More

    ದಸರಾ ಉದ್ಘಾಟನೆ ಅವಕಾಶ ಸಿಕ್ಕಿದ್ದು ಪುಣ್ಯ: ಬಾಲ್ಯದ ದಿನಗಳನ್ನು ಮೆಲಕು ಹಾಕಿದ ಮಾಜಿ ಸಿಎಂ ಎಸ್​ಎಂಕೆ

    ಮೈಸೂರು: ವಿಶ್ವವಿಖ್ಯಾತ ದಸರಾಕ್ಕೆ 800 ವರ್ಷಗಳ ಇತಿಹಾಸವಿದ್ದು, ದಸರಾ ಉದ್ಘಾಟನೆ ಅವಕಾಶ ಸಿಕ್ಕಿದ್ದು ಅನಿರೀಕ್ಷಿತ ಮತ್ತು ಪುಣ್ಯ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಎಸ್​.ಎಂ. ಕೃಷ್ಣ ಅವರು ನಾನು ರಾಮಕೃಷ್ಣ ಆಶ್ರಮದಿಂದ ಪ್ರತಿ ತಿಂಗಳು ಚಾಮುಂಡಿ ಬೆಟ್ಟಕ್ಕೆ ನಡೆದುಕೊಂಡು ಹೋಗುತ್ತಿದ್ದೆ ಎಂದು ಬಾಲ್ಯದ ದಿನಗಳನ್ನು ಮೆಲಕು ಹಾಕಿದರು.

    ಇಂದು (ಅ.7) ಬೆಳಿಗ್ಗೆ 8.15 ರಿಂದ 8.45ರ ಶುಭ ಮುಹೂರ್ತದಲ್ಲಿ ನಾಡದೇವಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಎಸ್​.ಎಂ. ಕೃಷ್ಣ ಅವರು 411ನೇ ವಿಶ್ವ ವಿಖ್ಯಾತ ಮೈಸೂರು ದಸರಾಗೆ ವಿಧ್ಯುಕ್ತ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪತ್ನಿ ಚೆನ್ನಮ್ಮ , ಸಚಿವರಾದ ಆರ್ ಅಶೋಕ್, ಬೈರತಿ ಬಸವರಾಜ್, ಎಸ್ ಟಿ ಸೋಮಶೇಖರ್, ಬಿಸಿ ಪಾಟೀಲ್, ಸುನಿಲ್ ಕುಮಾರ್, ಶಶಿಕಲಾ ಜೊಲ್ಲೆ, ಸಂಸದ ಪ್ರತಾಪ್ ಸಿಂಹ, ಶಾಸಕ ರಾಮದಾಸ್, ಜಿಟಿ ದೇವೇಗೌಡ , ತನ್ವೀರ್ ಸೇಠ್ ಮತ್ತು ಇತರರು ಉಪಸ್ಥಿತರಿದ್ದರು.

    ದಸರಾ ಉದ್ಘಾಟನಾ ಬಳಿಕ ಎಸ್​.ಎಂ. ಕೃಷ್ಣ ಅವರು ಮಾಡಿದ ಭಾಷಣದ ಮುಖ್ಯಾಂಶಗಳು ಈ ಕೆಳಕಂಡಂತಿದೆ.

    ಸಕಲ ಭೂತಗಳಲ್ಲೂ ಯಾವ ದೇವಿಯೂ ತಾಯಿ ರೂಪದಿಂದ ನೆಲೆಸಿದ್ದಾಳೋ (ಅಂತಹ ತಾಯಿಗೆ) ನಮಸ್ಕಾರವಿರಲಿ. ನಮಸ್ಕಾರವಿರಲಿ ನಮಸ್ಕಾರವಿರಲಿ. ನಮೋ ನಮಃ’’

    ಕರ್ನಾಟಕ ರಾಜ್ಯದ ಮಹಾದೇವಿಯಾದ ಶ್ರೀಚಾಮುಂಡೇಶ್ವರಿಯ ಕೃಪೆಯಿಂದ ಈ ವರ್ಷದ ದಸರಾ ಸಮಾರಂಭವನ್ನು ತಾಯಿಗೆ ಪೂಜೆ ಸಲ್ಲಿಸಿ ಉದ್ಘಾಟನೆ ಮಾಡಿದ್ದೇನೆ. ಈ ಸಮಾರಂಭದಲ್ಲಿ ಪಾಲ್ಗೊಂಡಿರುವ ಎಲ್ಲರ ಹೃದಯಗಳಲ್ಲೂ ತಾಯಿಯ ಹಾಗೆ ನೆಲೆಗೊಂಡಿರುವ ಆ ಜಗನ್ಮಾತೆ ಶ್ರೀಚಾಮುಂಡೇಶ್ವರಿ ದೇವಿಗೆ ನಾನು ಮತ್ತೇ ಮತ್ತೇ ನಮಸ್ಕರಿಸುತ್ತೇನೆ

    ಇಂದು ದೇಶ ಕೋವಿಡ್‍ನಂತಹ ಭೀಕರ ಕಾಯಿಲೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ನರಳಿ ಬಳಲುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮನ್ನು ಕಾಪಾಡುವ ಏಕೈಕ ಆಸರೆ ತಾಯಿ ಶ್ರೀಚಾಮುಂಡೇಶ್ವರಿ ದೇವಿಯೇ ಆಗಿದ್ದಾಳೆ. ಆಕೆ ಕನ್ನಡನಾಡನ್ನ ನಿರಂತರವಾಗಿ ರಕ್ಷಿಸುತ್ತಾ ಬಂದಿದ್ದಾಳೆ. ಮೈಸೂರು ಅರಸರ ಮನೆ ದೇವತೆಯಾಗಿರುವ ಶ್ರೀಚಾಮುಂಡೇಶ್ವರಿ ದೇವಿ ಎಲ್ಲರ ಮೇಲೂ ತನ್ನ ಕೃಪಾಶೀರ್ವಾದವನ್ನು ನೀಡಿ ಹರಸಲಿ ಎಂದು ಬೇಡುತ್ತೇನೆ.

    ದಸರಾ ಮತ್ತು ಮೈಸೂರು ಎರಡು ಒಟ್ಟೊಟ್ಟಿಗೆ ಬರುವ ಶಬ್ದ. ದಸರಾವನ್ನು ಮೈಸೂರು ಅರಸರು ಸಂಸ್ಥಾನದ ಪ್ರಗತಿಯನ್ನು ದೇಶಕ್ಕೆ ತೋರಿಸಲು ಹಾಗೂ ಜನರಲ್ಲಿ ಧಾರ್ಮಿಕ ಮತ್ತು ನೈತಿಕ ಪ್ರಜ್ಜೆ ಮೂಡಿಸಲು ಬಳಸಿಕೊಂಡಿದ್ದರು. ಅದೇ ಪರಂಪರೆಯನ್ನ ಈಗಲೂ ನಾವು ಮುಂದುವರಿಸಬೇಕಾಗಿದೆ. ಅನೇಕ ಸಂಕಷ್ಟಗಳ ನಡುವೆ ದಸರಾವನ್ನು ಸರಳವಾಗಿ ಆಚರಿಸಲು ಸಂಕಲ್ಪ ಮಾಡಿರುವ ಎಲ್ಲರನ್ನು ಅಭಿನಂದಿಸುತ್ತೇನೆ. ಶ್ರೀ ಚಾಮುಂಡೇಶ್ವರಿದೇವಿ ಸೃಷ್ಟಿ, ಸ್ಥಿತಿ ಹಾಗೂ ಲಯಕಾರಕಳಾಗಿ ನಮಗೆ ಗೋಚರಿಸುತ್ತಿದ್ದಾಳೆ. ಆಕೆ ಆಶೀರ್ವಾದ ರಾಜ್ಯದ ಜನತೆಯ ಮೇಲಿದ್ದು ಅವರ ಬದುಕು ಸುಖವಾಗಿರಲೆಂದು ಹಾರೈಸುತ್ತೇನೆ. ತಾಯಿ ಶ್ರೀಚಾಮುಂಡೇಶ್ವರಿ ದೇವಿಯ ಕೃಪೆಯಿಂದ ಈ ಸಾಲಿನ ದಸರಾ ಉತ್ಸವವನ್ನು ಉದ್ಘಾಟಿಸಲು ನನಗೆ ಅವಕಾಶ ದೊರಕಿದೆ. ಅದಕ್ಕಾಗಿ ತಾಯಿ ಶ್ರೀಚಾಮುಂಡೇಶ್ವರಿ ತಾಯಿಗೆ ಭಕ್ತಿ ನಮಸ್ಕಾರಗಳನ್ನು ಅರ್ಪಿಸುತ್ತೇನೆ.

    ನಾನು ಮೈಸೂರಿಗೆ ಬಂದು ಈ ಉತ್ಸವವನ್ನು ಉದ್ಘಾಟಿಸಲು ಕಾರಣರಾದ ಎಲ್ಲರಿಗೂ ಧನ್ಯವಾದಗಳು. ನಾನು ವಿದ್ಯಾರ್ಥಿ ದೆಸೆಯಿಂದಲೂ ಮೈಸೂರಿನ ದಸರಾ ಉತ್ಸವನ್ನು ನೋಡುತ್ತಾ ಬೆಳೆದಿದ್ದೇನೆ. ಸ್ವಾತಂತ್ರ್ಯ ಪೂರ್ವದಲ್ಲಿ ದಿವಾನ್. ಸರ್ ಎಂ ವಿಶ್ವೇಶ್ವರಯ್ಯ, ಹಾಗೂ ಸರ್ ಮಿರ್ಜಾ ಇಸ್ಮಾಯಿಲ್ ಕಾಲದಿಂದಲೂ ಈ ದಸರಾದ ವೈಭವವನ್ನು ನೋಡಿದ್ದೇನೆ. ನಮ್ಮ ಹಿರಿಯರಿಂದ ಅನೇಕ ಸಂಗತಿಗಳನ್ನು ಕೇಳಿದ್ದೇನೆ. ಮೈಸೂರು, ಮಂಡ್ಯ, ಚಾಮರಾಜನಗರ ಮೊದಲಾದ ಕಡೆ ದಸರಾ ಹಬ್ಬ ಎಂದರೆ ತಮ್ಮ ಮನೆಯಲ್ಲಿ ನಡೆಯುವ ಹಬ್ಬ ಎನ್ನುವ ಸಂಭ್ರಮವಿರುತ್ತಿತ್ತು. ನವರಾತ್ರಿ ಆ ಹತ್ತು ದಿನಗಳಲ್ಲೂ `ಬೊಂಬೆ ಪ್ರದರ್ಶನ’ ಪ್ರತಿ ಮನೆಯಲ್ಲೂ ನಡೆಯುತ್ತಿತ್ತು.

    ಇನ್ನು ದೇಶದ ಪ್ರಖ್ಯಾತ ಸಂಗೀತಗಾರರನ್ನ ನೋಡಲು ದಸರಾ ತನಕ ಕಾಯುವ ಶೋತೃಗಳಿಗೆ ಕಡಿಮೆಯಿರಲಿಲ್ಲ. ಸಂಗೀತ ಕಲಾವಿದರಿಗೂ ಮೈಸೂರಿನ ದಸರಾ ಸಂದರ್ಭದಲ್ಲಿ ಹಾಗೂ ಬೆಂಗಳೂರಿನ ಶ್ರೀರಾಮಸೇವಾ ಮಂಡಲಿಯಲ್ಲಿ ಹಾಡುವುದು ಪ್ರತಿಷ್ಠೆಯ ವಿಚಾರವಾಗಿತ್ತು. ಅವರುಗಳು `ಇವು ತಮ್ಮ ಬದುಕಿನ ಸುಸಂದರ್ಭ’ ಎಂದು ಕಲಾವಿದರು ಭಾವಿಸುತ್ತಿದ್ದರು. ಅದಕ್ಕೆ ಮುಖ್ಯ ಕಾರಣ ಕಾಲದ ಜನರ ಅಭಿರುಚಿ. ಕಲಾವಿದರನ್ನು ಅವರ ಪ್ರತಿಭೆಯ ಮೇಲೆ ಗೌರವಿಸುತ್ತಿದ್ದರು. ಈ ಪರಂಪರೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಶ್ರೀ ಜಯ ಚಾಮರಾಜೇಂದ್ರ ಒಡೆಯರ್ ಅವರು ಪ್ರಾರಂಭಿಸಿ ಯಶÀಸ್ವಿಯಾಗಿ ಅದನ್ನು ಮುಂದುವರಿಸಿಕೊಂಡು ಬಂದಿದ್ದರು. ಅದನ್ನ ಇಂದು ನಾವು ಮುಂದುವರಿಸುವ ಅಗತ್ಯವಿದೆ.

    ಮೈಸೂರಿನ ದಸರಾ ಉತ್ಸವಕ್ಕೆ 800 ವರ್ಷಗಳ ಇತಿಹಾಸವಿದೆ. ವಿಜಯನಗರದ ಅರಸರು ಈ ದಸರಾವನ್ನ ತಮ್ಮ ಶಕ್ತಿ ಪ್ರದರ್ಶನ, ವಿದೇಶಿಯರ ಭೇಟಿ ಮಾಡುವುದು ಮತ್ತು ಹೊಸ ದಿಗ್ವಿಜಯಕ್ಕೆ ಹೋಗಲು ಈ ಮೂಹೂರ್ತವನ್ನು ನಿಗದಿ ಮಾಡುವುದಕ್ಕೆ ಉಪಯೋಗಿಸಿ ಕೊಳ್ಳುತ್ತಿದ್ದರು. ವಿಜಯನಗರದ ಶ್ರೀ ಕೃಷ್ಣದೇವರಾಯನ ಕಾಲದಲ್ಲಿ ಹಂಪಿಯಲ್ಲಿ ದಸರಾ ಆಚರಣೆಗಾಗಿ `ಮಹಾನವಮಿ ದಿಬ್ಬ’ವನ್ನು ನಿರ್ಮಿಸಲಾಗಿತ್ತು. ಅಲ್ಲಿ ನವರಾತ್ರಿ ಹತ್ತು ದಿನಗಳ ಕಾಲವು ಕ್ರೀಡೆ, ಸಾಹಸ ಪ್ರದರ್ಶನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗುತ್ತಿದ್ದವು.

    ವಿಜಯನಗರ ಸಾಮ್ರಾಜ್ಯದ ದಸರಾ ಪರಂಪರೆಯನ್ನು ಮುಂದುವರಿಸಿಕೊಂಡು ಬಂದವರು ಅವರ ಉತ್ತರಾಧಿಕಾರಿಗಳಾಗಿದ್ದ ಮೈಸೂರು ಒಡೆಯರ ಸಂತತಿಯವರು ಎಂದರೆ ತಪ್ಪಿಲ್ಲ. ಕ್ರಿ,ಶ. 1610ರಲ್ಲಿ ರಾಜ ಒಡೆಯರ ಅವರು ಶ್ರೀರಂಗಪಟ್ಟಣದಲ್ಲಿ ಈ ದಸರಾವನ್ನು ಪ್ರಾರಂಭ ಮಾಡಿದರು. ಈ ಅಂಬಾರಿಯನ್ನು ಸಹ ವಿಜಯನಗರದವರಿಂದಲೇ ಪಡೆದಿದ್ದರು. ಈ ಅಂಬಾರಿ ಮಹಾರಾಷ್ಟ್ರದ ದೇವಗಿರಿಯಿಂದ ವಿಜಯನಗರದವರಿಗೆ ಬಂದಿತ್ತು. ಈ ಅಂಬಾರಿಗೆ 8 ಶತಮಾನಗಳ ಇತಿಹಾಸವಿದೆ. 750 ಕೆ. ಜಿ.ಯ ಸ್ವರ್ಣ ಅಂಬಾರಿಯಲ್ಲೇ ವಿಜಯ ದಶಮಿಯೆಂದು ದೇವಿ ಚಾಮುಂಡೇಶ್ವರಿಯ ಮೆರವಣಿಗೆ ಹೋಗುವುದು.

    ದಸರಾಕ್ಕೆ ಹೊಸ ಸ್ವರೂಪ ಕೊಟ್ಟ ಕೀರ್ತಿ ಮೈಸೂರಿನ ದಿವಾನರಿಗೆ ಸೇರುತ್ತದೆ. ದಿವಾನ್ ರಂಗಾಚಾರ್ಯಲು ಅವರಿಂದ ಹಿಡಿದು ಸರ್. ಪುಟ್ಟಣ ಚೆಟ್ಟಿಯಾರ್ ತನಕ ಎಲ್ಲಾ ದಿವಾನರಿಗೆ ಮೈಸೂರು ಸಂಸ್ಥಾನದ ಪ್ರಗತಿಯನ್ನು ರಾಜ್ಯದ ಜನತೆಯ ಗಮನಕ್ಕೆ ತರಬೇಕೆಂಬ ಹಿರಿದಾಸೆಯಿತ್ತು. ದಸರಾ ಸಂದರ್ಭದಲ್ಲಿ ಪ್ರಜಾ ಪ್ರತಿನಿಧಿ ಸಭೆಯ ಅಧಿವೇಶನ ಮೈಸೂರಿನಲ್ಲಿ ನಡೆಯುತ್ತಿತ್ತು. ದಿವಾನ್‍ರು ಸದಸ್ಯರ ಸಣ್ಣ ಸಮಸ್ಯೆಗಳಿಗೂ ಸ್ಪಂದಿಸುತ್ತಿದ್ದರು. ಮೈಸೂರು ಸಂಸ್ಥಾನದ ಯಾವುದೇ ಜಿಲ್ಲಾ ಕೇಂದ್ರವನ್ನು ತೆಗೆದುಕೊಳ್ಳಿ ಆ ಕಾಲದಲ್ಲೇ ಶಾಲೆ, ಕಾಲೇಜು ಹಾಗೂ ಆಸ್ಪತ್ರೆಗಳಿದ್ದನ್ನು ನೋಡಬಹುದು. ದಿವಾನ್‍ರ ಜೊತೆ ಮಹಾರಾಣಿ ಸನ್ನಿಧಾನಕ್ಕೂ ಸಹ ಅವರು ಸಂಸ್ಥಾನದ ಪ್ರಜೆಗಳ ವಿಚಾರದಲ್ಲಿ ತುಂಬಾ ಪ್ರೀತಿಯಿತ್ತು. ಚೆಲುವಾಂಬ ಆಸ್ಪತ್ರೆಯ ನಿರ್ಮಾಣವನ್ನು ಜ್ಞಾಪಿಸಿಕೊಳ್ಳಿ.

    ಮಹಾತ್ಮ ಗಾಂಧೀಜಿ ಅವರೇ ಈ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಮೈಸೂರಿನ ರಾಜರು ಹಾಗೂ ಆ ಕಾಲದ ಗಣ್ಯರು ಮಾಡಿದ ಸೇವೆಯನ್ನ ಮೆಚ್ಚಿಕೊಂಡಿದ್ದರು. ನಮ್ಮ ತಂದೆ ಎಸ್. ಸಿ. ಮಲ್ಲಯ್ಯ ಅವರು ನಮ್ಮೂರಿನಲ್ಲಿ ಪರಿಶಿಷ್ಟ ಜಾತಿಗೆ ನಿರ್ಮಿಸಿದ್ದ ವಸತಿನಿಲಯಕ್ಕೆ ಮಹಾತ್ಮ ಗಾಂಧೀಜಿ ಭೇಟಿ ಕೊಟ್ಟಿದ್ದರು. ಅವರು `ನ್ಯಾಯ ವಿಧೇಯಕ ಸಭೆಯ’ ಸದಸ್ಯರಾಗಿದ್ದರು. ಕೃಷ್ಣರಾಜ ಸಾಗರದ ನಿರ್ಮಾಣದ ಸಂದರ್ಭದಲ್ಲಿ ಒಡೆಯರ್ ಮನೆತನದವರು ನಡೆದು ಕೊಂಡ ಉದಾರತೆಯನ್ನ ನಮ್ಮ ತಂದೆ ಅನೇಕ ಸಲ ಹೇಳಿದ್ದಾರೆ. ಹಿರಿಯ ಗಾಂಧಿವಾದಿ ತಗಡೂರು ರಾಮಚಂದ್ರರಾಯರು ಮಾಡಿದ ಕೆಲಸಕ್ಕೂ ಮನ್ನಣೆ ದೊರಕಿತ್ತು.

    ನೀರಾವರಿ, ವಿದ್ಯುತ್, ಕೈಗಾರಿಕೆ, ಶಿಕ್ಷಣ ಹಾಗೂ ದುರ್ಬಲವರ್ಗದವರಿಗೆ ಅನುಕೂಲ ( ಮಿಲ್ಲರ್ ಹಿಂದುಳಿದವರ್ಗ ಮೊದಲ ಆಯೋಗ) ಮಾಡಿ ಕೊಟ್ಟ ಕೀರ್ತಿ ನಮ್ಮನ್ನಾಳಿದ ದೊರೆಗಳಿಗೆ ದೊರೆಯುತ್ತದೆ. ಸ್ವಾತಂತ್ರ್ಯದ ನಂತರ ದೇಶದಲ್ಲಿ ಬಹಳ ಪ್ರಗತಿಯಾಗಿರುವುದರಲ್ಲಿ ಎರಡು ಮಾತಿಲ್ಲ. ಭೌತಿಕ ಪ್ರಗತಿಯ ಜೊತೆ ಮನುಷ್ಯನ ಅಂತರಂಗದಲ್ಲೂ ಪ್ರಗತಿಯಾಗಬೇಕು. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಸಂವಾದ ಹಾಗೂ ಚರ್ಚೆಗೆ ಸಾಕಷ್ಟು ಅವಕಾಶವಿರುತ್ತದೆ. ಅದನ್ನು ಬಳಸಿಕೊಂಡು ಜನರು ಮತ್ತು ನಾಯಕರು ತಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಬಹುದು ಎಂದು ನಾನು ಭಾವಿಸುತ್ತೇನೆ.

    ಇಂದು ವಿಶ್ವ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಕೋವಿಡ್‍ನ ಆಘಾತ ಯಾವುದೇ ದೇಶಕ್ಕೆ ಸೀಮಿತವಾಗಿಲ್ಲ. ವಿಶ್ವದ ಆರ್ಥಿಕ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಆದರೆ ಭಾರತ ತನ್ನ ಪ್ರಗತಿಯ ಗತಿಯನ್ನು ಉಳಿಸಿಕೊಂಡು ಬರುತ್ತಿದೆ. ಇದು ಕಡಿಮೆ ಸಾಧನೆಯಲ್ಲ. ದೇಶ ಮತ್ತಷ್ಟು ಪ್ರಗತಿ ಸಾಧಿಸಲು ಪ್ರತಿಯೊಬ್ಬ ನಾಗರಿಕನೂ ಜವಾಬ್ದಾರಿಯಿಂದ ವರ್ತಿಸಿ ಈ ಬಿಕ್ಕಟಿನಿಂದ ಹೊರಬರಲು ಸಹಾಯ ಮಾಡಬೇಕಾಗಿದೆ.

    ನಮ್ಮಲ್ಲಿ ಅಕ್ಷರತೆಯ ಪ್ರಮಾಣ ಹೆಚ್ಚಾಗಿದೆ. ಅಭಿವೃದ್ಧಿಶೀಲ ದೇಶಕ್ಕೆ ಇದೊಂದು ವರದಾನವೂ ಹೌದು. ಇದರಿಂದ ಮಾನವ ಸಂಪನ್ಮೂಲಕ್ಕೆ ಹೆಚ್ಚಿನ ಮಹತ್ವ ದೊರೆಯುತ್ತದೆ. ಇಂತಹ ಯುವಜನಾಂಗ ದೇಶದ ಅಮೂಲ್ಯ ಸಂಪತ್ತು. ಅವರ ಕ್ರಿಯಾಶೀಲತೆಯನ್ನ ಆಡಳಿತವರ್ಗ ಸದುಪಯೋಗಪಡಿಸಿಕೊಳ್ಳಬೇಕು. ಜೊತೆ ಈ ಮಾನವ ಸಂಪತ್ತು ಅಂದರೆ ಯುವ ಜನಾಂಗ ನಮ್ಮ ಭಾರತೀಯ ಸಂಸ್ಕøತಿಯಿಂದ ದೂರ ಹೋಗುವಂತೆ ಮಾಡಬಾರದು. ದೇಶಾಭಿಮಾನ ಬೆಳಸಲು ಸಂಸ್ಕøತಿ ಭದ್ರವಾದ ತಳಪಾಯವನ್ನ ಹಾಕುತ್ತದೆ.

    ಪ್ರತಿಯೊಂದು ಧಾರ್ಮಿಕ ಆಚರಣೆಯ ಹಿಂದೆ ಮಹತ್ವದ ಸಂದೇಶವಿರುತ್ತದೆ. ಉದಾಹರಣೆಗೆ ಹೇಳುವುದಾದರೆ ಇಂದಿನ ದಸರಾ ಉತ್ಸವ ಕೇವಲ ಧಾರ್ಮಿಕ ಆಚರಣೆ ಎನ್ನುವಂತಿಲ್ಲ. ಇದಕ್ಕೊಂದು ಸಾಂಸ್ಕøತಿಕ ಮಹತ್ವವಿದೆ. ದಸರಾವನ್ನು ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳುವ ಅವಕಾಶ ಯಥೇಚ್ಛವಾಗಿದೆ. ಈಗ ಕೋವಿಡ್‍ನಿಂದಾಗಿ ಪ್ರವಾಸೋದ್ಯಮ ಕಳೆಗುಂದಿದ್ದರೂ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ.

    ದಸರಾ ಉತ್ಸವ ನೆಪ ಮಾಡಿಕೊಂಡು ನಮ್ಮ ಉತ್ಪನ್ನಗಳಿಗೆ ಒಳ್ಳೆಯ ಮಾರುಕಟ್ಟೆಯನ್ನ ರೂಪಿಸಬಹುದು. ಅದರಲ್ಲೂ ಕುಶಲ ಕರ್ಮಿಗಳಿಗೆ ಇದೊಂದು ಸದಾವಕಾಶವಾಗುವುದರಲ್ಲಿ ಸಂಶಯವಿಲ್ಲ. ಇಡೀ ಕರ್ನಾಟಕ ಕುಶಲಕರ್ಮಿಗಳನ್ನು ದೃಷ್ಟಿಯಲ್ಲಿಟ್ಟು ಯೋಜನೆ ರೂಪಿಸಬಹುದಾಗಿದೆ.

    ಒಮ್ಮೆ ಪ್ರವಾಸಿಗರು ದಸರಾ ನೋಡಲು ಕರ್ನಾಟಕರಾಜ್ಯಕ್ಕೆ ಬಂದರೆ, ಅವರು ಬೇಲೂರು, ಹಳೇಬೀಡು, ಬಾದಾವಿ. ಐಹೊಳೆ, ಪಟ್ಟದಕಲ್ಲು, ಹಂಪಿ ಹಾಗೂ ಬಿಜಾಪುರವನ್ನ ನೋಡಿ ಹೋಗುವಂತೆ ಯೋಜನೆ ರೂಪಿಸಬೇಕು. ಅನೇಕ ರಾಷ್ಟ್ರಗಳು ತಮ್ಮ ಆರ್ಥಿಕ ಕ್ಷೇತ್ರದಲ್ಲಿ ಸಂಪನ್ಮೂಲ ಸಂಗ್ರಹಕ್ಕೆ ಪ್ರವಾಸೋದ್ಯಮವನ್ನು ಪ್ರಮುಖ ಕ್ಷೇತ್ರವಾಗಿಟ್ಟು ಕೊಂಡಿವೆ. ದಸರಾ ಹಬ್ಬವನ್ನು ಜನರು ಮೊದಲಿನಿಂದಲೂ ಸಡಗರದಿಂದಲೇ ಆಚರಿಸುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ಈಗ ಅವರಿಗೆ ಸ್ವಲ್ಪ ಬಿಡುವು ದೊರಕಿರುತ್ತದೆ. ಅದನ್ನು ಹಬ್ಬದ ಆಚರಣೆಯ ದೃಷ್ಟಿಯಿಂದ ಸದುಪಯೋಗ ಮಾಡಿ ಕೊಳ್ಳುತ್ತಿದ್ದರು.

    ಮೈಸೂರು ದಸರಾದಲ್ಲಿ ಕುಸ್ತಿಗೆ ಈಗಲೂ ಪ್ರಾಮುಖ್ಯತೆ ಇದೆ ಎಂದು ಭಾವಿಸಿದ್ದೇನೆ. ಮೈಸೂರಿನಲ್ಲಿ ಕುಸ್ತಿ ಕ್ರೀಡೆ ಬೆಳೆಯಲು ಸಾಹುಕಾರ್ ಚನ್ನಯ್ಯ ಅವರ ಪಾತ್ರ ಹಿರಿದಾಗಿತ್ತು. ವ್ಯಕ್ತಿಗಳು ಮನಸ್ಸು ಮಾಡಿದರೆ ಕ್ರೀಡೆ ಮತ್ತು ಸಾಂಸ್ಕೃತಿಕ ವಿಚಾರಗಳಿಗೆ ಎಷ್ಟೊಂದು ಆದ್ಯತೆ ಕೊಡಬಹುದೆಂಬುದಕ್ಕೆ ಉದಾಹರಣೆಯಾಗಿ ಕುಸ್ತಿ ವಿಚಾರ ಹೇಳಿದ್ದೇನೆ.

    ಬಂಧುಗಳೇ ದಸರಾ ಹಬ್ಬದ ಈ ಶುಭ ಸಂದರ್ಭದಲ್ಲಿ ತಾಯಿ ಚಾಮುಂಡೇಶ್ವರಿ ತಮಗೆಲ್ಲಾ ಒಳಿತು ಮಾಡಲೆಂದು ಪ್ರಾರ್ಥಿಸಿ ನನ್ನ ಮಾತು ಮುಗಿಸುತ್ತೇನೆ.

    ಶುರುವಾಯ್ತು ನಾಡಹಬ್ಬ ಸಂಭ್ರಮ: ದಸರಾ ಉದ್ಘಾಟಿಸಿದ ಮಾಜಿ ಸಿಎಂ ಎಸ್​.ಎಂ. ಕೃಷ್ಣ

    ದಸರಾ ಸಂಭ್ರಮ: ಜಿಲ್ಲಾಡಳಿತದಿಂದಲೇ ಫೇಸ್​ಬುಕ್​, ಯೂಟ್ಯೂಬ್​, ವೆಬ್​ಸೈಟ್​ ಮೂಲಕ ನೇರಪ್ರಸಾರ

    ನವರಾತ್ರಿ ವೈಭವ ಆರಂಭ: ಇಂದು ಮೈಸೂರು ಅರಮನೆಯಲ್ಲಿ ನಡೆಯುವ ಕಾರ್ಯಕ್ರಮಗಳು ಪಟ್ಟಿ ಹೀಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts