ಹೈದರಾಬಾದ್: ನಟ ಯಶ್ ಅಭಿನಯದ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2 ಸಿನಿಮಾ ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸಿದ್ದು, ಹಲವು ದಾಖಲೆಗಳನ್ನು ಮುರಿಯುವ ಮೂಲಕ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ. ಇದೀಗ ಕೆಜಿಎಫ್-2 ಗೆಲುವಿನ ಒತ್ತಡ ನಟ ಪ್ರಭಾಸ್ ಅವರ ಸಲಾರ ಚಿತ್ರದ ಮೇಲೆ ಬಿದ್ದಿದೆ.
ಪ್ರಶಾಂತ್ ನೀಲ್ ಅವರು ಈಗಾಗಲೇ ಸಲಾರ್ ಚಿತ್ರದ ಚಿತ್ರೀಕರಣ ಆರಂಭಿಸಿದ್ದಾರೆ. ಇದರ ನಡುವೆ ಕೆಜಿಎಫ್-2 ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಬ್ರೇಕ್ ಪಡೆದುಕೊಂಡಿದ್ದರು. ಇದೀಗ ಚಿತ್ರ ಬಿಡುಗಡೆಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಮುಂದಿನ ತಿಂಗಳಿನಿಂದ ಸಲಾರ್ ಚಿತ್ರದ ಶೂಟಿಂಗ್ ಅನ್ನು ಪ್ರಶಾಂತ್ ನೀಲ್ ಆರಂಭಿಸಲಿದ್ದಾರೆ.
ಕೆಜಿಎಫ್ 2 ಚಿತ್ರದ ಗೆಲುವಿನ ಒತ್ತಡವು ಸಲಾರ್ ಚಿತ್ರದ ಮೇಲಿದೆ. ಕೆಜಿಎಫ್ ಚಿತ್ರದ ಪ್ರಮುಖ ಮಾರಾಟದ ಅಂಶವೆಂದರೆ ಹೀರೋಯಿಸಂ. ಹೀಗಾಗಿ ಪ್ರಭಾಸ್ ಅಭಿಮಾನಿಗಳು ಸಲಾರ್ ಚಿತ್ರದಲ್ಲಿ ದೊಡ್ಡ ಹೀರೋಯಿಸಂ ಅನ್ನು ನಿರೀಕ್ಷಿಸುತ್ತಿದ್ದಾರೆ. ಆದರೆ, ಈ ನಿರೀಕ್ಷೆಯನ್ನು ತಲುಪುವುದು ಸುಲಭದ ಮಾತಲ್ಲ. ಏಕೆಂದರೆ, ಬಾಹುಬಲಿ ನಂತರ ಪ್ರಭಾಸ್ ಈಗಾಗಲೇ ಸಾಹೋ ಚಿತ್ರದಲ್ಲಿ ಕಹಿ ಅನುಭವವನ್ನು ಹೊಂದಿದ್ದಾರೆ. ಭಾರೀ ಹೀರೋಯಿಸಂ ಇದ್ದರೂ ಸಾಹೋ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿದೆ.
ಸಾಹೋ ಬಳಿಕ ಬಿಡುಗಡೆಯಾದ ರಾಧೆ ಶ್ಯಾಮ್ ಚಿತ್ರವು ಕೂಡ ಪ್ರಭಾಸ್ಗೆ ನಿರೀಕ್ಷಿತ ಗೆಲುವು ತಂದುಕೊಡಲಿಲ್ಲ. ಹೀಗಾಗಿ ಬಾಹುಬಲಿಯ ನಂತರ ಒಂದು ಒಳ್ಳೆಯ ಕಂಬ್ಯಾಕ್ ಪ್ರಭಾಸ್ ಅವರಿಗೆ ಬೇಕಾಗಿದೆ. ಹೀಗಾಗಿ ಸಲಾರ್ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ. ಪ್ರಶಾಂತ್ ನೀಲ್ಗೂ ಅದೇ ಒತ್ತಡವಿದೆ. ಸಲಾರ್ ಚಿತ್ರದ ಬಿಡುಗಡೆ ದಿನಾಂಕ ಇನ್ನೂ ತಿಳಿದಿಲ್ಲ ಮತ್ತು ಸಲಾರ್‌ಗಿಂತ ಮೊದಲು ಆದಿಪುರುಷ ಚಿತ್ರ ಬಿಡುಗಡೆಯಾಗುತ್ತದೆಯೇ ಎಂಬುದೂ ಸ್ಪಷ್ಟತೆ ಇಲ್ಲ.
ಕರೊನಾ ಅಲೆಗಳು ಮತ್ತು ಇತರ ಹಲವು ಕಾರಣಗಳಿಂದ ಚಿತ್ರೀಕರಣ ವಿಳಂಬವಾದ ಹಿನ್ನೆಲೆಯಲ್ಲಿ ಸಲಾರ್ ಚಿತ್ರತಂಡ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಈ ಚಿತ್ರಕ್ಕೆ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಿದೆ. ಇಷ್ಟೆಲ್ಲ ಒತ್ತಡಗಳಿರುವಾಗ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಸಲಾರ್ ಅನ್ನು ಹೇಗೆ ನಿರೀಕ್ಷೆಗೆ ತಕ್ಕಂತೆ ಚಿತ್ರೀಕರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)
ಏನು ಆಗಲ್ಲ, ಎಲ್ಲ ದೊಡ್ಡವರಿದ್ದಾರೆ: PSI ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದ ಸ್ಫೋಟಕ ಆಡಿಯೋ ವೈರಲ್
ಮಗು ಪಡೆಯಬೇಕೆಂಬ ಪತ್ನಿಯ ಆಸೆ ಈಡೇರಿಸಲು ಕೈದಿ ಗಂಡನಿಗೆ 15 ದಿನಗಳ ಪೆರೋಲ್ ನೀಡಿದ ಕೋರ್ಟ್!
2ನೇ ಮದ್ವೆಯಾದ ಸೆಲೆಬ್ರಿಟಿ IAS ಅಧಿಕಾರಿ ಟೀನಾ ಡಾಬಿ: ಕೋವಿಡ್ ಸಂದರ್ಭದ ಭೇಟಿಗೆ ಮದುವೆಯ ಬೆಸುಗೆ