More

    ಜಮ್ಮು ಕಾಶ್ಮೀರದ ಕಾರಾಗೃಹ ಡಿಜಿಪಿ ಭೀಕರ ಕೊಲೆ: ಹತ್ಯೆಯ ಹೊಣೆ ಹೊತ್ತ PAFF ನಿಂದ ಕೇಂದ್ರ ಸರ್ಕಾರಕ್ಕೆ ಸವಾಲು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಾರಾಗೃಹ ಡಿಜಿಪಿ ಹೇಮಂತ್​ ಕುಮಾರ್​ ಲೋಹಿಯಾ ಅವರ ಮೃತದೇಹ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಲಷ್ಕರ್​ ಎ ತೊಯ್ಬಾ ಉಗ್ರ ಸಂಘಟನೆಯ ಭಾರತೀಯ ಉಪಶಾಖೆ ಪೀಪಲ್ಸ್​ ಆ್ಯಂಟಿ ಫ್ಯಾಸಿಸ್ಟ್​ ಪೋರ್ಸ್​ (ಪಿಎಎಫ್​ಎಫ್​) ಹತ್ಯೆಯ ಹೊಣೆ ಹೊತ್ತುಕೊಂಡಿದೆ.

    57 ವರ್ಷದ ಲೋಹಿಯಾ ಅವರು ಜಮ್ಮು ಮತ್ತು ಕಾಶ್ಮೀರದ ಕಾರಾಗೃಹ ವಿಭಾಗದ ಡಿಜಿಪಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸೋಮವಾರ (ಅ.3) ಅವರ ಮೃತದೇಹ ಕತ್ತು ಸೀಳಿದ ಮತ್ತು ಸುಟ್ಟು ಗಾಯಗಳ ಸ್ಥಿತಿಯಲ್ಲಿ ಜಮ್ಮುವಿನ ಹೊರವಲಯದಲ್ಲಿರುವ ಅವರ ನಿವಾಸದಲ್ಲಿ ಪತ್ತೆಯಾಗಿತ್ತು.

    ಲೋಹಿಯಾ ಅವರ ಮನೆಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಯಾಸಿರ್​ನನ್ನು ಪ್ರಮುಖ ಆರೋಪಿ ಎಂದು ಶಂಕಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ.

    ಘಟನೆಯ ಬೆನ್ನಲ್ಲೇ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪಿಎಎಫ್​ಎಫ್​, ನಮ್ಮ ವಿಶೇಷ ತಂಡವು ಉದಯವಾಲಾದಲ್ಲಿ ಗುಪ್ತಚರ ಆಧಾರಿತ ಕಾರ್ಯಾಚರಣೆ ನಡೆಸಿ, ಕಾರಾಗೃಹಗಳ ಡಿಜಿಪಿ ಲೋಹಿಯರನ್ನು ಹತ್ಯೆ ಮಾಡಿದೆ. ಇದೊಂದು ಪ್ರಮುಖ ಗುರಿಯಾಗಿತ್ತು ಎಂದಿದೆ. ಅಲ್ಲದೆ, ಇತ್ತಿಚೆಗೆ ಸ್ಥಳೀಯರಲ್ಲದ ಜನರನ್ನು ಒಳಗೊಂಡಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎಲ್ಲ ಭಯೋತ್ಪಾದಕ ದಾಳಿಗೆ ನಾವೇ ಹೊಣೆ ಎಂದಿರುವ ಪಿಎಎಫ್​ಎಫ್​, ಮುಂದಿನ ದಿನಗಳಲ್ಲಿ ಹೈ-ಪ್ರೊಪೈಲ್​ ಆಪರೇಷನ್​ ನಡೆಸಲಾಗುವುದು. ಎಲ್ಲಿ, ಯಾವಾಗ ಬೇಕಾದರೂ ದಾಳಿ ನಡೆಯಬಹುದು ಎಂದು ಎಚ್ಚರಿಕೆಯ ಜೊತೆಗೆ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದೆ.

    ಬಲವಾದ ಭದ್ರತೆಯೊಂದಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಆಗಮಿಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರಿಗೆ ನಮ್ಮ ಕಡೆಯಿಂದ ಇದೊಂದು ಸಣ್ಣ ಉಡುಗೊರೆ ಎಂದು ಪಿಎಎಫ್​ಎಫ್​ ಅಣುಕಿಸಿದೆ. ಅಂದಹಾಗೆ ಅಮಿತ್​ ಷಾ ಅವರು ಮೂರು ದಿನಗಳ ಪ್ರವಾಸಕ್ಕೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ.

    1992ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ ಹೇಮಂತ್ ಕುಮಾರ್ ಲೋಹಿಯಾ ಅವರನ್ನು ಜಮ್ಮುವಿನ ಹೊರವಲಯದಲ್ಲಿರುವ ಉದಯವಾಲಾ ನಿವಾಸದಲ್ಲಿ ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಅವರನ್ನು ಆಗಸ್ಟ್‌ನಲ್ಲಿ ಕಾರಾಗೃಹಗಳ ಡಿಜಿಪಿಯಾಗಿ ನಿಯೋಜಿಸಲಾಗಿತ್ತು. ಅವರ ಮೈಮೇಲೆ ಸುಟ್ಟ ಗಾಯಗಳೂ ಪತ್ತೆಯಾಗಿವೆ.

    ಈ ಪ್ರಕರಣದ ಬಗ್ಗೆ ಮಾತನಾಡಿರುವ ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಮುಖೇಶ್ ಸಿಂಗ್, ಪ್ರಾಥಮಿಕವಾಗಿ ಇದೊಂದು ಶಂಕಿತ ಕೊಲೆ ಪ್ರಕರಣವಾಗಿದೆ. ಲೋಹಿಯಾ ಅವರ ಮನೆಯ ಸಹಾಯಕ ಯಾಸಿರ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಆರಂಭಿಸಲಾಗಿದೆ ಎಂದು ಎಡಿಜಿಪಿ ತಿಳಿಸಿದ್ದಾರೆ. ಆರೋಪಿ ಯಾಸಿರ್ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಗೆ ಸೇರಿದವನು.

    ಕೊಲೆಗಾರನು ಲೋಹಿಯಾರನ್ನು ಮೊದಲು ಉಸಿರುಗಟ್ಟಿಸಿ ಕೊಂದಿದ್ದಾನೆ. ಬಳಿಕ ಕತ್ತು ಸೀಳಲು ಒಡೆದ ಕೆಚಪ್ ಬಾಟಲಿಯನ್ನು ಬಳಸಿದ್ದಾನೆ. ಇದಾದ ಬಳಿಕ ಲೋಹಿಯಾ ಅವರ ದೇಹವನ್ನು ಸುಡಲು ಪ್ರಯತ್ನಿಸಿದ್ದಾರೆಂದು ಅಪರಾಧ ನಡೆದ ಸ್ಥಳದ ಪ್ರಾಥಮಿಕ ಪರೀಕ್ಷೆಯು ಸೂಚಿಸಿದೆ ಎಂದು ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಹೇಳಿದ್ದಾರೆ. (ಏಜೆನ್ಸೀಸ್​)

    ವಿಶ್ವದ ಅತ್ಯಂತ ಎತ್ತರ ಪ್ರದೇಶದಲ್ಲಿರುವ ಶಿವನ ದೇವಸ್ಥಾನದ ಅದ್ಭುತ ದೃಶ್ಯ: ನಿಮ್ಮ ಹುಬ್ಬೇರಿಸೋ ವಿಡಿಯೋ ಇದು

    ಅನ್ಯ ಜಾತಿ ಯುವಕನ ಜತೆ ಮಗಳು ಪರಾರಿ: ಮರ್ಯಾದೆಗೆ ಅಂಜಿ ಸಾವಿನ ಹಾದಿ ಹಿಡಿದ ತಂದೆ, ತಾಯಿ, ಸಹೋದರ

    ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ: ಮಧ್ಯಾಹ್ನ 1.30 ರವರೆಗೂ ನಡೆಯಲಿದೆ ಪೂಜಾ ವಿಧಿ-ವಿಧಾನಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts