More

    ಸಬೂಬು ಸಹಿಸೋಲ್ಲ, ಫಲಿತಾಂಶ ಕೊಡಿ: ದೆಹಲಿಯಲ್ಲಿ ಅಧಿಕಾರಿ, ಕಾನೂನು ತಂಡಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಲಾಸ್

    | ರಾಘವ ಶರ್ಮ ನಿಡ್ಲೆ ನವದೆಹಲಿ

    ಕಾವೇರಿ, ಕೃಷ್ಣಾ, ಮಹದಾಯಿ ಜಲವ್ಯಾಜ್ಯಗಳಿಗೆ ಸಂಬಂಧಿಸಿ ದಂತೆ ರಾಜ್ಯದ ಕಾನೂನು ಹಾಗೂ ಅಧಿಕಾರಿಗಳ ತಂಡ ಮತ್ತಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಸಬೂಬು ನೀಡುತ್ತ ಕುಳಿತುಕೊಳ್ಳುವುದನ್ನು ಸಹಿಸಲಾರೆ. ನನಗೆ ಫಲಿತಾಂಶವಷ್ಟೇ ಮುಖ್ಯ. ಅದು ಸಾಧ್ಯವಿಲ್ಲ ಎಂದರೆ ನಿಮ್ಮ ದಾರಿ ನೋಡಿಕೊಳ್ಳಿ… ಇದು ರಾಜ್ಯದ ಮುಖ್ಯಮಂತ್ರಿ ದೆಹಲಿಯಲ್ಲಿ ರಾಜ್ಯದ ಕಾನೂನು ತಂಡ ಹಾಗೂ ಅಧಿಕಾರಿಗಳಿಗೆ ನೀಡಿರುವ ಎಚ್ಚರಿಕೆ.

    ಸಿಎಂ ಸ್ಥಾನಕ್ಕೇರಿದ ದಿನದಿಂದಲೇ ರಾಜ್ಯದ ನೀರಾವರಿ ವಿಷಯಗಳಿಗೆ ಸಂಬಂ ಧಿಸಿ ಗಂಭೀರತೆ ಪ್ರದರ್ಶಿ ಸುತ್ತಿರುವ ಬಸವರಾಜ ಬೊಮ್ಮಾಯಿ, ಇದೇ ಉದ್ದೇಶವಿಟ್ಟುಕೊಂಡು ದೆಹಲಿ ಪ್ರವಾಸದ ವೇಳೆ ಕಾನೂನು ತಂಡ ಮತ್ತು ಅಧಿಕಾರಿಗಳ ಜತೆ ಕರ್ನಾಟಕ ಭವನದಲ್ಲಿ ಗುರುವಾರ ಸಭೆ ಏರ್ಪಡಿ ಸಿದ್ದರು. ಸರ್ಕಾರದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಒಳಗೊಂಡ ಕಾನೂನು ತಂಡ, ಹಿರಿಯ ಅಧಿಕಾರಿಗಳು ಮತ್ತು ಕೆಲ ಸಚಿವರು ಈ ಸಭೆಯಲ್ಲಿದ್ದರು.

    ರಾಜ್ಯದ ಕಾವೇರಿ ಕಣಿವೆಯಲ್ಲಿ ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಪದೇಪದೆ ಅಡ್ಡಗಾಲು ಹಾಕುತ್ತಿರುವ ಮಧ್ಯೆಯೇ ವೆಲ್ಲಾರ್-ಗುಂಡಾರ್ ನದಿ ಸಂಪರ್ಕ ಯೋಜನೆ ಕೈಗೆತ್ತಿಕೊಂಡಿದೆ. ಇದಕ್ಕೆ ನ್ಯಾಯಾಂಗದ ಮೂಲಕ ತಡೆಯೊಡ್ಡಲು ನಮಗೆ ಸಾಧ್ಯವಾಗುತ್ತಿಲ್ಲ. ಆದರೆ, ನಮ್ಮಲ್ಲಿ ಯಾವುದೇ ಯೋಜನೆ ಕೈಗೆತ್ತಿಕೊಳ್ಳುವ ಪ್ರಸ್ತಾವ ಬಂದ ಕೂಡಲೇ ಎದುರಾಳಿ ರಾಜ್ಯ ಸಕ್ರಿಯಗೊಂಡು ಯೋಜನೆಗಳಿಗೆ ತಡೆಗಳನ್ನು ತರುತ್ತಿದೆ. ಅಧಿಕಾರಿಗಳು, ಕಾನೂನು ತಂಡ ಏನು ಮಾಡುತ್ತಿದೆ ಎಂಬುದೇ ಕೆಲವೊಮ್ಮೆ ಅರ್ಥವಾಗುವುದಿಲ್ಲ ಎಂದು ಸಿಎಂ ತೀವ್ರ ಅಸಮಾಧಾನ ಹೊರಹಾಕಿದರು ಎಂದು ಉನ್ನತ ಮೂಲಗಳಿಂದ ಗೊತ್ತಾಗಿದೆ.

    ಮೇಕೆದಾಟು ಜಲವಿದ್ಯುತ್ ಹಾಗೂ ಕುಡಿಯುವ ನೀರು ಯೋಜನೆ, ಮಹದಾಯಿ ನೀರನ್ನು ಮಲಪ್ರಭಾಕ್ಕೆ ಹರಿಸುವ ಕಳಸಾ ಬಂಡೂರಿ ಯೋಜನೆ ಮತ್ತು ಕೃಷ್ಣಾ ಜಲವ್ಯಾಜ್ಯ ಬಗ್ಗೆ ನ್ಯಾಯಾಧಿಕರಣ ತೀರ್ಪು ನೀಡಿ 11 ವರ್ಷ ಕಳೆದರೂ ಕೇಂದ್ರ ಸರ್ಕಾರ ತೀರ್ಪಿನ ಅಧಿಸೂಚನೆ ಪ್ರಕಟಿಸದಿರುವುದು ರಾಜ್ಯಕ್ಕೆ ತಲೆನೋವಾಗಿ ಪರಿಣಮಿಸುತ್ತಿದೆ. ಕೃಷ್ಣಾ ಐತೀರ್ಪಿನ ನೋಟಿಫಿಕೇಷನ್ ಜಾರಿಯಾದಲ್ಲಿ ರಾಜ್ಯಕ್ಕೆ ಹಂಚಿಕೆಯಾಗಿರುವ ನೀರನ್ನು ಬಳಸಿಕೊಳ್ಳಲು ಹಾಗೂ ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಿಸುವ ಕಾಮಗಾರಿಗೆ ವೇಗ ನೀಡಲು ಸಾಧ್ಯವಾಗುತ್ತದೆ. ತೆಲಂಗಾಣ ಹೊಸ ರಾಜ್ಯವಾಗಿ ರಚನೆಯಾದ ಬಳಿಕ ಆಂಧ್ರಪ್ರದೇಶ-ತೆಲಂಗಾಣ ಮಧ್ಯೆ ಕೃಷ್ಣಾ ನೀರು ಹಂಚಿಕೆ ಸಮಸ್ಯೆ ಸೃಷ್ಟಿಯಾಗಿದ್ದರೂ, ಇದರಲ್ಲಿ ಕರ್ನಾಟಕಕ್ಕೆ ಯಾವುದೇ ಸಮಸ್ಯೆ ಇಲ್ಲ. ಹೀಗಿರುವಾಗ, ಅಧಿಸೂಚನೆ ಪ್ರಕಟಣೆಗೆ ಸುಪ್ರೀಂಕೋರ್ಟ್ ಮೇಲೆ ಒತ್ತಡ ಹೇರುವ ಕಾರ್ಯ ಜರೂರಾಗಿ ಆಗಬೇಕಿದೆ ಎನ್ನುವುದು ಬೊಮ್ಮಾಯಿ ನಿಲುವು ಎನ್ನಲಾಗಿದೆ.

    ಕೋರ್ಟ್​ನಲ್ಲಿ ಹೇಗೆ ವಾದಿಸಬೇಕು ಎಂದು ನಾನೇನು ಹೇಳಿಕೊಡಬೇಕಿಲ್ಲ. ನೀರು ಎಂದಿಗೂ ಭಾವನಾತ್ಮಕ ವಿಷಯ. ಕಣಿವೆ ಭಾಗದ ಜನರ ಸಮಸ್ಯೆಗಳು, ನಮ್ಮ ಕಣ್ಣೀರು ನ್ಯಾಯಮೂರ್ತಿಗಳಿಗೆ ಅರ್ಥವಾಗುವಂತೆ ಮನದಟ್ಟು ಮಾಡಬೇಕು. ಇದಕ್ಕಾಗಿ ಯಾವ ವಕೀಲರನ್ನು ಬೇಕಾದರೂ ನೀವು ಆಯ್ಕೆ ಮಾಡಿಕೊಳ್ಳಿ. ನನಗೆ ಫಲಿತಾಂಶವಷ್ಟೇ ಮುಖ್ಯ. ನೀರಾವರಿ, ಜಲವ್ಯಾಜ್ಯಗಳ ಬಗ್ಗೆ ನನಗೂ ಸ್ಪಷ್ಟ ಅರಿವಿದೆ. ಕಾವೇರಿ, ಕೃಷ್ಣಾ, ಮಹದಾಯಿ-ಮಲಪ್ರಭಾ ನದಿ ಕಣಿವೆಗಳಲ್ಲಿ ಪ್ರವಾಸ ಮಾಡುವಾಗ ಜನರು (ಇಷ್ಟು ವರ್ಷಗಳ ಬಳಿಕವೂ) ನೀರಿಗಾಗಿ ಅಳುವುದನ್ನು ಕಂಡಾಗ ಹೃದಯ ಕೈಗೆ ಬಂದಂತಾಗುತ್ತದೆ. ನಿಮಗೆ ಯಾರಿಗೂ ಹಾಗನ್ನಿಸುವುದಿಲ್ಲವೆ ಎಂದು ಬೊಮ್ಮಾಯಿ ನೇರವಾಗಿ ಪ್ರಶ್ನಿಸಿದರು ಎಂದು ಸಭೆಯಲ್ಲಿದ್ದವರೊಬ್ಬರು ವಿಜಯವಾಣಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

    ನಮ್ಮ ಕಣ್ಣೀರು ನ್ಯಾಯಮೂರ್ತಿ ಗಳಿಗೆ ಅರ್ಥವಾಗುವಂತೆ ಮನದಟ್ಟು ಮಾಡಬೇಕು. ಇದಕ್ಕಾಗಿ ಯಾವ ವಕೀಲರನ್ನು ಬೇಕಾದರೂ ನೀವು ಆಯ್ಕೆ ಮಾಡಿಕೊಳ್ಳಿ. ನನಗೆ ಫಲಿತಾಂಶವಷ್ಟೇ ಮುಖ್ಯ.

    | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

    ಮೇಕೆದಾಟು; ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು

    ರಾಜ್ಯದ ಮೇಕೆದಾಟು ಜಲಾಶಯ ನಿರ್ಮಾಣ ಯೋಜನೆ ವಿರೋಧಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದ ತಮಿಳುನಾಡು, ಇದೇ ವಿಚಾರಕ್ಕೆ ಸಂಬಂಧಿಸಿ ಶುಕ್ರವಾರ ಸುಪ್ರೀಂಕೋರ್ಟ್​ಗೆ ಹೊಸ ಅರ್ಜಿ ಸಲ್ಲಿಸಿದೆ. 2019ರ ಜ. 1ರಂದು ಕರ್ನಾಟಕ ಸರ್ಕಾರ ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿರುವ ಮೇಕೆದಾಟು ಯೋಜನೆಯ ಸಮಗ್ರ ಯೋಜನಾ ವರದಿಯನ್ನು ತಿರಸ್ಕರಿಸುವಂತೆ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ತಮಿಳುನಾಡು ಅರ್ಜಿ ಯಲ್ಲಿ ಒತ್ತಾಯಿಸಿದೆ. ಯೋಜನೆಗೆ ಪರಿಸರ ಮತ್ತು ಅರಣ್ಯ ಸಮ್ಮತಿ ಬೇಕೆಂದು ಕರ್ನಾಟಕ ಸಲ್ಲಿಸುವ ಯಾವುದೇ ಪ್ರಸ್ತಾವನೆ ಗಳನ್ನೂ ಪುರಸ್ಕರಿಸಬಾರದು ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಗೂ ಸೂಚನೆ ನೀಡಬೇಕು ಎಂದು ತ.ನಾಡು ವಾದಿಸಿದೆ.

    ಒಂದುವೇಳೆ ಮೇಕೆದಾಟು ಯೋಜನೆಗೆ ಅನುಮತಿ ಸಿಕ್ಕಿದಲ್ಲಿ ತಮಿಳುನಾಡು ತನ್ನ ಪಾಲಿನ ನೀರಿನಿಂದ ವಂಚಿತವಾಗಲಿದೆ. ಅಲ್ಲದೆ, ಸಾಮಾನ್ಯ ಜಲವರ್ಷದಲ್ಲೂ ಪ್ರತಿ ತಿಂಗಳಿಗೆ ನಿಗದಿ ಪಡಿಸಿರುವ ನೀರಿನ ಹಂಚಿಕೆಯಲ್ಲಿ ವ್ಯತ್ಯಯವಾಗಲಿದೆ. ಇಂಥದ್ದೊಂದು ಯೋಜನೆಯೇ ಸುಪ್ರೀಂಕೋರ್ಟ್ ಅಂತಿಮ ತೀರ್ಪಿನ ಸ್ಪಷ್ಟ ಉಲ್ಲಂಘನೆ ಎಂದು ತ.ನಾಡು ಪ್ರತಿಪಾದಿಸಿದೆ.

    ರಾಜಧಾನಿಯಲ್ಲಿ ಮತ್ತೆ ಏರುತ್ತಿವೆ ಕೋವಿಡ್​ ಸೋಂಕಿನ ಪ್ರಕರಣಗಳು!; ಅಲೆ ತಗ್ಗಿದರೂ ಇಳಿದಿಲ್ಲ ಸೋಂಕಿತರ ಸಂಖ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts