, ನಗೆಗಡಲಲ್ಲಿ ತೇಲಿದ ಎಸ್​ಐ ಪ್ರಿಯಾಂಕಾ, ತಮ್ಮ ನಗುವನ್ನು ನಿಯಂತ್ರಿಸಲು ಪರದಾಡುತ್ತಾ, ಮಗುವಿಗೆ ಕೆಲವು ಪ್ರಶ್ನೆಗಳನ್ನು ಕೇಳಿ, ದೂರು ಬರೆದುಕೊಳ್ಳುತ್ತಿರುವಂತೆ ನಟಿಸುತ್ತಾರೆ. ಬಳಿಕ ಮಗು ಪೇಪರ್​ಗೆ ಸಹಿ ಮಾಡುತ್ತದೆ. ಆದಷ್ಟು ಬೇಗ ನಿಮ್ಮ ಅಮ್ಮನನ್ನು ಬಂಧಿಸುವುದಾಗಿ ಹೇಳಿ ಭರವಸೆ ನೀಡಿ ಕಳುಹಿಸುವುದು ವಿಡಿಯೋದಲ್ಲಿದೆ.

    ಮಗುವಿನ ತಂದೆ ಈ ಬಗ್ಗೆ ಮಾತನಾಡಿದ್ದು, ಹಮ್ಜಾ ಕ್ಯಾಂಡಿಗಳನ್ನು ಕೇಳಿದಾಗ ತಾಯಿ ಮೃದುವಾಗಿ ಕೆನ್ನೆಗೆ ಬಾರಿಸಿದಳು. ಇದರ ಬೆನ್ನಲ್ಲೇ ತನ್ನ ಪೊಲೀಸ್​ ಠಾಣೆಗೆ ಕರೆದೊಯ್ಯುವಂತೆ ಹಮ್ಜಾ ಹೇಳಿದನು ಎಂದು ಪೊಲೀಸರಿಗೆ ತಿಳಿಸಿದ್ದಾರೆ.

    ವಿಡಿಯೋ ತುಣುಕು ವೈರಲ್ ಆದ ನಂತರ, ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಮಗುವಿಗೆ ವಿಡಿಯೋ ಕರೆ ಮೂಲಕ ಮಾತನಾಡಿ, ದೀಪಾವಳಿಯಂದು ಮಗುವಿಗೆ ಚಾಕೊಲೇಟ್ ಮತ್ತು ಸೈಕಲ್ ಕಳುಹಿಸುವುದಾಗಿ ಭರವಸೆ ನೀಡಿದ್ದರು. (ಏಜೆನ್ಸೀಸ್​)

    ಠಾಣೆಗೆ ತೆರಳಿ ತಾಯಿಯ ವಿರುದ್ಧವೇ ದೂರು ದಾಖಲು! 3 ವರ್ಷದ ಮಗುವಿನ ಮಾತು ಕೇಳಿ ನಗೆಗಡಲಲ್ಲಿ ತೇಲಿದ SI

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts