More

    ಅಗ್ನಿಪಥದ ಅಗ್ನಿಕುಂಡದಲ್ಲಿ ಭಾರತ: ಬಿಹಾರದ ಡಿಸಿಎಂ ಮನೆ ಮೇಲೆ ದಾಳಿ, ಧಗಧಗನೇ ಹೊತ್ತಿ ಉರಿದ ರೈಲುಗಳು

    ಪಟನಾ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಅಗ್ನಿಪಥ’ ಯೋಜನೆಯನ್ನು ವಿರೋಧಿಸಿ ಬಿಹಾರದಲ್ಲಿ ಸೇನಾ ಆಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆ ತೀವ್ರ ಹಿಂಸೆಗೆ ತಿರುಗಿದೆ. ಪ್ರತಿಭಟನೆಯ ಮೂರನೇ ದಿನವಾದ ಇಂದು ಸೇನಾ ಆಕಾಂಕ್ಷಿಗಳು ರೈಲಿಗೆ ಬೆಂಕಿ ಹಂಚ್ಚಿ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟು ಮಾಡಿದ್ದಾರೆ. ಅಲ್ಲದೆ, ಬಿಹಾರದ ಉಪಮುಖ್ಯಮಂತ್ರಿ ರೇಣು ದೇವಿ ಅವರ ಮನೆ ಮೇಲೆ ದಾಳಿ ಮಾಡಿದ್ದಾರೆ.

    ಭಾರತ ಅಕ್ಷರಶಃ ಅಗ್ನಿಪಥದ ಅಗ್ನಿಕುಂಡದಲ್ಲಿ ಬೇಯುತ್ತಿದೆ. ಹೊಸ ಸೇನಾ ನೇಮಕಾತಿ ನೀತಿ ವಿರೋಧಿಸಿ ಸೇನಾ ಆಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆ ಹಲವು ರಾಜ್ಯಗಳಿಗೆ ವ್ಯಾಪಿಸಿದೆ. ಉದ್ರಿಕ್ತ ಗುಂಪೊಂದು ಇಂದು ಬೆಳಗ್ಗೆ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ರೈಲುಗಳಿಗೆ ಬೆಂಕಿ ಹಚ್ಚಿದ್ದಾರೆ.

    ತೀವ್ರ ಪ್ರತಿಭಟನೆಯ ನಡುವೆ ಅಗ್ನಿಪಥ ಯೋಜನೆಯ ವಯೋಮಿತಿಯನ್ನು 21 ರಿಂದ 23ಕ್ಕೆ ಏರಿಸಲಾಗಿದ್ದರೂ, ಪ್ರತಿಭಟನೆಯ ಕಾವು ಮಾತ್ರ ತಣ್ಣಗಾಗಿಲ್ಲ. ಇಂದು ಬೆಳಗ್ಗೆ ಪೂರ್ವ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಪ್ರತಿಭಟನಾಕಾರರು ರೈಲಿಗೆ ಬೆಂಕಿ ಹಚ್ಚಿದ್ದು, ಧಗಧಗನೇ ಉರಿಯುತ್ತಿದ್ದ ರೈಲಿನ ಬೋಗಿಗಳನ್ನು ಬಿಟ್ಟು ಬೆಂಕಿ ತಗುಲದ ಬೋಗಿಗಳನ್ನು ನೂರಾರು ಪೊಲೀಸರು ಮತ್ತು ರೈಲ್ವೇ ಪಡೆ ಸಿಬ್ಬಂದಿ ದೂರ ತಳ್ಳಿದರು. ರೈಲಿಗೆ ಬೆಂಕಿ ಹಚ್ಚುವ ಮೊದಲು ಜನಸಮೂಹವು ರೈಲ್ವೆ ನಿಲ್ದಾಣದ ಆಸ್ತಿಯನ್ನು ಹಾನಿಗೊಳಿಸಿತು. ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಬಲಪ್ರಯೋಗ ಮಾಡಬೇಕಾಯಿತು.

    ಬಿಹಾರದ ಬೆಟ್ಟೈಯಾದಲ್ಲಿ ನೆಲೆಸಿರುವ ಬಿಹಾರದ ಉಪಮುಖ್ಯಮಂತ್ರಿ ರೇಣು ದೇವಿ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆಸುವ ಮೂಲಕ ಪ್ರತಿಭಟನಾಕಾರರು ದಾಳಿ ನಡೆಸಿದರು. ಮನೆಗೆ ಸಾಕಷ್ಟು ಹಾನಿಯಾಗಿದೆ ಎಂದು ರೇಣು ದೇವಿ ಅವರು ಹೇಳಿದ್ದಾರೆ. ದಾಳಿಗೆ ಸಂಬಂಧಿಸಿದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಬಿಹಾರದ ಆರಾದಿಂದ ಹರಿಯಾಣದ ಪಲ್ವಾಲ್‌ವರೆಗೆ, ಉತ್ತರ ಪ್ರದೇಶದ ಆಗ್ರಾದಿಂದ ಗ್ವಾಲಿಯರ್ ಮತ್ತು ಮಧ್ಯಪ್ರದೇಶದ ಬಿಜೆಪಿ ಆಡಳಿತದ ಇಂದೋರ್‌ವರೆಗೆ, ನೂರಾರು ಯುವ ಸೇನಾ ಆಕಾಂಕ್ಷಿಗಳು ಬೀದಿಗಿಳಿದು ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಹಾನಿ ಉಂಟು ಮಾಡುವ ಮೂಲಕ ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಗ್ನಿಪಥ ಯೋಜನೆಯನ್ನು ಹಿಂಪಡೆಯುವಂತೆ ಒತ್ತಾಯ ಮಾಡುತ್ತಿದ್ದಾರೆ.

    ಮೋದಿ ನೇತೃತ್ವದ ಆರ್ಥಿಕ ವ್ಯವಹಾರ ಕುರಿತ ಸಂಪುಟ ಉಪಸಮಿತಿ ಅಗ್ನಿಪಥ ಯೋಜನೆಗೆ ಅನುಮೋದನೆ ನೀಡಿದೆ. ಈ ಸಂಗತಿಯನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ. ಹದಿನೇಳೂವರೆ ವರ್ಷದಿಂದ 21 ವರ್ಷದೊಳಗಿನ 46 ಸಾವಿರ ಜನರನ್ನು 4 ವರ್ಷಗಳ ಅಲ್ಪಾವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ನಾಲ್ಕು ವರ್ಷದಲ್ಲಿ ಆರು ತಿಂಗಳ ತರಬೇತಿ ಅವಧಿಯೂ ಸೇರಿದೆ. ನೇಮಕಾತಿ ಪ್ರಕ್ರಿಯು ಇಂದಿನಿಂದ ಮೂರು ತಿಂಗಳಲ್ಲಿ ಮುಗಿಯಲಿದ್ದು, 2023ರ ಜುಲೈನಲ್ಲಿ ಮೊದಲ ಬ್ಯಾಚ್ ಸೇವೆಗೆ ಸಿದ್ಧವಾಗಲಿದೆ ಎಂದು ಸಿಂಗ್ ಹೇಳಿದರು. ಅರ್ಹತೆ ಆಧಾರದಲ್ಲಿ ಪ್ರತಿ ಬ್ಯಾಚ್​ನಲ್ಲಿ ಶೇ.25ರಷ್ಟು ಯೋಧರಿಗೆ ಸೇನೆಯಲ್ಲಿ ಮುಂದುವರಿಯಲು ಅವಕಾಶ ದೊರೆಯಲಿದೆ ಮತ್ತು ಇಂಥವರು ಅಧಿಕಾರೇತರ ಶ್ರೇಣಿಯಲ್ಲಿ 15 ವರ್ಷ ಸೇವೆ ಸಲ್ಲಿಸಬಹುದು ಎಂದರು. ಆದರೆ, ಪಿಂಚಣಿಯಾಗಲಿ ಅಥವಾ ಗ್ರಾಚ್ಯುಟಿ ಹಣವನ್ನು ಸರ್ಕಾರ ನೀಡುವುದಿಲ್ಲ.

    ಈ ನೇಮಕಾತಿಯಿಂದ ಸೇನೆಯ ವಾರ್ಷಿಕ ವೆಚ್ಚದಲ್ಲಿ ದೊಡ್ಡ ಉಳಿತಾಯ ಆಗಲಿದೆ. ಸೇನೆಗೆ ಸರ್ಕಾರ ನೀಡುವ ಬಜೆಟ್​ನಲ್ಲಿ ಅರ್ಧದಷ್ಟು ಭಾಗ ವೇತನ ಮತ್ತು ಪಿಂಚಣಿಗೆ ಖರ್ಚಾಗುತ್ತದೆ. ‘ಅಗ್ನಿಪಥ’ ಯೋಜನೆಯಿಂದ ದೊಡ್ಡ ಮಟ್ಟದ ಉಳಿತಾಯ ಸಾಧ್ಯವಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಆದರೆ, ಈ ಯೋಜನೆಯು ಬಿಹಾರದ ಸೇನಾ ಆಕಾಂಕ್ಷಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಯೋಜನೆ ಕೈಬಿಡಬೇಕೆಂದು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ನಡುವೆ ಕೇಂದ್ರ ವಯೋಮಿತಿಯನ್ನು 21 ರಿಂದ 23ಕ್ಕೆ ಏರಿಸಿದೆ. ಆದರೂ ಪ್ರತಿಭಟನಾಕಾರರ ಮನಸ್ಸಿಗೆ ಇದು ಇಷ್ಟವಿಲ್ಲ. ಸಂಪೂರ್ಣ ಯೋಜನೆಯನ್ನೇ ಕೈಬಿಡುವಂತೆ ಆಗ್ರಹಿಸುತ್ತಿದ್ದಾರೆ. (ಏಜೆನ್ಸೀಸ್​)

    ಅಗ್ನಿಪಥಕ್ಕೆ ಅಗ್ನಿಪರೀಕ್ಷೆ; ಯೋಜನೆ ಕುರಿತ ಅನುಮಾನಕ್ಕೆ ಸ್ಪಷ್ಟನೆ ನೀಡಿದ ಕೇಂದ್ರ

    ಅಗ್ನಿಪಥ ಯೋಜನೆಗೆ ಯುವಕರ ಆಕ್ರೋಶ: ಬಿಹಾರದ ಬಳಿಕ ವಿವಿಧ ರಾಜ್ಯಗಳಿಗೂ ಹಬ್ಬಿದ ಪ್ರತಿಭಟನೆಯ ಕಾವು

    ಐಸಿಸ್​ಗೆ ಯುವತಿಯರ ಮಾರಾಟ! ಕೇರಳದಿಂದ ಗಲ್ಪ್ ಮೂಲಕ ಸಿರಿಯಾಕ್ಕೆ ರವಾನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts