More

    ಕೊಹ್ಲಿ ಜತೆ ಸೆಲ್ಫಿಗಾಗಿ ಮೈದಾನಕ್ಕೆ ನುಗ್ಗಿದ ಅಭಿಮಾನಿಗಳು: ಘಟನೆಯ ಬಗ್ಗೆ ಮೌನ ಮುರಿದ ಉಪನಾಯಕ

    ಬೆಂಗಳೂರು: ಆತಿಥೇಯ ಭಾರತ ಮತ್ತು ಪ್ರವಾಸಿ ಶ್ರೀಲಂಕಾ ತಂಡಗಳ ನಡುವಿನ 2ನೇ ಹಾಗೂ ಅಹರ್ನಿಶಿ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭದ್ರತಾ ಲೋಪ ಎದುರಾಯಿತು. ಕೊನೇ ಅವಧಿಯ ಆಟದ ವೇಳೆ ಮೈದಾನಕ್ಕೆ ನುಗ್ಗಿದ ಪ್ರೇಕ್ಷಕರು ನೆಚ್ಚಿನ ಆಟಗಾರ ವಿರಾಟ್​ ಕೊಹ್ಲಿ ಜತೆ ಸೆಲ್ಫಿ ತೆಗೆದುಕೊಳ್ಳಲು ಸಫಲವಾದರು. ಇದರ ಜತೆಗೆ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರನ್ನು ಸತಾಯಿಸಿದರು. ಕರೊನಾ ಕಾಲದಲ್ಲಿ ಕ್ರಿಕೆಟ್ ತಂಡಗಳು ಬಯೋಬಬಲ್ ನಿರ್ಮಿಸಿ ಆಡುತ್ತಿರುವ ಸಮಯದಲ್ಲಿ ಈ ಘಟನೆ ಆತಂಕ ಸೃಷ್ಟಿಸಿದೆ. ಇದೀಗ ಈ ಘಟನೆಯ ಬಗ್ಗೆ ಟೀಮ್​ ಇಂಡಿಯಾದ ಉಪನಾಯಕ ಜಸ್ಪ್ರಿತ್​ ಬೂಮ್ರಾ ಮೌನ ಮುರಿದಿದ್ದಾರೆ.

    ದಿನದಾಟದ ಮುಕ್ತಾಯಕ್ಕೆ ಕೆಲವೇ ಹೊತ್ತು ಬಾಕಿ ಇರುವಾಗ ಮೈದಾನದ ಮೂರು ಕಡೆಯಿಂದ ಏಕಾಏಕಿ 4 ಮಂದಿ ಮೈದಾನಕ್ಕೆ ನುಗ್ಗಿದರು. ಲಂಕಾ ತಂಡ ಎರಡನೇ ಇನಿಂಗ್ಸ್ ಮಾಡುತ್ತಿದ್ದ ವೇಳೆ ಶಮಿ ಓವರ್‌ನಲ್ಲಿ ಚೆಂಡು ತಾಗಿದ ಪರಿಣಾಮ ಮೆಂಡಿಸ್ ಫಿಸಿಯೋ ಕರೆದರು. ಈ ವೇಳೆ ತಮ್ಮ ಸ್ಟಾರ್ ಆಟಗಾರನನ್ನು ಹತ್ತಿರದಿಂದ ನೋಡುವ ಅವಕಾಶವನ್ನು ಗ್ರಹಿಸಿದ ಅಭಿಮಾನಿಗಳು ಏಕಾಏಕಿ ಬೇಲಿಯಿಂದ ಸುತ್ತುವರಿದ ಪ್ರದೇಶವನ್ನು ಭೇದಿಸಿ ಮೈದಾನಕ್ಕೆ ನುಗ್ಗಿದರು. ಸ್ಲಿಪ್‌ನಲ್ಲಿ ಕೊಹ್ಲಿ ಬಳಿ ತೆರಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿದರು. ಈ ವೇಳೆ ನಗುತ್ತಲೇ ಕೊಹ್ಲಿ ಕೂಡ ಸೆಲ್ಫಿಗೆ ಪೋಸ್ ನೀಡಿದರು.

    ಈ ಘಟನೆಯಿಂದ ಕೊಂಚ ಗೊಂದಲಕ್ಕೆ ಒಳಗಾಗಿರುವ ಬೂಮ್ರಾ, ನಿಜಕ್ಕೂ ಇದು ಭದ್ರತ ಬಗೆಗಿನ ಕಳವಳ ಎಂದು ಕರೆದಿದ್ದಾರೆ. ಇಂತಹ ಘಟನೆಗಳು ಕ್ರೀಡೆಯಲ್ಲಿ ಹೆಚ್ಚಾಗುತ್ತಿದೆ ಎಂದಿದ್ದಾರೆ. ಇಂತಹ ಸಂಗತಿಗಳನ್ನು ನಾವು ನಿಯಂತ್ರಣ ಮಾಡಲು ಆಗುವುದಿಲ್ಲ. ನಿಜಕ್ಕೂ ಇದು ಭದ್ರತೆಯ ಕಾಳಜಿಯ ಸಮಸ್ಯೆಯಾಗಿದೆ. ಇದ್ದಕ್ಕಿದ್ದಂತೆ, ಒಳನುಗ್ಗುವವರು ಇದ್ದಾರೆ ಎಂದು ನಾವು ಅರಿತುಕೊಂಡಿದ್ದೇವೆ ಆದರೆ, ಅದೃಷ್ಟವಶಾತ್ ಅಧಿಕಾರಿಗಳು ಮಧ್ಯಪ್ರವೇಶಿಸಿದರು ಎಂದು ಬೂಮ್ರಾ ಹೇಳಿದರು.

    ಮಾತು ಮುಂದುವರಿಸಿದ ಬೂಮ್ರಾ, ಈ ಬಗ್ಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಕ್ರೀಡೆಯ ಮೇಲಿನ ಅಭಿಮಾನಿಗಳ ಕ್ರೇಜ್ ತುಂಬಾ ಹೆಚ್ಚಾಗಿದ್ದು, ಕೆಲವೊಮ್ಮೆ ಅಭಿಮಾನಿಗಳು ತುಂಬಾ ಭಾವುಕರಾಗುತ್ತಾರೆ ಎಂದು ಹೇಳಿದರು.

    ಇನ್ನು ಅಭಿಮಾನಿಗಳ ಮೈದಾನಕ್ಕೆ ನುಗ್ಗಿದ ತಕ್ಷಣವೇ ಮೈದಾನಕ್ಕೆ ಆಗಮಿಸಿದ ಭದ್ರತಾ ಸಿಬ್ಬಂದಿ ನಾಲ್ವರನ್ನೂ ಕರೆದೊಯ್ದರು. ಆದರೆ ಅದಕ್ಕೆ ಮುನ್ನ ಮೈದಾನದ ತುಂಬೆಲ್ಲ ಓಡಾಡಿದ ಪ್ರೇಕ್ಷಕ, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯ ಕೈಗೆ ಸಿಗದೆ ಸತಾಯಿಸಿದರು. ಇದರಿಂದ ಕ್ರೀಡಾಂಗಣದಲ್ಲಿದ್ದ ಇತರ ಪ್ರೇಕ್ಷಕರು ಭಾರಿ ಮನರಂಜನೆ ಪಡೆದರು. ಈ ಮುನ್ನ ಸರಣಿಯ ಮೊಹಾಲಿ ಟೆಸ್ಟ್ ಪಂದ್ಯದ ವೇಳೆಯೂ ಪ್ರೇಕ್ಷಕನೊಬ್ಬ ಮೈದಾನಕ್ಕೆ ನುಗ್ಗಿದ್ದ. ಇವೆರಡು ಘಟನೆಗಳು, ಮುಂಬರುವ ಐಪಿಎಲ್ ಟೂರ್ನಿಗೆ ಪ್ರೇಕ್ಷಕರಿಗೆ ಪ್ರವೇಶ ನೀಡಲು ಮುಂದಾಗಿರುವ ಬಿಸಿಸಿಐಗೆ ಹೆಚ್ಚಿನ ತಲೆನೋವು ಎದುರಾಗುವಂತೆ ಮಾಡಿವೆ.

    ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಭಾರತ 238 ರನ್​ಗಳಿಂದ ಲಂಕಾ ಸೋಲಿಸಿ 2 ಪಂದ್ಯಗಳ ಪಿಂಕ್​ ಬಾಲ್​ ಟೆಸ್ಟ್​ ಸರಣಿಯನ್ನು ವಶಪಡಿಸಿಕೊಂಡಿದೆ. (ಏಜೆನ್ಸೀಸ್​)

    VIDEO: ಮೈದಾನಕ್ಕೆ ನುಗ್ಗಿದ ಪ್ರೇಕ್ಷಕರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭದ್ರತಾ ಲೋಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts