More

    ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ಪ್ರಧಾನಿ ನಿವಾಸಕ್ಕೆ ಬೆಂಕಿಯಿಟ್ಟ ಪ್ರತಿಭಟನಾಕಾರರು, ಅಧ್ಯಕ್ಷರ ರಾಜೀನಾಮೆಗೆ ದಿನ ಫಿಕ್ಸ್​

    ಕೊಲಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಹಣಕಾಸು ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದು, ಉದ್ರಿಕ್ತ ಪ್ರತಿಭಟನಾಕಾರರು ಪ್ರಧಾನಿ ರನಿಲ್​ ವಿಕ್ರಮಸಿಂಘೆ ಅವರ ಖಾಸಗಿ ನಿವಾಸಕ್ಕೆ ಬೆಂಕಿ ಹಚ್ಚಿದ್ದಾರೆ. ಈಗಾಗಲೇ ವಿಕ್ರಮಸಿಂಘೆ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಸಂಕಷ್ಟ ಸಮಯದಲ್ಲಿ ರಾಜಕೀಯ ವಿಪ್ಲವಗಳಿಂದ ಬೇಸತ್ತಿರುವ ಶ್ರೀಲಂಕಾ ಜನರು ಸರ್ಕಾರದ ವಿರುದ್ಧ ದಂಗೆಯೆದ್ದಿದ್ದಾರೆ. ನಿನ್ನೆ (ಜುಲೈ 9) ಪ್ರತಿಭಟನೆ ದಿಢೀರ್​ ಸ್ಫೋಟಗೊಂಡಿತು. ಸಾವಿರಾರು ಮಂದಿ ಅಧ್ಯಕ್ಷ ಗೋತಬಯ ರಾಜಪಕ್ಷೆ ಅವರ ಅರಮನೆ ನುಗ್ಗಿ ಬೇಕಾದನ್ನು ತಿಂದು, ಈಜು ಕೊಳಕ್ಕೆ ಜಿಗಿದು ಆಯಾಗಿ ಈಜಾಡಿದ್ದಾರೆ. ಜನರು ದಂಗೆಯೆದ್ದಿದ್ದನ್ನು ಮನಗಂಡು ಗೋತಬಯ ಅವರು ಅರಮನೆ ತೊರೆದು ಸೇನಾನೆಲೆಯಲ್ಲಿ ನೆಲೆಸಿದ್ದಾರೆ ಎಂದು ತಿಳಿದುಬಂದಿದೆ.

    ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ಗೋತಬಯ ಅವರು ಮುಂದಿನ ಬುಧವಾರ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜೀನಾಮೆ ಬಳಿಕ ಲಂಕಾ ಸಂಸತ್ತು ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ಸ್ಪೀಕರ್​ ಅವರು 30 ದಿನಗಳವರೆಗೆ ಅಧ್ಯಕ್ಷರಾಗಿ ಆಡಳಿತ ನಡೆಸಲಿದ್ದಾರೆ.

    ಈ ಬೆಳವಣಿಗೆಯ ನಡುವೆ ಕೊಲಂಬೋದಲ್ಲಿರುವ ಲಂಕಾ ಪ್ರಧಾನಿ ವಿಕ್ರಮಸಿಂಘೆ ಅವರ ಖಾಸಗಿ ನಿವಾಸಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಮನೆಯ ಬಾಗಿಲನ್ನು ಮುರಿದು ಒಳಗೆ ನುಗ್ಗಿದ ಪ್ರತಿಭಟನಾಕಾರರು ಬೆಂಕಿಯಿಟ್ಟು ಆಕ್ರೋಶ ಹೊರಹಾಕಿದ್ದಾರೆ ಎಂದು ಲಂಕಾದ ಪ್ರಧಾನಿ ಕಾರ್ಯಾಲಯ ತಿಳಿಸಿದೆ.

    ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದರೂ, ಅವರು ಪ್ರಧಾನಿ ಮನೆಯನ್ನು ಪ್ರವೇಶಿಸಿದರು. ಪ್ರತಿಭಟನಾಕಾರರು ಪ್ರಧಾನಿಯವರ ವಾಹನಗಳಿಗೆ ಹಾನಿ ಮಾಡಿರುವುದು ಕಂಡುಬಂದಿದೆ. ವಿಕ್ರಮಸಿಂಘೆ ಕಳೆದ ಮೇ ತಿಂಗಳಲ್ಲಿ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಕೇವಲ ಎರಡು ತಿಂಗಳೊಳಗೆ ರಾಜೀನಾಮೆ ನೀಡಿರುವ ಅವರು ಸರ್ಕಾರದ ಮುಂದುವರಿಕೆ ಮತ್ತು ಎಲ್ಲಾ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ವಿಕ್ರಮಸಿಂಘೆ ಘೋಷಿಸಿದ್ದಾರೆ.

    ಲಂಕಾದ ಮಾಜಿ ಕ್ರಿಕೆಟಿಗರಾದ ಸನತ್ ಜಯಸೂರ್ಯ ಮತ್ತು ಮಹೇಲಾ ಜಯವರ್ಧನಾ ಅವರು ಲಂಕಾದಲ್ಲಿ ಭುಗಿಲೆದ್ದಿರುವ ಹಿಂಸಾಚಾರವನ್ನು ಖಂಡಿಸಿದ್ದಾರೆ ಮತ್ತು ಶಾಂತವಾಗಿರಲು ಜನರ ಬಳಿ ಮನವಿ ಮಾಡಿದ್ದಾರೆ.

    ನಿನ್ನೆ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಎಚ್ಚೆತ್ತ ಗೋತಬಯಾ ನಿನ್ನೆಯೇ ಗೋತಬಯಾ ಅವರು ತಮ್ಮ ಅಧಿಕೃತ ನಿವಾಸದಿಂದ ಪಲಾಯನ ಮಾಡಿದರು. ಗೊಂದಲದ ನಡುವೆ, ಶ್ರೀಲಂಕಾ ನೌಕಾಪಡೆಯ ಹಡಗಿನಲ್ಲಿ ಸೂಟ್‌ಕೇಸ್‌ಗಳನ್ನು ಲೋಡ್ ಮಾಡುತ್ತಿರುವ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹೊರಹೊಮ್ಮಿದವು. ಸೂಟ್‌ಕೇಸ್‌ಗಳು ಅಧ್ಯಕ್ಷ ರಾಜಪಕ್ಸೆ ಅವರದ್ದು ಎಂದು ಸ್ಥಳೀಯ ಮಾಧ್ಯಮಗಳು ಹೇಳಿಕೊಂಡಿವೆ.

    ಸುಮಾರು 22 ಮಿಲಿಯನ್ ಜನಸಂಖ್ಯೆ ಇರುವ ದ್ವೀಪ ರಾಷ್ಟ್ರವು ತೀವ್ರವಾದ ವಿದೇಶಿ ವಿನಿಮಯದ ಕೊರತೆಯನ್ನು ಎದುರಿಸುತ್ತಿದೆ. ವಿದೇಶಿ ಸಾಲದ ಹೊರೆ ಹೆಚ್ಚಾಗಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಅದರಿಂದ ಹೊರಬರಲು ಸಾಕಷ್ಟು ಹೋರಾಡುತ್ತಿದೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ ಇಂಧನ, ಆಹಾರ ಮತ್ತು ಔಷಧಿಗಳು ಸೇರಿದಂತೆ ಅಗತ್ಯ ವಸ್ತುಗಳು ಮಾತ್ರ ಆಮದು ಮಾಡಿಕೊಳ್ಳಲಾಗುತ್ತಿದೆ. ಏಳು ದಶಕಗಳಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಪ್ರಕ್ಷುಬ್ಧತೆಯು ಲಂಕಾಗೆ ಎದುರಾಗಿದೆ.

    ದೇಶದ ಈ ಪರಿಸ್ಥಿತಿಗೆ ಅಧ್ಯಕ್ಷ ಗೋತಬಯ ಅವರೇ ಕಾರಣದ ಎಂದು ಹಲವರು ದೂಷಿಸಿದ್ದಾರೆ. ಅವರ ರಾಜೀನಾಮೆಗೆ ಒತ್ತಾಯಿಸಿ ಕಳೆದ ಮಾರ್ಚ್‌ನಿಂದಲೇ ಲಂಕಾದಲ್ಲಿ ಶಾಂತಿಯುತ ಪ್ರತಿಭಟನೆಗಳು ನಡೆಯುತ್ತಿದ್ದವು. ಆದರೆ, ಹಣದ ತೀವ್ರ ಕೊರತೆಯಿರುವ ಲಂಕಾವು, ಇಂಧನ ಆಮದು ಪಡೆಯುವುದನ್ನು ನಿಲ್ಲಿಸಿದ್ದರಿಂದ ಇತ್ತೀಚಿನ ವಾರಗಳಲ್ಲಿ ಜನರ ಅಸಮಾಧಾನವು ಸ್ಫೋಟಗೊಂಡಿತು. ನಿನ್ನೆ ಅಧ್ಯಕ್ಷರ ನಿವಾಸ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಸಾಕಷ್ಟು ದಾಂಧಲೆ ನಡೆಸಿದ್ದಾರೆ. (ಏಜೆನ್ಸೀಸ್​)

    ಹಿಂಸೆಯ ನೆರಳಲ್ಲಿ ಹೆಣ್ಣುಮಕ್ಕಳು: ಉಗ್ರಜಾಲ ಭಾಗ-2

    ಪ್ರಥಮ ಪ್ರಜೆಯ ಸ್ಥಾನದತ್ತ ಭಾರತದ ನೈಜ ಪ್ರತಿಭೆ ದ್ರೌಪದಿ ಮುಮು

    ಬಕ್ರೀದ್ ಹಬ್ಬವು ತ್ಯಾಗ- ಬಲಿದಾನದ ಸಂಕೇತ: ಇಂದು ಬಕ್ರೀದ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts