More

    ಅಧ್ಯಾತ್ಮವೆಂದರೆ ಹುಡುಕುವುದಲ್ಲ, ಕಳೆದುಕೊಳ್ಳುವುದು!

    ಅಧ್ಯಾತ್ಮವೆಂದರೆ ಹುಡುಕುವುದಲ್ಲ, ಕಳೆದುಕೊಳ್ಳುವುದು!ನಿಮ್ಮನ್ನು ನೀವು ಹುಡುಕುವ ಪ್ರಯತ್ನ ಮಾಡಿದರೆ, ಅದು ಕೊನೆಯಿಲ್ಲದ ಓಟದಂತೆ. ಮನುಷ್ಯರು ಸದ್ಯದಲ್ಲಿ ತಾವು ಏನಾಗಿದ್ದಾರೋ ಅದಕ್ಕಿಂತ ಮೇಲೇರಲು ನಿರಂತರವಾಗಿ ಹಾತೊರೆಯುತ್ತಿರುತ್ತಾರೆ. ಅದು ಹಣದ ಬಗ್ಗೆ ಇದ್ದರೆ, ಹಣವನ್ನು ಹೆಚ್ಚಾಗಿಸುವ ಬಗ್ಗೆ ಯೋಚಿಸುತ್ತಾರೆ. ನಿಮ್ಮಲ್ಲಿ ಶ್ರೇಷ್ಠವಾದದ್ದು ಏನೇ ಇರಲಿ, ಇನ್ನೂ ಸ್ವಲ್ಪ ಹೆಚ್ಚಿನದಕ್ಕಾಗಿ ಪ್ರಯತ್ನ ಮಾಡುತ್ತಲೇ ಇರುವಿರಿ.

    ‘ಜಿಜ್ಞಾಸೆ’ಯೆನ್ನುವ ಪದ ಜನಗಳ ಮನಸ್ಸಿನಲ್ಲಿ ಒಂದು ತಪ್ಪುಕಲ್ಪನೆಯನ್ನು ಹುಟ್ಟಿಸುತ್ತದೆ. ‘ಜಿಜ್ಞಾಸೆ’ ಎಂದಾಗ ಶೋಧನೆ ಮಾಡಲು ಬಯಸುತ್ತಿದ್ದೇವೆಂದರ್ಥ. ಜಿಜ್ಞಾಸೆ ಮತ್ತು ಸಂಶೋಧನೆ ಪದಗಳು ಭಾಷೆಯ ಬಳಕೆಯಲ್ಲಿ ಒಂದಕ್ಕೊಂದು ಸಂಬಂಧ ಹೊಂದಿವೆ. ಆದರೆ, ಅಧ್ಯಾತ್ಮದಲ್ಲಿ ಅವುಗಳಿಗೆ ಯಾವುದೇ ಸಂಬಂಧವಿಲ್ಲ. ಜಿಜ್ಞಾಸುಗಳು, ನಿರ್ದಿಷ್ಟವಾಗಿ ಏನನ್ನೋ ಹುಡುಕಲು ಬಯಸುತ್ತಿಲ್ಲ. ಅವರಿಗೆ ಏನೊಂದೂ ತಿಳಿದಿಲ್ಲ, ಹಾಗಾಗಿ ಅವರು ಹುಡುಕಾಟದಲ್ಲಿದ್ದಾರೆ. ಆದರೆ, ಜೀವನದ ಉದ್ದೇಶ ಅಥವಾ ಮೂಲ ಅಥವಾ ಗುರಿಯನ್ನು ಹುಡುಕಬೇಕೆನ್ನುವ ಜನರ ವಿಚಾರ ಅಥವಾ ಕಲ್ಪನೆಯು ಅಧ್ಯಾತ್ಮ ಜಿಜ್ಞಾಸುಗಳಿಗೆ ಅಪಾರವಾದ ಹಾನಿಯುಂಟುಮಾಡಿದೆ, ಮತ್ತು ಅವರನ್ನು ಬರಿದಾಗಿಸಿ, ಕೊನೆಯಿಲ್ಲದೆ ಓಡುವಂತೆ ಮಾಡಿದೆ. ಹೇಗಾದರು ಮಾಡಿ ತಮ್ಮನ್ನು ತಾವು ಹುಡುಕಬೇಕೆಂದು ತಿಳಿಗೇಡಿ ಜನರು ಅಧ್ಯಾತ್ಮಾಸಕ್ತರನ್ನು ಪ್ರಚೋದಿಸುತ್ತಿರುತ್ತಾರೆ. ಯಾವುದಾದರು ಸೆಳೆತವಿದ್ದರೆ ಮಾತ್ರ ಜನರು ಏನನ್ನಾದರು ಮಾಡುವುದು ಅಲ್ಲವೆ? ಹಾಗಾಗಿ, ನೀವು ಈ ಹಾದಿಯ ಪ್ರಾರಂಭದಲ್ಲಿ, ಆಕರ್ಷಿತರಾಗಲು ಯಾವುದಾದರೊಂದು ಫಲದ ಆಸೆ ಬೇಕು. ಆದರೆ, ಅಧ್ಯಾತ್ಮ ನಿಮ್ಮನ್ನು ನೀವು ಹುಡುಕುವುದಲ್ಲ, ನಿಮ್ಮನ್ನು ನೀವು ಕಳೆದುಕೊಳ್ಳುವುದು. ‘ನಾನು’ ಎಂದು ಕರೆದುಕೊಳ್ಳುವ ಪ್ರತಿಯೊಂದನ್ನೂ ಕಳೆದುಕೊಳ್ಳಲು ಸಿದ್ಧರಾಗುವುದು.

    ಸಂಪೂರ್ಣವಾಗಿ ಕಳೆದುಕೊಂಡವನು: ಸುಮ್ಮನೆ ಕುಳಿತು, ಧ್ಯಾನಮಗ್ನನಾಗಿ ತನ್ನನ್ನು ತಾನು ಕಳೆದುಕೊಳ್ಳುವುದಾದರೆ, ಅದ್ಭುತ. ಅಂಥ ಸಾಧ್ಯತೆ ಇಲ್ಲವಾದ್ದರಿಂದ, ಆಟವಾಡುತ್ತ ಅಥವಾ ನೃತ್ಯ ಮಾಡುತ್ತ ಅದರಲ್ಲಿ ತಲ್ಲೀನನಾಗುವುದು. ಅದು ಸಾಧ್ಯವಿಲ್ಲವೆಂದರೆ, ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು. ಏನು ಮಾಡುವಿರಿ ಎನ್ನುವುದು ಅಪ್ರಸ್ತುತ, ಹೇಗಾದರೂ ಮಾಡಿ ತನ್ನನ್ನು ತಾನು ಕಳೆದುಕೊಳ್ಳಲು ಕಲಿಯುವುದು ಮುಖ್ಯ.

    ನಿಮ್ಮನ್ನು ನೀವು ಹುಡುಕುವ ಪ್ರಯತ್ನ ಮಾಡಿದರೆ, ಅದು ಕೊನೆಯಿಲ್ಲದ ಓಟದಂತೆ. ಮನುಷ್ಯರು ಸದ್ಯದಲ್ಲಿ ತಾವು ಏನಾಗಿದ್ದಾರೋ ಅದಕ್ಕಿಂತ ಮೇಲೇರಲು ನಿರಂತರವಾಗಿ ಹಾತೊರೆಯುತ್ತಿರುತ್ತಾರೆ – ಅದು ಹಣದ ಬಗ್ಗೆ ಇದ್ದರೆ, ಹಣವನ್ನು ಹೆಚ್ಚಾಗಿಸುವ ಬಗ್ಗೆ ಯೋಚಿಸುತ್ತಾರೆ. ಅಧಿಕಾರದ ಬಗ್ಗೆ ಇದ್ದರೆ, ಹೆಚ್ಚಿನ ಅಧಿಕಾರ; ಪ್ರೀತಿಯ ಬಗ್ಗೆ ಇದ್ದರೆ, ಹೆಚ್ಚಿನ ಪ್ರೀತಿ. ನಿಮ್ಮಲ್ಲಿ ಶ್ರೇಷ್ಠವಾದದ್ದು ಏನೇ ಇರಲಿ, ಇನ್ನೂ ಸ್ವಲ್ಪ ಹೆಚ್ಚಿನದಕ್ಕಾಗಿ ಪ್ರಯತ್ನ ಮಾಡುತ್ತಲೇ ಇರುವಿರಿ, ಏಕೆಂದರೆ, ನಿಮ್ಮೊಳಗಿರುವ ಒಂದು ಸಹಜ ಗುಣ ಯಾವುದೇ ಎಲ್ಲೆಯನ್ನು ಬಯಸುವುದಿಲ್ಲ ಮತ್ತು ಎಲ್ಲೆಯನ್ನು ಮೀರಿದ ಅನುಭವಕ್ಕಾಗಿ ಹಾತೊರೆಯುತ್ತಿರುತ್ತದೆ. ಅಪರಿಮಿತವಾದದ್ದನ್ನು ಹುಡುಕಬೇಕೆಂದರೆ, ಯಾವಾಗ, ಎಷ್ಟು ಸಮಯದವರೆಗೆ ಮತ್ತು ಎಲ್ಲಿ ನಿಮಗೆ ಸಿಗುತ್ತದೆಂದು ಭಾವಿಸಿದ್ದೀರ? ಅದೆಂದೂ ಸಿಗದ ಹುಡುಕಾಟ. ಆದರೆ, ನಿಮ್ಮನ್ನು ನೀವು ಕಳೆದುಕೊಳ್ಳಬಹುದು, ಬಹಳ ಸುಲಭ, ಏಕೆಂದರೆ ನಿಮ್ಮ ಅಸ್ತಿತ್ವ ಬಹಳ ಅಲ್ಪವಾದದ್ದು. ನಿಮ್ಮನ್ನು ನೀವು ಸಂಪೂರ್ಣವಾಗಿ ಕಳೆದುಕೊಂಡರೆ ನೀವು ಹುಡುಕುತ್ತಿರುವ ಪ್ರತಿಯೊಂದೂ ಅಲ್ಲೇ ಇದೆ.

    ಜೀವನದಲ್ಲಿ ಇದೊಂದು ಅರಿವು ಸದಾ ಇರಲೇಬೇಕು; ನೀವೆಲ್ಲೇ ಇದ್ದರೂ, ಏನೇ ಮಾಡುತ್ತಿದ್ದರೂ, ನಿಮ್ಮನ್ನು ನೀವು ರುಜುವಾತು ಮಾಡುವ ಬದಲು, ಅದರಲ್ಲಿ ಹೇಗೆ ವಿಲೀನವಾಗುವುದೆಂದು ನೋಡಬೇಕು. ಯಾರಾದರೂ ತನ್ನನ್ನು ತಾನು ರುಜುವಾತುಗೊಳಿಸಿದ್ದೇನೆಂದು ನಂಬಿದರೆ ಅವರ ಕಥೆ ಮುಗಿದಂತೆ. ಹಾಗೆ ನಂಬಿದಷ್ಟು ಹೆಚ್ಚು ಅಸ್ಥಿರರಾಗುತ್ತೀರಿ. ನಿಮ್ಮ ಜೀವನ ವ್ಯವಸ್ಥಿತವಾಗುತ್ತ ಹೋದಂತೆ, ನೀವು ಹೆಚ್ಚು ಅಸ್ಥಿರರಾಗುವುದನ್ನು ಗಮನಿಸಿದ್ದೀರ? ಬಾಲ್ಯದಲ್ಲಿ ನಿಮ್ಮ ಹತ್ತಿರ ಏನೂ ಇಲ್ಲದಿದ್ದಾಗ ಸರಿಯಾಗಿದ್ದಿರಿ. ಇನ್ನು ಯೌವನದಲ್ಲಿ ನಿಮ್ಮದೆ ಸ್ವಂತದ್ದು ಏನೂ ಇರಲಿಲ್ಲ, ಹರಿದ ಜೀನ್ಸ್​ನಲ್ಲಿ ಊರೆಲ್ಲ ಸುತ್ತಬಹುದಿತ್ತು. ಆದರೆ, ಜೀವನ ವ್ಯವಸ್ತಿತವಾಗುತ್ತಾ – ಸಂಸಾರ, ಮಕ್ಕಳು, ಹಣ, ಆಸ್ತಿ ಹೆಚ್ಚೆಚ್ಚು ಸಂಗ್ರಹವಾಗುತ್ತಾ ನೀವು ಹೆಚ್ಚು ಅಸ್ಥಿರರಾಗಿ ಕಾಣುತ್ತಿದ್ದೀರಿ.

    ಬಹಳಷ್ಟು ಜನರು ತಾವು ‘ಏನಾದರೂ’ ಆಗಬೇಕು ಎನ್ನುವ ಪ್ರಯತ್ನದಲ್ಲೇ ಇರುತ್ತಾರೆ. ಈ ದೇಹದ ರಚನೆಯ ಚಮತ್ಕಾರ ನೋಡಿ. ನೀವೇನಾದರೂ ಕೊಡಿ- ಬಾಳೆಹಣ್ಣು, ಸೇಬು ಅಥವಾ ಒಂದು ಕಡಲೆ ಬೀಜ, ಈ ದೇಹ ಅದನ್ನು ತಾನು ಬಯಸಿದಂತೆ ಮಾಡಿಕೊಳ್ಳುತ್ತದೆ. ನೀವು ಅದಕ್ಕೆ ಏನನ್ನು ನೀಡಿದರೂ, ಅದು ಮನುಷ್ಯನನ್ನು ಮಾತ್ರ ಸೃಷ್ಟಿಸುತ್ತದೆ. ಯಾವುದಕ್ಕೆ ಅಂತಹ ಬುದ್ಧಿಶಕ್ತಿ ಹಾಗೂ ಚಮತ್ಕಾರವಿದೆಯೋ, ಇದೀಗ ಅದನ್ನೇ ಉಪಯೋಗಿಸಿ ನಿಮ್ಮನ್ನು ನೀವು ಬಲೆಗೆ ಬೀಳಿಸುತ್ತಿದ್ದೀರಿ. ಭೌತಿಕ ದೇಹ ಒಂದು ಸಾಧ್ಯತೆ ಅಥವಾ ಒಂದು ಬಲೆ ಕೂಡ. ನಿಮ್ಮ ಇಚ್ಛೆಗನುಸಾರ ಅಲ್ಲಿ ಇರಲು ಮತ್ತು ಹೊರಬರಲು ಸ್ವಾತಂತ್ಯವಿದ್ದರಷ್ಟೇ ನೀವಿದನ್ನು ಮನೆಯೆಂದು ಕರೆಯಬಹುದು. ನೀವು ‘ಮನೆಯೊಳಗೆ’ ಹೋದಿರಿ, ಆದರೆ ಹೊರಬರಲು ಆಗದೆ ಇದ್ದರೆ ಅದು ಒಂದು ಸೆರೆಮನೆ. ಈಗ ಆಗಿರುವುದೇ ಹೀಗೆ.

    ಅಂತರಂಗದ ಕೆಲಸ: ನಿಮ್ಮನ್ನು ನೀವು ಕಳೆದುಕೊಳ್ಳಲು ಪ್ರಯತ್ನಪಟ್ಟು, ನಿಮ್ಮ ಅಸ್ತಿತ್ವವನ್ನೇ ಇಲ್ಲವಾಗಿಸಿಕೊಂಡಾಗ ಮಾತ್ರ, ‘ಮನೆಯೊಳಗೆ’ ಬಂದಿಯಾಗಿಲ್ಲ ಎಂದರ್ಥ. ಆಗ ನೀವು ‘ಇದನ್ನು’ ಮೀರಿ ಕಾರ್ಯನಿರ್ವಹಿಸಲು ಮತ್ತು ಅನುಭವ ಪಡೆಯಲು ಪ್ರಾರಂಭಿಸುತ್ತೀರಿ. ನಿಧಾನವಾಗಿ ‘ಮನೆಯ’ ಗೋಡೆಗಳಲ್ಲೆಲ್ಲ ರಂಧ್ರಗಳು ಹೆಚ್ಚಿದಂತೆ, ಭೌತಿಕವನ್ನು ಮೀರಿದ ಸಾಧ್ಯತೆಗೆ ಅನುವುಮಾಡಿಕೊಡುತ್ತದೆ. ನಿಮ್ಮನ್ನು ನೀವು ಕಳೆದುಕೊಳ್ಳಬೇಕೆಂದರೆ ಅದು ಆಂತರ್ಯದಲ್ಲಿ ನಡೆಯುವ ಕಾರ್ಯ. ನಾನು ಹೊರಗಡೆಯಿಂದ ತಿವಿದು ನಿಮ್ಮಲ್ಲಿ ರಂಧ್ರಮಾಡಲು ಪ್ರಯತ್ನಿಸಿದರೆ, ಅದು ನಿಮಗೆ ಬಹಳವಾಗಿ ಬಾಧೆಯನ್ನುಂಟು ಮಾಡಬಹುದು ಹಾಗೂ ನಾನೂ ತೊಂದರೆಗೆ ಒಳಗಾಗಬಹುದು. ಆದ್ದರಿಂದ ಇದು ಹೊರಗಿನ ಸಹಾಯದೊಂದಿಗೆ ಆಂತರ್ಯದಲ್ಲಿ ನಡೆಯಬೇಕಾದ ಕಾರ್ಯ.

    ನಿಮ್ಮನ್ನು ನೀವು ಕಳೆದುಕೊಳ್ಳಲು ಬಯಸಿದಾಗ, ಮೂಲಭೂತವಾಗಿ ಎದುರಾಗುವುದು ನಿಮ್ಮ ಇಷ್ಟಾನಿಷ್ಟಗಳು. ಇದರ ಆಧಾರದ ಮೇಲೇ ಮಿಕ್ಕೆಲ್ಲಾ ಇರುವುದು. ಇಷ್ಟಾನಿಷ್ಟಗಳ ಆಧಾರದ ಮೇಲೆಯೇ ಬಹಳಷ್ಟು ಮನುಷ್ಯರ ವ್ಯಕ್ತಿತ್ವ ನಿರ್ವಣಗೊಂಡಿದೆ. ಏನನ್ನಾದರೂ ‘ಅದು ನನಗೆ ಇಷ್ಟ’ ಎಂದಾಗ, ಅದು ಮನಸ್ಸಿನಲ್ಲಿ ಸಕಾರಾತ್ಮಕವಾಗಿ ಬೆಳೆಯುತ್ತದೆ. ಏನನ್ನಾದರೂ ‘ಅದು ನನಗೆ ಇಷ್ಟವಿಲ್ಲಾ’ ಎಂದಾಗ, ಅದು ನಕಾರಾತ್ಮಕವಾಗಿ ಬೆಳೆಯುತ್ತದೆ.

    ಒಮ್ಮೆ ಈ ಇಷ್ಟಾನಿಷ್ಟಗಳ ಪ್ರಕ್ರಿಯೆಯನ್ನು ಪ್ರಾರಂಭಿಸಿದಾಗ, ಅದನ್ನು ಸ್ವಲ್ಪ ಸೌಮ್ಯವಾಗಿ ಬೆಳೆಸಿದರೆ, ನಿಮಗೆ ಒಂದು ‘ವ್ಯಕ್ತಿತ್ವ’ವಿದೆ ಎಂದು ಹೇಳಬಹುದು. ಅದನ್ನೇ ಗಟ್ಟಿಯಾಗಿ ಬೆಳೆಸಿದರೆ, ನಿಮ್ಮದು ‘ಬಲವಾದ ವ್ಯಕ್ತಿತ್ವ’ ಎಂದು ಹೇಳಬಹುದು. ಅದು ವಿಪರೀತ ಮಟ್ಟದಲ್ಲಿ ಬೆಳೆದಾಗ, ನೀವೊಬ್ಬ ಕ್ರೂರಿ ಅಥವಾ ನಿರಂಕುಶಾಧಿಕಾರಿ ಎಂದು ಹೇಳಬಹುದು. ಆದರೆ ಇಷ್ಟಾನಿಷ್ಟಗಳು ಅಸಹಜ ಮಟ್ಟದಲ್ಲಿದ್ದರೆ, ನೀವು ಕೇವಲ ಹುಚ್ಚರಾಗಿದ್ದೀರಿ ಎಂದು ನಾವು ಹೇಳುತ್ತೇವೆ. ಆದರೆ ಮೊದಲ ಹೆಜ್ಜೆ ಇಟ್ಟಾಗಲೂ, ನೀವು ಹುಚ್ಚರೆಂದು ನಿಮಗೆ ತಿಳಿದಿರಬೇಕು – ಪತ್ತೆಯಾಗುವಷ್ಟು ಜೋರಾಗಿಲ್ಲ, ಆದರೆ ಒಳಗೊಳಗೇ ಹುಚ್ಚರಾಗಿದ್ದೀರಿ! ನೀವು ಪ್ರಕ್ರಿಯೆಯನ್ನು ಇದೀಗಷ್ಟೆ ಪ್ರಾರಂಭಿಸಿದ್ದೀರಿ. ಬಹುಶಃ ಬದುಕಿನ ಪ್ರಕ್ರಿಯೆಯಲ್ಲಿ ನೀವದನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರಬಹುದು, ಅಥವಾ ಬದುಕು ನಿಮಗೇನು ಕೊಡುವುದೋ ಅದನ್ನು ಅವಲಂಬಿಸಿ ನೀವು ಅದರ ನಿಯಂತ್ರಣವನ್ನು ಕಳೆದುಕೊಳ್ಳಬಹುದು.

    ಸರಳವಾದ ಈ ಅಭ್ಯಾಸವನ್ನು ಪ್ರಯತ್ನಿಸಿ: ನೀವು ಇಷ್ಟಪಡುವ ಮೂರು ಹಾಗೂ ಇಷ್ಟವಿಲ್ಲದ ಮೂರು ವಸ್ತುಗಳನ್ನು ತೆಗೆದುಕೊಳ್ಳಿ. ನೀವು ಇಷ್ಟಪಡದ ವಸ್ತುಗಳು ವ್ಯಕ್ತಿಗಳೂ ಆಗಿರಬಹುದು – ಅವರ ಚಿತ್ರವನ್ನು ಕಣ್ಮುಂದೆ ತಂದುಕೊಳ್ಳಿ. ನೀವು ಇಷ್ಟಪಡುವ ವಸ್ತುಗಳನ್ನು, ನೀವು ಬಯಸಿದರೆ ದ್ವೇಷಿಸಬಹುದು. ದ್ವೇಷಿಸುವ ವಸ್ತುಗಳನ್ನು, ಬಯಸಿದರೆ ವಾಸ್ತವದಲ್ಲಿ ಇಷ್ಟಪಡಬಹುದು. ಇಷ್ಟಗಳನ್ನು ದ್ವೇಷಗಳಿಗೆ, ದ್ವೇಷಗಳನ್ನು ಇಷ್ಟಗಳಿಗೆ ಅದಲು ಬದಲು ಮಾಡಬಹುದು, ಆದರೆ ಮತ್ತೊಮ್ಮೆ ಮೊದಲಿನ ಸ್ಥಿತಿಗೇ ಬರುತ್ತೀರ -ಇದು ಹೇಗೆಂದರೆ ಕೆಲವು ವಸ್ತುಗಳನ್ನು ಇಷ್ಟಪಡುತ್ತೀರ ಹಾಗೂ ಇನ್ನು ಕೆಲವೊಂದು ಬೇರೆ ವಸ್ತುಗಳನ್ನು ದ್ವೇಷಿಸುತ್ತೀರ ಅಷ್ಟೆ.

    ಈ ರೀತಿಯಾಗಿ ಪ್ರಯೋಗ ಮಾಡಿ ನೋಡಿ, ಏಕೆಂದರೆ, ನಿಮ್ಮ ಎಲ್ಲಾ ಇಷ್ಟ ಮತ್ತು ದ್ವೇಷಗಳಿಗೆ ಯಾವ ವಾಸ್ತವವೂ ಇಲ್ಲವೆನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾದದ್ದು ಬಹಳ ಮುಖ್ಯ, ‘ನಾನಿದನ್ನು ಇಷ್ಟಪಡುತ್ತೇನೆ, ಇದನ್ನು ಇಷ್ಟ ಪಡುವುದಿಲ್ಲ’, ಇವುಗಳೆಲ್ಲ ಮನಸ್ಸಿನಲ್ಲಿ ಕಲ್ಪಿಸಿಕೊಂಡಿರುವಂಥವು. ನಿಮಗೆ ಗೊತ್ತೆ, ಬಯಸಿದರೆ ವಿಷವೂ ಸಹ ರುಚಿಸುತ್ತದೆ! ಈ ರೀತಿಯಾಗಿ ಮಾಡಿ -ಇವತ್ತು, ಒಂದನ್ನು ಇಷ್ಟಪಡಿ, ನಾಳೆ ಇಷ್ಟಪಡಬೇಡಿ. ಯಾವುದನ್ನು ಇಷ್ಟಪಟ್ಟಿದ್ದಿರೊ ಅದನ್ನು ಒಂದು ದಿನ ದ್ವೇಷಿಸಿ, ಯಾವುದನ್ನು ದ್ವೇಷಿಸುತ್ತೀರೊ ಅದನ್ನು ಒಂದು ದಿನ ಇಷ್ಟಪಡಿ. ಹೀಗೆ ಬದಲಾಯಿಸುತ್ತಲೇ ಇರಿ. ಸ್ವಲ್ಪ ಸಮಯದ ನಂತರ ನಿಮಗೇ ತಿಳಿಯುತ್ತದೆ- ಇದೊಂದು ಅವಿವೇಕದ ಆಟವೆಂದು.

    ಮನಸ್ಸಿನಲ್ಲಿ ಪೆದ್ದನಂತೆ ನಾಟಕವಾಡುತ್ತ ಜೀವನವನ್ನು ಕಳೆಯಲು ಬಯಸುವಿರೋ ಅಥವಾ ಈ ಜೀವನವನ್ನು ಅರಿತು ಅನುಭವಿಸಲು ಬಯಸುವಿರೋ? ಅಥವಾ ಕನಿಷ್ಠಪಕ್ಷ ಈ ಜೀವದ ಸ್ಪರ್ಶವನ್ನಾದರೂ ಅನುಭವಿಸುವಿರೋ? ಜೀವ ಇರುವುದೇ ಪೂರ್ತಿ ಬಲದೊಂದಿಗೆ ನಡೆದು, ಸಂಪೂರ್ಣ ಸಾಧ್ಯತೆಯೆಡೆಗೆ ಅರಳುವುದಕ್ಕೆ. ನಿಮ್ಮದೇ ನಾಟಕವಾಡುವುದಕ್ಕಾಗಿಯಲ್ಲ. ಇದು ನಿಮಗಿರುವ ವೇದಿಕೆಯಲ್ಲ. ಈ ಸೃಷ್ಟಿ ಸೃಷ್ಟಿಕರ್ತನ ವೈಭವಯುತ ನೃತ್ಯಕ್ಕಾಗಿ ಇರುವ ವೇದಿಕೆ. ಈ ಜೀವನವು ನಿಮಗೆ ಪಕ್ಕದಲ್ಲಿ ಅಲ್ಪ ನಟನೆ ಮಾಡಲು ಸ್ವಲ್ಪ ಸ್ವಾತಂತ್ರ್ಯ ನೀಡಿದೆ, ಆದರೆ ಇದನ್ನೇ ಸಂಪೂರ್ಣ ಸತ್ಯವೆಂದು ತಿಳಿದು ಮನಸೋ ಇಚ್ಛೆ ನಡೆದುಕೊಳ್ಳಬೇಡಿ. ಇದು ನಿಮ್ಮ ನಾಟಕವಲ್ಲ. ಈ ಬ್ರಹ್ಮಾಂಡದ ನಾಟಕ ನಿಮ್ಮನ್ನು ರ್ಸ³ಸಲು ಬಿಡಿ -ಇದೇ ಜೀವನ.

    (ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts