More

    ವಿಶ್ವಾಸ ಮತ ಪರೀಕ್ಷೆ ಗೆದ್ದ ಜಾರ್ಖಂಡ್​ ಸಿಎಂ: ಬಿಜೆಪಿ ವಿರುದ್ಧ ಹೇಮಂತ್​ ಸೊರೆನ್​ ವಾಗ್ದಾಳಿ

    ರಾಂಚಿ: ಅಕ್ರಮ ಗಣಿಗಾರಿಕೆ ಪ್ರಕರಣದಿಂದಾಗಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿರುವ ಜಾರ್ಖಂಡ್​ ಸಿಎಂ ಹೇಮಂತ್​ ಸೊರೆನ್​, ಇಂದು (ಸೆ.5) ವಿಧಾನಸಭೆಯಲ್ಲಿ ವಿಶ್ವಾಸ ಮತ ಪರೀಕ್ಷೆಯಲ್ಲಿ ಗೆಲುವು ಸಾಧಿಸಿದ್ದಾರೆ.

    ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸೋರೆನ್​ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಆರೋಪ ಎದುರಿಸುತ್ತಿದ್ದಾರೆ. ಅಲ್ಲದೆ, ಅವರ ಶಾಸಕ ಸ್ಥಾನ ವಜಾಗೊಳಿಸುವಂತೆ ಚುನಾವಣ ಆಯೋಗ ಶಿಫಾರಸು ಮಾಡಿತ್ತು. ಇದರ ಬೆನ್ನಲ್ಲೇ ಜಾರ್ಖಂಡ್​ ರಾಜ್ಯ ರಾಜಕಾರಣದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಆಪರೇಷನ್​ ಕಮಲದ ಭಯದಿಂದ ಆಡಳಿತಾರೂಢ ಜಾರ್ಖಂಡ್​ ಮುಕ್ತಿ ಮೋರ್ಚಾ (ಜೆಎಂಎಂ) ಹಾಗೂ ಮೈತ್ರಿ ಪಕ್ಷದ ಕಾಂಗ್ರೆಸ್​ ಶಾಸಕರು ಹೋಟೆಲ್​ಗೆ ಸ್ಥಳಾಂತರವಾಗಿದ್ದರು. ಇಂದು ನಡೆದ ವಿಧಾನಸಭೆಯಲ್ಲಿ ಸೊರೆನ್​ ವಿಶಾಸ ಮತ ಸಾಬೀತು ಮಾಡುವ ಮೂಲಕ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ. ಸೊರೆನ್​ ಪರವಾಗಿ 48 ಮತಗಳು ಬಿದ್ದವು.

    ವಿಶ್ವಾಸಮತ ಸಾಬೀತಿಗೂ ಮುನ್ನ ವಿಧಾನಸಭೆಯಲ್ಲಿ ಮಾತನಾಡಿದ ಸೊರೆನ್​, ಬಿಜೆಪಿಯು ಚುನಾವಣೆಗಳಲ್ಲಿ ಗೆಲ್ಲಲು ಗಲಭೆಗಳನ್ನು ಉತ್ತೇಜಿಸುವ ಮೂಲಕ ನಾಗರಿಕ ಯುದ್ಧದಂತಹ ಸನ್ನಿವೇಶವನ್ನು ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಅಸ್ಸಾಂ ಸಿಎಂ ಹಿಮಂತ್​​ ಬಿಸ್ವಾ ಶರ್ಮ ಕೈಜೋಡಿಸಿದ್ದು, ಜಾರ್ಖಂಡ್​ ಸರ್ಕಾರವನ್ನು ಉರುಳಿಸಲು ನಮ್ಮ ಶಾಸಕರ ಖರೀದಿಗೆ ಪ್ರಯತ್ನಿಸುತ್ತಿದ್ದಾರೆ ಎಂದು ಸೊರೆನ್​ ಆರೋಪ ಮಾಡಿದ್ದಾರೆ.

    ಪ್ರತಿಪಕ್ಷ ಬಿಜೆಪಿ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದೆ. ನಮ್ಮ ಶಾಸಕರ ಕುದುರೆ ವ್ಯಾಪಾರಕ್ಕೆ ಮುಂದಾಗಿದೆ. ನಮ್ಮ ಬಲ ಏನೆಂದು ವಿಧಾನಸಭೆಯಲ್ಲಿ ತೋರಿಸುತ್ತೇವೆ ಎಂದರು. ಜನರು ಬಟ್ಟೆ, ಪಡಿತರ ಮತ್ತು ದಿನಸಿ ಪದಾರ್ಥಗಳನ್ನು ಖರೀದಿಸುವುದನ್ನು ನಾವು ನೋಡಿದ್ದೇವೆ ಆದರೆ, ಶಾಸಕರನ್ನು ಖರೀದಿ ಮಾಡುವ ಏಕೈಕ ಪಕ್ಷ ಅಂದರೆ ಅದು ಬಿಜೆಪಿ ಎಂದು ಸೊರೆನ್​ ಟೀಕಾ ಪ್ರಹಾರ ನಡೆಸಿದರು.

    ಸರ್ಕಾರ ಉರುಳುವ ಭೀತಿಯಲ್ಲಿದ್ದ ಸೊರೆನ್​, ತಮ್ಮ ಶಾಸಕರನ್ನು ಕರೆದುಕೊಂಡು ಕಾಂಗ್ರೆಸ್​ ಆಡಳಿತವಿರುವ ಛತ್ತೀಸ್​ಗಢದ ಐಷಾರಾಮಿ ಹೋಟೆಲ್​ನಲ್ಲಿ ಬೀಡುಬಿಟ್ಟಿತ್ತು. ಇಂದು ಅಲ್ಲಿಂದ ನೇರವಾಗಿ ತಮ್ಮ ಶಾಸಕರೊಂದಿಗೆ ರಾಜಧಾನಿ ರಾಂಚಿಗೆ ಬಂದಿಳಿದ ಸೊರೆನ್​ ವಿಶ್ವಾಸ ಮತ ಸಾಬೀತು ಮಾಡಿದರು.

    81 ಸದಸ್ಯ ಸ್ಥಾನ ಹೊಂದಿರುವ ಜಾರ್ಖಾಂಡ್​ ವಿಧಾನಸಭೆಯಲ್ಲಿ ಆಡಳಿತಾರೂಢ ಸಮ್ಮಿಶ್ರ ಸರ್ಕಾರವು 49 ಶಾಸಕರನ್ನು ಹೊಂದಿದೆ. ಇದರಲ್ಲಿ ಬಹುಮತದ ಸಾಬೀತು ಮಾಡಲು 41 ಸದಸ್ಯರ ಬೆಂಬಲ ಬೇಕು. ಜಾರ್ಖಂಡ್​ನ ಅತಿದೊಡ್ಡ ಪಕ್ಷವಾದ ಜೆಎಂಎಂ 30 ಶಾಸಕರ ಬಲವನ್ನು ಹೊಂದಿದೆ, ಮೈತ್ರಿ ಪಕ್ಷಗಳಾದ ಕಾಂಗ್ರೆಸ್ 18 ಮತ್ತು ತೇಜಸ್ವಿ ಯಾದವ್ ಅವರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಒಬ್ಬರನ್ನು ಹೊಂದಿದ್ದು, ಸೊರೆನ್​ ಪರವಾಗಿ ಒಟ್ಟು 48 ಮತಗಳು ಬಿದ್ದವು. ಪ್ರತಿಪಕ್ಷವಾಗಿರುವ ಬಿಜೆಪಿ 26 ಶಾಸಕರನ್ನು ಹೊಂದಿದೆ.

    ಪ್ರಕರಣ ಹಿನ್ನೆಲೆ ಏನು?
    ಗಣಿ ಗುತ್ತಿಗೆ ಅಕ್ರಮ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್​ಗೆ ಅನರ್ಹತೆ ಭೀತಿ ಇದೆ. ಅಧಿಕಾರ ದುರುಪಯೋಗ ಸಂಬಂಧ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಚುನಾವಣಾ ಆಯೋಗವು ರಾಜ್ಯಪಾಲರಿಗೆ ಶಿಫಾರಸು ಮಾಡಿದೆ. ಆದರೆ, ಈವರೆಗೂ ರಾಜ್ಯಪಾಲರು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ತಮ್ಮ ಗಣಿ ಗುತ್ತಿಗೆಯೊಂದನ್ನು ತಾವೇ ವಿಸ್ತರಿಸಿಕೊಳ್ಳುವ ಮೂಲಕ ಸೊರೆನ್ ಅವರು ಚುನಾವಣೆ ಕಾನೂನು ಉಲ್ಲಂಘಿಸಿರುವುದರಿಂದ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂಬ ಅರ್ಜಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ತನ್ನ ಅಭಿಪ್ರಾಯವನ್ನು ರಾಜ್ಯಪಾಲರಿಗೆ ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ.

    ಏನಿದು ಪ್ರಕರಣ?
    ಸರ್ಕಾರಿ ಗುತ್ತಿಗೆಗಳ ಅನರ್ಹತೆಗೆ ಸಂಬಂಧಿಸಿರುವ 1951ರ ಜನಪ್ರತಿನಿಧಿ ಕಾಯ್ದೆ ಸೆಕ್ಷನ್ 9 ಎ ಅನ್ನು ಉಲ್ಲಂಘಿಸಿದ್ದಕ್ಕಾಗಿ ಸೊರೆನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಈ ಪ್ರಕರಣದಲ್ಲಿ ಅರ್ಜಿದಾರನಾಗಿರುವ ಬಿಜೆಪಿಯು ಆಗ್ರಹಿಸಿದೆ. ಸೊರೆನ್ ಅವರು ಗಣಿ ಗುತ್ತಿಗೆಯನ್ನು ತಮಗೆ ತಾವೇ ನೀಡಿಕೊಂಡಿರುವುದರಿಂದ ಅವರನ್ನು ಅನರ್ಹಗೊಳಿಸಬೇಕೆಂದು ಬೇಡಿಕೆ ಮುಂದಿಟ್ಟಿದ್ದೇವೆ ಎಂದೂ ಅದು ಹೇಳಿದೆ. (ಏಜೆನ್ಸೀಸ್​)

    ಬೆಂಗಳೂರಿಗೆ ಕಾವೇರಿ ನೀರು ಪೂರೈಸುವ ಪಂಪ್​ಹೌಸ್​ಗೆ ನುಗ್ಗಿದ ನೀರು: ಸಿಎಂ ಬೊಮ್ಮಾಯಿ‌ ದೌಡು

    ವೈರಲ್​ ಪೋಸ್ಟ್ ಎಡವಟ್ಟು:​ ಜೀವ ಬರುತ್ತೆ ಅಂತ ಬಾಲಕನ ಶವವನ್ನು ಉಪ್ಪಿನ ರಾಶಿಯಲ್ಲಿಟ್ಟ ಗ್ರಾಮಸ್ಥರು!

    VIDEO: ಸಾರಾಯಿ ಅಂಗಡಿ ಮುಚ್ಚದಿದ್ರೆ ಸಾಯ್ತೇನೆಂದ ಕುಡುಕ: ಕಂಠಪೂರ್ತಿ ಎಣ್ಣೆ ಹಾಕ್ಕೊಂಡೇ ಡಿಮಾಂಡ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts