More

    ಯುವಕರು ಆಕ್ರೋಶಕ್ಕೆ ಒಳಗಾಗಬಾರದು

    ನಾಪೋಕ್ಲು: ಪರಸ್ಪರ ಸೌಹಾರ್ದತೆ, ಸಹಬಾಳ್ವೆ, ಸಹನೆಯಿಂದ ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಬೆಳೆಸಿಕೊಂಡರೆ ಸಮಾಜ ಹಾಗೂ ದೇಶದ ಅಭಿವೃದ್ಧಿ ಸಾಧ್ಯ ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಹೇಳಿದರು.

    ಸಮೀಪದ ಎಮ್ಮೆಮಾಡು ಉರುಸ್ ಪ್ರಯುಕ್ತ ಸೋಮವಾರ ಆಯೋಜಿಸಲಾಗಿದ್ದ ಸಮ್ಮೇಳನದಲ್ಲಿ ಮಾತನಾಡಿದ ಅವರು, ತಿಳಿವಳಿಕೆಯ ಕೊರತೆಯಿಂದ ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಕ್ಷುಲ್ಲಕ ಕಾರಣಕ್ಕೆ ಹಿಂದು, ಮುಸಲ್ಮಾನರ ಸೌಹಾರ್ಧತೆಗೆ ಧಕ್ಕೆ ಆಗಬಾರದು. ಧರ್ಮದ ಬಗೆಗಿನ ಅಜ್ಞಾನದಿಂದ ಸಂಘರ್ಷ ಸೃಷ್ಟಿಯಾಗುತ್ತಿದೆ. ಸಮಾಜಕ್ಕೆ ಆತಂಕ ತಂದೊಡ್ಡುವ ಕೆಲಸವನ್ನು ಯಾರೂ ಮಾಡಬಾರದು. ತಪ್ಪು ಮಾಡಿದ ಯಾರೇ ಆದರೂ ಶಿಕ್ಷೆ ಆಗಬೇಕು. ಇತ್ತೀಚಿನ ದಿನಗಳಲ್ಲಿ ದೊಂಬಿ, ಕೊಲೆ ಸಂಘರ್ಷಗಳು ಸಂಭವಿಸಿದಾಗ ಜಾತಿ ಹುಡುಕುವ ಕೆಲಸ ಆಗುತ್ತಿದೆ. ಅಂತಹ ಘಟನೆಗಳು ಮರುಕಳಿಸಬಾರದು. ಯುವಕರು ಆಕ್ರೋಶಕ್ಕೆ ಒಳಗಾಗಬಾರದು ಎಂದು ತಿಳಿಸಿದರು.

    ಯುವಕರು ಮಾದಕ ವ್ಯಸನಿಗಳಾಗಿ ಸಮಾಜಕ್ಕೆ ಕಂಟಕವಾಗುತ್ತಿದ್ದಾರೆ. ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ಮನುಷ್ಯತ್ವ ಕಳೆದುಕೊಳ್ಳುವಂತಾಗಬಾರದು. ಪ್ರತಿ ಗ್ರಾಮ, ರಾಜ್ಯವನ್ನು ಗಾಂಜಾ ಮುಕ್ತವನ್ನಾಗಿ ಮಾಡಲು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
    ಸಯ್ಯದ್ ಮುಈನಲಿ ಶಿಹಾಬ್ ತಂಗಳ್ ಪ್ರಾರ್ಥನೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಮಾಯತ್ ಅಬೂಬಕ್ಕರ್ ಸಕಾಫಿ ಪುದಿಯೋಡಿ ಅಧ್ಯಕ್ಷತೆ ವಹಿಸಿದ್ದರು. ಕೂರ್ಗ್ ಜಮಾಯುತ್ತಲ್ ಉಲಮಾ ಕೋಶಾಧಿಕಾರಿ ಕೆ.ಎಂ ಹುಸೇನ್ ಸಖಾಫಿ, ತಾಜೂಲ್ ಇಸ್ಲಾಂ ಮುಸ್ಲಿಂ ಜಮಾಯತ್ ಕೋಶಾಧಿಕಾರಿ ಆಲಿ ನೆರೋಟ್, ಎಮ್ಮೆಮಾಡು ಶಹೀದಿಯ ಕಾರ್ಯದರ್ಶಿ ಇಸ್ಮಾಯಿಲ್ ಚಕ್ಕೇರ, ಸಿ.ಎಂ.ಮಾಹಿನ್ ಚಂಬಾರಂಡ, ಹಂಸ ಕೊಟ್ಟಮುಡಿ, ಇಸ್ಮಾಯಿಲ್ ನಾಪೋಕ್ಲು, ಮೊಹಮ್ಮದ್ ಹಾಜಿ ಕುಂಜಿಲ, ನಾಪೋಕ್ಲು ಜಮಾಯತ್ ಅಧ್ಯಕ್ಷ ಅಬ್ದುಲ್ ರೆಹಮಾನ್, ಮನ್ಸೂರ್ ಆಲಿ, ಹಂಸ ದೋರೋಟ್, ಕೊಳಕೇರಿ ಜಮಾಯತ್ ಅಧ್ಯಕ್ಷ ಅಬ್ದುಲ್ ನಾಸಿರ್, ಕುಂಜಿಲ ಜಮಾಯತ್ ಅಧ್ಯಕ್ಷ ಶೌಕತ್ತಾಲಿ, ಹಳೇ ತಾಲೂಕು ಜಮಾಯತ್ ಅಧ್ಯಕ್ಷ ಮುಹಮದ್, ಎಮ್ಮೆಮಾಡು ಜಮಾಯತ್ ಉಪ ಅಧ್ಯಕ್ಷ ಅಶ್ರಫ್ ಬಿ ಯು ಇದ್ದರು.

    ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯ ಹಾಗೂ ಹೊರ ರಾಜ್ಯದಿಂದ ಅತ್ಯಧಿಕ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts