More

    2017ರ ಲೈಂಗಿಕ ದೌರ್ಜನ್ಯ ಕೇಸ್​: ಮೊದಲ ಬಾರಿ ಮಾಧ್ಯಮದೆದುರು ಕರಾಳ ಘಟನೆಯ ಬಗ್ಗೆ ನಟಿ ಭಾವನಾ ಮಾತು

    ತಿರುವನಂತಪುರ: ಕಳೆದ ಐದು ವರ್ಷಗಳು ನನಗೆ ತುಂಬಾ ಕಠಿಣ ಪ್ರಯಾಣವಾಗಿತ್ತು. ನಾನು ಯಾವುದೇ ತಪ್ಪಿ ಮಾಡಿಲ್ಲ ಎಂದು ನ್ಯಾಯಾಲಯದಲ್ಲಿ 15 ದಿನಗಳ ಕಾಲ ಸಾಬೀತುಪಡಿಸಿದ್ದು, ಎಲ್ಲದಕ್ಕಿಂತ ಇನ್ನು ಕಠಿಣವಾಗಿತ್ತು…. ಇದು 2017ರ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ನಟಿ ಭಾವನಾ ಮೆನನ್​ ಅವರ ಭಾವುಕ ಮಾತುಗಳು.

    ಇದೇ ಮೊದಲ ಬಾರಿಗೆ ಭಾವನಾ ವಿಡಿಯೋ ಮೂಲಕ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಮಹಿಳಾ ದಿನಾಚರಣೆಯ ಅಂಗವಾಗಿ ಮೊಜೋ ಸ್ಟೋರಿ ಆಯೋಜಿಸಿದ್ದ ಗ್ಲೋಬಲ್​ ಟೌನ್​ಹಾಲ್​ 2022 ಕಾರ್ಯಕ್ರಮದಲ್ಲಿ ಪತ್ರಕರ್ತ ಬರ್ಖಾ ದತ್​ ಜತೆ ಭಾವನಾ ಅವರು ತಮ್ಮ ಕರಾಳ ಘಟನೆಯನ್ನು ಮೆಲುಕು ಹಾಕಿದ್ದಾರೆ. ‘ವಿ ದಿ ವುಮೆನ್’ ಹೆಸರಿನ ಕಾರ್ಯಕ್ರಮದಲ್ಲಿ ತಮ್ಮ ಲೈಂಗಿಕ ದೌರ್ಜನ್ಯದ ಬಗ್ಗೆ ಭಾವನಾ ಮೌನ ಮುರಿದು ಮಾತನಾಡಿದ್ದಾರೆ.

    2017ರ ಫೆಬ್ರವರಿಯಲ್ಲಿ ಚಲಿಸುವ ಕಾರಿನಲ್ಲಿ ಭಾವನಾ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಭಾವನಾರ ಮೇಲೆ ದೌರ್ಜನ್ಯ ನಡೆಸಲು ಮಲಯಾಳಂ ನಟ ದಿಲೀಪ್​ ಕೆಲವು ದುಷ್ಕರ್ಮಿಗಳು ನೇಮಿಸಿದ್ದರು ಎಂಬ ಅರೋಪವಿದೆ. ಈ ಪ್ರಕರಣದಲ್ಲಿ ದಿಲೀಪ್​ ಅವರೇ ಮಾಸ್ಟರ್​ ಮೈಂಡ್​ ಎಂದು ತಿಳಿದುಬಂದಿದ್ದು, ಸದ್ಯ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣ ಹಂತದಲ್ಲಿದೆ.

    ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಕೆಲವು ವಿವರಗಳನ್ನು ಬಹಿರಂಗಪಡಿಸದಿರಲು ಕಾನೂನುಬದ್ಧವಾಗಿ ಆಗುವುದಿಲ್ಲ ಎಂದು ಭಾವನಾ ಅವರು ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ತಾನು ಮಾತನಾಡಲು ಹೆದರುತ್ತಿದ್ದೆ ಮತ್ತು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಭಯಪಡುತ್ತಿದ್ದೆ ಎಂದು ಒಪ್ಪಿಕೊಂಡ ಭಾವನಾ ಫೆಬ್ರವರಿ 2017 ರಲ್ಲಿ ನಡೆದ ಘಟನೆಯ ಬಗ್ಗೆ ಮಾತನಾಡುತ್ತಾ, ತನ್ನ ಇಡೀ ಜೀವನವನ್ನು ಈ ಘಟನೆ ತಲೆಕೆಳಗಾಗಿಸಿತು ಎಂದರು.

    ನನ್ನ ಜೀವನದಲ್ಲಿ ಇದು ಏಕೆ ನಡೆಯಿತು ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ನಿರಂತರವಾಗಿ ಕೊರೆಯುತ್ತಿದೆ. 2015ರಲ್ಲಿ ನಾನು ನನ್ನ ತಂದೆಯನ್ನು ಕಳೆದುಕೊಂಡೆ. ಒಂದು ವೇಳೆ ಅವರು ಬದುಕಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಭಾವಿಸಿದೆ. ಮರುದಿನ ಶೂಟಿಂಗ್​ ಇರದೇ ಹೋಗಿದ್ದರೆ ಈ ರೀತಿ ನಡೆಯುತ್ತಿರಲಿಲ್ಲ ಅಂದುಕೊಂಡೆ. ಈ ರೀತಿ ಸಾಕಷ್ಟು ಊಹೆಗಳನ್ನು ಮಾಡಿಕೊಂಡಿದ್ದೇನೆ. ಆ ಘಟನೆ ಸಂಭವಿಸುವ ಮೊದಲಿನ ಸಮಯಕ್ಕೆ ಹಿಂತಿರುಗಲು ಹಲವು ಬಾರಿ ಬಯಸಿದ್ದೆ, ಏಕೆಂದರೆ, ನನ್ನ ಜೀವನವು ಕೂಡ ಸಾಮಾನ್ಯವಾಗಿರುತ್ತದೆ. ಆದರೆ, ಅದರ ನೆನಪು ಒಮ್ಮೊಮ್ಮೆ ಕಾಡುತ್ತದೆ. ಒಮ್ಮೊಮ್ಮೆ ನನ್ನನ್ನು ನಾನೇ ದೂಷಿಸಿಕೊಳ್ಳುತ್ತೇನೆ. ನಾನು ಘಟನೆಯ ಬಗ್ಗೆ ಯೋಚಿಸಲು ಪ್ರಾರಂಭಿಸಿದಾಗಲೆಲ್ಲಾ ನಾನು ಲೂಪ್‌ನಲ್ಲಿರುವಂತೆ ಭಾಸವಾಗುತ್ತದೆ. ಆರೋಪ-ಪ್ರತ್ಯಾರೋಪದ ಆಟ ಬಹಳ ಸಮಯದವರೆಗೂ ನಡೆಯಿತು ಎಂದು ಹಿಂದಿನ ಘಟನೆಗಳನ್ನು ಭಾವನಾ ನೆನಪು ಮಾಡಿಕೊಂಡರು.

    ನೀವು ಸಂತ್ರಸ್ತೆಯಿಂದ ಬದುಕುಳಿದವರಾಗಿ ಪರಿವರ್ತನೆ ಹೊಂದಲು ಹೇಗೆ ಸಾಧ್ಯವಾಯಿತು ಎಂದು ಬರ್ಖಾ ಅವರು ಪ್ರಶ್ನಿಸಿದಾಗ, ನ್ಯಾಯಾಲಯಕ್ಕೆ ಹೋದ 15 ದಿನಗಳ ನಂತರ ಅದು ಸಂಭವಿಸಿತು ಎಂದು ಭಾವನಾ ಹೇಳಿದರು. 2020ರಲ್ಲಿ ನನ್ನ ವಿಚಾರಣೆ ನಡೆಯಿತು. 15 ದಿನಗಳ ಕಾಲ ನ್ಯಾಯಾಲಯಕ್ಕೆ ಹಾಜರಾದೆ. ಆ 15 ದಿನಗಳು ಸಂಪೂರ್ಣ ವಿಭಿನ್ನ ಅನುಭವವಾಗಿತ್ತು. ಆದರೆ, 15 ದಿನಗಳ ನಂತರ ನಾನು ಬದುಕುಳಿದವಳೆಂಬ ಭಾವನೆಯೊಂದಿಗೆ ನ್ಯಾಯಾಲಯದಿಂದ ಹೊರಬಂದೆ. ನಾನು ಇನ್ನು ಮುಂದೆ ಬಲಿಪಶು ಅಲ್ಲ ಎಂದು ನಾನು ಅರಿತುಕೊಂಡೆ. ನಾನು ಕೇವಲ ನನ್ನ ಪರವಾಗಿ ನಿಲ್ಲುವುದಿಲ್ಲ. ಬದಲಾಗಿ ನನ್ನ ನಂತರ ಬರುವ ಎಲ್ಲಾ ಹುಡುಗಿಯರ ಘನತೆಗಾಗಿ ನಿಲ್ಲುತ್ತೇನೆ ಎಂದು ಭಾವಿಸಿದೆ. ನಾನು ಬದುಕುಳಿದಿದ್ದೇನೆ ಹೊರತು ನಾನು ಬಲಿಪಶು ಅಲ್ಲ ಎಂದು ನನ್ನ ಮನಸ್ಸು ನನಗೆ ಮನವರಿಕೆ ಮಾಡಿತು ಎಂದು ಭಾವನಾ ಹೇಳಿದರು.

    ಹಲವಾರು ಬಾರಿ ತಾನು ಹೊಂದಿದ್ದ ಬೆಂಬಲ ವ್ಯವಸ್ಥೆಯ ಬಗ್ಗೆ ಭಾವನಾ ಮಾತನಾಡಿದರು. ಅವರ ಸ್ನೇಹಿತರಿಂದ ಹಿಡಿದು ಕುಟುಂಬದವರೆಗೆ ಮತ್ತು ಅಭಿಮಾನಿಗಳು ಕೂಡ ಬೆಂಬಲದ ಮಾತುಗಳನ್ನು ಆಡಿದರು. ಆದರೆ, ಮಾಧ್ಯಮಗಳಲ್ಲಿ ಸಾರ್ವಜನಿಕವಾಗಿ ಟೀಕೆಗಳನ್ನು ಮಾಡುತ್ತಲೇ ಇರುವ ಮತ್ತೊಂದು ಗುಂಪಿನ ಜನರಿದ್ದರು. ಆಗಾಗ ನನ್ನನ್ನು ಅವಮಾನಿಸಿದರು. ನಾನು ಹಾಗೆ ಮಾಡಬಾರದಿತ್ತು, ನಾನು ಪ್ರಯಾಣಿಸಬಾರದಿತ್ತು ಎಂದು ನನ್ನ ಮೇಲೆಯೇ ಆರೋಪ ಮಾಡಲಾಯಿತು. ಸೋಷಿಯಲ್ ಮೀಡಿಯಾದಲ್ಲಿ ಇದೊಂದು ಫೇಕ್ ಕೇಸ್, ನಾನೇ ಫೇಕ್ ಮಾಡಿದ್ದೇನೆ ಎಂದು ಒಂದು ರೀತಿಯ ನೆಗೆಟಿವ್ ಸುದ್ದಿ ಕೂಡ ನಡೆಯುತ್ತಿತ್ತು. ಅದರಿಂದ ತುಂಬಾ ನೋವಾಗಿತ್ತು. ನಾನು ಆಘಾತಗೊಂಡಿದ್ದೆ. ಕಹಿ ಘಟನೆಯಿಂದ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ, ಈ ವಿಷಯಗಳು ನನ್ನನ್ನು ಮತ್ತೆ ಕೆಳಕ್ಕೆ ಎಳೆಯುತ್ತಿತ್ತು ಎಂದು ಭಾವನಾ ತಿಳಿಸಿದರು.

    ಅದೃಷ್ಟವಶಾತ್​ ಆ ಸಂದರ್ಭದಲ್ಲಿ ನಾನು ಸಾಮಾಜಿಕ ಜಾಲತಾಣದಲ್ಲಿ ಇರಲಿಲ್ಲ. ಇದ್ದಿದ್ದರೆ, ಸಾಕಷ್ಟು ನೆಗಿಟಿವ್​ ಕಾಮೆಂಟ್​ಗಳಿಂದ ಇನ್ನಷ್ಟು ಕುಗ್ಗಿ ಹೋಗುತ್ತಿದ್ದೆ. 2019ರಲ್ಲಿ ಇನ್​ಸ್ಟಾಗ್ರಾಂ ಖಾತೆ ತೆರೆದಾಗಲೂ ಅನೇಕ ಕೆಟ್ಟ ಕಾಮೆಂಟ್​ಗಳು ಬಂದಿದ್ದವು. ನೀವೇಕೆ ಸಾಯಬಾರದು? ನಿಮ್ಮನ್ನೇ ನೀವು ಕೊಂದುಕೊಳ್ಳಬಾರದೇಕೆ? ಎಂಬ ಪ್ರಶ್ನೆಗಳು ಬಂದಿದ್ದವು. ಕೆಲವೊಮ್ಮೆ ಈ ಪ್ರಕರಣವನ್ನೇ ಕೈಬಿಡುವಂತೆ ಮನಸ್ಸು ಪ್ರೇರೆಪಿಸಿತು. ಆದರೆ, ಇಷ್ಟಕ್ಕೆ ಸುಮ್ಮನಾದರೆ ಒಳಿತಲ್ಲ ಎಂದು ಭಾವಿಸಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಹೋರಾಡಲೇಬೇಕು ಮತ್ತು ನಾನು ನಿರಪರಾಧಿ ಎಂದು ಸಾಬೀತುಪಡಿಸಬೇಕು. ನನ್ನ ಘನತೆಯನ್ನು ಮಿಲಿಯನ್ ತುಂಡುಗಳಾಗಿ ಚೂರುಚೂರು ಮಾಡಲಾಗಿದೆ ಮತ್ತು ನಾನು ಅದನ್ನು ಮರಳಿ ಪಡೆಯಲು ಬಯಸುತ್ತೇನೆ. ನನ್ನ ಸ್ನೇಹಿತರು, ಕುಟುಂಬ ಎಲ್ಲರೂ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಅವರು ನನಗೆ ನೀಡಿದ ಶಕ್ತಿ ಅಗಾಧವಾಗಿದೆ. ಈಗ ನನ್ನ ಪ್ರಕರಣವನ್ನು ಸಾಬೀತುಪಡಿಸುತ್ತೇನೆಂದು ಹೇಳಿದರು.

    ಬೆದರಿಕೆಯನ್ನು ನಿರ್ಲಕ್ಷಿಸಲು ಕಲಿತಿದ್ದೇನೆ. ಪ್ರಪಂಚದ ವಿವಿಧ ಭಾಗಗಳಿಂದ ಬದುಕುಳಿದವರ ಕಥೆಗಳು, ಲೈಂಗಿಕ ದೌರ್ಜನ್ಯದ ತಮ್ಮದೇ ಆದ ಸಂಚಿಕೆಗಳನ್ನು ಹಂಚಿಕೊಳ್ಳುವುದು ಮತ್ತು ನ್ಯಾಯಕ್ಕಾಗಿ ಹೋರಾಡಲು ಸಾಧ್ಯವಾಗದ ಕಥೆಗಳು ಅವಳನ್ನು ದುಃಖಿಸುತ್ತವೆ ಮತ್ತು ಅವಳನ್ನು ಕೋಪಗೊಳಿಸುತ್ತವೆ ಎಂದು ಭಾವನ ಹೇಳಿದರು. “ದೇಶದಾದ್ಯಂತ, ಪ್ರಪಂಚದಾದ್ಯಂತ, ಅವರು ಅನುಭವಿಸಿದ ಆಘಾತದ ಬಗ್ಗೆ (ಆಕ್ರಮಣದ ನಂತರ) ಮಹಿಳೆಯರ ಸಂದೇಶಗಳ ಸಂಖ್ಯೆಯನ್ನು ನೋಡಿ ನಾನು ಆಘಾತಕ್ಕೊಳಗಾಗಿದ್ದೆ. ನೀವು ನಮ್ಮನ್ನು ಪ್ರತಿನಿಧಿಸುತ್ತೀರಿ ಎಂದು ಅವರು ಹೇಳುತ್ತಾರೆ. ಅದು ತುಂಬಾ ದುಃಖಕರವಾಗಿದೆ. ಅವರು ಈ ನೋವನ್ನು, ಈ ಆಘಾತವನ್ನು ತಮ್ಮೊಳಗೆ ಇಟ್ಟುಕೊಂಡಿದ್ದಾರೆ. ಏಕೆಂದರೆ ಅವರು ತೆರೆದುಕೊಳ್ಳಲು ಹೆದರುತ್ತಾರೆ. ಇದು ಅವರ ಜೀವನ, ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೆದರುತ್ತಾರೆ. ಅದರೊಂದಿಗೆ ಬದುಕುವುದು ಭಯಾನಕವಾಗಿದೆ. ನಾನು ದೂರು ನೀಡದಿದ್ದರೆ ನನ್ನ ಜೀವನ ಏನಾಗುತ್ತಿತ್ತು? ಎಂದು ಯೋಚಿಸಲು ಗಾಬರಿಯಾಯಿತು. ಜನರು ಶಿಕ್ಷೆಯಿಲ್ಲದೆ ದೂರ ಹೋಗುವುದನ್ನು ನೋಡುವುದಕ್ಕಿಂತ ಫಲಿತಾಂಶದ ಬಗ್ಗೆ ಚಿಂತಿಸದೆ ನಾನು ಬಲವಾದ ಹೋರಾಟವನ್ನು ನೀಡುತ್ತೇನೆ ಎಂದರು.

    ಘಟನೆಯ ನಂತರ ಮಲಯಾಳಂ ಸಿನಿಮಾದಲ್ಲಿ ಕೆಲಸ ಮಾಡಲು ತುಂಬಾ ಆಘಾತಕಾರಿ ಎಂದು ಭಾವನಾ ಹೇಳಿದರು. ಘಟನೆಗೂ ಮುನ್ನ ನನಗೆ ಆಫರ್​ಗಳನ್ನು ನಿರಾಕರಿಸಲಾಗಿತ್ತು. ಆದರೆ ನಂತರ, ನನಗೆ ಸಾಕಷ್ಟು ಆಫರ್‌ಗಳು ಬಂದವು ಮತ್ತು ನಾನು ಮತ್ತೆ ಮಲಯಾಳಂನಲ್ಲಿ ಕೆಲಸ ಮಾಡಬೇಕೆಂದು ಜನರು ಒತ್ತಾಯಿಸಿದರು. ಆದರೆ ಸಿನಿಮಾವನ್ನು ತಿರಸ್ಕರಿಸಬೇಕಾಯಿತು. ಏಕೆಂದರೆ ನಾನು ಆ ಉದ್ಯಮಕ್ಕೆ ಹಿಂತಿರುಗಿ ಮತ್ತೆ ಕೆಲಸ ಮಾಡಲು, ಏನೂ ಆಗಿಲ್ಲ ಎಂಬಂತೆ ನಟಿಸಲು ತುಂಬಾ ಆಘಾತಕ್ಕೊಳಗಾಗಿದ್ದೆ. ನನ್ನ ನೆಮ್ಮದಿಗಾಗಿ ದೂರ ಉಳಿದೆ. ಆದರೆ ನಾನು ಬೇರೆ ಭಾಷೆಗಳಲ್ಲಿ ಕೆಲಸ ಮುಂದುವರೆಸಿದೆ. ಆದಾಗ್ಯೂ, ನಾನು ಈಗ ಹೊಸ ಸ್ಕ್ರಿಪ್ಟ್‌ಗಳನ್ನು ಮಲಯಾಳಂನಲ್ಲೂ ಕೇಳಲು ಪ್ರಾರಂಭಿಸಿದೆ ಎಂದು ಅವರು ಹೇಳಿದರು.

    2017ರ ಫೆಬ್ರವರಿಯಲ್ಲಿ ಶೂಟಿಂಗ್​ ಮುಗಿಸಿ ಕಾರಿನಲ್ಲಿ ಹಿಂದಿರುಗುವಾಗ ಕಿಡಿಗೇಡಿಗಳ ಗುಂಪೊಂದು ಭಾವನಾರನ್ನು ಅಪಹರಿಸಿ, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಹೇಳಲಾಗಿದೆ. ಇದೇ ಪ್ರಕರಣದಲ್ಲಿ ತದನಂತರದಲ್ಲಿ ಮಲಯಾಳಂ ನಟ ದಿಲೀಪ್​ರನ್ನು ಬಂಧಿಸಲಾಗಿತ್ತು. ಸದ್ಯ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಇನ್ನು ಪ್ರಕರಣ ಹಾಗೇ ಮುಂದುವರಿದಿದೆ. ಈ ಘಟನೆಯ ಬಗ್ಗೆ ಕಳೆದ ಜನವರಿಯಲ್ಲಿ ಇನ್​ಸ್ಟಾಗ್ರಾಂನಲ್ಲಿ ಮೊದಲ ಬಾರಿಗೆ ಭಾವನಾ ಪ್ರತಿಕ್ರಿಯೆ ನೀಡಿದ್ದರು. (ಏಜೆನ್ಸೀಸ್​)

    ಕೊನೆಗೂ ಮೌನ ಮುರಿದ ಭಾವನಾ: ಕೆಲ ವರ್ಷಗಳ ಹಿಂದೆ ನಡೆದ ಕರಾಳ ಘಟನೆಯ ಬಗ್ಗೆ ನಟಿ ಹೇಳಿದ್ದು ಹೀಗೆ

    ಪ್ರೀತಿಸಿ ಮದ್ವೆಯಾದ ಪುತ್ರಿಗೆ ತಮಿಳುನಾಡು ಮಂತ್ರಿಯಿಂದ ಬೆದರಿಕೆ: ಬೆಂಗ್ಳೂರು ಪೊಲೀಸರ ನೆರವು ಕೋರಿದ ದಂಪತಿ

    ಲವರ್​ ಜತೆ ರಾತ್ರಿ ಹೋಟೆಲ್​ಗೆ ಹೋದ ಸುಂದರಿಯ ದುರಂತ ಸಾವಿಗೆ ಕಾರಣವಾಯ್ತು ವಾಟ್ಸ್​ಆ್ಯಪ್​ ಸ್ಟೇಟಸ್!​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts