More

    ಸಚಿವರ ಬೆಂಗಾವಲು ವಾಹನ ಡಿಕ್ಕಿಯಾಗಿ ಕಟ್ಟಡ ಕಾರ್ಮಿಕ ಸಾವು: ಸಚಿವರ ಸ್ಪಷ್ಟನೆ ಹೀಗಿದೆ…

    ವಿಶಾಖಪಟ್ಟಣ: ಸಚಿವರ ಬೆಂಗಾವಲು ವಾಹನ ಡಿಕ್ಕಿಯಾಗಿ ವ್ಯಕ್ತಿಯೊಬ್ಬ ಸಾವಿಗೀಡಾಗಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಬುಧವಾರ ನಡೆದಿದೆ.

    ಆಂಧ್ರದ ಪ್ರವಾಸೋದ್ಯಮ ಸಚಿವ ಆವಂತಿ ಶ್ರೀನಿವಾಸ ರಾವ್​ ಅವರ ಬೆಂಗಾವಲು ವಾಹನ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ. ವಿಶಾಖಪಟ್ಟಣದ ಬಿರ್ಲಾ ಜಂಕ್ಷನ್​ ಬಳಿ ಬೈಕ್​ನಲ್ಲಿ ಬರುತ್ತಿದ್ದ ವ್ಯಕ್ತಿಗೆ ಸಚಿವರು ಬೆಂಗಾವಲು ವಾಹನ ಡಿಕ್ಕಿ ಹೊಡದಿದೆ. ಮೃತ ವ್ಯಕ್ತಿಯನ್ನು ಸೂರ್ಯನಾರಾಯಣ (40) ಎಂದು ಗುರುತಿಸಲಾಗಿದೆ. ಈತ ಕಟ್ಟಡ ಕಾರ್ಮಿಕನಾಗಿದ್ದ.

    ಸಚಿವರ ಬೆಂಗಾವಲು ವಾಹನವು ವಿಮಾನ ನಿಲ್ದಾಣದಿಂದ ಸೈರನ್​ ಶಬ್ದದೊಂದಿಗೆ ಬರುತ್ತಿರುವಾಗ ಶಬ್ದದಿಂದ ಗಾಬರಿಗೊಂಡ ಬೈಕ್​ ಸವಾರ ಎಡಕ್ಕೆ ತಿರುವು ಪಡೆಯುವಾಗ ಕಾರು ಬೈಕ್​ಗೆ ಡಿಕ್ಕಿ ಹೊಡೆದಿದೆ. ತಲೆಗೆ ಭಾರೀ ಪೆಟ್ಟು ಬಿದ್ದು ಬೈಕ್​ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಏರ್​ಪೋರ್ಟ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

    ಬೈಕ್​ ಸವಾರನ ಸಾವಿಗೆ ಕಾರಣವಾದ ವಾಹನವನ್ನು ಪೊಲೀಸರು ತಡೆಯಲಿಲ್ಲ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗನನ್ನು ಬೈಕ್​ ಸವಾರ ಸೂರ್ಯನಾರಾಯಣ ಅಗಲಿದ್ದಾರೆ. ಸೀತಮ್ಮಧಾರದಲ್ಲಿರುವ ಸಚಿವರ ಮನೆ ಎದುರು ಪ್ರತಿಭಟನೆ ನಡೆಸಿದ ಮೃತನ ಸಂಬಂಧಿಕರು ಸಾವಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು. ಅನೇಕ ಪ್ರತಿಪಕ್ಷಗಳು ಕೂಡ ಪ್ರತಿಭಟನೆಗೆ ಬೆಂಬಲ ಸೂಚಿಸಿದವು. ನಟ ಪವನ್​ ಕಲ್ಯಾಣ್​ ನೇತೃತ್ವದ ಜನಸೇನಾ ಪಕ್ಷವೂ ಕೂಡ ಸಚಿವರ ವಿರುದ್ಧ ಪ್ರತಿಭಟನೆ ನಡೆಸಿತು. ಆದರೆ, ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

    ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವ ಶ್ರೀನಿವಾಸ್​ ರಾವ್​, ಅಪಘಾತ ಸಂಭವಿಸಿದ ವೇಳೆ ನಾನು ಬೆಂಗಾವಲು ವಾಹನದಲ್ಲಿ ಇರಲಿಲ್ಲ ಎಂದಿದ್ದಾರೆ. ಮೃತನ ಕುಟುಂಬಸ್ಥರು ಹಾಗೂ ಕಾರ್ಮಿಕ ಸಂಘಟನೆಗಳ ಜತೆ ಮಾತನಾಡಿದ್ದೇನೆಂದು ಹೇಳಿದ್ದಾರೆ. ಮೃತ ಸೂರ್ಯನಾರಾಯಣರ ಮೂವರು ಮಕ್ಕಳಿಗೆ ತಲಾ 5 ಲಕ್ಷ ರೂ. ಪರಿಹಾರ ಮತ್ತು ಹಿರಿಯ ಮಗಳಿಗೆ ವಿಶಾಖಪಟ್ಟಣಂ ಮಹಾನಗರ ಪಾಲಿಕೆಯಲ್ಲಿ ಕೆಲಸ ಕೊಡಿಸುವುದಾಗಿ ಹಾಗೂ ಕುಟುಂಬಕ್ಕೆ ಮನೆಯೊಂದನ್ನು ಮಂಜೂರು ಮಾಡಿಕೊಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ. (ಏಜೆನ್ಸೀಸ್​)

    ಬಿಗ್​ಬಾಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಹಿ ಘಟನೆಗೆ ಸಾಕ್ಷಿಯಾದ ಬಿಗ್ ಹೌಸ್​: ನೆಟ್ಟಿಗರ ಆಕ್ರೋಶ

    ಯೂಟ್ಯೂಬ್​ನಿಂದ ಮಹತ್ವದ ನಿರ್ಧಾರ: ಇನ್ಮುಂದೆ ಯೂಟ್ಯೂಬ್​ ವಿಡಿಯೋಗಳ ಕೆಳಗೆ ಇದು ಕಾಣಲ್ಲ!

    ಕೇರಳ ಮಾಡೆಲ್​ಗಳಿಬ್ಬರ ದುರ್ಮರಣ: ಮಧ್ಯರಾತ್ರಿಯ ಡಿಜೆ ಪಾರ್ಟಿ ರಹಸ್ಯ ಭೇದಿಸಲು ಪೊಲೀಸರ ಹರಸಾಹಸ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts