ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅಕಾಲಿಕ ಮರಣ ಹೊಂದಿ ನಾಳೆಗೆ ಒಂದು ವರ್ಷ ತುಂಬಲಿದೆ. ಅರ್ಧದಲ್ಲೇ ಬದುಕಿನ ಪಯಣ ಮುಗಿಸಿ, ಕಣ್ಮರೆಯಾದ ಚಿರುವಿನ ಮೊದಲ ವರ್ಷದ ಪುಣ್ಯಸ್ಮರಣೆಗೂ ಮುನ್ನವೇ ಸರ್ಜಾ ಕುಟುಂಬ ಚಿರು ನೆನೆದು ಭಾವುಕವಾಗಿ ಪೋಸ್ಟ್ ಮಾಡಿದೆ.
ನಮ್ಮ ಹೃದಯದ ಚಿರಂಜೀವಿ ಎಂದು ಆರಂಭವಾಗುವ ಪೋಸ್ಟ್ನಲ್ಲಿ ನೀವು ದೇವರ ಮನೆಗೆ ಹೋಗಿ ಒಂದು ವರುಷವಾಯಿತು. ಎಷ್ಟು ಬೇಗ ಒಂದು ವರುಷ! ಈ 365 ದಿನಗಳಲ್ಲಿ ನಿನ್ನ ನೆನೆಯದ ದಿನಗಳೇ ಇಲ್ಲ. ಕನಸಿನಲ್ಲಿ ನಿನ್ನ ಕಾಣದ ರಾತ್ರಿಗಳೇ ಇಲ್ಲ. ಮರೆಯಲಾಗದ ಚಿರ ನೆನಪುಗಳು. ಕುಟುಂಬದ ಮೇಲೆ ನಿನಗಿದ್ದ ಅಪಾರವಾದ ಗೌರವ, ಜನಗಳಿಗೆ ನೀನು ತೋರುತ್ತಿದ್ದ ಪ್ರೀತಿ, ಪ್ರೇಮ, ಸ್ನೇಹ, ಉದಾರಗುಣ ಮತ್ತು ಅಜಾತಶತ್ರುವಾಗಿದ್ದ ನಿನ್ನ ನೆನಪುಗಳೇ ಈಗ ನಮ್ಮ ಕರಗಲಾಗದ ಆಸ್ತಿ. ನೀನೆಲ್ಲಿದ್ದರು ಅಲ್ಲಿ ನಗು ತುಂಬಿರಬೇಕು. ನಿನ್ನ ಆತ್ಮ ಸದಾ ಶಾಂತಿಯಿಂದರಬೇಕು. ಆ ಪಾರ್ಥನೆಯಲ್ಲೇ, ಎಂದೆಂದೂ ನಿನ್ನ ನೆನಪಲ್ಲೇ ನಿನ್ನ ಪ್ರೀತಿಯ ಕುಟುಂಬ ಇರುತ್ತದೆ ಎಂದು ಭಾವುಕವಾಗಿ ಸರ್ಜಾ ಕುಟುಂಬ ಪೋಸ್ಟ್ ಮಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಭಾವುಕ ಪೋಸ್ಟ್ ವೈರಲ್ ಆಗಿದ್ದು, ಅಸಂಖ್ಯಾತ ಅಭಿಮಾನಿಗಳು ಚಿರು ನೆನೆದು ಭಾವುಕ ಮಾತುಗಳನ್ನಾಡಿದ್ದಾರೆ.
ಅಂದಹಾಗೆ ಕಳೆದ ವರ್ಷ ಜೂನ್ 7ರಂದು ಹೃದಯಾಘಾತದಿಂದ ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿದರು. ಪತ್ನಿ ಮೇಘನಾ ರಾಜ್ ತುಂಬು ಗರ್ಭಿಣಿಯಾಗಿದ್ದಾಗಲೇ ಚಿರು ಕೊನೆಯುಸಿರೆಳೆದರು. ಮೊದಲೇ ಕರೊನಾ ಶಾಕ್ನಲ್ಲಿದ್ದ ಕರ್ನಾಟಕ ಜನತೆಗೆ ಚಿರು ಸಾವಿನ ಸುದ್ದಿ ಕೇಳಿ ದೊಡ್ಡ ಆಘಾತವೇ ಆಯಿತು. ಸ್ಯಾಂಡಲ್ವುಡ್ ಪಾಲಿಗಂತೂ ಇದು ಕರಾಳ ಸಾವಿಗೂ ಮುನ್ನ ಚೆನ್ನಾಗಿ ಊಟ ಮಾಡಿಕೊಂಡು ಖುಷಿಯಿಂದಲೇ ಮನೆಯವರೊಂದಿಗೆ ಸಮಯ ಕಳೆದಿದ್ದ ಚಿರುಗೆ ದಿಢೀರನೇ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಕೆಲವೇ ಕ್ಷಣಗಳಲ್ಲಿ ಚಿರು ಶಾಶ್ವತವಾಗಿ ಕಣ್ಮುಚಿದರು.