More

    ಮೋದಿಜೀ ನೀವು ಲಾಖಿಂಪುರ್​ ಖೇರಿಗೆ ಹೋಗುವಿರಾ? ಪ್ರಧಾನಿಗೆ ಪ್ರಿಯಾಂಕಾ ಗಾಂಧಿ ಸವಾಲು

    ಲಖನೌ: ನನ್ನನ್ನು ಸೆರೆಹಿಡಿದಿರುವ ಉತ್ತರ ಪ್ರದೇಶದ ಸರ್ಕಾರ ಸುಮಾರು 24 ಗಂಟೆಗಳಿಂದ ಅಕ್ರಮವಾಗಿ ಬಂಧಿಸಿದೆ ಎಂದು ಇಂದು ಬೆಳಗ್ಗೆ ಗಂಭೀರ ಆರೋಪ ಮಾಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಭಾನುವಾರ ಲಾಖಿಂಪುರ್​ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ಸಚಿವರ ಪುತ್ರ ಕಾರು ಹರಿಸಿರುವ ಆರೋಪದ ಕುರಿತು ಪ್ರಧಾನಿ ಮೋದಿಯನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ.

    ಹೀನ ಕೃತ್ಯ ನಡೆಸಿದ ವ್ಯಕ್ತಿಯನ್ನು ಬಂಧಿಸದೇ ಯಾವುದೇ ಆದೇಶವನ್ನು ನೀಡದೇ ವಿರೋಧ ಪಕ್ಷದವರನ್ನು ಏಕೆ ಬಂಧಿಸಿದ್ದೀರಿ ಎಂದು ಪ್ರಶ್ನಿಸಿರುವ ಪ್ರಿಯಾಂಕಾ, ಪ್ರಧಾನಿ ಮೋದಿಯವರೇ ಅಂತಹ ವ್ಯಕ್ತಿಯನ್ನು ಬಂಧಿಸಿ, ನಮ್ಮಂತಹ ಜನರನ್ನಲ್ಲ ಎಂದು ಮಾಧ್ಯಮವೊಂದು ನಡೆಸಿದ ಸಂದರ್ಶನದಲ್ಲಿ ಸೀತಾಪುರದ ಗೆಸ್ಟ್​ ಹೌಸ್​ನಿಂದಲೇ ಪ್ರಿಯಾಂಕಾ ಮಾತನಾಡಿದ್ದಾರೆ. ಸೋಮವಾರ (ಅ.4) ಮೃತ ರೈತರ ಕುಟುಂಬವನ್ನು ಭೇಟಿ ಮಾಡಲು ಬಂದ ಪ್ರಿಯಾಂಕಾರನ್ನು ಉತ್ತರ ಪ್ರದೇಶ ಸರ್ಕಾರ ಬಂಧಿಸಿ ಸೀತಾಪುರ್​ ಗೆಸ್ಟ್​ನಲ್ಲಿ ಇರಿಸಿದ್ದಾರೆ.

    ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮಕ್ಕಾಗಿ ಪಿಎಂ ಮೋದಿಯವರು ಶೀಘ್ರದಲ್ಲೇ ಲಕ್ನೋಗೆ ಭೇಟಿ ನೀಡಲಿದ್ದಾರೆ. ಇದನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ, ನಮಗೆ ಸ್ವಾತಂತ್ರ್ಯ ನೀಡಿದವರು ಯಾರು? ನಮಗೆ ರೈತರು ಸ್ವಾತಂತ್ರ್ಯ ನೀಡಿದರು. ನಿಮ್ಮ ಸರ್ಕಾರದ ಮಂತ್ರಿಯನ್ನು ವಜಾಗೊಳಿಸಲು ಮತ್ತು ಆತನ ಮಗನನ್ನು ಬಂಧಿಸದೇ ಅಮೃತ ಮಹೋತ್ಸವ ಆಚರಿಸಲು ನಿಮಗೆ ಯಾವ ನೈತಿಕ ಅಧಿಕಾರವಿದೆ? ಈ ಮಂತ್ರಿ ಸರ್ಕಾರದಲ್ಲಿ ಮುಂದುವರಿದರೆ ಈ ಸರ್ಕಾರಕ್ಕೆ ಮುಂದುವರಿಯಲು ಯಾವುದೇ ನೈತಿಕ ಅಧಿಕಾರವಿಲ್ಲ ಎಂದು ಪ್ರಿಯಾಂಕಾ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಗೇ ಮೋದಿಜೀ ನೀವು ಲಾಖಿಂಪುರ್​ ಖೇರಿಗೆ ಹೋಗುವಿರಾ? ಎಂದು ಸವಾಲು ಹಾಕಿದ್ದಾರೆ.

    ಘಟನೆ ಹಿನ್ನೆಲೆ ಏನು?
    ಉತ್ತರಪ್ರದೇಶದ ಲಾಖಿಂಪುರ್​ ಖೇಲಿಯಲ್ಲಿ ನಡೆದ ಪ್ರತಿಭಟನಾನಿರತ ರೈತರು ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ಎಂಟು ಜನರು ಸಾವಪ್ಪಿದ್ದಾರೆ. ಈ ಘಟನೆಗೆ ಎರಡೂ ಕಡೆಗಳಿಂದ ಬೇರೆ ಬೇರೆ ಚಿತ್ರಣಗಳನ್ನು ನೀಡಲಾಗುತ್ತಿದ್ದು, ವಾಸ್ತವಿಕವಾಗಿ ಅಲ್ಲಿ ನಡೆದದ್ದೇನು ಎಂಬ ಸತ್ಯಾಂಶ ಇನ್ನೂ ಹೊರಬೀಳಬೇಕಿದೆ. ಹೀಗಿರುವಾಗ, ರೈತರ ಮೇಲೆ ಕಾರನ್ನು ಚಲಾಯಿಸಿದರೆಂದು ಆರೋಪಿಸಲಾಗುತ್ತಿರುವ ಕೇಂದ್ರ ಸಚಿವ ಅಜಯ್​ ಮಿಶ್ರ ಅವರ ಮಗ ಆಶಿಶ್​ ಮಿಶ್ರ, ತಾವು ಘಟನಾ ಸ್ಥಳದಲ್ಲಿ ಇರಲೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇಂಡಿಯ ಟುಡೇಗೆ ನೀಡಿರುವ ಸಂದರ್ಶನದಲ್ಲಿ, ತಾವು ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೆ ಬನ್​ಬೀರ್​ಪುರ ಗ್ರಾಮದಲ್ಲಿ ನಡೆಯುತ್ತಿದ್ದ ಸಮಾರಂಭದಲ್ಲಿದ್ದುದಾಗಿ ಹೇಳಿದ್ದಾರೆ. ಆದಾಗ್ಯೂ ಸಚಿವ ಅಜಯ್​ ಕುಮಾರ್​ ಮಿಶ್ರಾ ಅವರ ಪುತ್ರ ಆಶೀಶ್​ ಮಿಶ್ರಾ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

    ಇನ್ನು ಘಟನೆಗೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋವೊಂದನ್ನು ಕಾಂಗ್ರೆಸ್​ ಪಕ್ಷ ಟ್ವಿಟರ್​​ನಲ್ಲಿ ಶೇರ್​ ಮಾಡಿಕೊಂಡಿದ್ದು, ಮೋದಿ ಸರ್ಕಾರದ ಮೌನವು ಅವರನ್ನು ಪಾಲುದಾರರನ್ನಾಗಿ ಮಾಡುತ್ತದೆ? ಎಂದು ವಿಡಿಯೋ ಕುರಿತು ಬರೆಯಲಾಗಿದೆ.

    ವಿಡಿಯೋದಲ್ಲಿ ಏನಿದೆ?: ರೈತರ ಗುಂಪೊಂದು ಪ್ರತಿಭಟನೆ ಮಾಡುತ್ತಾ ರಸ್ತೆ ಮೇಲೆ ಹೋಗುತ್ತಿರುವುದನ್ನು ನೀವು ಕಾಣಬಹುದು. ಈ ಸಂದರ್ಭದಲ್ಲಿ ಜೀಪ್​ ಒಂದು ಅವರ ಮೇಲೆ ಹಾದು ಹೋಗುತ್ತದೆ. ಬಿಳಿ ಅಂಗಿ, ಹಸಿರು ತುರ್ಬನ್​ ಧರಿಸಿರುವ ರೈತನೊಬ್ಬ ಕಾರಿನ ಬಾನೆಟ್​ ಮೇಲೆ ಬಿದ್ದಿರುವುದು ಮತ್ತು ಇತರರು ತಮ್ಮ ಪ್ರಾಣ ಉಳಿಸಲು ರಸ್ತೆಯ ಬದಿಗೆ ಜಿಗಿದಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಯಾರಾದರೂ ಗಾಯಗೊಂಡಿದ್ದಾರಾ ಎಂಬುದನ್ನು ಪರಿಶೀಲಿಸದೇ ತಮ್ಮ ಪಾಡಿಗೆ ಜೀಪ್​ ಚಲಾಯಿಸಿಕೊಂಡು ಹೋಗುವುದು ಕೂಡ ವಿಡಿಯೋದಲ್ಲಿ. ಜೀಪ್​ ಹಿಂದೆಯೇ ಕಪ್ಪು ಬಣ್ಣದ ಎಸ್​ಯುವಿ ಕಾರು ಹಾದು ಹೋಗುತ್ತದೆ. ಎರಡು ವಾಹನಗಳು ಹಾದು ಹೋಗುವ ಸಮಯದಲ್ಲಿ ಸುಮಾರು ಅರ್ಧ ಡಜನ್​ಗೂ ಹೆಚ್ಚು ಮಂದಿ ರಸ್ತೆ ಬದಿಗಳಲ್ಲಿ ಬಿದ್ದಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

    ಘಟನೆ ನಡೆದ ಬೆನ್ನಲ್ಲೇ ರೈತರ ಕುಟುಂಬಗಳನ್ನು ಭೇಟಿ ಮಾಡಲು ಭಾನುವಾರ ರಾತ್ರಿ ದೆಹಲಿಯಿಂದ ಹೊರಟ ಪ್ರಿಯಾಂಕರನ್ನು ಉತ್ತರ ಪ್ರದೇಶ ಪೊಲೀಸರು ಸೋಮವಾರ ಬೆಳಗ್ಗೆ ಲಾಖಿಂಪುರ್​ ಖೇರಿ ತಲುಪುವ ಮುನ್ನವೇ ಬಂಧಿಸಲಾಯಿತು. ಪ್ರಿಯಾಂಕಾರನ್ನು ಇನ್ನು ಸೀತಾಪುರ್​ ಸರ್ಕಾರಿ ಗೆಸ್ಟ್​ಹೌಸ್​ನಲ್ಲಿ ಇರಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಪ್ರಿಯಾಂಕಾ, 15 ರಿಂದ 20 ದಿನಗಳಾಗಲಿ, 6 ತಿಂಗಳಾಗಲಿ ಅಥವಾ 6 ವರ್ಷಗಳೇ ಆಗಲಿ ನಾನು ಇಲ್ಲಿಯೇ ಇರುತ್ತೇನೆ ಹೊರತು ನಾನು ರೈತರನ್ನು ಭೇಟಿ ಮಾಡದೇ ಹೋಗುವುದಿಲ್ಲ ಎಂದಿದ್ದಾರೆ. ಇನ್ನು ಯಾವುದೇ ನೋಟಿಸ್​ ನೀಡದೇ ಅಥವಾ ಮ್ಯಾಜಿಸ್ಟ್ರೇಟ್​ ಮುಂದೆ ಹಾಜರುಪಡಿಸದೇ ಪ್ರಿಯಾಂಕಾರನ್ನು ಬಂಧಿಸಿರುವುದರಿಂದ ಕಾನೂನು ಮೊರೆ ಹೋಗಲು ಮುಂದಾಗಿದ್ದಾರೆ.

    ರಾಜಕೀಯ ಅವಕಾಶವಾದಿ ಎಂದು ಕರೆದಿದ್ದಕ್ಕೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಿಯಾಂಕಾ, ರಾಜಕೀಯ ಅವಕಾಶವಾದಿ ಯಾರೆಂದು ಈ ದೇಶದ ಪ್ರತಿಯೊಬ್ಬ ವ್ಯಕ್ತಿ- ಪ್ರತಿಯೊಬ್ಬ ಮಗುವಿಗೆ ತಿಳಿದಿದೆ. ನಾನು ಸರ್ಕಾರವನ್ನು ವಿರೋಧಿಸುವ ರಾಜಕೀಯ ಪಕ್ಷಕ್ಕೆ ಸೇರಿದವಳು. ಸಮಸ್ಯೆಗಳನ್ನು ಎತ್ತುವುದು, ಜನರ ಪರವಾಗಿ ನಿಲ್ಲುವುದು ಮತ್ತು ಜನರ ಧ್ವನಿಯಾಗುವುದು ನನ್ನ ಕೆಲಸ. ರೈತರು ತಿಂಗಳುಗಟ್ಟಲೆ ಪ್ರತಿಭಟನೆ ನಡೆಸುತ್ತಿದ್ದಾರೆ, ರೈತನ ಮಗನೇ ನಮ್ಮ ಗಡಿಗಳನ್ನು ರಕ್ಷಿಸುತ್ತಿದ್ದಾನೆ. ಪ್ರತಿ ವಿರೋಧ ಪಕ್ಷವು ಲಾಖಿಂಪುರ್ ಖೇರಿಗೆ ಭೇಟಿ ನೀಡಲು ಪ್ರಯತ್ನಿಸದಿದ್ದರೆ, ರಾಜ್ಯ ಸರ್ಕಾರವು ಏನಾದರೂ ಕೆಲಸ ಮಾಡುತ್ತಿತ್ತೇ? ಎಂದು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್​)

    ರೈತರು, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ: ಎಂಟು ಸಾವು- ಭೇಟಿಗೆ ಬಂದ ಪ್ರಿಯಾಂಕಾ ಬಂಧನ

    VIDEO| ಉತ್ತರ ಪ್ರದೇಶದ ಲಾಖಿಂಪುರ್ ಖೇರಿ ಘರ್ಷಣೆ ಪ್ರಕರಣ: ವಿಡಿಯೋ ಶೇರ್​ ಮಾಡಿದ ಕಾಂಗ್ರೆಸ್​

    ರೈತರು, ಬಿಜೆಪಿ ಕಾರ್ಯಕರ್ತರ ಸಾವು- ಲಿಖಿಂಪುರ ಉದ್ವಿಗ್ನ: ಕೇಂದ್ರ ಸಚಿವನ ಪುತ್ರನ ವಿರುದ್ಧ ಮರ್ಡರ್‌ ಕೇಸ್‌!

    ಯುಪಿ ಘರ್ಷಣೆ: ‘ನಾನು ಅಲ್ಲಿರಲೇ ಇಲ್ಲ’ ಎಂದ ಕೇಂದ್ರ ಸಚಿವರ ಮಗ! ಘಟನೆ ಬಗ್ಗೆ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts