More

    ಆಕ್ಸಿಡೆಂಟ್‌ನಲ್ಲಿ ಕುಡುಕರ ಸಾವಿನ ಸಂಖ್ಯೆ ಏರಿಕೆ: 2021ರಲ್ಲಿ ಅಪಘಾತಗಳು ಗಣನೀಯ ಇಳಿಕೆ

    ಬೆಂಗಳೂರು: ರಾಜಧಾನಿಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಗಳ ಸಂಖ್ಯೆ ಕಳೆದ 3 ವರ್ಷಕ್ಕೆ ಹೋಲಿಸಿದರೆ 2021ರಲ್ಲಿ ಗಣನೀಯವಾಗಿ ಇಳಿಮುಖವಾಗಿದೆ. ಆದರೆ, ಮದ್ಯ ಸೇವಿಸಿ ಸಾವನ್ನಪ್ಪಿದವರ ಪ್ರಮಾಣ ಏರಿಕೆ ಆಗಿದ್ದು, ಎಲ್ಲದಕ್ಕೂ ಕೋವಿಡ್-19 ಸೋಂಕು ಪ್ರಮುಖ ಕಾರಣ.

    ಕರೊನಾ ಲಾಕ್‌ಡೌನ್‌ನಲ್ಲಿ ವಾಹನ ಸಂಚಾರ ವಿರಳವಾಗಿ ಅಪಘಾತಗಳು ಕಡಿಮೆಯಾಗಿವೆ. ಜತೆಗೆ ಸೋಂಕಿನ ಭೀತಿಯಿಂದ ಸಂಚಾರ ಪೊಲೀಸರು ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ನಿಲ್ಲಿಸಿದ ಪರಿಣಾಮ ಕುಡಿದು ವಾಹನ ಚಲಾಯಿಸಿ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

    2021ರಲ್ಲಿ 618 ಅಪಘಾತಗಳಲ್ಲಿ 651 ಮಂದಿ ಸಾವನ್ನಪ್ಪಿದ್ದಾರೆ. ಇದಕ್ಕೂ ಮೊದಲು 2019ರಲ್ಲಿ 810 ಅಪಘಾತದಲ್ಲಿ 832 ಸಾವು ಮತ್ತು 2020ರಲ್ಲಿ 632 ಆಕ್ಸಿಡೆಂಟ್‌ನಲ್ಲಿ 655 ಸಾವನ್ನಪ್ಪಿದ್ದರು.

    ಇನ್ನೂ 2021ರಲ್ಲಿ ಮೃತಪಟ್ಟ 651ರ ಪೈಕಿ 24 ಮಂದಿ ಮದ್ಯ ಸೇವಿಸಿ ಅಪಘಾತಕ್ಕೆ ಒಳಗಾಗಿ ಪ್ರಾಣ ಬಿಟ್ಟಿದ್ದಾರೆ. 2019ರಲ್ಲಿ 17 ಮಂದಿ ಮತ್ತು 2020ರಲ್ಲಿ 16 ಮಂದಿ ಕುಡಿದು ವಾಹನ ಚಾಲನೆ ಮಾಡುವಾಗ ಅಸುನೀಗಿದ್ದರು. ಕಳೆದ ಎರಡು ವರ್ಷಗಳಲ್ಲಿ ಅಪಘಾತ ಇಳಿಮುಖವಾದರೂ ಕುಡಿದು ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಡಾ.ಬಿ. ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.

    ವಾಹನ ಅಪಘಾತಗಳನ್ನು ವರ್ಗೀಕರಣದಲ್ಲಿ ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರು ಅತಿ ಹೆಚ್ಚು ಮೃತಪಟ್ಟಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಭಾರೀ ವಾಹನಗಳ ಚಾಲಕರು.

    ರಸ್ತೆ ಅಪಘಾತಗಳು ಇಳಿಮುಖವಾದರೂ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿಯೂ ಸಾವನ್ನಪ್ಪುತ್ತಿರುವರ ಸಂಖ್ಯೆ ಕಡಿಮೆಯಾಗಿಲ್ಲ. 2021ರಲ್ಲಿ 241 ಸವಾರ ಮತ್ತು 50 ಹಿಂಬದಿ ಸವಾರರು ಹೆಲ್ಮೆಟ್ ಧರಿಸಿದ್ದರೂ ಅಸುನೀಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ನೆಪಮಾತ್ರಕ್ಕೆ ಹೆಲ್ಮೆಟ್ ಧರಿಸುತ್ತಾರೆ. ಹೆಲ್ಮೆಟ್ ಧರಿಸಿದ ಮೇಲೆ ಲಾಕ್ ಮಾಡದೆ ಇರುವುದು, ಅರ್ಧ ಹೆಲ್ಮೆಟ್, ಕಳಪೆ ಹೆಲ್ಮೆಟ್ ಬಳಕೆ ಮಾಡುವುದರಿಂದ ಅಪಘಾತದ ವೇಳೆ ತಲೆ ಮತ್ತು ಮೆದುಳು ಬಳ್ಳಿಯ ಬುಡಕ್ಕೆ ಹಾನಿ ಉಂಟಾಗುತ್ತಿದೆ. ಐಎಸ್‌ಐ ಮುದ್ರೆ ಹೆಲ್ಮೆಟ್ ಧರಿಸಿದ ಸವಾರರು ಅಪಘಾತದಲ್ಲಿ ಪ್ರಾಣ ಉಳಿಸಿಕೊಂಡಿರುವುದು ಸಂಚಾರ ಪೊಲೀಸರ ಅಧ್ಯಯನಲ್ಲಿ ತಿಳಿದುಬಂದಿದೆ.

    ಖಾಸಗಿ ಕಂಪನಿ ನೌಕರರು ತಮ್ತು ಸ್ವಯಂ ಉದ್ಯೋಗಿಗಳೇ ಹೆಚ್ಚು ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವೀಧರ, ಸ್ನಾತಕೋತ್ತರ, ವೈದ್ಯಕೀಯ, ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಪಡೆದವರ ಸಂಖ್ಯೆ ಹೆಚ್ಚಾಗಿದೆ. ವಿದ್ಯಾವಂತರು ಆದರೂ ಸಂಚಾರ ನಿಯಮ ಪಾಲನೆ ಮಾಡುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪಾದಚಾರಿಗಳ ಸಾವು ಇಳಿಕೆ:
    ರಸ್ತೆ ಅಪಘಾತದಲ್ಲಿ ಪಾದಚಾರಿಗಳ ಸಾವಿನ ಪ್ರಮಾಣ ಇಳಿಕೆಯಾಗಿದೆ. 2019ರಲ್ಲಿ 273, 2020ರಲ್ಲಿ 164 ಮತ್ತು 2021ರಲ್ಲಿ 161 ಮಂದಿ ಪಾದಚಾರಿಗಳು ಮೃತಪಟ್ಟಿದ್ದಾರೆ. ಇದಕ್ಕೆ ಪಾದಚಾರಿ ಮಾರ್ಗದಲ್ಲಿ ಬೈಕ್ ಮತ್ತು ಲಾರಿ ಚಾಲನೆಯೇ ಸಾವಿಗೆ ಕಾರಣವಾಗಿದೆ.

    ವಾಹನ ದಟ್ಟಣೆ ವೇಳೆ ಹೆಚ್ಚು :
    ಬೆಳಗ್ಗೆ 9 ರಿಂದ 12 ಗಂಟೆ, ಸಂಜೆ 6 ರಿಂದ ರಾತ್ರಿ 9 ಮತ್ತು ಬೆಳಗಿನ ಜಾವ 12 ರಿಂದ 6 ವರೆಗೆ ಮಾರಣಾಂತಿಕ ಅಪಘಾತ ಸಂಭವಿಸಿವೆ. ವಾಹನ ದಟ್ಟಣೆ ವೇಳೆ ಚಾಲಕರ ನಿರ್ಲಕ್ಷ್ಯ, ರಾತ್ರಿ ವೇಳೆ ಬೆಳಕಿನ ಕೊರತೆ, ತಡರಾತ್ರಿ ಅತೀ ವೇಗದ ಚಾಲನೆ ಸಾವಿಗೆ ಆಹ್ವಾನ ನೀಡಿದೆ.

    *ರಸ್ತೆಗುಂಡಿಗೆ ಮತ್ತು ಬೆಳಕಿನ ಕೊರತೆ ತಲಾ 4 ಅಪಘಾತ ಸಂಭವಿಸಿವೆ
    *ಬಿಎಂಟಿಸಿ ಬಸ್‌ನಿಂದ ಅಪಘಾತಗಳು ಏರು ಮುಖದಲ್ಲಿಯೇ ಇವೆ
    *21ರಿಂದ 40 ವರ್ಷದ ವಯಸ್ಸಿನ ಯುವಕ, ಯುವತಿಯೇ ಹೆಚ್ಚು ಸಾವು
    *ಮಾರಣಾಂತಿಕ ಅಪಘಾತಗಳಲ್ಲಿ ಶೇ.14.88 ಮಂದಿಗೆ ಚಾಲನ ಪರವಾನಗಿ ಇಲ್ಲ
    *54 ಬ್ಲಾಕ್‌ಸ್ಪಾಟ್‌ಗಳ ಪೈಕಿ 12ರಲ್ಲಿ ಶೇ.100 ಅಪಘಾತ ಇಲ್ಲ, ಗಣನೀಯ ಇಳಿಕೆ
    *ಡಾಂಬರ್ ರಸ್ತೆಗಳಲ್ಲಿ ಹೆಚ್ಚು ಅಪಘಾತ, ಸಿಮೆಂಟ್ ರಸ್ತೆಯಲ್ಲಿ ಮಾರ್ಕಿಂಗ್ ಕೊರತೆ
    *ಅಪಘಾತಕ್ಕೆ ಅತೀ ವೇಗದ ಚಾಲನೆ, ಹಿಂದಿನಿಂದ ಡಿಕ್ಕಿ ಹೊಡೆದಿರುವುದೇ ಹೆಚ್ಚು
    *ಸೀಟ್ ಬೆಲ್ಟ್ ಧರಿಸದೆ ಮರಣ ಹೊಂದಿದವರ ಸಂಖ್ಯೆ ಏರಿಕೆ ಆಗುತ್ತಿದೆ
    *ಅಪಘಾತ ಸಂಭವಿಸಿ 1 ಗಂಟೆ ಒಳಗೆ ಚಿಕಿತ್ಸೆ ಲಭಿಸಿದರೂ ಸಾವು ತಪ್ಪುತ್ತಿಲ್ಲ
    *ವಾರಾಂತ್ಯದಲ್ಲೇ ಹೆಚ್ಚು ಅಪಘಾತ, ಚಾಲಕರು ಅತೀ ವೇಗದ ಚಾಲನೆ ಮನೋಭಾವನೆ
    *ಇಬ್ಬರು ಸಾವನ್ನಪ್ಪಿದ 18 ಪ್ರಕರಣ, 4 ಸಾವಿನ ಕೇಸು 1, ಒಂದೇ ಆಕ್ಸಿಡೆಂಟ್‌ಗೆ 7 ಸಾವು

    ಭಾರತೀಯ ಸೇನೆಗೆ ಸಲಾಂ!; ಇಂದು 74ನೇ ಸೇನಾ ದಿನ

    ಅಧ್ಯಾತ್ಮವೆಂದರೆ ಹುಡುಕುವುದಲ್ಲ, ಕಳೆದುಕೊಳ್ಳುವುದು!

    ಸಂಪಾದಕೀಯ | ಹೈನುಗಾರಿಕೆಗೆ ಪ್ರೋತ್ಸಾಹ ಸಿಗಲಿ; ಸರ್ಕಾರ ಸೂಕ್ತ ಸೌಲಭ್ಯ ಒದಗಿಸುವುದು ಅಗತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts