More

    ಹಾಸ್ಟೆಲ್​ನಲ್ಲಿ ಸಹಪಾಠಿಗಳ ಬೆತ್ತಲೆ ವಿಡಿಯೋ ಚಿತ್ರೀಕರಿಸಿ ಜಾಲತಾಣದಲ್ಲಿ ಹರಿಬಿಟ್ಟ ಪ್ರಕರಣಕ್ಕೆ ಸ್ಫೋಟಕ ತಿರುವು!

    ಚಂಡೀಗಢ: ಖಾಸಗಿ ವಿಶ್ವವಿದ್ಯಾಲಯದ ಸಹಪಾಠಿಗಳ ಅಶ್ಲೀಲ ವಿಡಿಯೋಗಳನ್ನು ಸೋರಿಕೆ ಮಾಡಿದ ಆರೋಪದ ಅಡಿಯಲ್ಲಿ ಮೊಹಾಲಿ ಮೂಲದ ವಿದ್ಯಾರ್ಥಿನಿಯೊಬ್ಬಳನ್ನು ಚಂಡೀಗಢ ಪೊಲೀಸರು ಭಾನುವಾರ (ಸೆ. 18) ಬಂಧಿಸಿದ್ದಾರೆ. ಎಂಎಂಎಸ್​ ವಿಡಿಯೋ ವೈರಲ್​ ಆಗಿದೆ ಎಂದು ವಿದ್ಯಾರ್ಥಿನಿಯರು ಹೇಳಿದ ಬಳಿಕ ಆರೋಪಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ, ಪ್ರಕರಣವೀಗ ಬೇರೆ ತಿರುವು ಪಡೆದುಕೊಂಡಿದೆ.

    ಆರೋಪಿ ವಿದ್ಯಾರ್ಥಿನಿಯ ಒಂದೇ ಒಂದು ವಿಡಿಯೋ ಮಾತ್ರ ಸೋರಿಕೆಯಾಗಿದೆ. ಆ ವಿಡಿಯೋವನ್ನು ಆರೋಪಿ ತನ್ನ ಬಾಯ್​ಫ್ರೆಂಡ್​ಗೆ ಕಳುಹಿಸಿದ್ದಳು. ಉಳಿದಂತೆ ಯಾವುದೇ ವಿಡಿಯೋ ಸೋರಿಕೆಯಾಗಿಲ್ಲ ಎಂದು ಘಟನೆ ನಡೆದ ಪಂಜಾಬಿನ​ ಖಾಸಗಿ ವಿಶ್ವವಿದ್ಯಾಲಯವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

    ವಿಡಿಯೋ ಸೋರಿಕೆಯಾಗಿರುವ ಆರೋಪ ಕೇಳಿಬಂದ ಬೆನ್ನಲ್ಲೇ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮೊಹಾಲಿಯಲ್ಲಿರುವ ಖಾಸಗಿ ವಿವಿ ಕ್ಯಾಂಪಸ್​ಗೆ ಜಮಾಯಿಸಿ, ಘಟನೆಯ ವಿರುದ್ಧ ಪ್ರತಿಭಟನೆಯನ್ನು ನಡೆಸಿದರು. ವಿದ್ಯಾರ್ಥಿನಿಯರು ಹಾಸ್ಟೆಲ್​ನಲ್ಲಿ ಸ್ನಾನ ಮಾಡುವಾಗ ಆರೋಪಿ ವಿದ್ಯಾರ್ಥಿನಿ ರಹಸ್ಯವಾಗಿ ಚಿತ್ರೀಕರಣ ಮಾಡಿದ್ದಾಳೆ ಎಂದು ಆರೋಪಿಸಿ, ಆಕ್ರೋಶ ಹೊರಹಾಕಿದರು. ಈ ಸಂದರ್ಭದಲ್ಲಿ ಓರ್ವ ವಿದ್ಯಾರ್ಥಿನಿ ಕುಸಿದುಬೀಳಲು, ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರತಿಭಟನೆಯ ಕಾವು ಜೋರಾಗುತ್ತಿದ್ದಂತೆ ಎಫ್​ಐಆರ್​ ದಾಖಲಿಸಿದ ಪೊಲೀಸರು ಆರೋಪಿ ವಿದ್ಯಾರ್ಥಿನಿಯನ್ನು ಬಂಧಿಸಿದ್ದಾರೆ.

    ಆರೋಪಿಯನ್ನು ಬಂಧಿಸಿದ ಕೂಡಲೇ ಪಂಜಾಬಿನ ಉನ್ನತ ಶಿಕ್ಷಣ ಸಚಿವ ಗುರ್ಮೀತ್‌ ಸಿಂಗ್‌ ಮೀತ್‌ ಹೇಯರ್‌, ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ಪೊಲೀಸರ ಪ್ರಕಾರ, ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಆತ್ಮಹತ್ಯೆ ಪ್ರಯತ್ನಗಳು ಅಥವಾ ಸಾವುಗಳು ವರದಿಯಾಗಿಲ್ಲ ಎಂದು ಹೇಳಿದ್ದಾರೆ. ಘಟನೆಯ ಕುರಿತು ಪ್ರತಿಕ್ರಿಯಿಸಿದ ಪಂಜಾಬಿನ ಶಿಕ್ಷಣ ಸಚಿವ ಎಚ್‌.ಎಸ್.ಬೈನ್ಸ್, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಶಾಂತವಾಗಿರುವಂತೆ ಮನವಿ ಮಾಡಿದರು ಮತ್ತು ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ಭರವಸೆ ನೀಡಿದರು.

    ವಿದ್ಯಾರ್ಥಿನಿಯು ಹಾಸ್ಟೆಲ್​ನಲ್ಲಿ ತನ್ನೊಂದಿಗೆ ಇದ್ದ ಸಹಪಾಠಿಗಳ ಎಂಎಂಎಸ್ ಕ್ಲಿಪ್‌ಗಳನ್ನು ರಹಸ್ಯವಾಗಿ ಚಿತ್ರೀಕರಿಸಿದ್ದು, ಅವುಗಳನ್ನು ಹಿಮಾಚಲ ಪ್ರದೇಶದ ಶಿಮ್ಲಾದ ವ್ಯಕ್ತಿಯೊಬ್ಬನಿಗೆ ಕಳುಹಿಸುತ್ತಿದ್ದಳು ಎಂದು ತಿಳಿದುಬಂದಿದೆ. ಆರೋಪಿ ಕಳುಹಿಸುತ್ತಿದ್ದ ಎಂಎಂಎಸ್ ಕ್ಲಿಪ್‌ಗಳನ್ನು ಪಡೆದ ವ್ಯಕ್ತಿ ಅಂತರ್ಜಾಲದಲ್ಲಿ ಅಪ್‌ಲೋಡ್ ಮಾಡಿರುವುದಾಗಿ ತಿಳಿದುಬಂದಿದೆ. ಅವುಗಳನ್ನು ನೋಡಿ ವಿದ್ಯಾರ್ಥಿನಿಯರು ಶಾಕ್​ ಆಗಿದ್ದು, ಪ್ರತಿಭಟನೆಯನ್ನು ನಡೆಸಿದ್ದಾರೆ.

    ಹಾಸ್ಟೆಲ್ ವಿದ್ಯಾರ್ಥಿನಿಯರ 50 ರಿಂದ 60 ವೀಡಿಯೋಗಳಿವೆ. ಆಕೆ ಅದನ್ನು ತನ್ನ ಸ್ನೇಹಿತರಿಗೆ ಕಳುಹಿಸಿದ್ದಾಳೆ. ನಾವು ಘಟನೆಯ ಬಗ್ಗೆ ಪ್ರಶ್ನಿಸಿದಾಗ, ವಿಡಿಯೋ ಮಾಡಿರುವುದಾಗಿ ಒಪ್ಪಿಕೊಂಡಳು ಮತ್ತು ವಿಡಿಯೋಗಳನ್ನು ಡಿಲೀಟ್​ ಮಾಡಿದಳು ಎಂದು ವಿದ್ಯಾರ್ಥಿನಿಯೊಬ್ಬಳು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾಳೆ.

    ರಹಸ್ಯವಾಗಿ ವಿಡಿಯೋ ಚಿತ್ರೀಕರಣ ನಡೆದಿರುವುದು ಸತ್ಯ. ವಿವಿಗೆ ಕೆಟ್ಟ ಹೆಸರು ಬರುತ್ತದೆ ಅಂತಾ ಕಾಲೇಜು ಆಡಳಿತವು ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಹಾಸ್ಟೆಲ್ ವಿದ್ಯಾರ್ಥಿನಿಯರು ಮಾಧ್ಯಮದ ಮುಂದೆ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಎಂಎಂಎಸ್ ಕ್ಲಿಪ್‌ಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂಬ ವರದಿಗಳನ್ನು ಪೊಲೀಸರು ತಿರಸ್ಕರಿಸಿ, ಆರೋಪಿಯ ಒಂದು ವೀಡಿಯೊ ಮಾತ್ರ ಇದೆ ಎಂದು ಸಮರ್ಥಿಸಿಕೊಂಡರು. ಇಲ್ಲಿಯವರೆಗೆ, ಯಾವುದೇ ಹುಡುಗಿಯ ಅಂತಹ ವಿಡಿಯೋ ನಮ್ಮ ಗಮನಕ್ಕೆ ಬಂದಿಲ್ಲ. ಇದು ಹೆಚ್ಚು ವದಂತಿಯಂತೆ ತೋರುತ್ತದೆ ಎಂದು ಮೊಹಾಲಿ ಎಸ್‌ಎಸ್‌ಪಿ ವಿವೇಕ್ ಸೋನಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಅಲ್ಲದೆ, ಆರೋಪಿಯ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗುವುದು ಎಂದರು.

    ಚಂಡೀಗಢ ವಿಶ್ವವಿದ್ಯಾನಿಲಯವು ಪ್ರಕಟಣೆ ಹೊರಡಿಸಿದ್ದು, ವಿದ್ಯಾರ್ಥಿಗಳ 60 ಅಶ್ಲೀಲ ವಿಡಿಯೋಗಳಿವೆ ಎಂದು ಮಾಧ್ಯಮಗಳ ಮೂಲಕ ಹರಡುತ್ತಿರುವ ವದಂತಿಯು ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತವಾಗಿದೆ. ವಿಶ್ವವಿದ್ಯಾನಿಲಯವು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಹುಡುಗಿಯೊಬ್ಬಳು ತನ್ನ ಗೆಳೆಯನೊಂದಿಗೆ ಹಂಚಿಕೊಂಡ ವೈಯಕ್ತಿಕ ವಿಡಿಯೋವನ್ನು ಹೊರತುಪಡಿಸಿ ಯಾವುದೇ ವಿದ್ಯಾರ್ಥಿಯ ಆಕ್ಷೇಪಾರ್ಹ ವಿಡಿಯೋಗಳು ಕಂಡುಬಂದಿಲ್ಲ ಎಂದು ಹೇಳಿದೆ.

    ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದರು. ಚಂಡೀಗಢ ವಿಶ್ವವಿದ್ಯಾನಿಲಯದಲ್ಲಿ ನಡೆದ ಘಟನೆಯನ್ನು ಕೇಳಿ ಬೇಸರವಾಗಿದೆ. ನಮ್ಮ ಹೆಣ್ಣುಮಕ್ಕಳು ನಮ್ಮ ಹೆಮ್ಮೆ. ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ನಾವು ಆದೇಶಿಸಿದ್ದೇವೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ನಾನು ನಿರಂತರವಾಗಿ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇನೆ. ವದಂತಿಗಳನ್ನು ತಪ್ಪಿಸುವಂತೆ ನಿಮ್ಮಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ.

    ಪಂಜಾಬ್‌ನಲ್ಲಿ ತಮ್ಮದೇ ಆಮ್ ಆದ್ಮಿ ಪಕ್ಷ ಆಡಳಿತ ನಡೆಸುತ್ತಿದ್ದು, ಘಟನೆಯ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದ್ದು, ಇದು “ನಾಚಿಕೆಗೇಡಿನ” ಸಂಗತಿ ಎಂದಿದ್ದಾರೆ ಮತ್ತು ತಾಳ್ಮೆಯಿಂದಿರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಪಂಜಾಬ್ ರಾಜ್ಯ ಮಹಿಳಾ ಆಯೋಗವೂ ಸಹ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುತ್ತಿದೆ. ಆರೋಪಿಗಳು ಯಾರೇ ಆಗಲಿ ಬಿಡುವುದಿಲ್ಲ ಎಂದು ವಿದ್ಯಾರ್ಥಿಗಳ ಪಾಲಕರಿಗೆ ಭರವಸೆ ನೀಡಿದೆ.

    ಸದ್ಯ ಪೊಲೀಸರ ವಶದಲ್ಲಿರುವ ಆರೋಪಿಯ ವಿರುದ್ಧ ಐಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. (ಏಜೆನ್ಸೀಸ್​)

    ಮದ್ವೆ ಮಂಟಪದಲ್ಲಿ ಆಕಸ್ಮಿಕವಾಗಿ ವಧುವಿನ ಎದುರೇ ನಾದಿನಿಗೆ ಮುತ್ತಿಟ್ಟ ವರ! ಮುಂದೇನಾಯ್ತು ನೀವೇ ನೋಡಿ…

    ಸೌತ್​ ಸಿನಿರಂಗದ ಯುವ ನಟಿ ದುರಂತ ಸಾವು! ಕಾಲಿವುಡ್​ಗೆ ಮತ್ತೊಂದು ಆಘಾತ

    VIDEO: ತರಕಾರಿ ಮೇಲೆ ಮೂತ್ರ ವಿಸರ್ಜಿಸಿ ಮಾರಾಟ: ಅಸಹ್ಯ ವಿಡಿಯೋ ವೈರಲ್​- ವ್ಯಾಪಾರಿ ಪೊಲೀಸರ ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts