More

    ಬ್ರಿಟನ್​ ಪ್ರಧಾನಿಗೆ ಬಿಗ್​​ ಶಾಕ್​: ಸಚಿವ ಸ್ಥಾನಕ್ಕೆ ಇನ್ಫಿ ಮೂರ್ತಿ ಅಳಿಯ ರಿಷಿ ಸುನಾಕ್ ರಾಜೀನಾಮೆ​

    ಲಂಡನ್​: ಬ್ರಿಟನ್​ ಪ್ರಧಾನಿ ಬೋರಿಸ್​​​​ ಜಾನ್ಸನ್​ ನೇತೃತ್ವದ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. ಯುಕೆ ಹಣಕಾಸು ಸಚಿವ ಹಾಗೂ ಇನ್ಫೋಸಿಸ್​ ಸಹ ಸಂಸ್ಥಾಪಕ ಎನ್​.ಆರ್​. ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್​ ಮತ್ತು ಆರೋಗ್ಯ ಕಾರ್ಯದರ್ಶಿ ಸಾಜಿದ್​ ಜಾವಿದ್​ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬೋರಿಸ್​ ನೇತೃತ್ವದ ಸರ್ಕಾರ ಬಿಕ್ಕಟ್ಟಿಗೆ ಸಿಲುಕಿದೆ.

    ರಾಜೀನಾಮೆ ಪತ್ರ ರವಾನಿಸಿರುವ ಸುನಕ್​, ಸರ್ಕಾರ ತೊರೆಯುತ್ತಿರುವುದಕ್ಕೆ ಬೇಸರವಾಗಿದೆ. ಆದರೆ, ನಾವು ಹೀಗೆ ಮುಂದುವರೆಯಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇವೆ ಎಂದಿದ್ದಾರೆ.

    ಸರ್ಕಾರವನ್ನು ಸರಿಯಾಗಿ, ಸಮರ್ಥವಾಗಿ ಮತ್ತು ಗಂಭೀರವಾಗಿ ನಡೆಸಬೇಕೆಂದು ಸಾರ್ವಜನಿಕರು ನಿರೀಕ್ಷಿಸುತ್ತಾರೆ. ಇದು ನನ್ನ ಕೊನೆಯ ಮಂತ್ರಿ ಹುದ್ದೆ ಎಂದು ಭಾವಿಸುತ್ತೇನೆ. ಆದರೆ, ಈ ಮಾನದಂಡಗಳು ಹೋರಾಡಲು ಯೋಗ್ಯವಾಗಿದೆ ಎಂದು ನಾನು ನಂಬುತ್ತೇನೆ ಮತ್ತು ಅದಕ್ಕಾಗಿಯೇ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಸುನಕ್​ ಹೇಳಿದ್ದಾರೆ.

    ಸರಣಿ ಹಗರಣಗಳ ನಂತರ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಆಡಳಿತ ನಡೆಸುವ ಜಾನ್ಸನ್ ಅವರ ಸಾಮರ್ಥ್ಯದ ಬಗ್ಗೆ ನಾನು ವಿಶ್ವಾಸವನ್ನು ಕಳೆದುಕೊಂಡಿದ್ದೇನೆ ಎಂದ ಜಾವೀದ್ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಮುಂದೆ ಆತ್ಮಸಾಕ್ಷಿಗೆ ವಿರುದ್ಧವಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಜಾವೀದ್​ ಹೇಳಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಆಡಳಿತ ನಡೆಸುವ ಜಾನ್ಸನ್ ಅವರ ಸಾಮರ್ಥ್ಯದ ಬಗ್ಗೆ ಅನೇಕ ಶಾಸಕರು ಮತ್ತು ಸಾರ್ವಜನಿಕರು ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ಜಾವೀದ್​ ತಿಳಿಸಿದ್ದಾರೆ.

    ನಿಮ್ಮ (ಬೋರಿಸ್​ ಜಾನ್ಸನ್​) ನಾಯಕತ್ವದಲ್ಲಿ ಸದ್ಯದ ಪರಿಸ್ಥಿತಿಯು ಬದಲಾಗುವುದಿಲ್ಲ ಎಂಬುದು ನನಗೆ ಸ್ಪಷ್ಟವಾಗಿದೆ ಎಂದು ಹೇಳಲು ನಾನು ವಿಷಾದಿಸುತ್ತೇನೆ. ಈ ಕಾರಣದಿಂದಲೇ ನೀವು ನನ್ನ ಆತ್ಮವಿಶ್ವಾಸವನ್ನೂ ಕಳೆದುಕೊಂಡಿದ್ದೀರಿ ಎಂದು ಜಾವೀದ್​ ಅವರು ಪ್ರಧಾನಿ ಜಾನ್ಸನ್‌ಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಇದೀಗ ಇಬ್ಬರು ಮಂತ್ರಿಗಳು ಸರ್ಕಾರದಿಂದ ಹೊರಗಡೆ ಬಂದಿರುವುದು ಬೋರಿಸ್​ ಜಾನ್ಸನ್​ ಸರ್ಕಾರಕ್ಕೆ ಭಾರೀ ಬಿಕ್ಕಟ್ಟನ್ನು ಸೃಷ್ಟಿಸಿದೆ. ಇತ್ತೀಚಿಗೆ ಅಮಾನತುಗೊಂಡ ಸಂಸದ ಕ್ರಿಸ್ ಪಿಂಚರ್ ವಿರುದ್ಧ ಮಾಜಿ ಸರ್ಕಾರಿ ನೌಕರರೊಬ್ಬರು ಡ್ರೌವ್ನಿಂಗ್ ಸ್ಟ್ರೀಟ್​ನಲ್ಲಿ ಅಸಮರ್ಪಕ ನಿರ್ವಹಣೆ ಆರೋಪಗಳನ್ನು ಮಾಡಿದ ಬೆನ್ನಲ್ಲೇ ಈ ರಾಜೀನಾಮೆ ಬೆಳವಣಿಗೆ ನಡೆದಿದ್ದು, ಭಾರೀ ರಾಜಕೀಯ ಹೈಡ್ರಾಮಕ್ಕೆ ಬ್ರಿಟನ್​ ಸರ್ಕಾರ ಇದೀಗ ಸಾಕ್ಷಿಯಾಗಿದೆ.

    ಅಂದಹಾಗೆ 57 ವರ್ಷದ ಬೋರಿಸ್​ ಜಾನ್ಸನ್ ವಿವಾದದ ಸುಳಿಗೆ ಸಿಲುಕಿ ಸ್ವಪಕ್ಷೀಯದವರಿಂದಲೇ​ ತೀವ್ರ ವಿರೋಧ ಎದುರಿಸುತ್ತಿದ್ದಾರೆ. ಇಡೀ ಬ್ರಿಟನ್​ 2020ರ ಮೇ ತಿಂಗಳಲ್ಲಿ ಮೊದಲ ಕೋವಿಡ್​ ಲಾಕ್​ಡೌನ್​ನಲ್ಲಿ ಇರುವಾಗ ಲಂಡನ್​ನ 10 ಡ್ರೌವ್ನಿಂಗ್ ಸ್ಟ್ರೀಟ್​ನಲ್ಲಿ ಪ್ರಧಾನಿ ಜಾನ್ಸನ್​ ಮದ್ಯದ ಪಾರ್ಟಿ ನಡೆಸಿದ್ದರು ಎಂದು ಹೇಳಲಾಗಿದೆ. ಇದನ್ನು ಸ್ವತಃ ಪ್ರಧಾನಿಯೇ ಒಪ್ಪಿಕೊಂಡಿದ್ದು, 2020ರ ಬೇಸಿಗೆಯಲ್ಲಿ ತನ್ನ ಕಚೇರಿಯಲ್ಲಿ ಪಾರ್ಟಿ ಆಯೋಜಿಸಿದ್ದಾಗಿ ಹೇಳಿದ್ದಾರೆ. ಆದರೆ, ಸಾಂಕ್ರಮಿಕ ಸಮಯದಲ್ಲಿ ತಮ್ಮ ಸಿಬ್ಬಂದಿಯ ಶ್ರಮಕ್ಕೆ ಪ್ರತಿಫಲವಾಗಿ ಈ ಕಾರ್ಯಕ್ರಮ ನಡೆಸಲಾಯಿತು ಎಂದು ಜಾನ್ಸನ್​ ಸಮರ್ಥನೆಯನ್ನು ನೀಡಿದ್ದಾರೆ.

    ಇನ್ನು ಪಾರ್ಟಿಗೆ ಸಂಬಂಧಿಸಿದ ವಿಡಿಯೋವೊಂದು ಸಹ ಇತ್ತೀಚೆಗಷ್ಟೇ ವೈರಲ್​ ಆಗಿತ್ತು. ಪ್ರತಿಪಕ್ಷ ಲೇಬರ್​ ಪಾರ್ಟಿ ಮತ್ತು ತಮ್ಮದೇ ಕನ್ಸರ್ವೇಟಿವ್​ ಪಕ್ಷದಲ್ಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ, ಬ್ರಿಟನ್​ ಜನರ ಕೆಂಗಣ್ಣಿಗೂ ಜಾನ್ಸನ್​ ಅವರ ನಡೆ ಗುರಿಯಾಗಿದ್ದು, ಅವರ ಖ್ಯಾತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಇದು ಪಕ್ಷದ ಮೇಲೆ ಪರಿಣಾಮ ಬೀಳಲಿದೆ ಎಂಬುದು ಸ್ವಪಕ್ಷದ ನಾಯಕರ ಅಭಿಪ್ರಾಯವಾಗಿದೆ.

    ಈ ವಿವಾದದ ಬಗ್ಗೆ ಲಂಡನ್​ನ ಹೌಸ್​ ಆಫ್​ ಕಾಮನ್​ನಲ್ಲಿ ಪ್ರಧಾನಿ ಬೋರಿಸ್​ ಜಾನ್ಸನ್​ ಅವರು ಕ್ಷಮೆಯಾಚನೆ ಮಾಡಿದರೂ ಕೂಡ ಅವರದೇ ಕನ್ಸರ್ವೇಟಿವ್​ ಪಕ್ಷದ ನಾಯಕರು ಅವರ ರಾಜೀನಾಮೆಗೆ ಒತ್ತಾಯಿಸಿದ್ದರು. ಸರ್ಕಾರವೇ ಮಾಡಿದ ಲಾಕ್​ಡೌನ್​ ಮಾರ್ಗಸೂಚಿಯನ್ನು ಉಲ್ಲಂಘಿಸಿ ಜನರಿಗೆ ತಪ್ಪು ಸಂದೇಶವನ್ನು ರವಾನಿಸಿದ್ದಾರೆ. ಸರ್ಕಾರದ ಮೇಲೆ ಜನರ ಭಾವನೆ ಬದಲಾಗುವಂತೆ ಜಾನ್ಸನ್​ ನಡೆದುಕೊಂಡಿದ್ದಾರೆ. ಕೋವಿಡ್​ ಸಂದರ್ಭದಲ್ಲೂ ಕೂಡ ಸರಿಯಾದ ನಿರ್ವಹಣೆ ಮಾಡಲಿಲ್ಲ ಅಂತಾ ಸಾಲು ಸಾಲು ಆರೋಪಗಳು ಜಾನ್ಸನ್​​ ವಿರುದ್ಧ ಕೇಳಿಬಂದಿದ್ದು, ರಾಜೀನಾಮೆಗೆ ಬೇಡಿಕೆ ಹೆಚ್ಚಾಗಿದೆ. ಡೌನಿಂಗ್ ಸ್ಟ್ರೀಟ್‌ ಮತ್ತು ಇತರ ಎಲ್ಲಾ ಸರ್ಕಾರಿ ಕ್ವಾರ್ಟರ್‌ಗಳಲ್ಲಿ ನಡೆದಿರುವ ಲಾಕ್‌ಡೌನ್ ಉಲ್ಲಂಘನೆಗಳ ಕುರಿತು ಹಿರಿಯ ನಾಗರಿಕ ಸೇವಕ ಸ್ಯೂ ಗ್ರೇ ಅವರು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ. ಇದರ ನಡುವೆ ಇಬ್ಬರು ಮಂತ್ರಿಗಳು ರಾಜೀನಾಮೆ ನೀಡಿರುವ ಬೋರಿಸ್​ ಸರ್ಕಾರಕ್ಕೆ ಭಾರೀ ಹೊಡೆತ ಬಿದ್ದಂತಾಗಿದ್ದು, ಮುಂದೆ ಇದು ಯಾವ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

    ಚಂದ್ರಶೇಖರ ಗುರೂಜಿ ಕೊಲೆಗೈದ ಆರೋಪಿಗಳು ಅಷ್ಟು ಬೇಗ ಸಿಕ್ಕಿಬೀಳಲು ಆ ಒಂದು ಫೋನ್​ ಕಾಲ್ ನೆರವಾಯ್ತಾ?​

    ಹಿಂದಿ ವೆಬ್​ಸಿರೀಸ್​ನಲ್ಲಿ ಭಾವನಾ

    ಜಸ್ಟಿಸ್ ವಿರುದ್ಧ ಸಿಜೆಐಗೆ ಪತ್ರ: ನೂಪುರ್ ವಿರುದ್ಧ ತಪರಾಕಿಗೆ ಮಾಜಿ ಅಧಿಕಾರಿಗಳ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts