More

    ಸಿಎಂ ಉದ್ಧವ್​ ಠಾಕ್ರೆ ಸರ್ಕಾರಕ್ಕೆ ನಾಳೆ ನಿರ್ಣಾಯಕ ದಿನ: ಬಹುಮತ ಸಾಬೀತಿಗೆ ರಾಜ್ಯಪಾಲರ ಸೂಚನೆ

    ಮುಂಬೈ: ಮಹಾರಾಷ್ಟ್ರ ಸರ್ಕಾರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಕ್ರೈಮ್ಯಾಕ್ಸ್​ ಹಂತಕ್ಕೆ ಬಂದು ತಲುಪಿದೆ. ಗುರುವಾರ (ಜೂನ್​ 30) ಅಂದರೆ ನಾಳೆಯೇ ಬಹುಮತ ಸಾಬೀತು ಪಡಿಸುವಂತೆ ಸಿಎಂ ಉದ್ಧವ್​ ಠಾಕ್ರೆಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್​ ಸಿಂಗ್​ ಕೋಶ್ಯಾರಿ ಬುಧವಾರ (ಜೂನ್​ 29) ಸೂಚನೆ ನೀಡಿದ್ದಾರೆ.

    ಶಿವಸೇನಾ ಪ್ರಭಾವಿ ನಾಯಕ ಏಕನಾಥ್​ ಶಿಂಧೆ ನೇತೃತ್ವದಲ್ಲಿ 40ಕ್ಕೂ ಹೆಚ್ಚು ಶಿವಸೇನಾ ಶಾಸಕರು, ಸಿಎಂ ಉದ್ಧವ್​ ಠಾಕ್ರೆ ನೇತೃತ್ವದ ಮಹಾ ವಿಕಾಸ್​ ಅಘಾಡಿ (ಶಿವಸೇನಾ, ಕಾಂಗ್ರೆಸ್​ ಮತ್ತು ಎನ್​ಸಿಪಿ) ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದು ಕಳೆದ ಒಂದು ವಾರಕ್ಕೂ ಹೆಚ್ಚು ದಿನಗಳಿಂದ ಅಸ್ಸಾಂನಲ್ಲಿ ಬೀಡುಬಿಟ್ಟಿದ್ದಾರೆ. ಸಿಎಂ ಉದ್ಧವ್​ ಠಾಕ್ರೆ, ಸಂಸದ ಸಂಜಯ್​ ರಾವತ್​ ಅವರು ಸರ್ಕಾರ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಇದರ ನಡುವೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನಾವೀಸ್​ ನಿನ್ನೆ ರಾಜ್ಯಪಾಲರನ್ನು ಭೇಟಿಯಾಗಿ, ಮೈತ್ರಿ ಸರ್ಕಾರ ಶಾಸಕರ ವಿಶ್ವಾಸ ಕಳೆದುಕೊಂಡಿದೆ. ಸಂಖ್ಯಾಬಲ ಕುಸಿದಿದೆ. ಬಹುಮತ ಸಾಬೀತಿಗೆ ಸೂಚಿಸಿ ಎಂದು ಮನವಿ ಮಾಡಿಕೊಂಡಿದ್ದರು.

    ಇದರ ಬೆನ್ನಲ್ಲೇ ಇಂದು ಬೆಳಗ್ಗೆ ರಾಜ್ಯಪಾಲ ಭಗತ್​ ಸಿಂಗ್​ ಕೋಶ್ಯಾರಿ ಅವರು ವಿಧಾನಸಭೆ ಕಾರ್ಯದರ್ಶಿ ರಾಜೇಂದ್ರ ಭಾಗವತ್ ಅವರಿಗೆ ಪತ್ರ ಬರೆದಿದ್ದು, ಸಿಎಂ ಠಾಕ್ರೆ ಅವರು ಬಹುಮತ ಸಾಬೀತು ಮಾಡಲು ನಾಳೆ ಬೆಳಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ವಿಶೇಷ ಅಧಿವೇಶನಕ್ಕೆ ಕರೆಯುವಂತೆ ತಿಳಿಸಿದ್ದಾರೆ.

    ರಾಜ್ಯದಲ್ಲಿ ತೆರೆದುಕೊಂಡಿರುವ ಪ್ರಸ್ತುತ ರಾಜಕೀಯ ಸನ್ನಿವೇಶವು ಬಹಳ ಗೊಂದಲದ ಕ್ಷಣಗಳನ್ನು ಪ್ರಸ್ತುತಪಡಿಸುತ್ತಿದೆ. 39 ಶಾಸಕರು ಮಹಾ ವಿಕಾಸ್​ ಅಘಾಡಿ ಸರ್ಕಾರದಿಂದ ನಿರ್ಗಮಿಸುವ ಬಯಕೆಯನ್ನು ಹೊಂದಿದ್ದಾರೆ. ಏಳು ಸ್ವತಂತ್ರ ಶಾಸಕರು ಸಹ ತಮ್ಮ ಬೆಂಬಲವನ್ನು ಹಿಂತೆಗೆದುಕೊಳ್ಳುವಂತೆ ಇಮೇಲ್ ಮೂಲಕ ಪತ್ರವನ್ನು ಕಳುಹಿಸಿದ್ದಾರೆ. ವಿರೋಧ ಪಕ್ಷದ ನಾಯಕರು ನನ್ನನ್ನು ಭೇಟಿ ಮಾಡಿ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನನಗೆ ವಿವರಿಸಿದರು ಮತ್ತು ಬಹುಮತ ಸಾಬೀತು ಪಡಿಸಲು ಸೂಚನೆ ನೀಡುವಂತೆ ಮನವಿ ಮಾಡಿದರು ಎಂದು ಕೋಶ್ಯಾರಿ ಅವರು ಹೇಳಿದ್ದಾರೆ.

    ಇನ್ನು ಏಕನಾಥ್​ ಶಿಂಧೆ ಬಿಜೆಪಿ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಮುಂಬೈಗೆ ಬರುವ ಮುನ್ನ ದೆಹಲಿಯಲ್ಲಿ ಕೆಲ ನಾಯಕರನ್ನು ಭೇಟಿಯಾಗುವ ಸಾಧ್ಯತೆ ಇದೆ. ಇತ್ತ ಮುಂಬೈನಲ್ಲಿ ಸಿಎಂ ಉದ್ಧವ್ ಠಾಕ್ರೆ ರಾಜ್ಯ ಸಚಿವ ಸಂಪುಟ ಸಭೆ ನಡೆಸಿದ್ದು, ರಾಜೀನಾಮೆ ನೀಡುವುದು ಬೇಡ. ಸದನದಲ್ಲಿ ಬಲಾಬಲ ಪ್ರದರ್ಶನವಾಗಲಿ. ನಾವು ನಿಮ್ಮೊಂದಿಗಿದ್ದೇವೆ ಎಂದು ಸಚಿವರು ಬೆಂಬಲ ಸೂಚಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೂ ಉದ್ಧವ್​ಗೆ ಕರೆ ಮಾಡಿ, ಸದ್ಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ರ್ಚಚಿಸಿದ್ದಾರೆ. ಕ್ಯಾಬಿನೆಟ್ ಸಭೆ ಬಳಿಕ ಉದ್ಧವ್ ರಾಜೀನಾಮೆ ನೀಡಬಹುದು ಎಂಬ ವದಂತಿ ಹಬ್ಬಿದ್ದ ಹಿನ್ನೆಲೆಯಲ್ಲಿ ಸೋನಿಯಾ ಕರೆ ಮಾಡಿದ್ದಾರೆನ್ನಲಾಗಿದೆ. ಇದಾದ ಬಳಿಕ ಸರ್ಕಾರ ಉಳಿಸಲು ಉದ್ಧವ್ ಯತ್ನ ಮುಂದುವರಿಸಿದ್ದು, ನೀವೆಲ್ಲರೂ ಮುಂಬೈಗೆ ವಾಪಸ್ ಬನ್ನಿ. ನಾವು ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ಮಾಡೋಣ ಎಂದು ಮನವೊಲಿಸಲು ಮುಂದಾಗಿದ್ದಾರೆ.

    ನಮ್ಮೊಂದಿಗೆ 10-15 ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಹೇಳಿದ್ದಾರೆ. ಆದರೆ, ಆದಿತ್ಯ ಠಾಕ್ರೆ ಹೇಳಿಕೆಗೆ ತಿರುಗೇಟು ನೀಡಿರುವ ಶಿಂಧೆ, ಯಾವ ಶಾಸಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ. ಬಿಜೆಪಿ ಜತೆ ಸೇರಿ ರಾಜ್ಯದಲ್ಲಿ ಹೊಸ ಸರ್ಕಾರ ರಚನೆ ಮಾಡುವ ಮೂಡ್​ಗೆ ಬಂದಿದ್ದಾರೆ.

    ಖ್ಯಾತ ನಟಿ ಮೀನಾ ಬಾಳಲ್ಲಿ ಬಡಿದ ಬರಸಿಡಿಲು: ಚೆನ್ನೈನಲ್ಲಿ ಕೊನೆಯುಸಿರೆಳೆದ ಪತಿ ವಿದ್ಯಾಸಾಗರ್​

    ಹಿಂದು ಹತ್ಯೆ ಕೇಸ್​: ಉದಯಪುರದಲ್ಲಿ 144 ಸೆಕ್ಷನ್​ ಜಾರಿ, ಜಾಲತಾಣದಲ್ಲಿ ಪೋಸ್ಟ್​ ಹಾಕಿದ್ದು ಕೊಲೆಯಾದ ವ್ಯಕ್ತಿಯಲ್ಲ

    ಜಾಕ್​ಲೀನ್​ಗೆ ಇಡಿ ಇಕ್ಕಟ್ಟು!; ‘ವಿಕ್ರಾಂತ್ ರೋಣ’ ಪ್ರಚಾರಕ್ಕೆ ಎಫೆಕ್ಟ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts