More

    ಫೋನ್​ ಮಾಡಿ ಪ್ರಿಯಕರನನ್ನು ಮನೆಗೆ ಕರೆಸಿಕೊಂಡ ಪ್ರೇಯಸಿ: ಮುಂದೆ ನಡೆದಿದ್ದು ಘನ ಘೋರ ದುರಂತ

    ವಿಜಯಪುರ: ಬಸ್ಸಿನಲ್ಲಿ ಶುರುವಾದ ಪ್ರೇಮ ಪ್ರಕರಣವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಿಕೋಟ ತಾಲೂಕಿನ ಕಳ್ಳಕವಟಗಿಯಲ್ಲಿ ನಡೆದಿದೆ. ಕಳೆದ ಸೆ. 22ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಪ್ರೀತಿಗಾಗಿ ಯುವ ಪ್ರೇಮಿಗಳಿಬ್ಬರು ಬಲಿಯಾಗಿದ್ದಾರೆ. ಪ್ರಿಯತಮನಿಗೋಸ್ಕರ ಹುಡುಗಿ ವಿಷ ಕುಡಿದರೆ, ಮಗಳ ಸಾವಿಗೆ ಕಾರಣನಾದ ಎಂದು ಹುಡುಗಿಯ ತಂದೆ ಪ್ರಿಯಕರನನ್ನು ಕೊಂದಿದ್ದಾನೆ. ಸೆ. 22ರಂದು ಈ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

    ವಿವರಣೆಗೆ ಬರುವುದಾದರೆ, ತಿಕೋಟ ತಾಲೂಕಿನ ಕಳ್ಳಕವಟಗಿಯ ಅಪ್ರಾಪ್ತೆ ಹಾಗೂ ಘೊಣಸಗಿಯ ಮಲ್ಲಿಕಾರ್ಜುನ (20) ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರು ಒಂದೇ ಬಸ್ಸಿನಲ್ಲಿ ವಿಜಯಪುರದ ಕಾಲೇಜಿಗೆ ಬರುತ್ತಿದ್ದರು. ಅಕ್ಕಪಕ್ಕದ ಊರಿನವರಾದ್ದರಿಂದ ಬಸ್ಸಿನಲ್ಲಿ ಇಬ್ಬರಿಗೂ ಪರಿಚಯವಾಗಿ, ನಂತರ ಫೋನ್​ ನಂಬರ್​ ವಿನಿಮಯವಾಗಿತ್ತು. ಹೀಗೆ ಫೋನ್​ನಲ್ಲಿ ಮಾತನಾಡುತ್ತಾ ಇಬ್ಬರು ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು. ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು.

    ಫೋನ್​ ಮಾಡಿ ಪ್ರಿಯಕರನನ್ನು ಮನೆಗೆ ಕರೆಸಿಕೊಂಡ ಪ್ರೇಯಸಿ: ಮುಂದೆ ನಡೆದಿದ್ದು ಘನ ಘೋರ ದುರಂತ
    ಆರೋಪಿ ಗುರಪ್ಪ

    ಪ್ರೀತಿಯ ಬಲೆಯಲ್ಲಿ ಬಿದ್ದ ಬಳಿಕ ಇಬ್ಬರು ಎಲ್ಲೆಂದರಲ್ಲಿ ಸ್ವಚ್ಚಂದವಾಗಿ ವಿಹರಿಸುತ್ತಿದ್ದರು. ಈ ಸಂಗತಿ ಹುಡುಗಿ ಮನೆಯವರಿಗೆ ಗೊತ್ತಾಗಿ ದೊಡ್ಡ ಗಲಾಟೆಯಾಗಿತ್ತು. ಅದಾದ ಬಳಿಕ ಇಬ್ಬರನ್ನೂ ಎರಡೂ ಮನೆಯವರು ಬೇರೆ ಬೇರೆ ಮಾಡಿದ್ದರು. ಆದರೂ ಸೆ.22 ರಾತ್ರಿ ಕರೆ ಮಾಡಿದ್ದ ಹುಡುಗಿ ಮಲ್ಲುನನ್ನು ತನ್ನ ಮನೆಗೆ ಕರೆಸಿಕೊಂಡಿದ್ದಳು. ಗ್ರಾಮದ ಜಮೀನಿನಲ್ಲಿ ಇರುವ ಶೆಡ್​ನಲ್ಲಿ ಇಬ್ಬರು ಇದ್ದರು. ಅವರ ಪಿಸುಮಾತುಗಳನ್ನು ಕೇಳಿಸಿಕೊಂಡ ಹುಡುಗಿ ಮನೆಯವರು ಬುದ್ಧಿ ಕಲಿಸಲೆಂದು ಹುಡುಗನನ್ನು ಶೆಡ್​ನಲ್ಲಿ ಕೂಡಿ ಹಾಕಿದರು. ಈ ವೇಳೆ ನನ್ನಿಂದ ನಿಮ್ಮ ಮರ್ಯಾದೆ ಹೋಯಿತು ಎಂದು ಹುಡುಗಿ ಶೆಡ್​ನಲ್ಲಿ ಇದ್ದ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಳು.

    ಮಗಳು ಸಾವಿನಿಂದ ಕಂಗೆಟ್ಟ ತಂದೆ ಹುಡುಗನ ಕೈಕಾಲು ಕಟ್ಟಿ ಕೀಟನಾಶಕ ಕುಡಿಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಬಳಿಕ ಸಾಕ್ಷಿ ನಾಶ ಪಡಿಸಲು ಎರಡೂ ಶವವನ್ನು ಗೋಣಿ ಚೀಲದಲ್ಲಿ ಹಾಕಿ ಕೊಲ್ಹಾರ ಬ್ರಿಡ್ಜ್​ನಲ್ಲಿ ಎಸೆದು ಹೋಗಿದ್ದರು. ಸೆ. 23 ರಂದು ನಸುಕಿನ ಜಾವ ಕಾರಿನಲ್ಲಿ ಶವದ ಮೂಟೆ ತಂದು ಎಸೆದು ಹೋಗಿದ್ದರು.

    ಇದೀಗ ಯುವಕ ಮಲ್ಲುವಿನ ಮೃತದೇಹ ಪತ್ತೆಯಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆ ಬೀಳಗಿ ಠಾಣೆ ವ್ಯಾಪ್ತಿಯಲ್ಲಿ ಶವ ಸಿಕ್ಕಿರುವುದರಿಂದ ಬೀಳಗಿ ಪೊಲೀಸರಿಂದ ತನಿಖೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಭಂದಿಸಿದಂತೆ ಹುಡುಗಿಯ ತಂದೆ ಗುರಪ್ಪ ಹಾಗೂ ಆತನ ಅಳಿಯ ಅಜೀತ್​​ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಯುವತಿಯ ಶವಕ್ಕಾಗಿ ಹುಡುಕಾಟ ಮುಂದುವರೆದಿದೆ‌.

    ಎರಡು ಶವ ಎಸೆದ ಮೇಲೆ ಪ್ರಕರಣ ಮುಚ್ಚಿಹಾಕಲು ಗುರಪ್ಪ ಠಾಣೆಯಲ್ಲಿ ದೂರು ನೀಡಿದ್ದ. ತಮ್ಮ ಮಗಳನ್ನು ಅಪಹರಿಸಲಾಗಿದೆ ಎಂದು ತಿಕೋಟಾ ಠಾಣೆಯಲ್ಲಿ ದೂರು ದಾಖಲಿಸಿದ್ದ. ಮತ್ತೊಂದೆಡೆ ಯುವಕನ ಸುಳಿವು ಇರದಿದ್ದರಿಂದ ಆತನ ಮನೆಯವರು ಕಾಣೆ ಆಗಿದ್ದಾನೆಂದು ದೂರು ನೀಡಿದ್ದರು. ಇದೀಗ ಬಾಗಲಕೋಟೆ ಜಿಲ್ಲೆ ಬೀಳಗಿ ಠಾಣೆ ಪೊಲೀಸರು ಪ್ರಕರಣ ಬೇಧಿಸಿದ್ದು, ಮುಂದಿನ ದಿನಗಳಲ್ಲಿ ಪ್ರಕರಣವನ್ನು ತಿಕೋಟಾ ಠಾಣೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಬಾಗಲಕೋಟೆ ಎಸ್ಪಿ ಜಯಪ್ರಕಾಶ್ ಮಾಹಿತಿ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಒಂದೇ ಮನೆಯಲ್ಲಿ 2 ಕಾಳಿಂಗ ಸರ್ಪ, ಅದರಲ್ಲೊಂದು ದೈತ್ಯ ಹಾವು! ಎದೆ ಝಲ್​ ಎನಿಸುವ ವಿಡಿಯೋ ಇದು…

    ಭಾರಿ ಮಳೆಗೆ ಕೇಬಲ್​ ಬ್ರಿಡ್ಜ್​ ಕುಸಿತ: ದೂಧ್​ಸಾಗರ್ ಫಾಲ್ಸ್​ನಲ್ಲಿ ಸಿಲುಕಿದ್ದ 40ಕ್ಕೂ ಹೆಚ್ಚು ಪ್ರವಾಸಿಗರ ರಕ್ಷಣೆ

    ಯುವ ಪೀಳಿಗೆಯ ಮನಸ್ಸನ್ನು ಮಲಿನಗೊಳಿಸುತ್ತಿದ್ದೀರಿ: ಏಕ್ತಾ ಕಪೂರ್​ಗೆ ಸುಪ್ರೀಂ ಕೋರ್ಟ್​ ತರಾಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts