More

    ಮುಂದಿನ ಮೂರು ವರ್ಷಗಳವರೆಗೆ ಆರ್​ಬಿಐ ಗವರ್ನರ್​ ಆಗಿ ಶಕ್ತಿಕಾಂತ್​ ದಾಸ್​ ಮರು ನೇಮಕ

    ನವದೆಹಲಿ: ಭಾರತೀಯ ರಿಸರ್ವ್​ ಬ್ಯಾಂಕ್ (ಆರ್​ಬಿಐ)​ ಗವರ್ನರ್​ ಶಕ್ತಿಕಾಂತ್​ ದಾಸ್​ ಅವರ ಸೇವಾ ಅವಧಿಯನ್ನು ಮತ್ತೆ ಮೂರು ವರ್ಷಗಳವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. 2021 ಡಿಸೆಂಬರ್ 21ರಂದು​ ದಾಸ್​ ಅವರ ಸೇವಾ ಅವಧಿ ಪೂರ್ಣಗೊಳ್ಳುತ್ತಿತ್ತು. ಆದರೆ, ಕೇಂದ್ರ ಸಂಪುಟದ ನೇಮಕಾತಿ ಸಮಿತಿ ದಾಸ್​ ಅವರ ಮರುನೇಮಕಕ್ಕೆ ಅನುಮೋದನೆ ನೀಡಿದೆ.

    ದಾಸ್​ ಅವರು ಈ ಹಿಂದೆ ಆರ್ಥಿಕ ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿದ್ದರು. 2018 ಡಿಸೆಂಬರ್​ 11ರಂದು ಮೂರು ವರ್ಷಗಳವರೆಗೆ ಆರ್​ಬಿಐ ಗವರ್ನರ್​ ಆಗಿ ನೇಮಕಗೊಂಡಿದ್ದರು. ಇದೀಗ ಎರಡನೇ ಅವಧಿಗೆ ಮುಂದಿನ ಮೂರು ವರ್ಷಗಳವರೆಗೆ ಅಂದರೆ ಡಿಸೆಂಬರ್​ 2024ರವರೆಗೆ ದಾಸ್​ ಅವರು ಕೇಂದ್ರ ಬ್ಯಾಂಕ್​ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ.

    ದಾಸ್​ ಅವರು ಹಣಕಾಸು, ತೆರಿಗೆ, ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಅಲ್ಲದೆ, ವಿಶ್ವ ಬ್ಯಾಂಕ್, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ), ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ (ಎನ್‌ಡಿಬಿ) ಮತ್ತು ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ (ಎಐಐಬಿ) ಗಳಲ್ಲಿ ಭಾರತದ ಪರ್ಯಾಯ ಗವರ್ನರ್ ಆಗಿಯೂ ದಾಸ್​ ಅವರು ಸೇವೆ ಸಲ್ಲಿಸಿದ್ದಾರೆ. ಕೇಂದ್ರದ ಹಣಕಾಸು ಸಚಿವಾಲಯದಲ್ಲಿ ಅವರ ಸುದೀರ್ಘ ಅಧಿಕಾರಾವಧಿಯಲ್ಲಿ, ಎಂಟು ಕೇಂದ್ರ ಬಜೆಟ್‌ಗಳ ತಯಾರಿಕೆಯಲ್ಲಿ ದಾಸ್​ ಅವರು ನೇರವಾಗಿ ಸಂಬಂಧ ಹೊಂದಿದ್ದಾರೆ.

    ದಾಸ್​ ಅವರು ದೆಹಲಿ ವಿಶ್ವವಿದ್ಯಾಲಯದ ಸೆಂಟ್​ ಸ್ಟೆಫೆನ್​ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದಾರೆ. ಆರ್​ಬಿಐ ಸ್ವಾಯತ್ತತೆ ಸೇರಿದಂತೆ ಹಲವಾರು ವಿಷಯಗಳಲ್ಲಿ ಸರ್ಕಾರದೊಂದಿಗೆ ವೈಮನಸ್ಸು ಉಂಟಾದ ಬಳಿಕ ಈ ಹಿಂದಿನ ಗವರ್ನರ್​ ಊರ್ಜಿತ್​ ಪಟೇಲ್​ ದಿಢೀರ್​ ರಾಜೀನಾಮೆ ನೀಡಿದ ಬಳಿಕ ಅವರ ಸ್ಥಾನಕ್ಕೆ ದಾಸ್​ ಅವರು ನೇಮಕವಾದರು. ಪ್ರಸ್ತುತ ಬಿಜೆಪಿ ಆಡಳಿತದ ಅಡಿಯಲ್ಲಿ ಆರ್​ಬಿಐ ಗವರ್ನರ್​ ಆಗಿ ಎರಡನೇ ಅವಧಿಗೆ ಮುಂದುವರಿದ ಮೊದಲ ಗರ್ವನರ್​ ದಾಸ್​ ಆಗಿದ್ದಾರೆ.

    ಆರ್‌ಬಿಐ, ಅಕ್ಟೋಬರ್‌ನ ಹಣಕಾಸು ನೀತಿ ಪರಿಶೀಲನೆಯಲ್ಲಿ ಸತತ ಎಂಟನೇ ಬಾರಿಗೆ ಪ್ರಮುಖ ಮಾನದಂಡದ ದರಗಳನ್ನು ಯಥಾಸ್ಥಿತಿಯಲ್ಲಿ ಇರಿಸಿದೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸಲು ಅಗತ್ಯವಿರುವವರೆಗೆ ದರಗಳ ಮೇಲೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವುದಾಗಿ ಭರವಸೆಯನ್ನು ನೀಡಿದೆ. (ಏಜೆನ್ಸೀಸ್​)

    ಕಳ್ಳರಿಗೆ ಹೆದರಿ ರಾಗಿಮೂಟೆಯಲ್ಲಿ ಚಿನ್ನಾಭರಣ ಬಚ್ಚಿಟ್ಟ ಪತ್ನಿ! ಮುಂದಾಗಿದ್ದು ಎಡವಟ್ಟು, ಆದ್ರೂ ಸುಖಾಂತ್ಯ ಕಂಡ ಪ್ರಕರಣ

    ಅರೆ ಬೆತ್ತಲಾಗಿ ಸರಸ ಸಲ್ಲಾಪ ದೃಶ್ಯದಲ್ಲಿ ನಟನೆ: ಶೂಟಿಂಗ್​ ಸ್ಥಳದಲ್ಲೇ ಗಳಗಳನೇ ಕಣ್ಣೀರಿಟ್ಟ ನಟಿ..!

    ಇಲ್ಲಿ ಕೆಜಿ ಬಾಳೆಹಣ್ಣಿಗೆ 3,300 ರೂ.!; ಉತ್ತರ ಕೊರಿಯಾದಲ್ಲಿ ಹಣದುಬ್ಬರ ತೀವ್ರ, ಕಡಿಮೆ ಆಹಾರ ತಿನ್ನಿ ಎಂದ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts