More

    ಅಗ್ನಿಪಥಕ್ಕೆ ಅಗ್ನಿಪರೀಕ್ಷೆ; ಯೋಜನೆ ಕುರಿತ ಅನುಮಾನಕ್ಕೆ ಸ್ಪಷ್ಟನೆ ನೀಡಿದ ಕೇಂದ್ರ

    ನವದೆಹಲಿ/ಪಟನಾ: ಮೂರೂ ಸಶಸ್ತ್ರ ಪಡೆಗಳಿಗೆ ನೇಮಕಾತಿಯ ಹೊಸ ಯೋಜನೆಯಾದ ‘ಅಗ್ನಿಪಥ’ಕ್ಕೆ ವ್ಯಕ್ತವಾಗುತ್ತಿರುವ ವಿರೋಧ ಹಲವು ರಾಜ್ಯಗಳಿಗೆ ಹಬ್ಬುತ್ತಿದ್ದು, ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಹೊಸ ನೇಮಕಾತಿ ವ್ಯವಸ್ಥೆಯನ್ನು ರದ್ದುಪಡಿಸುವಂತೆ ಉದ್ರಿಕ್ತ ಜನರು ರಸ್ತೆ ತಡೆ, ರೈಲು ತಡೆ, ಬೆಂಕಿ ಹಚ್ಚುವುದು ಮೊದಲಾದ ಕೃತ್ಯಗಳಿಗೆ ಇಳಿದಿದ್ದಾರೆ. ಬಹುತೇಕ ಪ್ರತಿಭಟನೆಗಳು ರೈಲ್ವೆಯನ್ನು ಗುರಿಯಾಗಿಸಿಕೊಂಡಿರುವುದರಿಂದ ಸಾವಿರಾರು ಪ್ರಯಾಣಿಕರು ತೊಂದರೆಗೆ ಸಿಲುಕಿದ್ದಾರೆ. ಈ ನಡುವೆ, ಈ ಯೋಜನೆ ಬಗೆಗಿನ ಅನುಮಾನಗಳಿಗೆ ಸರ್ಕಾರ ಸ್ಪಷ್ಟನೆ ನೀಡಿದೆ.

    ಬಿಹಾರದಲ್ಲಿ ಭಬುವಾ ರೋಡ್ ರೈಲು ನಿಲ್ದಾಣ, ಕೈಮುರ್ ಮತ್ತು ಚಾಪ್ರಾಗಳಲ್ಲಿ ರೈಲುಗಳಿಗೆ ಬೆಂಕಿ ಹಚ್ಚಲಾಗಿದೆ. ಬಸ್​ಗಳು ಮತ್ತು ರೈಲುಗಳ ಕಿಟಕಿ ಗಾಜುಗಳನ್ನು ಒಡೆಯಲಾಗಿದೆ. ನವಾಡಾದಲ್ಲಿ ಬಿಜೆಪಿ ಶಾಸಕಿ ಅರುಣಾದೇವಿ ಹಾಗೂ ಇತರ ಹಲವರ ಮೇಲೆ ದಾಳಿ ಮಾಡಲಾಗಿದ್ದು ಶಾಸಕಿ ಸಹಿತ ಐವರು ಗಾಯಗೊಂಡಿದ್ದಾರೆ. ನ್ಯಾಯಾಲಯಕ್ಕೆ ತೆರಳುತ್ತಿದ್ದ ಅರುಣಾದೇವಿ ಕಾರಿನ ಮೇಲೆ ದುಷ್ಕರ್ವಿುಗಳು ಕಲ್ಲುಗಳನ್ನು ಎಸೆದು ಹಾನಿ ಮಾಡಿದ್ದಾರೆ. ಅರಾಹ್​ನಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದ ಪ್ರತಿಭಟನೆಕಾರರು ಪೊಲೀಸರ ಮೇಲೆ ಕಲ್ಲು ತೂರಿದ್ದಲ್ಲದೆ ರೈಲು ನಿಲ್ದಾಣದಲ್ಲಿನ ಪೀಠೋಪಕರಣಗಳನ್ನು ಜಖಂಗೊಳಿಸಿದ್ದಾರೆ.

    ರೆಜಿಮೆಂಟಲ್ ವ್ಯವಸ್ಥೆ ಬದಲಿಲ್ಲ: ಅಗ್ನಿಪಥ ಯೋಜನೆ ವಿರುದ್ಧ ಪ್ರತಿಭಟನೆಯ ಕಾವು ಏರುತ್ತಿರುವಂತೆ, ಸೇನೆಯ ರೆಜಿಮೆಂಟಲ್ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗುತ್ತಿಲ್ಲ ಎಂದು ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ. ಸಶಸ್ತ್ರ ಪಡೆಗಳಲ್ಲಿ ಯುವಜನರ ಅವಕಾಶಗಳನ್ನು ಹೆಚ್ಚಿಸುವುದು ಯೋಜನೆಯ ಉದ್ದೇಶ ವಾಗಿದೆ. ಈಗಿರುವುದಕ್ಕಿಂತ ಮೂರು ಪಟ್ಟು ಹೆಚ್ಚು ಜನರನ್ನು ನೇಮಿಸಿಕೊಳ್ಳಲಾಗುತ್ತದೆ ಎಂದು ಹೇಳಿರುವ ಮೂಲಗಳು, ಸೇವಾವಧಿಯ ಬಗ್ಗೆ ಯಾವುದೇ ವಿವರಣೆ ನೀಡಿಲ್ಲ.

    ಎಲ್ಲೆಲ್ಲಿ ಪ್ರತಿಭಟನೆ?

    ಬಿಹಾರ, ಹರಿಯಾಣ, ಜಮ್ಮು, ಜಾರ್ಖಂಡ್, ಮಧ್ಯಪ್ರವೇಶ, ಉತ್ತರಪ್ರದೇಶ, ರಾಜಸ್ಥಾನ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್​ಗಳನ್ನು ಸಿಡಿಸಿದ್ದಾರೆ.

    ಬಿಹಾರದ ಜೆಹನಾಬಾದ್​ನಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರು ಪರಸ್ಪರರ ಮೇಲೆ ಕಲ್ಲು ತೂರುತ್ತಿರುವ ವಿಡಿಯೋ ದೃಶ್ಯಗಳು ವೈರಲ್ ಆಗಿವೆ. ಉದ್ರಿಕ್ತರ ಗುಂಪು ಬಿಜೆಪಿ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದೆ. 22 ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ ಹಾಗೂ ಐದು ರೈಲುಗಳ ಸಂಚಾರವನ್ನು ಮಧ್ಯದಲ್ಲೇ ನಿಲ್ಲಿಸಲಾಗಿದೆ ಎಂದು ಪೂರ್ವ ಮಧ್ಯ ರೈಲ್ವೆ ತಿಳಿಸಿದೆ. ನವಾಡಾದಲ್ಲಿ ಯುವಜನರ ಗುಂಪು ರಸ್ತೆಗಳ ಮೇಲೆ ಟೈರ್​ಗಳನ್ನು ಸುಟ್ಟು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಉತ್ತರಪ್ರದೇಶಕ್ಕೂ ಪ್ರತಿಭಟನೆಯ ಕಾವು ಹರಡಿದೆ.

    ಸಮತೋಲನ: ಅಗ್ನಿಪಥ ಯೋಜನೆಯ ಪರಿಣಾಮವಾಗಿ 12 ಲಕ್ಷದಷ್ಟಿರುವ ಯೋಧರ ಸಂಖ್ಯೆಯಲ್ಲಿ 2032ರ ಹೊತ್ತಿಗೆ ‘ಅಗ್ನಿವೀರರ’ ಸೇರ್ಪಡೆಯಿಂದಾಗಿ ಶೇಕಡ 50ರಷ್ಟು ಹೆಚ್ಚಾಗಲಿದೆ ಎಂದು ಭೂಸೇನೆಯ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು ಹೇಳಿದ್ದಾರೆ. ಭವಿಷ್ಯದ ಯುದ್ಧಗಳಲ್ಲಿ ಕಾದಾಡಲು ಯುವಜನರು ಮತ್ತು ಅನುಭವಿಗಳ ಹದವಾದ ಮಿಶ್ರಣಕ್ಕೆ ಇದು ನೆರವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

    ಹಳಿಗಳ ಮೇಲೆ ಬಸ್ಕಿ: ಹಲವೆಡೆ ಯುವಜನರು ಪ್ರತಿಭಟನೆಯ ಹೊಸ ವಿಧಾನವಾಗಿ ರೈಲು ಹಳಿಗಳ ಮೇಲೆ ಬಸ್ಕಿ ಹೊಡೆಯುತ್ತಿದ್ದ ದೃಶ್ಯಗಳೂ ಕಂಡುಬಂದವು.

    ‘ಅಗ್ನಿಪರೀಕ್ಷೆ’ ಬೇಡ: ಅಗ್ನಿಪಥದ ಮೇಲೆ ನಡೆಯುವಂತೆ ಮಾಡಿ ನಿರುದ್ಯೋಗಿ ಯುವಜನರ ‘ಅಗ್ನಿಪರೀಕ್ಷೆ’ ಮಾಡದಿರಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಯವರನ್ನು ಆಗ್ರಹಿಸಿದ್ದಾರೆ. ‘ಯುವಜನರ ಕನಸನ್ನು ನುಚ್ಚುನೂರು ಮಾಡಬೇಡಿ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

    ದಕ್ಷತೆ ಇಳಿಕೆ?: ನಾಲ್ಕು ವರ್ಷಗಳ ಅವಧಿಗೆ ಒಪ್ಪಂದದ ಮೇರೆಗೆ ಸೈನಿಕರನ್ನು ನೇಮಕ ಮಾಡಿಕೊಳ್ಳುವುದರಿಂದ ವೃತ್ತಿಪರ ಸಶಸ್ತ್ರ ಪಡೆಗಳನ್ನು ಕಟ್ಟಲಾಗುವುದಿಲ್ಲ. ಪಿಂಚಣಿ ಹಣವನ್ನು ಉಳಿಸಲು ಹೋದರೆ ಸಶಸ್ತ್ರ ಪಡೆಗಳ ಗುಣಮಟ್ಟ ಮತ್ತು ದಕ್ಷತೆ ತೀವ್ರವಾಗಿ ಇಳಿಯುತ್ತದೆ ಎಂದು ಸಿಪಿಎಂ ಪಾಲಿಟ್​ಬ್ಯೂರೋ ಹೇಳಿದೆ.

    ಏನಿದು ಹೊಸ ಯೋಜನೆ? 17.5ರಿಂದ 21 ವರ್ಷದ 46,000 ಯುವಕರನ್ನು ನಾಲ್ಕು ವರ್ಷ ಅವಧಿಗೆ ‘ಅಗ್ನಿವೀರರು’ ಎಂಬ ಹೆಸರಿನೊಂದಿಗೆ ಸೇನೆಯ ಮೂರೂ ವಿಭಾಗಗಳಿಗೆ ನೇಮಿಸಿಕೊಳ್ಳುವುದು ‘ಅಗ್ನಿಪಥ’ ಯೋಜನೆಯ ತಿರುಳು. ಇವರಲ್ಲಿ ಶೇಕಡ 25ರಷ್ಟು ಮಂದಿಯನ್ನು ಸೇನಾಪಡೆಗಳ ಪೂರ್ಣಾವಧಿ ಸೇವೆಗೆ ಬಳಸಿಕೊಳ್ಳಲಾಗುತ್ತದೆ. ಇನ್ನುಳಿದವರು ನಾಲ್ಕು ವರ್ಷದ ನಂತರ ನಿವೃತ್ತರಾಗಲಿದ್ದಾರೆ. ಆದರೆ, ಅವರಿಗೆ ಯಾವುದೇ ನಿವೃತ್ತಿ ಸೌಲಭ್ಯಗಳು ಸಿಗುವುದಿಲ್ಲ. ಅವರು ಬೇರೆ ಉದ್ಯೋಗ ಹುಡುಕಿಕೊಳ್ಳಬೇಕು. ವೇತನ ಮತ್ತು ಪಿಂಚಣಿಗಾಗಿ ದೊಡ್ಡ ಪ್ರಮಾಣದಲ್ಲಿ ಹಣ ವೆಚ್ಚವಾಗುವುದನ್ನು ತಡೆದು ಸರ್ಕಾರಿ ಬೊಕ್ಕಸಕ್ಕೆ ಉಳಿತಾಯ ಮಾಡುವುದು ಸರ್ಕಾರದ ಉದ್ದೇಶವಾಗಿದೆ.

    ಕ್ರಿಕೆಟ್ ಪ್ರಿಯರಿಗೆ ಬಂಪರ್ ಆಫರ್​ ನೀಡಿದ ‘ನಮ್ಮ ಮೆಟ್ರೋ’; ಆದ್ರೆ ಈ ನಿಯಮ ಕಡ್ಡಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts