More

    ಅಪ್ಪು ಬರ್ತಡೇ ಜತೆಗೆ ಜೇಮ್ಸ್ ಜಾತ್ರೆ ಆರಂಭ: ಎಲ್ಲೆಲ್ಲಿ? ಏನೆಲ್ಲ ಕಾರ್ಯಕ್ರಮ ನಡೆಯಲಿದೆ? ಇಲ್ಲಿದೆ ಮಾಹಿತಿ​

    ಬೆಂಗಳೂರು: ಮಾರ್ಚ್​ 17 ಅಂದರೆ ಇಂದು ದಿವಂಗತ ನಟ ಪುನೀತ್​ ರಾಜ್​ಕುಮಾರ್ ಅವರ ಹುಟ್ಟಿದ ದಿನ. ಇಂದೇ ಅವರ​ ಅಭಿನಯದ ಕೊನೆಯ ಚಿತ್ರ ಜೇಮ್ಸ್​ ಬಿಡುಗಡೆ ಆಗಿದೆ. ಅಪ್ಪು ಇಲ್ಲದೇ ಆಚರಿಸುತ್ತಿರುವ ಮೊದಲ ಬರ್ತಡೇ ಇದಾಗಿದ್ದು, ಈ ಸಂಗತಿ ಅಭಿಮಾನಿಗಳಿಗೆ ತುಂಬಾ ನೋವು ತರಿಸಿದೆ. ಆದರೂ ಜೇಮ್ಸ್​ ಚಿತ್ರದ ಮೂಲಕ ಅಪ್ಪು ಬರ್ತಡೆಯನ್ನು ಅದ್ಧೂರಿಯಾಗಿ ಅಭಿಮಾನಿಗಳು ಆಚರಿಸುತ್ತಿದ್ದಾರೆ.

    ನಿನ್ನೆ (ಮಾ.16) ಸಂಜೆಯಿಂದಲೇ ಜೇಮ್ಸ್​ ಜಾತ್ರೆ ಆರಂಭವಾಗಿದೆ. ಹೀಗಾಗಿ ಇಂದು ರಾಜ್ಯಾದ್ಯಂತ ಅಪ್ಪು ಅಭಿಮಾನಿಗಳು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಆ ಕುರಿತಾಗ ಒಂದು ಸಮಗ್ರ ವರದಿ ಇಲ್ಲಿದೆ.

    ಪುನೀತ್​ ಉತ್ಸವ
    ಇತಿಹಾಸದಲ್ಲೇ ಮೊದಲ ಬಾರಿಗೆ ಐತಿಹಾಸಿಕ ಕ್ಷಣಕ್ಕೆ ವೀರೇಶ್​ ಚಿತ್ರಮಂದಿರ ಸಾಕ್ಷಿಯಾಗಿದೆ. ಚಿತ್ರಮಂದಿರಲ್ಲಿ ಅಪ್ಪು ಹುಟ್ಟುಹಬ್ಬ ಆಚರಿಸುವುದರ ಜತೆಗೆ ಜೇಮ್ಸ್​ ಚಿತ್ರ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಅಪ್ಪು ಉತ್ಸವ ನಡೆಯುತ್ತಿದೆ. ಅಪ್ಪು ಚಿತ್ರದಿಂದ ಕೊನೆಯ ಜೇಮ್ಸ್​ ಚಿತ್ರದವರೆಗೆ ಪುನೀತ್​ ಅವರ ಕಟೌಟ್​ಗಳನ್ನು ಹಾಕುವುದರೊಂದಿಗೆ ಪ್ರತಿ ಕಟೌಟ್​ಗೆ ಬಾರಿ ಹೂವಿನ ಹಾರವನ್ನು ಹಾಕಲಾಗಿದೆ. ಅಲ್ಲದೆ, ಬೆಳಗ್ಗೆ 10.30ಕ್ಕೆ ಹೆಲಿಕಾಪ್ಟರ್​ ಮೂಲಕ ಅಪ್ಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಗುವುದು. ನಂತರ ಅನ್ನದಾನ ನಡೆಯಲಿದೆ ಮತ್ತು ಮಕ್ಕಳಿಕೆ ಹಾಗೂ ವೃದ್ಧರಿಗೆ ಬಟ್ಟೆ ವಿತರಣೆ ಮಾಡಿ, ಸಿಹಿ ಹಂಚಲಾಗುವುದು. ಇದರ ಜತೆಗೆ ಸಸಿ ವಿತರಣೆಯು ಇರಲಿದೆ. ಇವೆಲ್ಲದರ ಜೊತೆಗೆ ಸಿಡಿಮದ್ದುಗಳನ್ನು ಸಿಡಿಸಲಾಗುವುದು. ಇದಿಷ್ಟು 17ನೇ ತಾರೀಖಿನ ಕಾರ್ಯಕ್ರವಾದರೆ, ಮಾರ್ಚ್​ 18ರಂದು ಬೆಳಗ್ಗೆ 10.30ಕ್ಕೆ ಸಿಹಿ ಹಂಚಿಕೆ ಹಾಗೂ ಮಧ್ಯಾಹ್ನ ಅನ್ನದಾನ ಮತ್ತು ಸಂಜೆ 6.30ಕ್ಕೆ ದೀಪೋತ್ಸವ ನಡೆಯಲಿದೆ.

    ದಿನಾಂಕ 19ರಂದು ಬೆಳಗ್ಗೆ 10.30ಕ್ಕೆ ಸಿಹಿ ಹಂಚಿಕೆ ಹಾಗೂ ನೇತ್ರದಾನ ತಪಾಸಣೆ ಮತ್ತು ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ದಿನಾಂಕ 20ರಂದು ಸಿಹಿ ಹಂಚಿಕೆ, ಮಧ್ಯಾಹ್ನ ಚಿಕನ್​ ಬಿರಿಯಾನಿ ಹಂಚಲಾಗುವುದು. ಸಂಜೆ 4.30ಕ್ಕೆ ಹೂವಿನ ಪಲ್ಲಕ್ಕಿಗಳಲ್ಲಿ ಡಾ.ರಾಜ್​ ಹಾಗೂ ಅಪ್ಪು ಭಾವಚಿತ್ರ ಮೆರವಣಿಗೆ ಮಾಡಲಾಗುತ್ತದೆ. ಡೊಳ್ಳು ಕುಣಿತ, ತಮಟೆವಾದ್ಯ ಹಾಗೂ ಸಾಂಸ್ಕೃತಿಕ ತಂಡಗಳಿಂದ 6ನೇ ಬ್ಲಾಕ್​ ರಾಜಾಜಿನಗರ, ಸಮುದಾಯ ಭವನ ಡಾ. ರಾಜ್​ಕುಮಾರ್​ ರಸ್ತೆಯಿಂದ ವೀರೇಶ್​ ಚಿತ್ರಮಂದಿರಕ್ಕೆ ಮೆರವಣಿಗೆ ಮೂಲಕ ತರಲಾಗುವುದು ಹಾಗೂ 6 ಗಂಟೆಗೆ ಡಿಜೆ ಅಳವಡಿಸಿ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಎಲ್ಲ ಕಾರ್ಯಕ್ರಮಕ್ಕೆ ರಾಜ್​ ಕುಟಂಬ ಮತ್ತು ಗಣ್ಯರ ಆಗಮನ ಇರುತ್ತದೆ.

    ಅದ್ಧೂರಿ ಜೇಮ್ಸ್​ ಜಾತ್ರೆ
    ಕುಷ್ಟಗಿಯ ಅಪ್ಪು ಯೂತ್​ ಬ್ರಿಗೇಡ್​ ವತಿಯಿಂದ ಇಂದು (ಮಾರ್ಚ್​ 17) ಬೆಳಗ್ಗೆಯಿಂದಲೇ ಜೇಮ್ಸ್​ ಜಾತ್ರೆ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಗೆ ಎನ್​.ಎಚ್​. 50 ಮಹಾವೀರ ಸಾ ಮಿಲ್​ ಹತ್ತಿರ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಸರ್ಕಲ್​ ಉದ್ಘಾಟನಾ ಸಮಾರಂಭ ನಡೆಯಲಿದೆ. ನಂತರ ಅಪ್ಪು ಭಾವಚಿತ್ರ ಮೆರವಣಿಗೆ ಮತ್ತು ಬೃಹತ್​ ಬೈಕ್​ ರ್ಯಾಲಿ ನಡೆಯಲಿದೆ. ನಗರದ ಎಲ್ಲ ವೃತ್ತಗಳಲ್ಲಿ ಪಟಾಕಿ ಸಿಡಿಸುವ ಮೂಲಕ ಬೃಹತ್​ ರ್ಯಾಲಿ ಮಾಡಲಾಗುವುದು. ಅಪ್ಪು ಭಾವಚಿತ್ರ ಮೆರವಣಿಗೆಯು ಚಿತ್ರಮಂದಿರ ಮುಂದೆ ಮುಕ್ತಾಯಗೊಂಡ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಯ ಶೋ ಸಮಯದಲ್ಲಿ ಕೇಕ್​ ಕತ್ತರಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ಹಂಚಿ ಭಾರೀ ಪ್ರಮಾಣದಲ್ಲಿ ಸಿಡಿಮದ್ದು ಸಿಡಿಸಲಾಗುವುದು.

    ಒಂದು ದಿನ ಮುಂಚೆಯೇ ಜೇಮ್ಸ್​ ಜಾತ್ರೆ ಆರಂಭ
    ಅಪ್ಪು ಹುಟ್ಟುಹಬ್ಬ ಮತ್ತು ಜೇಮ್ಸ್​ ಚಿತ್ರದ ಬಿಡುಗಡೆಗೂ ಒಂದು ದಿನದ ಮುಂಚೆಯೇ ಅಂದರೆ ಮಾರ್ಚ್​ 16ರಂದು ಜೆ.ಪಿ.ನಗರದ ಸಿದ್ದೇಶ್ವರ ಮತ್ತು ಸಿದ್ದಲಿಂಗೇಶ್ವರ ಚಿತ್ರಮಂದಿರದ ವತಿಯಿಂದ ಜೇಮ್ಸ್​ ಜಾತ್ರೆ ನಡೆದಿದೆ. ಕಂಠೀರವ ಸ್ಟುಡಿಯೋದ ಡಾ. ರಾಜ್​ಕುಮಾರ್​ ಸ್ಮಾರಕದಿಂದ ಸಿದ್ದೇಶ್ವರ ಚಿತ್ರಮಂದಿರದವರೆಗೂ ಡಾ. ರಾಜ್​ ಮತ್ತು ಅಪ್ಪು ಭಾವಚಿತ್ರ ಮೆರವಣಿಗೆ ನಡೆಯಿತು. ಈ ವೇಳೆ ತಮಟೆವಾದ್ಯ ಹಾಗೂ ಸಾಂಸ್ಕೃತಿಕ ತಂಡಗಳಿಂದ ಕಾರ್ಯಕ್ರಮವನ್ನು ಮಾಡಲಾಯಿತು. ಸಂಜೆ 7.30ಕ್ಕೆ ಕರ್ನಾಟಕ ರತ್ನ ಪುನೀತ್​ ರಾಜ್​ಕುಮಾರ್​ ಅವರ ಎಲ್ಲ 31 ಚಿತ್ರದ ವಾಲ್​ ಆಫ್​ ಫ್ರೇಮ್ಸ್​ ಹಾಕಲಾಯಿತು ಹಾಗೂ ಬೃಹತ್​ ಕಟೌಟ್​ಗೆ ಭಾರೀ ಗಾತ್ರದ ಹೂವನ್ನು ಹಾಕಲಾಯಿತು. ದಿನಾಂಕ 17ರಂದು ಅಪ್ಪು ಹುಟ್ಟುಹಬ್ಬ ಹಾಗೂ ಜೇಮ್ಸ್​ ಚಿತ್ರ ಬಿಡುಗಡೆ ಪ್ರಯುಕ್ತ ಅಭಿಮಾನಿಗಳಿಗೆ ನಿರಂತರ ಅನ್ನದಾಸೋಹ ಏರ್ಪಡಿಸಲಾಗಿದೆ. ಬೆಳ್ಳಿಪರದೆಯ ಮುಂದೆ ಕರ್ನಾಟಕ ರತ್ನ ಪುನೀತ್​ ಹುಟ್ಟುಹಬ್ಬ ಪ್ರಯುಕ್ತ ವಿಶೇಷ ಲೈಟಿಂಗ್ಸ್​ ವ್ಯವಸ್ಥೆಯನ್ನು ಏರ್ಪಡಿಸಿ ಮತ್ತು ಬೆಳ್ಳಿಪರದೆಯ ಮೇಲೆ ಬೃಹತ್​ ಸಂಭ್ರಮಾಚರಣೆ ಹಾಗೂ ಹೂಗಳಿಂದ ಪುಷ್ಪಾರ್ಚನೆ ಹಾಗೂ ಜೇಮ್ಸ್​ ಚಿತ್ರದ ಪ್ರತಿ ಪ್ರದರ್ಶನಕ್ಕೂ ಸಿಡಿಮದ್ದು ಸಿಡಿಸಲಾಗುತ್ತಿದೆ. ಸಂಜೆ 6.30ಕ್ಕೆ ಅಪ್ಪು ಭಾವಚಿತ್ರಕ್ಕೆ ದೀಪೋತ್ಸವ ಅಲಂಕರಿಸಲಾಗುವುದು.

    ಮಾಗಡಿ ಯೂತ್ಸ್​ ವಿಶೇಷ ಕಾರ್ಯಕ್ರಮ
    ಮಾಗಡಿಯ ಅಪ್ಪು ಯೂತ್​ ಬ್ರಿಗೇಡ್ಸ್​ ವತಿಯಿಂದ ಪುನೀತ್​ ಹುಟ್ಟುಹಬ್ಬ ಮತ್ತು ಜೇಮ್ಸ್​ ಚಿತ್ರ ಬಿಡುಗಡೆ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಇಂದು ಬೆಳಗ್ಗೆಯಿಂದಲೇ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 8 ಗಂಟೆಗೆ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು. ತಮಟೆ ಹಾಗೂ ಜಾನಪದ ಕಲಾತಂಡಗಳೊಂದಿಗೆ ಅಪ್ಪು ಭಾವಚಿತ್ರ ಮೆರವಣಿಗೆ ನಡೆಯಲಿದೆ. ಬಾಲಜಿ ಚಿತ್ರಮಂದಿಯದ ಮುಂದೆ ಅಪ್ಪು ನಮನ ಕಾರ್ಯಕ್ರಮ ಮತ್ತು ಹುಟ್ಟುಹಬ್ಬ ಪ್ರಯುಕ್ತ ಕೇಕ್​ ಕತ್ತರಿಸುವ ಮತ್ತು ಸಿಹಿ ವಿತರಿಸುವ ಕಾರ್ಯಕ್ರಮ ನಡೆಯಲಿದೆ. ಬೆಳ್ಳಿ ಪರದೆ ಮುಂಭಾಗದಲ್ಲಿ ಹೂಗಳಿಂದ ಬೃಹತ್​ ಸಂಭ್ರಮಾಚರಣೆ ನಡೆಯಲಿದೆ ಹಾಗೂ ಪ್ರತಿ ಪ್ರದರ್ಶನಕ್ಕೂ ಸಿಡಿಮದ್ದು ಸಿಡಿಸಲಾಗುವುದು. ಮಧ್ಯಾಹ್ನ ಅಭಿಮಾನಿಗಳಿಗೆ ಮತ್ತು ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಗಿಡಗಳನ್ನು ವಿತರಿಸುವ ಸಮಾಜಮುಖಿ ಕೆಲಸವೂ ನಡೆಯಲಿದೆ. ವಿಶೇಷವಾಗಿ ಮಾರ್ಚ್​ 17ರಂದೇ ಸಂಜೆ 6 ಗಂಟೆಗೆ ಮಾಗಡಿ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಕರ್ನಾಟಕರತ್ನ ಅಪ್ಪು ರಾಜರ ಮೆರವಣಿಗೆ ಹಂಸ ರಥದಲ್ಲಿ ಅವರ ಅಭಿನಯದ ಎಲ್ಲ ಚಿತ್ರದ ಗೀತೆಗಳ ಜತೆ ಮಾಡಲಾಗುವುದು ಮತ್ತು ಸಂಜೆ 7ಕ್ಕೆ ನಿರ್ಮಲ ಚಿತ್ರಮಂದಿರದಲ್ಲಿ ಅಪ್ಪು ನಮನ ಕಾರ್ಯಕ್ರಮ ನಡೆಯಲಿದೆ.

    ಜೇಮ್ಸ್ ಚಿತ್ರ​ ಅಪ್ಪು ಅಭಿನಯದ ಕೊನೆಯ ಚಿತ್ರವಾದ್ದರಿಂದ, ಇಡೀ ರಾಜ್ಯಾದ್ಯಂತ ಇಂದು ಒಂದೇ ಚಿತ್ರ ಬಿಡುಗಡೆಯಾಗಿದೆ. ಈ ವಾರ ಬೇರೆ ಯಾವ ಚಿತ್ರಗಳು ಕೂಡ ಬಿಡುಗಡೆ ಆಗುವುದಿಲ್ಲ. ಅಪ್ಪುಗೆ ಗೌರವ ಸೂಚಕವಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ವಿತರಕರು ಈ ನಿರ್ಧಾರ ಮಾಡಿದ್ದಾರೆ. ಜೇಮ್ಸ್​ ಜಾತ್ರೆ ಹಿನ್ನೆಲೆಯಲ್ಲಿ ಊರುರುಗಳಲ್ಲಿ ಪುನೀತ್​ ಭಾವಚಿತ್ರ ರಾರಾಜಿಸುತ್ತಿದೆ. ಚಿತ್ರಮಂದಿರಗಳಲ್ಲಿ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಸಹ ಮಾಡಲಾಗುತ್ತಿದೆ. ಒಟ್ಟಾರೆ ಮಾರ್ಚ್​ 17ಅನ್ನು ಸ್ಮರಣೀಯವಾಗಿಸಲು ಅಭಿಮಾನಿಗಳು ಸಾಕಷ್ಟು ವಿಭಿನ್ನ ಕಾರ್ಯಕ್ರಮಗಳನ್ನು ಅಪ್ಪು ನೆನಪಲ್ಲಿ ಹಮ್ಮಿಕೊಂಡಿದ್ದಾರೆ.

    ಮಾರ್ಚ್​ 17ರಂದು ಡಾ. ರಾಜ್​ಕುಮಾರ್​ ಅಕಾಡೆಮಿ ವತಿಯಿಂದ ಚಂದ್ರಾ ಲೇಔಟ್​ನಲ್ಲಿರುವ ರಾಜ್​ಕುಮಾರ್​ ಅಕಾಡೆಮಿ ಕಚೇರಿಯಲ್ಲಿ ಸಂಜೆ 4 ಗಂಟೆಯಿಂದ 5 ಗಂಟೆಯವರೆಗೆ ನೇತ್ರದಾನ ಶಿಬಿರವು ನಡೆಯಲಿದೆ. ಫೋನ್ ನಂಬರ್​ 8884018800 ಗೆ ಮಿಸ್​ ಕಾಲ್​ ನೀಡಿ ನೇತ್ರದಾನ ಮಾಡುವ ಪ್ರತಿಜ್ಞೆ ಮಾಡಲು ಕರೆ ನೀಡಲಾಗಿದೆ. ನಟ ಪುನೀತ್​ ಅವರ ತಮ್ಮ ನೇತ್ರದಾನದ ಮೂಲಕ 8 ಮಂದಿಗೆ ಬೆಳಕಾದರು.

    ಕನ್ನಡದ ನಂ. 1 ಪತ್ರಿಕೆ ವಿಜಯವಾಣಿ, ದಿಗ್ವಿಜಯ ಸುದ್ದಿವಾಹಿನಿ, ಹುಬ್ಬಳ್ಳಿಯ ಮೂರುಸಾವಿರ ಮಠಗಳ ಸಹಯೋಗ ಮತ್ತು ರಜತ ಉಳ್ಳಾಗಡ್ಡಿಮಠ ಅವರ ನೇತೃತ್ವದಲ್ಲಿ ಅಪ್ಪು ನೆನಪಲ್ಲಿ ‘ಅಪ್ಪು ಬೆಳಕು’ ಎಂಬ ಬೃಹತ್​ ನೇತ್ರದಾನ ವಾಗ್ದಾನ ಶಿಬಿರ ನಡೆಯಲಿದೆ. ಪುನೀತ್​ ರಾಜಕುಮಾರ ಅವರ 47ನೇ ಹುಟ್ಟುಹಬ್ಬದ ಪ್ರಯುಕ್ತ ಹುಬ್ಬಳ್ಳಿಯ ಮೂರುಸಾವಿರ ಮಠದ ಆವರಣದಲ್ಲಿ ಮಾ.17ರಂದು ಬೆಳಗ್ಗೆ 10 ಗಂಟೆಯಿಂದ ‘ಅಪ್ಪು ಬೆಳಕು’ ನೇತ್ರದಾನ ಶಿಬಿರ ಆಯೋಜಿಸಲಾಗಿದೆ. ರಾಜ್ಯದಲ್ಲಿ 30 ಲಕ್ಷಕ್ಕೂ ಅಧಿಕ ಮಂದಿ ದೃಷ್ಟಿಹೀನರಿದ್ದು, ಅಂಥವರ ಬಾಳಲ್ಲಿ ಬೆಳಕು ಮೂಡಿಸಲು ಅಪ್ಪು ಬೆಳಕು ನೇತ್ರದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಮೂರುಸಾವಿರ ಮಠದ ಶ್ರೀಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

    ಹುಬ್ಬಳ್ಳಿಯಲ್ಲಿ ಅಪ್ಪು ಬೆಳಕು; ಪುನೀತ್ ಜನ್ಮದಿನಂದು ಬೃಹತ್ ನೇತ್ರದಾನ ವಾಗ್ದಾನ ಶಿಬಿರ

    ಶಿವಣ್ಣ ಕಣ್ಣಲ್ಲಿ ಅಪ್ಪು; ಅವನಿಲ್ಲ ಎಂದು ನಾನೇಕೆ ಅಂದುಕೊಳ್ಳಲಿ?

    ಜಗದಂಬೆ ಶ್ರೀ ಮಾರಿಕಾಂಬೆ; ಮಾ. 17ರಿಂದ 23ರ ಬೆಳಗಿನವರೆಗೆ ದರ್ಶನಕ್ಕೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts