More

    ಷರಿಯಾ ಕಾನೂನು ಅಂದ್ರೇನು? ಈ ಪದ ಕೇಳಿದ್ರೆ ಆಫ್ಘಾನ್​ ಮಹಿಳೆಯರು ಕನಸಲ್ಲೂ ಬೆಚ್ಚಿ ಬೀಳುವುದ್ಯಾಕೆ?

    ಕಾಬುಲ್​: ಇಡೀ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡಿರುವ ರಕ್ತಪಿಪಾಸು ತಾಲಿಬಾನಿ ಉಗ್ರರು ಶಾಂತಿ ನೆಲೆಸಿದ್ದ ಆಫ್ಘಾನ್​ ನೆಲದಲ್ಲಿ ರಕ್ತ ಚರಿತ್ರೆ ಆರಂಭಿಸಿದ್ದಾರೆ. ಆಫ್ಘಾನ್​ನಲ್ಲಿ ತಾಲಿಬಾನಿ ಆಡಳಿತ ಶುರುವಾದ್ರೆ ಯಾರಿಗೂ ನೆಮ್ಮದಿ ಇರುವುದಿಲ್ಲ ಎಂಬುದು ಜಗಜ್ಜಾಹೀರು. ಅದರಲ್ಲೂ ಮಹಿಳೆಯರಂತೂ ತಾಲಿಬಾನ್​ ಜಾರಿ ಮಾಡಲು ಮುಂದಾಗಿರುವ “ಷರಿಯಾ ಕಾನೂನು” ಎಂಬ ಪದವನ್ನು ನಿದ್ರೆಯಲ್ಲಿ ಕೇಳಿದರೂ ಭಯದಿಂದ ಎಚ್ಚರವಾಗುತ್ತಾರೆ. ಅಷ್ಟು ಕಠೋರವಾಗಿದೆ ಆ ಕಾನೂನು.

    ಹೊಸದಾಗಿ ಸ್ಥಾಪಿತವಾಗಿರುವ ಷರಿಯಾ ಅಥವಾ ಇಸ್ಲಾಮಿಕ ಕಾನೂನಿನ ಅಡಿಯಲ್ಲಿ ಮಹಿಳೆಯರಿಗೆ ಅವರದೇ ಆದ ಹಕ್ಕುಗಳನ್ನು ನೀಡುತ್ತೇವೆಂಬ ಪ್ರತಿಜ್ಞೆಯನ್ನು ತಾಲಿಬಾನಿಗಳು ಮಾಡಿದ್ದಾರೆ. ಆದರೆ, ಅದು ಕಾಗದಕ್ಕೆ ಮಾತ್ರ ಸೀಮಿತವಾಗಲಿದೆ ಎಂಬುದು ಹೆಣ್ಣು ಮಕ್ಕಳ ಆತಂಕವಾಗಿದೆ. ಹಾಗದರೆ, ಅಷ್ಟೊಂದು ಭಯ ಹುಟ್ಟಿಸುತ್ತಿರುವ ಷರಿಯಾ ಕಾನೂನಿನಲ್ಲಿ ಏನಿದೆ. ಷರಿಯಾ ಕಾನೂನು ಅಂದರೆ ಏನು ಅಂತಾ ಮುಂದೆ ನೋಡುತ್ತಾ ಹೋಗೋಣ….

    ಅಫ್ಘಾನಿಸ್ತಾನದಲ್ಲಿ ಈ ಹಿಂದೆ ತಾಲಿಬಾನ್​ ಆಡಳಿತ ನಡೆಸಿದಾಗ ಮಹಿಳೆಯರ ಮೇಲೆ ಅನೇಕ ಕಠಿಣ ನಿಷೇಧಗಳನ್ನು ಹೇರಿದ್ದರು. ಮನೆಯಿಂದ ಹೊರಗೆ ಕೆಲಸ ಮಾಡುವಂತಿಲ್ಲ ಅಥವಾ ಜತೆಯಲ್ಲಿ ಪುರುಷರು ಇಲ್ಲದೇ ಒಂಟಿಯಾಗಿ ಓಡಾಡಬಾರದು. ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸುವಂತಿರಲಿಲ್ಲ. ಯಾವುದಾದರೂ ಒಂದು ನಿಯಮವನ್ನು ಉಲ್ಲಂಘಿಸಿದರೂ ಸಹ ಅವರನ್ನು ಸಾರ್ವಜನಿಕವಾಗಿ ನಿಲ್ಲಿಸಿ ಶಿಕ್ಷಿಸುತ್ತಿದ್ದರು. ಇದೀಗ ಆಫ್ಘಾನ್​ ಆಕ್ರಮಿಸಿಕೊಂಡಿರುವ ತಾಲಿಬಾನ್​ ಬಂಡುಕೋರರ ಷರಿಯಾ ಕಾನೂನನ್ನು ಎಷ್ಟರ ಮಟ್ಟಿಗೆ ಬದಲಾಯಿಸುತ್ತಾರೋ ಮಹಿಳೆಯರಿಗೆ ಗೊತ್ತಿಲ್ಲ. ಆದರೆ, ಹಿಂದೆ ನಡೆದಿದ್ದನ್ನು ಮತ್ತು ತಮ್ಮ ಹಿರಿಯರು ಹೇಳಿದ್ದನ್ನು ನೆನೆದು ಎಲ್ಲಿ ಮತ್ತೆ ಅದೇ ಕರಾಳ ದಿನಗಳನ್ನು ಮರುಕಳಿಸುತ್ತವೆಯೋ ಎಂದು ತುಂಬಾ ಭಯಭೀತರಾಗಿದ್ದಾರೆ.

    ಷರಿಯಾ ಅಂದ್ರೇನು?
    ಅಂದಹಾಗೆ ಷರಿಯಾ ಮುಸ್ಲಿಂ ಪವಿತ್ರ ಗ್ರಂಥ ಕುರಾನ್ ಆಧರಿಸಿ ತಯಾರು ಮಾಡಲಾಗಿದೆ. ಪ್ರವಾದಿ ಮುಹಮ್ಮದ್ ಅವರ ಜೀವನದ ಕಥೆಗಳು ಮತ್ತು ಧಾರ್ಮಿಕ ವಿದ್ವಾಂಸರ ತೀರ್ಪುಗಳು ಹಾಗೂ ಇಸ್ಲಾಂನ ನೈತಿಕ ಮತ್ತು ಕಾನೂನು ಚೌಕಟ್ಟಿನ ಒಳಗೆ ಇದು ರೂಪಿತವಾಗಿದೆ ಎಂದು ಹೇಳಲಾಗಿದ್ದರೂ, ಕುರಾನ್ ನೈತಿಕ ಜೀವನಕ್ಕೆ ಒಂದು ಮಾರ್ಗವನ್ನು ವಿವರಿಸುತ್ತದೆ, ಹೊರತು ಅದರಲ್ಲಿ ಒಂದು ನಿರ್ದಿಷ್ಟ ಕಾನೂನುಗಳಿಲ್ಲ ಎಂಬುದು ಕೂಡ ಅಷ್ಟೇ ಸತ್ಯವಾಗಿದೆ.

    ಷರಿಯಾದ ಒಂದು ವ್ಯಾಖ್ಯಾನ ಪ್ರಕಾರ ಮಹಿಳೆಯರಿಗೆ ಸಾಕಷ್ಟು ಹಕ್ಕುಗಳನ್ನು ನೀಡಲಾಗುತ್ತದೆ. ಆದರೆ, ಇನ್ನೊಂದು ಅರ್ಥದ ಪ್ರಕಾರ ಹಕ್ಕುಗಳನ್ನು ಸೀಮಿತಗೊಳಿಸಲಾಗಿದೆ. ಆದರೆ, ಟೀಕಾಕಾರರು ಹೇಳುವ ಪ್ರಕಾರ ತಾಲಿಬಾನಿಗಳು ಇಸ್ಲಾಮಿಕ್ ಕಾನೂನಿನ ನೆಪದಲ್ಲಿ ನಿಜವಾಗಿ ಷರಿಯತ್‌ನ ಮಿತಿಗಳನ್ನು ಮೀರಿ ಮಹಿಳೆಯರನ್ನು ಒಂದು ಚೌಕಟ್ಟಿನಲ್ಲಿ ಕಟ್ಟಿ ಹಾಕಲಾಗುತ್ತದೆ. ಇದು ಕುರಾನ್​ಗೂ ವಿರುದ್ಧವಾಗಿದೆ.

    ಇನ್ನು ಮುಸ್ಲಿಂ ಜಗತ್ತಿನಲ್ಲಿಯೇ ಷರಿಯಾ ವ್ಯಾಖ್ಯಾನದ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಎಲ್ಲ ಗುಂಪುಗಳು ಮತ್ತು ಸರ್ಕಾರಗಳು ತಮ್ಮ ಕಾನೂನು ವ್ಯವಸ್ಥೆಗಳನ್ನು ಷರಿಯತ್ ಮೇಲೆಯೇ ಆಧರಿಸಿವೆ. ಆದರೆ, ಅವು ಎಲ್ಲ ಕಡೆಗಳಲ್ಲಿಯೂ ವಿಭಿನ್ನವಾಗಿವೆ. ತಾಲಿಬಾನಿಗಳು ಷರಿಯಾ ಕಾನೂನನ್ನು ಸ್ಥಾಪಿಸುತ್ತಿದ್ದೇವೆ ಎಂದಾಗ, ಅವರು ಇಸ್ಲಾಮಿಕ್ ವಿದ್ವಾಂಸರು ಅಥವಾ ಇತರ ಇಸ್ಲಾಮಿಕ್ ಅಧಿಕಾರಿಗಳು ಒಪ್ಪುವ ರೀತಿಯಲ್ಲಿ ಹಾಗೆ ಮಾಡುತ್ತಿದ್ದಾರೆ ಎಂದು ಅರ್ಥವಲ್ಲ. ಅದರ ಹಿಂದೆ ಬೇರೆಯದ್ದೇ ಅಡಗಿದೆ.

    ಷರಿಯಾ ಕಾನೂನು ಏನು ಸೂಚಿಸುತ್ತದೆ?
    ಕೆಲವೊಂದು ನಿರ್ದಿಷ್ಟವಾದ ಅಪರಾಧಗಳನ್ನು ಷರಿಯಾ ಕಾನೂನು ಪಟ್ಟಿ ಮಾಡುತ್ತದೆ. ಅವುಗಳು ಹೀಗಿವೆ… ಕಳ್ಳತನ ಮತ್ತು ವ್ಯಭಿಚಾರ ಆರೋಪಗಳಲ್ಲಿ ಪ್ರಮಾಣಿತ ಮಾನದಂಡವನ್ನು ಪೂರೈಸಿದರೆ ಘೋರ ಶಿಕ್ಷೆಗಳು ಎದುರಾಗಲಿವೆ. ಇಲ್ಲಿ ಕ್ಷಮೆಯ ಮಾತೇ ಇರುವುದಿಲ್ಲ. ವಿಶೇಷವೆಂದರೆ ಷರಿಯತ್​ನಲ್ಲಿ ಧಾರ್ಮಿಕ ಮಾರ್ಗದರ್ಶನವೂ ಇರುತ್ತದೆ. ಯಾವಾಗ ಮತ್ತು ಹೇಗೆ ಪ್ರಾರ್ಥನೆ ಸಲ್ಲಿಸಬೇಕು? ಹಾಗೂ ಹೇಗೆ ಮದುವೆ ಮತ್ತು ವಿಚ್ಛೇದನ ಪಡೆಯಬೇಕು ಎಂಬುದನ್ನು ಸಹ ತಿಳಿಸುತ್ತದೆ. ಜತೆಗೆ ಒಬ್ಬ ಪುರುಷನಿಲ್ಲದೆ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಹೊರಗಡೆ ಹೋಗಬಾರದು ಎಂಬುದನ್ನು ಈ ಕಾನೂನು ಹೇಳುತ್ತದೆ. ಅಲ್ಲದೆ, ಮನೆಯನ್ನು ಬಿಟ್ಟು ಹೊರಗಡೆ ಹೋಗಿ ಕೆಲಸ ಮಾಡುವಂತೆಯೇ ಇಲ್ಲ.

    1996 ರಿಂದ 2001ರವರೆಗೆ ಇಡೀ ಆಫ್ಘಾನಿಸ್ತಾನ ತಾಲಿಬಾನ್​ ಕೈವಶದಲ್ಲಿದ್ದಂತಹ ಸಮಯದಲ್ಲಿ, ರಕ್ತಪಿಪಾಸುಗಳು ದೂರದರ್ಶನ (ಟಿವಿ) ಮತ್ತು ಅನೇಕ ಸಂಗೀತ ಉಪಕರಣಗಳನ್ನೇ ಬ್ಯಾನ್​ ಮಾಡಿದ್ದರು. ಸೌದಿ ಮಾದರಿಯನ್ನು ಆಧರಿಸಿ ಸಚ್ಚಾರಿತ್ರ್ಯಪ್ರಚಾರ ಮತ್ತು ದುಶ್ಚಟ ತಡೆಗಟ್ಟುವ ಇಲಾಖೆಯನ್ನು ಸ್ಥಾಪಿಸಿದರು.

    ಜನರ ವರ್ತನೆ, ಉಡುಗೆ ಮತ್ತು ಚಲನಾವಲನಗಳ ಮೇಲೆ ನಿರ್ಬಂಧ ಹೇರಲಾಗಿತ್ತು. ಇವುಗಳ ಮೇಲೆ ನಿಗಾ ಇಡಲು ನೈತಿಕ ಪೊಲೀಸ್ ಅಧಿಕಾರಿಗನ್ನು ನೇಮಿಸಲಾಗಿತ್ತು. ಪಿಕಪ್​ ಟ್ರಕ್​ಗಳ ಮೂಲಕ ಇವರು ನಗರವನ್ನು ಸುತ್ತಾಡುತ್ತಿದ್ದರು. ಯಾರಾದರೂ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದರೆ ಅವರಿಗೆ ಸಾರ್ವಜನಿಕವಾಗಿ ಶಿಕ್ಷೆಯನ್ನು ನೀಡಿ ಅವಮಾನಿಸಲಾಗುತ್ತಿತ್ತು. ಅದರಲ್ಲೂ ಮಹಿಳೆಯರ ಮೇಲೆ ಹೆಚ್ಚಿನ ನಿರ್ಬಂಧ ಮತ್ತು ನಿಗಾವನ್ನು ಇರಿಸಲಾಗಿತ್ತು. 1996ರಲ್ಲಿ ಕಾಬೂಲ್​ನಲ್ಲಿ ನಡೆದು ಒಂದು ಘಟನೆ ಇಂದಿಗೂ ಮಹಿಳೆಯರ ಎದೆಯಲ್ಲಿ ನಡುಕ ಹುಟ್ಟಿಸುತ್ತದೆ. ಕೇವಲ ಉಗುರು ಬಣ್ಣ ಹಾಕಿದ್ದಕ್ಕೆ ಮಹಿಳೆಯ ಬೆರಳನ್ನೇ ತಾಲಿಬಾನಿಗಳು ಕತ್ತರಿಸಿದ್ದರು. ಮಹಿಳೆಯರ ವಿರುದ್ಧ ವ್ಯಭಿಚಾರ ಅಥವಾ ಅಕ್ರಮ ಸಂಬಂಧದ ಆರೋಪ ಕೇಳಿಬಂದರೆ ಅಂಥವರನ್ನು ಸಾರ್ವಜನಿಕ ಪ್ರದೇಶದಲ್ಲಿ ಕಲ್ಲು ಹೊಡೆದು ಹತ್ಯೆ ಮಾಡಲಾಗುತ್ತಿತ್ತು.

    ಬದಲಾಗುತ್ತಾ ತಾಲಿಬಾನ್​ ನಡವಳಿಕೆ?
    ಮಹಿಳೆಯರ ಬಗ್ಗೆ ಅವರ ನಡವಳಿಕೆ ಬದಲಾಗುತ್ತದೆಯೇ ಎಂದು ತಜ್ಞರು ತಾಲಿಬಾನ್ ನಾಯಕರ ಇತ್ತೀಚಿನ ನಡವಳಿಕೆಯನ್ನು ಗಮನಿಸುತ್ತಿದ್ದು, ಸುಳಿವುಗಳಿಗಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಈ ವಾರ ತಾಲಿಬಾನ್​ನ ಹಿರಿಯ ಅಧಿಕಾರಿಯೊಬ್ಬರು ಕಾಬುಲ್​ನಲ್ಲಿ ಮಹಿಳಾ ಟಿವಿ ಪರ್ತಕರ್ತೆಗೆ ಸಂದರ್ಶನ ನೀಡಿದಾಗ, ಅದು ಪ್ರಪಂಚಕ್ಕೆ ಮತ್ತು ಅಫ್ಘಾನಿಸ್ತಾನದಲ್ಲಿ ಹೆಚ್ಚು ಮಿತವಾದ ಮುಖವನ್ನು ಪ್ರಸ್ತುತಪಡಿಸಲು ಗುಂಪಿನ ಒಂದು ವ್ಯಾಪಕ ಅಭಿಯಾನದ ಭಾಗವಾಗಿತ್ತು. ಅಂದರೆ, ತಾಲಿಬಾನ್​ ಪ್ರಚಾರದ ತಂತ್ರವಾಗಿತ್ತಷ್ಟೇ. ಇದಾದ ಕೆಲವೇ ಗಂಟೆಗಳಲ್ಲಿ ಸಂದರ್ಶನ ಮಾಡಿದ ಪತ್ರಕರ್ತೆಯನ್ನೇ ಕೆಲಸದಿಂದ ತಾಲಿಬಾನ್​ ತೆಗೆದುಹಾಕಿದ್ದು, ಅವರ ಮುಖವಾಡ ಕಳಚಿಬಿದ್ದಂತಾಯಿತು.

    ತಾಲಿಬಾನ್​ ವಕ್ತಾರ ಹೇಳುವ ಪ್ರಕಾರ ಮಹಿಳೆಯರಿಗೆ ಓದಲು ಮತ್ತು ಕೆಲಸ ಮಾಡಲು ಅನುಮತಿ ನೀಡಲಾಗುವುದು ಎಂದು ಹೇಳಿದ್ದಾರೆ. ಮತ್ತೊಬ್ಬ ಅಧಿಕಾರಿ ಹೇಳುವ ಪ್ರಕಾರ ಮಹಿಳೆಯರು ಸರ್ಕಾರದಲ್ಲಿಯೂ ಭಾಗವಹಿಸಬಹುದು ಎಂದಿದ್ದಾರೆ. ಈ ಮೂಲಕ ಈ ಹಿಂದೆ ಇದ್ದ ಅಭ್ಯಾಸಗಳನ್ನು ಮುರಿಯುವ ಮುನ್ಸೂಚನೆ ನೀಡಿದ್ದರೂ ಅದು ಬಾಯಿ ಮಾತಿಗೆ ಸೀಮಿತವಾಗಲಿದೆಯೇ ಎಂಬ ಅನುಮಾನಗಳು ಸಹ ಆವರಿಸಿಕೊಂಡಿದೆ. ಅದಕ್ಕೆ ಕಾರಣ ತಾಲಿಬಾನಿಗಳ ಪ್ರಸ್ತುತ ನಡವಳಿಕೆ.

    ಈಗಲೂ ಜಾರಿಯಲ್ಲಿದೆ
    ತಾಲಿಬಾನಿಗಳ ನಡವಳಿಕೆ ಪುಷ್ಠಿ ನೀಡುವಂತೆ ಕಾಬುಲ್​ನ ಹೊರಭಾಗದಲ್ಲಿ ಮಹಿಳೆಯರು ಮನೆಯಿಂದ ಹೊರ ಬಾರದಂತೆ ಸೂಚನೆ ನೀಡಿದ್ದಾರೆಂದು ಸ್ವತಃ ಮಹಿಳೆಯರೇ ಹೇಳಿಕೊಂಡಿದ್ದಾರೆ. ಪುರುಷರು ಜತೆಯಿಲ್ಲದೆ ಹೊರಗೆ ಬರುವಂತಿಲ್ಲ ಒಂದೇ ಒಂದು ಯೂನಿವರ್ಸಿಟಿಗೂ ಹೋಗದಂತೆ ಮಹಿಳೆಯರನ್ನು ತಡೆಯಲಾಗಿದೆ. ಅಲ್ಲದೆ, ಮಹಿಳಾ ಕ್ಲೀನಿಕ್ಸ್​ ಮತ್ತು ಹೆಣ್ಣು ಮಕ್ಕಳ ಶಾಲೆಯನ್ನು ಸಹ ಮುಚ್ಚಿದ್ದಾರೆ.

    ಅಫ್ಘಾನಿಸ್ತಾನದ ಮಹಿಳಾ ವ್ಯವಹಾರಗಳ ಮಾಜಿ ಉಪ ಮಂತ್ರಿ ಹೊಸ್ನಾ ಜಲೀಲ್, ಜರ್ಮನಿಯ ನೆಟ್ವರ್ಕ್ ಡಾಯ್ಚ ವೆಲ್ಲೆ ಮಾಧ್ಯಮಕ್ಕೆ ನೀಡಿರುವ ಸಂದರ್ಶನದ ಪ್ರಕಾರ ತಾಲಿಬಾನ್ ಈಗ ಷರಿಯತ್ ಅನ್ನು ವಿಭಿನ್ನವಾಗಿ ಅರ್ಥೈಸುತ್ತದೆ ಎಂದು ತನಗೆ ಸ್ವಲ್ಪ ನಂಬಿಕೆ ಇದೆ ಎಂದಿದ್ದಾರೆ. ಅವರಿಗೆ ಷರಿಯಾ ಕಾನೂನು ಎಂದರೆ ಶಿಕ್ಷಣದ ಪ್ರವೇಶದ ಕೊರತೆ, ಆರೋಗ್ಯ ಸೇವೆಗಳಿಗೆ ನಿರ್ಬಂಧಿತ ಪ್ರವೇಶ, ನ್ಯಾಯಕ್ಕೆ ಪ್ರವೇಶವಿಲ್ಲ, ಆಶ್ರಯವಿಲ್ಲ, ಆಹಾರ ಭದ್ರತೆ ಇಲ್ಲ, ಉದ್ಯೋಗವಿಲ್ಲ, ಅಕ್ಷರಶಃ ಏನೂ ಇಲ್ಲ ಎಂದು ಅವರು ಹೇಳಿದರು. ಹೀಗಾಗಿ ಈ ಬಾರಿ ಬದಲಾವಣೆ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಆದರೆ, ತಾಲಿಬಾನಿಗಳು ನಿರ್ಬಂಧಗಳನ್ನು ಸಡಿಲಿಸದೇ ಅವುಗಳನ್ನು ಹಾಗೇ ಮುಂದುವರಿಸಿದ್ದಲ್ಲಿ ಅಫ್ಘಾನಿಸ್ತಾನ ಮಹಿಳೆಯರ ಪಾಲಿನ ಮರಣ ಶಾಸನ ಆಗುವುದರಲ್ಲಿ ಸಂಶಯವೇ ಇಲ್ಲ. ಸದ್ಯ ಇರುವುದೊಂದೆ ಜೀವನ ಅದನ್ನು ಒಂದು ಚೌಕಟ್ಟಿನಲ್ಲಿ ಬಂಧಿಸಿಬಿಟ್ಟರೆ ಸುಂದರವಾದ ಜೀವನ ನಮಗೆ ಕಬ್ಬಿಣದ ಕಡಲೆ ಆಗುವುದೇನೋ ಎಂಬ ಆತಂಕದಲ್ಲಿ ಆಫ್ಘಾನ್​ ಮಹಿಳೆಯರಿದ್ದಾರೆ. ಸ್ವತಂತ್ರವಾಗಿ ಬದುಕದೇ ಪುರುಷರ ಗುಲಾಮಗಿರಿಯಲ್ಲಿ ಬದುಕಬೇಕಲ್ಲ ಎಂಬ ಚಿಂತೆಯೂ ಇದೀಗ ಆಫ್ಘಾನ್​ ಮಹಿಳೆಯರನ್ನು ಆವರಿಸಿದೆ. ಸದ್ಯ ಸರ್ಕಾರ ರಚನೆಗೆ ಮುಂದಾಗಿರುವ ತಾಲಿಬಾನ್​ ಮುಂದೆ ಯಾವ ಹಾದಿ ಹಿಡಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

    ಇಡೀ ಆಫ್ಘನ್ ಗೆದ್ದ ತಾಲಿಬಾನ್​ಗೆ ಅದೊಂದು ಪ್ರಾಂತ್ಯ ಮಾತ್ರ ನಡುಕ ಹುಟ್ಟಿಸಿದೆ: ರೋಚಕ ಸ್ಟೋರಿ ಇದು!

    ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಮುಂದಿನ ರಾಜಕೀಯ ಬಗ್ಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿದ್ದು ಹೀಗೆ…​

    ಟಾಲಿವುಡ್​ ಹಾಟ್​ ಬ್ಯೂಟಿ ಪಾಯಲ್​ ರಜಪೂತ್ ಎಡವಟ್ಟು​: ಕೋರ್ಟ್​ ಆದೇಶದ ಮೇರೆಗೆ ದಾಖಲಾಯ್ತು ದೂರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts