

ಉತ್ತರಕನ್ನಡ: ಕೆಲ ದಿನಗಳ ಹಿಂದೆ ಯುವಕನ್ನು ಬಲಿ ಪಡೆದಿದ್ದ ಮೊಸಳೆ ಇದೀಗ ನೀರು ಕುಡಿಯಕಲು ಬಂದ ಜಿಂಕೆಯನ್ನು ಬೇಟೆಯಾಗಿರುವ ಘಟನೆ ದಾಂಡೇಲಿಯ ಪಟೇಲ್ ನಗರದ ಬಳಿ ನಡೆದಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಿಂಕೆ ತನ್ನ ದಾಹ ತೀರಿಸಿಕೊಳ್ಳಲು ಕಾಳಿನದಿಗೆ ಇಳಿದಿತ್ತು. ಈ ವೇಳೆ ಜಿಂಕೆಯನ್ನು ನೀರಿನಲ್ಲಿ ಅಟ್ಟಾಡಿಸಿ ಮೊಸಳೆ ಬೇಟೆಯಾಡಿದೆ. ಸ್ಥಳೀಯರು ಸಾಕಷ್ಟು ಕೂಗಾಡಿ ಜಿಂಕೆಯನ್ನು ಕಾಪಾಡಲು ಪ್ರಯತ್ನಿಸಿದರೂ ಪ್ರಯೋಜನ ಆಗಲಿಲ್ಲ. ಈ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲ ದಿನಗಳ ಹಿಂದೆ ಇದೇ ಮೊಸಳೆ ಅರ್ಷದ್ ಖಾನ್ ರಾಯಚೂರ್ (22) ಎಂಬ ಯುವಕನನ್ನು ಬಲಿ ಪಡೆದಿತ್ತು. ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಪಟೇಲ್ ನಗರದ ನಿವಾಸಿಯಾಗಿದ್ದ ಅರ್ಷದ್ ಖಾನ್, ದಿನನಿತ್ಯದ ಕೆಲಸ ಮುಗಿಸಿ ಕೈ ಕಾಲು ತೊಳೆಯಲು ಕಾಳಿ ನದಿಯ ದಡಕ್ಕೆ ಹೋಗಿದ್ದ. ನೀರಿಗೆ ಕೈ ಹಾಕುತ್ತಿದ್ದಂತೆ ಮೊಸಳೆ ದಾಳಿ ಮಾಡಿ ಆತನನ್ನು ಎಳೆದೊಯ್ದಿತ್ತು.
ಮೃತ ಯುವಕನ ಸ್ನೇಹಿತ ಈ ಮಾಹಿತಿ ನೀಡಿದ್ದ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಯುವಕನ ದೇಹಕ್ಕಾಗಿ ಹುಡುಕಾಟ ನಡೆಸಿದರೂ ಆತನ ಪತ್ತೆ ಸಾಧ್ಯವಾಗಲಿಲ್ಲ.
ಯುವಕನ ಬೆನ್ನಲ್ಲೇ ಜಿಂಕೆಯನ್ನು ಮೊಸಳೆ ಬೇಟೆಯಾಡಿರುವ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿದ್ದು, ಸ್ಥಳೀಯರು ತುಂಬಾ ಆತಂಕಕ್ಕೀಡಾಗಿದ್ದಾರೆ. ಕಾಳಿ ನದಿಯ ಸಮೀಪ ಎಚ್ಚರಿಕೆ ವಹಿಸುವಂತೆ ಕರೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್)