More

    ಬಹುಮತ ಸಾಬೀತು ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಉದ್ಧವ್​ ಠಾಕ್ರೆ: ಇಂದು ಸಂಜೆ 5ಕ್ಕೆ ವಿಚಾರಣೆ

    ಮುಂಬೈ: ಮಹಾರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ಕ್ಷಣಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ನಾಳೆ ಬಹುಮತ ಸಾಬೀತು ಪಡಿಸುವಂತೆ ರಾಜ್ಯಪಾಲ ಭಗತ್​ ಸಿಂಗ್​ ಕೋಶ್ಯಾರಿ ಅವರು ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಬಹುಮತ ಸಾಬೀತನ್ನು ಪ್ರಶ್ನಿಸಿ, ಸಿಎಂ ಉದ್ಧವ್​ ಠಾಕ್ರೆ ಅವರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದು, ಇಂದು ಸಂಜೆ 5 ಗಂಟೆಗೆ ವಿಚಾರಣೆ ನಡೆಯಲಿದೆ.

    ಇಂದು ಬೆಳಗ್ಗೆ ರಾಜ್ಯಪಾಲ ಭಗತ್​ ಸಿಂಗ್​ ಕೋಶ್ಯಾರಿ ಅವರು ವಿಧಾನಸಭೆ ಕಾರ್ಯದರ್ಶಿ ರಾಜೇಂದ್ರ ಭಾಗವತ್ ಅವರಿಗೆ ಪತ್ರ ಬರೆದಿದ್ದು, ಸಿಎಂ ಠಾಕ್ರೆ ಅವರು ಬಹುಮತ ಸಾಬೀತು ಮಾಡಲು ನಾಳೆ ಬೆಳಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ವಿಶೇಷ ಅಧಿವೇಶನಕ್ಕೆ ಕರೆಯುವಂತೆ ತಿಳಿಸಿದ್ದಾರೆ.

    ಇದರ ಬೆನ್ನಲ್ಲೇ ಸುಪ್ರೀಂಕೋರ್ಟ್​ ಮೆಟ್ಟಿಲೇರಿರುವ ಉದ್ಧವ್​ ಠಾಕ್ರೆ ತಂಡ, ಸಂಭವನೀಯ ಅನರ್ಹತೆ ಬಗ್ಗೆ 16 ಬಂಡಾಯ ಶಾಸಕರು ಈವರೆಗೂ ಪ್ರತಿಕ್ರಿಯೆ ನೀಡಿಲ್ಲ. ಹೀಗಿರುವಾಗ ರಾಜ್ಯಪಾಲರು ಬಹುಮತ ಸಾಬೀತು ಪಡಿಸಲು ಕೇಳುವುದು ಅನಧಿಕೃತ ಎಂದಿದೆ.

    ಈ ಬಗ್ಗೆ ವಾದಿಸಿದ ಬಂಡಾಯ ನಾಯಕರ ಪರ ವಕೀಲ ಎನ್‌.ಕೆ.ಕೌಲ್, ಬಹುಮತ ಸಾಬೀತಿಗೂ ಹಾಗೂ ಅನರ್ಹತೆಯ ವಿಚಾರಣೆ ಬಾಕಿ ಉಳಿದಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ನಂತರ ಸುಪ್ರೀಂ ಕೋರ್ಟ್ ಇಂದು ಸಂಜೆ 5 ಗಂಟೆಗೆ ವಿಚಾರಣೆ ನಡೆಸುವುದಾಗಿ ಮುಂದೂಡಿದೆ.

    16 ಶಾಸಕರ ಅನರ್ಹತೆಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜುಲೈ 11 ರವರೆಗೆ ಮುಂದೂಡಿರುವಾಗ ಬಹುಮತ ಸಾಬೀತು ಮಾಡುವಂತೆ ಹೇಗೆ ಕೇಳಬಹುದು? ಶಾಸಕರ ಅನರ್ಹತೆ ಸ್ಥಿತಿಯನ್ನು ನಿರ್ಧರಿಸುವವರೆಗೂ ಅವರು ಹೇಗೆ ಬಹುಮತ ಸಾಬೀತು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು? ಎಂದು ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿದ್ದಾರೆ. ಸುಪ್ರೀಂಕೋರ್ಟ್​ನಲ್ಲಿ ಅನರ್ಹತೆ ವಿಷಯದ ಕುರಿತ ಅಂತಿಮ ತೀರ್ಪು ಪಡೆಯದೇ ಬಹುಮತ ಸಾಬೀತು ನಡೆಸಿದರೆ, ಅದು ನ್ಯಾಯಾಲಯದ ನಿಂದನೆ ಪ್ರಕ್ರಿಯೆಯಾಗುತ್ತದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.

    ಶಿವಸೇನಾ ಪ್ರಭಾವಿ ನಾಯಕ ಏಕನಾಥ್​ ಶಿಂಧೆ ನೇತೃತ್ವದಲ್ಲಿ 40ಕ್ಕೂ ಹೆಚ್ಚು ಶಿವಸೇನಾ ಶಾಸಕರು, ಸಿಎಂ ಉದ್ಧವ್​ ಠಾಕ್ರೆ ನೇತೃತ್ವದ ಮಹಾ ವಿಕಾಸ್​ ಅಘಾಡಿ (ಶಿವಸೇನಾ, ಕಾಂಗ್ರೆಸ್​ ಮತ್ತು ಎನ್​ಸಿಪಿ) ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದು ಕಳೆದ ಒಂದು ವಾರಕ್ಕೂ ಹೆಚ್ಚು ದಿನಗಳಿಂದ ಅಸ್ಸಾಂನಲ್ಲಿ ಬೀಡುಬಿಟ್ಟಿದ್ದಾರೆ. ಸಿಎಂ ಉದ್ಧವ್​ ಠಾಕ್ರೆ, ಸಂಸದ ಸಂಜಯ್​ ರಾವತ್​ ಅವರು ಸರ್ಕಾರ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಇದರ ನಡುವೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನಾವೀಸ್​ ನಿನ್ನೆ ರಾಜ್ಯಪಾಲರನ್ನು ಭೇಟಿಯಾಗಿ, ಮೈತ್ರಿ ಸರ್ಕಾರ ಶಾಸಕರ ವಿಶ್ವಾಸ ಕಳೆದುಕೊಂಡಿದೆ. ಸಂಖ್ಯಾಬಲ ಕುಸಿದಿದೆ. ಬಹುಮತ ಸಾಬೀತಿಗೆ ಸೂಚಿಸಿ ಎಂದು ಮನವಿ ಮಾಡಿಕೊಂಡಿದ್ದರು. ಅಂದರಂತೆ ಇಂದು ರಾಜ್ಯಪಾಲರು ಬಹುಮತ ಸಾಬೀತಿಗೆ ಸೂಚಿಸಿದ್ದರು. ಆದರೆ, ಅದನ್ನು ಪ್ರಶ್ನಿಸಿ ಸಿಎಂ ಉದ್ಧವ್​ ಠಾಕ್ರೆ ಕೋರ್ಟ್​ ಮೆಟ್ಟಿಲೇರಿದ್ದಾರೆ. (ಏಜೆನ್ಸೀಸ್​)

    ಸಿಎಂ ಉದ್ಧವ್​ ಠಾಕ್ರೆ ಸರ್ಕಾರಕ್ಕೆ ನಾಳೆ ನಿರ್ಣಾಯಕ ದಿನ: ಬಹುಮತ ಸಾಬೀತಿಗೆ ರಾಜ್ಯಪಾಲರ ಸೂಚನೆ

    ಹಲ್ಲು ಉಜ್ಜದೇ ಮುತ್ತಿಡಬೇಡ ಎಂದ ಪತ್ನಿ: ಕೋಪಗೊಂಡ ಗಂಡನಿಂದ ನಡೆಯಿತು ಘನ ಘೋರ ಕೃತ್ಯ

    ಸರಿಯಾಗಿ ಬೈಕ್ ಓಡಿಸಿ ಎಂದಿದ್ದೇ ತಪ್ಪಾಯ್ತಾ? ವೃದ್ಧ ಎನ್ನೋದನ್ನೂ ನೋಡದೇ ಯುವಕರಿಬ್ಬರಿಂದ ಹಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts