ಚಿಕ್ಕಮಗಳೂರು: ಎಷ್ಟೇ ಪ್ರಯತ್ನಿಸಿದ್ರೂ ಹನಿಟ್ರ್ಯಾಪ್​ಗೆ ಬೀಳದ ಕಾಡಾನೆಯನ್ನು ಅರಣ್ಯಾಧಿಕಾರಿಗಳು ಖೆಡ್ಡಾಗೆ ಕೆಡವಿದ್ಹೇಗೆ?

Elephant
Published on

ಜಯಪುರ: ಮೇಗುಂದಾ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೂರ್ನಾಲ್ಕು ತಿಂಗಳಿನಿಂದ ದಾಂಧಲೆ ನಡೆಸಿದ್ದ ಕಾಡಾನೆ ಹಾವೇರಿ ಟಸ್ಕರ್​ ಅರಣ್ಯ ಇಲಾಖೆಯ ಕೆಡ್ಡಾಗೆ ಗುರುವಾರ ಬಿದ್ದಿದೆ.

ಹೋಬಳಿಯ ಅಲ್ಲಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆ ಹಾವೇರಿ ಟಸ್ಕರ್​ ಒಂದು ತಿಂಗಳಿನಿಂದ ಹೇರೂರು ಸಮೀಪದ ಎಲೆಮಡಿಲು ಬಾಲನೂರ್​ ಟೀ ಪ್ಲಾಂಟೇಷನ್​ನಲ್ಲಿ ಸೇರಿಕೊಂಡು ಸುತ್ತಮುತ್ತಲಿನ ಎಸ್ಟೇಟ್​ಗಳು ಹಾಗೂ ತೋಟಗಳಿಗೆ ನುಗ್ಗಿ ಅಡಕೆ, ತೆಂಗು, ಬಾಳೆ ಇನ್ನಿತರ ಬೆಳೆಗಳನ್ನು ತಿಂದು, ತುಳಿದು ಹಾಳು ಮಾಡುತ್ತಿತ್ತು.

ಕಾಡಾನೆಯ ಹಾವಳಿಯಿಂದ ಬೇಸತ್ತ ಜನ ಆನೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಹಾಗೂ ಸರ್ಕಾರದ ಮೇಲೆ ಒತ್ತಡ ತಂದಿದ್ದರು. ಅದರಂತೆ ಆ.15ರಂದು ಹಾವೇರಿ ಟಸ್ಕರ್​ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಶುರುವಾಗಿತ್ತು. ಸಕ್ಕರೆ ಬೈಲಿನ ಆನೆ ಬಿಡಾರದಿಂದ 5 ಸಾಕಾನೆಗಳನ್ನು ಕರೆಸಿ ಭಾನುಮತಿ ಎಂಬ ಹೆಣ್ಣಾನೆ ಮೂಲಕ ಹನಿಟ್ರಾಪ್​ ಮಾಡಿ, ಬಾಬಣ್ಣ, ಸೋಮಣ್ಣ, ಬಹದ್ದೂರ್​ ಹಾಗೂ ಸಾಗರ್​ ಎಂಬ ಗಂಡಾನೆಗಳ ಮೂಲಕ ಸೆರೆಹಿಡಿಯಲು ಯೋಜಿಸಲಾಯಿತು.

ಡಿಎಫ್​ಒ ನೀಲೇಶ್​ ಶಿಂಧೆ ಹಾಗೂ ಎಸಿಎಫ್​ ಮಂಜುನಾಥ್​, ಆರ್​ಎಫ್​ಒ ಪ್ರವಿಣ್​ಕುಮಾರ್​, 11 ಮಾವುತರು ಹಾಗೂ ಇಬ್ಬರು ಪಶು ವೈದ್ಯರು, 5 ಸಾಕಾನೆಗಳು, ಡಿಆರ್​ಎಫ್​ಒ, ಅರಣ್ಯ ರಕ್ಷಕರು, ವಾಚರ್​ಗಳು ಒಳಗೊಂಡ 30ಕ್ಕೂ ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿ ತಂಡ ಕಾಡಾನೆ ಹಿಡಿಯಲು ದಿನವಡೀ ಪ್ರಯತ್ನ ಪಟ್ಟ ಕಾರಣ ಚಾಣಾಕ್ಷ ಹಾವೇರಿ ಟಸ್ಕರ್​ ಸೆರೆಯಾಗಿದೆ.

ಕಾರ್ಯಾಚರಣೆ ಪ್ರಾರಂಭದ ಭಾನುವಾರ ಟೀ ಎಸ್ಟೇಟಿನ ಮುತ್ತು ಮಾರಿಯಮ್ಮ ದೇವಾಲಯದ ಬಳಿ ಹೆಣ್ಣಾನೆ ಭಾನುಮತಿಯನ್ನು ಬಿಟ್ಟು ಕಾಡಾನೆ ಸೆರೆಗೆ ಯೋಜನೆ ಮಾಡಲಾಗಿತ್ತು. ರಾತ್ರಿ ಅಲ್ಲಿಗೆ ಬಂದ ಹಾವೇರಿ ಟಸ್ಕರ್​ ಮುಂಜಾನೆ 7.30ರ ವರೆಗೆ ಭಾನುಮತಿಯೊಂದಿಗೆ ಕಾಲ ಕಳೆದಿತ್ತು. ಸಮೀಪದಲ್ಲಿದ್ದ ಕೂಲಿ ಲೈನ್​ನಿಂದ ಟೀ ಎಸ್ಟೇಟಿನ ಕೆಲಸಕ್ಕೆ ಹೊರಟ ಕಾರ್ಮಿಕರು ಕೂಗಿಕೊಂಡ ಕಾರಣ ಕಾಡಾನೆ ಅಲ್ಲಿಂದ ಕಾಲ್ಕಿತ್ತಿತು.

ಸೋಮವಾರ ರಾತ್ರಿ ಮತ್ತೆ ಭಾನುಮತಿಯನ್ನು ದೇವಸ್ಥಾನದ ಬಳಿ ಇರಿಸಲಾಯಿತಾದರೂ ಅನುಮಾನಗೊಂಡ ಕಾಡಾನೆ ಹಾವೇರಿ ಟಸ್ಕರ್​ ಭಾನುಮತಿ ಬಳಿ ಬಾರದೆ ದೂರದಿಂದಲೇ ಗಮನಿಸಿ ವಾಪಸ್​ ತೆರಳಿತ್ತು. ನಂತರ ಜಾಗ ಬದಲಿಸಿ ಅದೇ ಎಸ್ಟೇಟಿನ ಕಾಫಿ ಬ್ಲಾಕಿನ ಫೈರ್​ ರೋಡ್​ ಜಂಕ್ಷನ್​ ಬಳಿ ಮಂಗಳವಾರ ಹಾಗೂ ಬುಧವಾರ ಭಾನುಮತಿಯನ್ನು ಬಿಡಲಾಗಿತ್ತು. ಗುರುವಾರ ಮತ್ತೆ ಜಾಗ ಬದಲಿಸಿದ ಅರಣ್ಯ ಇಲಾಖೆ ಕಮಾನು ಮೋರಿ ಬಳಿಯ ಚಿಕ್ಕಮಗಳೂರು ಮತ್ತು ಶೃಂಗೇರಿ ರಾಜ್ಯ ಹೆದ್ದಾರಿಗೆ ಸಮೀಪದ ಬಿಟಿಎಫ್​ ಎಸ್ಟೇಟಿನ ಡ್ಯಾಂ ಬಳಿ ಹಾವೇರಿ ಟಸ್ಕರ್​ ಸೆರೆಗೆ ಯೋಜನೆ ರೂಪಿಸಲಾಯಿತು. ಅನುಮಾನಗೊಂಡ ಕಾಡಾನೆ ಅಲ್ಲಿಗೆ ಬರದೆ ಅರಣ್ಯ ಇಲಾಖೆಯ ಹನಿಟ್ರಾಪ್​ ಅನ್ನು ವಿಫಲಗೊಳಿಸಿತ್ತು.

ಕಾಡಾನೆ ಸೆರೆಗೆ ಒತ್ತಡ ಹೆಚ್ಚಾದ ಕಾರಣ ಕಾಡಾನೆ ಸೆರೆ ಹಿಡಿಯಲೇಬೇಕು ಎಂದು ಪಣತೊಟ್ಟ ತಂಡ ಬಿಟಿಎಫ್​ ಕಾಫಿ ಬ್ಲಾಕಿನಲ್ಲಿದ್ದ ಹಾವೇರಿ ಟಸ್ಕರ್​ ಅನ್ನು ಜಿಪಿಎಸ್​ ಟ್ರಾಕರ್​ನಲ್ಲಿ ಗುರುತಿಸಿತು. ಸ್ಥಳಕ್ಕೆ ತೆರಳಿದ ನಾಗರಹೊಳೆ ಅಭಯಾರಣ್ಯದ ಪಶು ವೈದ್ಯ ಡಾ. ರಮೇಶ್​ ಡಾರ್ಟ್​ ಗನ್​ ಮೂಲಕ ಅರಿವಳಿಕೆಯನ್ನು ಗುರುವಾರ ಮಧ್ಯಾಹ್ನ 3 ಗಂಟೆಗೆ ಹೊಡೆದರು. ಅರಿವಳಿಕೆ ಚುಚ್ಚಿದ ಕೂಡಲೆ ಗಾಬರಿಗೊಂಡು ಕಾಲ್ಕಿತ್ತ ಹಾವೇರಿ ಟಸ್ಕರ್​ ಸುಮಾರು 1 ಕಿಲೋ ಮೀಟರ್​ ದೂರ ಸಾಗಿ ಎಲೆಮಡಿಲು ಗ್ರಾಮದ ನಿಡುವಾನೆ ಭಾಸ್ಕರ ಗೌಡ ಎಂಬುವವರ ಕಾಫಿ ತೋಟದಲ್ಲಿ ನಿತ್ರಾಣಗೊಂಡು ಬಿದ್ದಿತು. ನಂತರ ಸಾಕಾನೆಗಳ ಮೂಲಕ ಎತ್ತಿ ಲಾರಿಯಲ್ಲಿ ಸಾಗಿಸಲಾಯಿತು.

ಒಂದು ಎಕರೆ ಕಾಫಿ ತೋಟ ನಾಶ ಹಾವೇರಿ ಟಸ್ಕರ್​ಗೆ ಅರಿವಳಿಕೆ ಚುಚ್ಚುಮದ್ದು ನೀಡಿದ್ದರಿಂದ ನಿಡುವಾನೆ ಭಾಸ್ಕರ್​ ಅವರ ಕಾಫಿ ತೋಟದಲ್ಲಿ ಬಿದ್ದಿತು. ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ 5 ಆನೆಗಳು ಓಡಾಡಿದ ಪರಿಣಾಮ ಒಂದು ಎಕರೆಗೂ ಹೆಚ್ಚು ಫಸಲಿನಿಂದ ತುಂಬಿದ ಕಾಫಿ ತೋಟ ಹಾಳಾಗಿದೆ. ಕಾಫಿ, ಸಿಲ್ವರ್​ ಹಾಗೂ ಕಾಳುಮೆಣಸು ಸಂಪೂರ್ಣ ನಾಶವಾಗಿದೆ.

ಕಾಡಾನೆಯನ್ನು ಕೊಳ್ಳೆಗಾಲದ ಅಭಯಾರಣ್ಯಕ್ಕೆ ಬಿಡಲಾಗುತ್ತದೆ. ಕಾರ್ಯಾಚರಣೆಯಿಂದ ಹಾನಿಯಾಗಿರುವ ರೈತರಿಗೆ ತುರ್ತು ಪರಿಹಾರವಾಗಿ 25 ಸಾವಿರ ರೂ.ವನ್ನು ಡಿಎಫ್​ಒ ಘೋಷಿಸಿದ್ದು, ಉಳಿದಂತೆ ಪೂರ್ಣಹಾನಿಯ ಮಹಜರು ನಡೆಸಿ ಪರಿಹಾರ ನೀಡುತ್ತೇವೆ. | ಮಂಜನಾಥ್​, ಎಸಿಎಫ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net