ಬೆಂಗಳೂರು: ಕೋವಿಡ್ ಪರೀಕ್ಷೆ ವ್ಯವಸ್ಥೆಯನ್ನು ಆರಂಭದಿಂದಲೂ ಸಮರ್ಥವಾಗಿ ಅನುಷ್ಠಾನ ಮಾಡಿದ್ದ ಕರ್ನಾಟಕ, ಇಂದಿಗೆ 6 ಕೋಟಿ ಪರೀಕ್ಷೆಯ ಮೈಲುಗಲ್ಲು ತಲುಪಿದೆ. ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಇದು ದೊಡ್ಡ ಯಶಸ್ಸು ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದರು.
ಕೋವಿಡ್ ಆರಂಭವಾದಾಗ ರಾಜ್ಯದಲ್ಲಿ ಎನ್‍ಐವಿ ಘಟಕದಲ್ಲಿ ಪರೀಕ್ಷೆ ನಡೆಸಲಾಗುತ್ತಿತ್ತು. ಆಗ ಖಚಿತತೆಗಾಗಿ ಪುಣೆಯ ಎನ್‍ಐವಿ ಘಟಕಕ್ಕೆ ಮಾದರಿಗಳನ್ನು ಕಳುಹಿಸಲಾಗುತ್ತಿತ್ತು. ನಂತರ ಹಂತಹಂತವಾಗಿ ಹೊಸ ಸರ್ಕಾರಿ ಹಾಗೂ ಖಾಸಗಿ ಪ್ರಯೋಗಾಲಯಗಳನ್ನು ಆರಂಭಿಸಲಾಯಿತು. ಸದ್ಯ ರಾಜ್ಯದಲ್ಲಿ 99 ಸರ್ಕಾರಿ ಹಾಗೂ 169 ಖಾಸಗಿ ಸೇರಿ ಒಟ್ಟು 268 ಲ್ಯಾಬ್ ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಈವರೆಗೆ 1,14,12,162 ರಾಪಿಡ್ ಆಂಟಿಜೆನ್, 4,87,02,653 ಆರ್ಟಿಪಿಸಿಆರ್ ಹಾಗೂ ಇತರೆ ವಿಧಾನಗಳು ಸೇರಿ ಒಟ್ಟು 6,01,14,815 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. 2020 ರಲ್ಲಿ ಒಟ್ಟು 1,41,96,065, 2021 ರಲ್ಲಿ 4,23,91,357 ಹಾಗೂ 2022 ರಲ್ಲಿ ಈವರೆಗೆ 35,27,393 ಪರೀಕ್ಷೆಗಳನ್ನು ನಡೆಸಲಾಗಿದೆ.
ಈ ಕುರಿತು ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, “ಕೋವಿಡ್ ಸಾಂಕ್ರಾಮಿಕವನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಉತ್ತಮ ಪರೀಕ್ಷಾ ವ್ಯವಸ್ಥೆ ಕೂಡ ಕಾರಣ. ಆರಂಭದಿಂದಲೂ ಕರ್ನಾಟಕ ಪರೀಕ್ಷಾ ವ್ಯವಸ್ಥೆಯಲ್ಲಿ ಮುಂದಿದ್ದು, ಉತ್ತಮ ಪರೀಕ್ಷೆ ಹಾಗೂ ಟ್ರ್ಯಾಕಿಂಗ್ ವಿಧಾನ ಅಳವಡಿಸಿಕೊಂಡಿದೆ. ಈಗ 6 ಕೋಟಿ ಪರೀಕ್ಷೆಗಳ ಮೂಲಕ ಕೋವಿಡ್ ಹೋರಾಟದಲ್ಲಿ ಮುಂಚೂಣಿಯಲ್ಲಿದೆ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ. ಹೆಚ್ಚು ಕೋವಿಡ್ ಪರೀಕ್ಷೆ ನಡೆಸಿದ ರಾಜ್ಯಗಳಲ್ಲಿ ರಾಜ್ಯವು ಇಡೀ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಇದನ್ನು ಸಾಧ್ಯವಾಗಿಸಿದ ಎಲ್ಲಾ ಜಿಲ್ಲಾಡಳಿತ ಹಾಗೂ ಆರೋಗ್ಯ ಸಿಬ್ಬಂದಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದು ತಿಳಿಸಿದರು.
ಸಾಮರ್ಥ್ಯ ಹೆಚ್ಚಳ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳು ಆರಂಭದಿಂದಲೇ 5 ಟಿ ವಿಧಾನ (ಟೆಸ್ಟ್, ಟ್ರ್ಯಾಕ್, ಟ್ರೇಸಿಂಗ್, ಟ್ರಯಾಜಿಂಗ್, ಟೆಕ್ನಾಲಜಿ) ಅನುಸರಿಸಿದ್ದವು. 20,000 ಜನಸಂಖ್ಯೆಗೆ ಅನುಗುಣವಾಗಿ, ಒಟ್ಟು 3,678 (ಸರ್ಕಾರಿ 3,102, ಖಾಸಗಿ 666) ಮಾದರಿ ಸಂಗ್ರಹ ಕೇಂದ್ರಗಳನ್ನು ಆರಂಭಿಸಲಾಯಿತು. ಜೊತೆಗೆ ಸರ್ಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜು, ಖಾಸಗಿ ಆಸ್ಪತ್ರೆ, ಲ್ಯಾಬ್ ಗಳಲ್ಲಿ ಆರ್ ಟಿಪಿಸಿಆರ್ ಪರೀಕ್ಷೆ ಆರಂಭಿಸಲಾಯಿತು. ಒಟ್ಟು 63 ವೈದ್ಯಕೀಯ ಕಾಲೇಜುಗಳಲ್ಲಿ ಆರ್ ಟಿಪಿಸಿಆರ್ ಪರೀಕ್ಷೆ ಆರಂಭವಾದವು. ಆರಂಭದಲ್ಲಿ 10-12 ಸರ್ಕಾರಿ ಸರ್ಕಾರಿ ಪ್ರಯೋಗಾಲಯಗಳಲ್ಲಿ ಮಾತ್ರ ಆರ್ ಟಿಪಿಸಿಆರ್ ಪರೀಕ್ಷಾ ವ್ಯವಸ್ಥೆ ಇದ್ದು, ಈಗ ಆ ಸಂಖ್ಯೆ 57 ಕ್ಕೇರಿದೆ. 108 ಆರ್ ಎನ್‍ಎ ಎಕ್ಸ್ ಟ್ರ್ಯಾಕ್ಟರ್, 139 ಆರ್ ಟಿಪಿಸಿಆರ್ ಯಂತ್ರ ಹಾಗೂ ಒಂದು ಪೂರ್ಣ ಪ್ರಮಾಣದ ಯಂತ್ರದ ಮೂಲಕ ದಿನದ ಪರೀಕ್ಷಾ ಸಾಮರ್ಥ್ಯವನ್ನು 1,20,800 ಕ್ಕೆ ಏರಿಸಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್ ವೈರಾಣು ಪ್ರಕರಣ ಪತ್ತೆಯಾದ ಬಳಿಕ, ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಲ್ಲಿ ಶೇ.2 ರಷ್ಟು ಪರೀಕ್ಷೆಗೊಳಪಡಿಸುವ ಕ್ರಮ ಜಾರಿ ಮಾಡಲಾಯಿತು. ನಂತರ ಡಿಸೆಂಬರ್ ನಿಂದ ಪರೀಕ್ಷಾ ಗುರಿಯನ್ನು 80,000 ದಿಂದ 1 ಲಕ್ಷಕ್ಕೆ ಹೆಚ್ಚಿಸಲಾಯಿತು ಎಂದು ಸಚಿವರು ವಿವರಿಸಿದ್ದಾರೆ.
ಮಕ್ಕಳ ಪರೀಕ್ಷೆ
ಕೋವಿಡ್ 3 ನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಅಭಿಪ್ರಾಯದ ಹಿನ್ನೆಲೆಯಲ್ಲಿ, ಒಟ್ಟು ಪರೀಕ್ಷೆಯಲ್ಲಿ ಕಡ್ಡಾಯವಾಗಿ ಶೇ.2 ರಷ್ಟು ಪರೀಕ್ಷೆಯನ್ನು ಮಕ್ಕಳಿಗೆ ನಡೆಸುವ ಕ್ರಮ ತರಲಾಗಿದೆ. ಡಿಸೆಂಬರ್ 1-ಜನವರಿ 20 ರ ಅವಧಿಯಲ್ಲಿ ನಡೆಸಲಾದ ಒಟ್ಟು ಪರೀಕ್ಷೆಯಲ್ಲಿ, 29% ರಷ್ಟು ಮಕ್ಕಳಿಗೆ ಮಾಡಿದ ಪರೀಕ್ಷೆಗಳಾಗಿವೆ. ಜೊತೆಗೆ, 15 ದಿನಕ್ಕೊಮ್ಮೆ ಕಾಲೇಜು, ಪ್ರೌಢಶಾಲೆ, ಹೋಟೆಲ್, ರೆಸ್ಟೋರೆಂಟ್, ಅಡುಗೆ ಸಿಬ್ಬಂದಿ ಮೊದಲಾದವರಿಗೆ ರಾಂಡಮ್ ಪರೀಕ್ಷೆ ಮಾಡಲಾಗುತ್ತಿದೆ.
ಇತರೆ ಅಂಶಗಳು
* ಕೋವಿಡ್ ಮೂರನೇ ಅಲೆ ನಿರ್ವಹಣೆಗಾಗಿ ಜನವರಿ 18 ರಿಂದ ದಿನದ ಪರೀಕ್ಷಾ ಗುರಿ 2 ಲಕ್ಷಕ್ಕೆ ನಿಗದಿ.
* ಪ್ರಾಥಮಿಕ ಸಂಪರ್ಕ ಹಾಗೂ ರೋಗಲಕ್ಷಣ ಇರುವವರಿಗೆ ಪರೀಕ್ಷೆಗೆ ಒತ್ತು. RAT ಪರೀಕ್ಷೆಯಲ್ಲಿ ನೆಗಟಿವ್ ವರದಿ ಬಂದರೂ, ರೋಗ ಲಕ್ಷಣವಿದ್ದರೆ ಆರ್ ಟಿಪಿಸಿಆರ್ ಪರೀಕ್ಷೆ ಮಾಡುವುದು.
* ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರಿಂದ ಮನೆಮನೆ ಭೇಟಿ ನೀಡಿ ಪರೀಕ್ಷೆ. ಸಂಚಾರಿ ತಂಡಗಳನ್ನು ಬಳಸಿಕೊಂಡು ಮಾನಸಿಕ ಅಸ್ವಸ್ಥರು, ಅಂಗವಿಕಲರ ಮನೆಗೆ ಭೇಟಿ ನೀಡಿ ಪರೀಕ್ಷೆ.
ಪುಷ್ಪ ಸಿನಿಮಾದಿಂದ ಪ್ರಭಾವಿತರಾಗಿ ಗ್ಯಾಂಗ್ ಕಟ್ಟಿಕೊಂಡು ನೀಚ ಕೆಲಸ ಎಸಗಿದ ಅಪ್ರಾಪ್ತರು..!
VIDEO| ಇದುವರೆಗೂ ನೋಡಿರದ ವಿಚಿತ್ರ ರನೌಟ್: BPLನಲ್ಲಿ ಆಂಡ್ರೆ ರೆಸೆಲ್ಗೆ ಬಿಗ್ ಶಾಕ್!
ವಿದ್ಯುತ್, ನಂದಿನಿ ಹಾಲಿನ ದರ ಏರುತ್ತಾ? ಜನರಿಗೆ ಮುಖ್ಯಮಂತ್ರಿ ಬೊಮ್ಮಾಯಿ ನೀಡಿದ್ರು ಖುಷಿಯ ಸುದ್ದಿ…