More

    ಮೂವತ್ತು ತಿಂಗಳಲ್ಲಿ 38 ಕೊಲೆ! ಖಾಕಿ ಕಂಡರೆ ಪುಂಡರಿಗಿಲ್ಲ ಭಯ, ಸಿಎಂ ತವರಲ್ಲಿ ಚಾಕು-ಚೂರಿ ಅಟ್ಟಹಾಸ

    | ಕೇಶವಮೂರ್ತಿ ವಿ.ಬಿ.

    ಹುಬ್ಬಳ್ಳಿ: ಮುಖ್ಯಮಂತ್ರಿಯವರ ತವರು ಹುಬ್ಬಳ್ಳಿ-ಧಾರವಾಡದಲ್ಲಿ ರೌಡಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊಲೆ, ಕೊಲೆ ಯತ್ನ, ಹಲ್ಲೆಯಂಥ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಚಾಕು, ಚೂರಿ, ತಲ್ವಾರ್, ಮತ್ತಿತರ ಮಾರಕಾಸ್ತ್ರಗಳು ಆಟಿಕೆಯಂತಾಗಿವೆ. ಸಾಮಾನ್ಯರೂ ಸಲೀಸಾಗಿ ಅಪರಾಧ ಕೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಕೇವಲ ಎರಡೂವರೆ ವರ್ಷಗಳಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ನಡೆದಿರುವ 38 ಕೊಲೆಗಳು ಇದಕ್ಕೆ ಪುಷ್ಠಿ ನೀಡುತ್ತಿವೆ.

    ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಹಳೇ ಹುಬ್ಬಳ್ಳಿ ಕೋಮು ಗಲಭೆ ನಂತರ ಹುಬ್ಬಳ್ಳಿಯಲ್ಲಿ ಮೇಲಿಂದ ಮೇಲೆ ನೆತ್ತರು ಹರಿಯುತ್ತಲೇ ಇದೆ. ಇದಕ್ಕೆ ತಾಜಾ ಉದಾಹರಣೆ ಚಂದ್ರಶೇಖರ ಗುರೂಜಿ ಹತ್ಯೆ. ಹೆಣ್ಣು, ಹೊನ್ನು, ಮಣ್ಣು ವಿಚಾರವಾಗಿ ಒಂದಷ್ಟು ಕೊಲೆಗಳು ನಡೆದಿದ್ದರೆ, ಮತ್ತಷ್ಟು ಕೊಲೆಗಳು ಮೀಟರ್ ಬಡ್ಡಿ, ಹಳೇ ವೈಷಮ್ಯದ ವಿಚಾರಕ್ಕೆ, ಗುಟ್ಖಾ, ಸಿಗರೇಟ್, ಎಗ್‌ರೈಸ್‌ನಂತಹ ಕ್ಷುಲ್ಲಕ ಕಾರಣಕ್ಕೂ ಕೊಲೆ ನಡೆದಿರುವುದು ದುರಂತ. ಇದಕ್ಕೆಲ್ಲ ಖಾಕಿಪಡೆಯ ಮೃದುತ್ವ ಧೋರಣೆಯೇ ಕಾರಣ ಎಂದು ತರ್ಕಿಸಲಾಗುತ್ತಿದೆ. ಆಗಾಗ ರೌಡಿ ಪರೇಡ್ ಮಾಡುವ ಹು-ಧಾ ಪೊಲೀಸರು, ಕೆಲವು ರೌಡಿಗಳನ್ನು ಠಾಣೆಗೆ ಕರೆಸಿ ಸಾಲಾಗಿ ನಿಲ್ಲಿಸುತ್ತಾರೆ. ಅವರ ಹೆಸರು, ವಿಳಾಸ ಬರೆದುಕೊಂಡು ಬೈದು ಕಳುಹಿಸುತ್ತಾರೆ. ಮತ್ತೆ ಅವರ ಭೇಟಿ ಆಗುವುದು ನಂತರದ ಪರೇಡ್‌ನಲ್ಲೇ. ಈ ನಡುವೆ ಆ ರೌಡಿಗಳು ಏನು ಮಾಡುತ್ತಿದ್ದಾರೆ? ಯಾರೊಂದಿಗೆ ಒಡನಾಟ ಹೊಂದಿದ್ದಾರೆ ? ಎಂಬಿತ್ಯಾದಿ ಸೂಕ್ಷ್ಮ ವಿಚಾರಗಳನ್ನು ಭೇದಿಸಲು ಪೊಲೀಸರು ಆಸಕ್ತಿ ತೋರುತ್ತಿಲ್ಲ.

    ಕೆಲ ಸಂದರ್ಭದಲ್ಲಿ ರೌಡಿಗಳ ಮನೆಗಳ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸುವ ಪೊಲೀಸರು, ಅಲ್ಲೊಬ್ಬ- ಇಲ್ಲೊಬ್ಬ ರೌಡಿಗಳ ಮನೆಯಲ್ಲಿ ಸಿಕ್ಕ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ನಂತರ ಅವರೂ ಸುಲಭವಾಗಿ ಜಾಮೀನು ಪಡೆದು ಹೊರಬರುತ್ತಾರೆ. ಹೀಗೆ ಪೊಲೀಸ್ ಠಾಣೆಗೆ, ಜೈಲಿಗೆ ಹೋಗುವುದು ಎಂದರೆ ದೊಡ್ಡ ವಿಷಯವೇನಲ್ಲ ಎನ್ನುವಂತಾಗಿದೆ.

    ಸಿಎಂ ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಅಂದಿನ ಹು-ಧಾ ಪೊಲೀಸ್ ಆಯುಕ್ತ ದಿಲೀಪ ಅವರಿಗೆ ಖಡಕ್ ಸೂಚನೆ ನೀಡಿದ್ದರು. ‘ಎಸಿ ಕಚೇರಿಯಲ್ಲಿ ಕುಳಿತುಕೊಳ್ಳದೆ ಎಲ್ಲ ಠಾಣೆಗಳಿಗೆ ಓಡಾಡಬೇಕು. ರೌಡಿಗಳ ಮೇಲೆ ನಿಗಾ ಇಡಬೇಕು’ ಎಂದು ಸೂಚಿಸಿದ್ದರು. ಅದಾದ ಬಳಿಕ ಕೆಲಕಾಲ ಖಾಕಿಪಡೆ ಚುರುಕಾಗಿತ್ತು. ನಂತರ ಮತ್ತದೇ ಆಟ ಶುರುವಾಗಿದೆ. ಈಗ ಖಾಕಿಪಡೆ ಮತ್ತೆ ಮೈಕೊಡವಿ ಮೇಲೇಳಬೇಕಿದೆ. ರೌಡಿಗಳು, ಅಪರಾಧ ಕೃತ್ಯ ಎಸಗುವವರಲ್ಲಿ ನಡುಕ ಉಂಟುಮಾಡಬೇಕಿದೆ. ರಾತ್ರಿ ಗಸ್ತು ಹೆಚ್ಚಿಸಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

    ಕೇವಲ ಮೂವರಿಂದ ಬಾಂಡ್ ರಿಕವರಿ
    ಈ ಹಿಂದೆ ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿದ್ದ ಕೆ.ರಾಮರಾಜನ್ ನಿರಂತರವಾಗಿ ರೌಡಿ ಪರೇಡ್ ಮಾಡಿ, ಸುಮಾರು 700 ರೌಡಿಗಳಿಂದ ಲಕ್ಷ ರೂ. ಬಾಂಡ್ ಬರೆಸಿಕೊಂಡಿದ್ದರು. ‘ಯಾವುದಾದರೂ ಅಕ್ರಮ ಚಟುವಟಿಕೆ, ಅಪರಾಧ ಕೃತ್ಯದಲ್ಲಿ ಭಾಗಿಯಾದರೆ, ಈ ಬಾಂಡ್‌ನಲ್ಲಿ ನಮೂದಿಸಲಾದ ಲಕ್ಷ ರೂ. ವಸೂಲಿ ಮಾಡಬಹುದು’ ಎಂದು ಬಾಂಡ್‌ನಲ್ಲಿ ಬರೆಸಿಕೊಂಡಿದ್ದರು. ಒಂದು ವರ್ಷದಲ್ಲಿ 10 ಕೊಲೆಗಳು, ನೂರಾರು ಅಪರಾಧ ಕೃತ್ಯಗಳು ನಡೆದಿದ್ದರೂ ಕಮಿಷನರೇಟ್ ಈವರೆಗೆ ಕೇವಲ ಮೂವರಿಂದ ಬಾಂಡ್ ರಿಕವರಿ ಮಾಡಿದೆ. ಅಂದರೆ ಮೂವರು ರೌಡಿಗಳಿಂದ ತಲಾ 10 ಸಾವಿರ ರೂ.ನಂತೆ ಒಟ್ಟು ಮೂವತ್ತು ಸಾವಿರ ರೂ. ವಶಪಡಿಸಿಕೊಂಡಿದ್ದಾಗಿ ಡಿಸಿಪಿ ಸಾಹಿಲ್ ಬಾಗ್ಲಾ ತಿಳಿಸಿದ್ದಾರೆ.

    ಗಾಂಜಾ ಅಮಲು
    ಬಹುತೇಕ ಅಪರಾಧಿಕ ಕೃತ್ಯಗಳಿಗೆ ಗಾಂಜಾ ನಶೆ ಕಾರಣ ಎನ್ನಲಾಗಿದೆ. ಆದರೆ, ಇಂತಹ ಅಂಶಗಳನ್ನು ಖಾಕಿ ಪಡೆ ಹಲವು ಸಲ ಮುಚ್ಚಿ ಇಡುತ್ತಿದೆ. ಸಾರ್ವಜನಿಕರಿಂದ ಅಂತರ ಕಾಯ್ದುಕೊಳ್ಳುತ್ತಿದೆ. ಗಲ್ಲಿ ಗಲ್ಲಿಗಳಲ್ಲಿ ಗಾಂಜಾ ಸಿಗುತ್ತಿದೆ. ಮದ್ಯ, ಗಾಂಜಾ ನಶೆಯಲ್ಲಿ ಹೀನ ಕೃತ್ಯಗಳು ನಡೆಯುತ್ತಿವೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಿದರೆ ಅಪರಾಧ ಕೃತ್ಯಗಳನ್ನು ತಡೆಗಟ್ಟಬಹುದು. ಆದರೆ, ಪೊಲೀಸರು ಕೇವಲ ವಿಐಪಿ ಭದ್ರತೆಯಲ್ಲಿ, ಅಮಾಯಕ ವಾಹನ ಚಾಲಕರಿಂದ ದಂಡ ವಸೂಲಿ ಮಾಡುವುದರಲ್ಲಿ ಮಾತ್ರ ಬಿಸಿಯಾಗಿದ್ದಾರೆ ಎಂಬುದು ಸಾರ್ವಜನಿಕರ ಆಕ್ರೋಶ.

    ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ಪ್ರಧಾನಿ ನಿವಾಸಕ್ಕೆ ಬೆಂಕಿಯಿಟ್ಟ ಪ್ರತಿಭಟನಾಕಾರರು, ಅಧ್ಯಕ್ಷರ ರಾಜೀನಾಮೆಗೆ ದಿನ ಫಿಕ್ಸ್​

    ಕೊಡಗಿನಲ್ಲಿ ಮತ್ತೆ ಕಂಪಿಸಿದ ಭೂಮಿ: ಭಾರೀ ಶಬ್ದ ಕೇಳಿ ಮನೆಯಿಂದ ಹೊರಗಡೆ ಓಡಿ ಬಂದ ಜನ

    ಹಿಂಸೆಯ ನೆರಳಲ್ಲಿ ಹೆಣ್ಣುಮಕ್ಕಳು: ಉಗ್ರಜಾಲ ಭಾಗ-2

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts