More

    ಸಿಎಂ ಯೋಗಿ ಆದಿತ್ಯಾನಾಥ್​ಗೆ ಸವಾಲು ಹಾಕಿದ್ದ ಮಾಜಿ ಐಪಿಎಸ್​ ಅಧಿಕಾರಿಯನ್ನು ಹೊತ್ತೊಯ್ದ ಯುಪಿ ಪೊಲೀಸರು!

    ಲಖನೌ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ವಿರುದ್ಧ ಮುಂಬರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಸವಾಲು ಹಾಕಿರುವ ಮಾಜಿ ಹಿರಿಯ ಪೊಲೀಸ್​ ಅಧಿಕಾರಿಯನ್ನು ಯುಪಿ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದ ಅಡಿಯಲ್ಲಿ ನಾಟಕೀಯವಾಗಿ ಬಂಧಿಸಿರುವ ಘಟನೆ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗಳು ಕೇಳಿಬಂದಿದೆ.

    ಮಾಜಿ ಐಪಿಎಸ್​ ಅಧಿಕಾರಿ ಅಮಿತಾಭ್​ ಠಾಕೂರ್​ ಅವರನ್ನು ಈ ಹಿಂದೆ ಕಳಪೆ ಕಾರ್ಯಕ್ಷಮತೆ ಕಾರಣ ನೀಡಿ ಕೇಂದ್ರ ಗೃಹ ಸಚಿವಾಲಯ ಬಲವಂತವಾಗಿ ನಿವೃತ್ತಿ ಹೊಂದುವಂತೆ ಮಾಡಿದೆ. ನಿನ್ನೆ ಲಖನೌದಲ್ಲಿ ಬಂಧಿಸಲು ಬಂದ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿ ತೀವ್ರ ವಿರೋಧ ವ್ಯಕ್ತಪಡಿಸಿದರೂ ಸಹ ಅವರನ್ನು ಅವರ ಮನೆಯಿಂದ ಸಾರ್ವಜನಿಕರ ಎದುರೇ ಪೊಲೀಸರು ಹೊತ್ತೊಯ್ದರು.

    ಪ್ರಾಥಮಿಕ ತನಿಖೆಯ ವೇಳೆ ಠಾಕೂರ್​ ವಿರುದ್ಧ ಸಾಕ್ಷಿಗಳು ಲಭ್ಯವಾಗಿವೆ ಎಂದು ಯುಪಿ ಪೊಲೀಸರು ಹೇಳಿದ್ದಾರೆ. ನಿನ್ನೆ ನಡೆದ ಇಡೀ ಘಟನೆ ವಿಡಿಯೋ ರೆಕಾರ್ಡ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪೊಲೀಸರ ವರ್ತನೆಗೆ ಸಾಕಷ್ಟು ಆಕ್ರೋಶಗಳು ಕೇಳಿಬಂದಿವೆ. ನನ್ನ ವಿರುದ್ಧದ ಎಫ್​ಐಆರ್​ ತೋರಿಸುವವರೆಗೂ ನಾನು ಹೋಗುವುದಿಲ್ಲ ಎಂದರೂ ಠಾಕೂರ್​ ಅವರನ್ನು ಪೊಲೀಸರು ಬಲವಂತವಾಗಿ ಎಳೆದೊಯ್ದಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

    ಈ ಹಿಂದೆ 2015ರಲ್ಲಿ ಸಮಾಜವಾದಿ ಪಕ್ಷ ನೇತೃತ್ವದ ಸರ್ಕಾರವಿದ್ದಾಗಲೂ ಕೂಡ ಠಾಕೂರ್​ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿತ್ತು. ಇದಾದ ದಿನದ ಬೆನ್ನಲ್ಲೇ ಆಗಿನ ಮುಖ್ಯಮಂತ್ರಿ ಅಖಿಲೇಶ್​ ಯಾದವ್​ರಿಂದ ನನಗೆ ಬೆದರಿಕೆ ಇದೆ ಎಂದು ಠಾಕೂರ್​ ಆರೋಪ ಮಾಡಿದ್ದರು. ಅವರು ಅಮಾನತು 2016ರ ಏಪ್ರಿಲ್​ನಲ್ಲಿ ಅಂತ್ಯಗೊಂಡು ಅವರು ಮರಳಿ ಕೆಲಸಕ್ಕೆ ಸೇರಿದರು.

    ಆಗಸ್ಟ್​ 16ರಂದು ಸುಪ್ರೀಂಕೋರ್ಟ್​ ಗೇಟ್​ ಮುಂದೆ ಬಾಯ್​ಫ್ರೆಂಡ್​ ಜತೆ ಬೆಂಕಿ ಹಚ್ಚಿಕೊಂಡು ಮೃತಪಟ್ಟ 24 ವರ್ಷದ ಯುವತಿ, ಸಾಯುವುದಕ್ಕೂ ಮುನ್ನ ಬಹಿರಂಗಪಡಿಸಿದ ರಾಜಕಾರಣಿಗಳು ಮತ್ತು ಉನ್ನತ ಪೊಲೀಸ್​ ಅಧಿಕಾರಿಗಳ ಹೆಸರಿನಲ್ಲಿ ಠಾಕೂರ್​ ಅವರ ಹೆಸರೂ ಕೂಡ ಇತ್ತು. ಮೃತ ಯುವತಿ ಬಿಎಸ್​ಪಿ ಸಂಸದ ಅತುಲ್​ ರಾಯ್​ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆಂದು 2019ರಲ್ಲಿ ದೂರು ನೀಡಿದ್ದಳು. ಆದರೆ, ಪೊಲೀಸರು ಸರಿಯಾಗಿ ಸ್ಪಂದಿಸಲಿಲ್ಲ ಎಂದು ಫೇಸ್​ಬುಕ್​ ಲೈವ್​ನಲ್ಲಿ ಕೆಲವು ಹೆಸರುಗಳನ್ನು ಬಹಿರಂಗಪಡಿಸಿ ಯುವತಿ ಸಾವಿನ ಹಾದಿ ಹಿಡಿದಳು. ಠಾಕೂರ್​ ಅವರು ಸಂಸದರ ಕುಟುಂಬದ ಪರವಾಗಿ ಕೆಲಸ ಮಾಡುತ್ತಿದ್ದರು ಎಂದು ಯುವತಿ ಆರೋಪಿಸಿದ್ದಳು.

    ಇದೀಗ ಯುವತಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದಲ್ಲಿ ಬಂಧಿಸಲಾಗಿದೆ. ಮುಂಬರುವ ರಾಜ್ಯ ಚುನಾವಣೆಯಲ್ಲಿ ಆದಿತ್ಯನಾಥ್ ವಿರುದ್ಧ ಸ್ಪರ್ಧಿಸುವುದಾಗಿ ಈ ತಿಂಗಳ ಆರಂಭದಲ್ಲೇ ಠಾಕೂರ್​ ಹೇಳಿದ್ದರು. ಇದನ್ನು ಸ್ವತಃ ಮಾಜಿ ಅಧಿಕಾರಿ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದರು.

    ಆದಿತ್ಯನಾಥ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನೇಕ ಪ್ರಜಾಪ್ರಭುತ್ವ ವಿರೋಧಿ, ಅಸಮರ್ಪಕ, ದಮನಕಾರಿ, ಕಿರುಕುಳ ಮತ್ತು ತಾರತಮ್ಯದ ಕ್ರಮಗಳನ್ನು ತೆಗೆದುಕೊಂಡರು. ಆದ್ದರಿಂದ, ಅಮಿತಾಬ್ ಅವರು ಎಲ್ಲಿ ಸ್ಪರ್ಧಿಸಿದರೂ ಆದಿತ್ಯನಾಥ್ ವಿರುದ್ಧ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಠಾಕೂರ್​ ಅವರ ಪತ್ನಿ ನೂತನ್​ ಠಾಕೂರ್​ ಹೇಳಿದ್ದರು.

    ಇದರ ನಡುವೆಯೇ ಠಾಕೂರ್​ ಅವರನ್ನು ಬಂಧಿಸಿರುವ ಹಲವು ರೀತಿಯ ಚರ್ಚೆಗೆ ಗ್ರಾಸವಾಗಿದೆ. (ಏಜೆನ್ಸೀಸ್​)

    ಹೆಣ್ಣುಮಕ್ಕಳ ಆತ್ಮರಕ್ಷಣೆಗಾಗಿ ಬಂದೂಕು ಲೈಸೆನ್ಸ್​ ನೀಡಲಿ: ಸಚಿವ ಆನಂದ ಸಿಂಗ್ ಅಭಿಪ್ರಾಯ

    ಸಬೂಬು ಸಹಿಸೋಲ್ಲ, ಫಲಿತಾಂಶ ಕೊಡಿ: ದೆಹಲಿಯಲ್ಲಿ ಅಧಿಕಾರಿ, ಕಾನೂನು ತಂಡಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಲಾಸ್

    ಕಾಬುಲ್ ದಾಳಿಗೆ ಪಾಕಿಸ್ತಾನ್ ನಂಟು: ಫಿದಾಯೀನ್​ಗಳ ಚಿತ್ರ ಬಿಡುಗಡೆ ಮಾಡಿದ ಐಸಿಸ್-ಕೆ; ದಾಳಿಕೋರರು ಪಾಕ್ ಉಗ್ರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts