More

    ಜಸ್ಟಿಸ್ ವಿರುದ್ಧ ಸಿಜೆಐಗೆ ಪತ್ರ: ನೂಪುರ್ ವಿರುದ್ಧ ತಪರಾಕಿಗೆ ಮಾಜಿ ಅಧಿಕಾರಿಗಳ ಆಕ್ರೋಶ

    ನವದೆಹಲಿ: ಪ್ರವಾದಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಪಕ್ಷದಿಂದ ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ವರನ್ನು ಸುಪ್ರೀಂಕೋರ್ಟ್ ನ್ಯಾಯಪೀಠ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವುದರ ವಿರುದ್ಧ 117 ನಿವೃತ್ತ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್.ವಿ.ರಮಣಗೆ ಪತ್ರ ಬರೆದಿದ್ದಾರೆ.

    ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಪರ್ದಿವಾಲಾರ ಪೀಠ ಆಡಿದ ಮಾತುಗಳು ಕಟುವಾಗಿವೆ ಎಂದು 15 ನಿವೃತ್ತ ನ್ಯಾಯಮೂರ್ತಿಗಳು, 77 ನಿವೃತ್ತ ಅಧಿಕಾರಿಗಳು ಮತ್ತು 25 ನಿವೃತ್ತ ಸಶಸ್ತ್ರ ಪಡೆ ಅಧಿಕಾರಿಗಳು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ನ್ಯಾಯಮೂರ್ತಿಗಳ ಟಿಪ್ಪಣಿ ದುರದೃಷ್ಟಕರ ಮತ್ತು ಖಂಡನಾರ್ಹ ಎಂದಿದ್ದಾರೆ.

    ಜಸ್ಟೀಸ್ ಸೂರ್ಯಕಾಂತ್ ಅವರ ರೋಸ್ಟರ್ ಅನ್ನು ಹಿಂಪಡೆಯಬೇಕು ಮತ್ತು ನೂಪುರ್ ವಿರುದ್ಧ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಮಾಡಿರುವ ಟೀಕೆಗಳನ್ನು ಹಿಂತೆಗೆದುಕೊಳ್ಳುವಂತೆ ಸೂಚಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ. ನೂಪುರ್ ಮಾತುಗಳಿಂದ ರಾಷ್ಟ್ರದ ಭದ್ರತೆಗೆ ತೊಂದರೆಯಾಗಿದೆ. ದೇಶಾದ್ಯಂತ ಉಂಟಾಗಿರುವ ಹಿಂಸಾಚಾರದ ಪರಿಸ್ಥಿತಿಗೆ ಅವರೇ ಏಕೈಕ ಕಾರಣ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು. ಆದರೆ ಈ ಅಭಿಪ್ರಾಯಗಳು ನ್ಯಾಯಪೀಠದ ಆದೇಶದಲ್ಲಿ ದಾಖಲಾಗಿರಲಿಲ್ಲ. ತಮ್ಮ ವಿರುದ್ಧ ದಾಖಲಾಗಿರುವ ಎಲ್ಲ ಎಫ್​ಐಆರ್​ಗಳನ್ನು ದೆಹಲಿಗೆ ವರ್ಗಾಯಿಸಬೇಕೆಂದು ನೂಪುರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ತೀವ್ರ ಟೀಕೆಗಳನ್ನು ಮಾಡಿತ್ತು.

    ಸಹಿ ಹಾಕಿರುವ ಪ್ರಮುಖರು: ಬಾಂಬೆ ಹೈಕೋರ್ಟ್​ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕಶ್ತಿಜಿ ವ್ಯಾಸ್, ಕೇರಳ ಹೈಕೋರ್ಟ್​ನ ನಿವೃತ್ತ ಜಸ್ಟೀಸ್ ಪಿ.ಎ.ರವೀಂದ್ರನ್, ಗುಜರಾತ್ ಹೈಕೋರ್ಟ್​ನ ಮಾಜಿ ನ್ಯಾಯಮೂರ್ತಿ ಎಸ್.ಎಂ.ಸೋನಿ, ರಾಜಸ್ಥಾನ ಹೈಕೋರ್ಟ್​ನ ನಿವೃತ್ತ ಜಡ್ಜ್ ಆರ್.ಎಸ್.ರಾಥೋಡ್, ನಿವೃತ್ತ ಹಿರಿಯ ಅಧಿಕಾರಿಗಳ ಪೈಕಿ ಆನಂದ್ ಬೋಸ್, ಆರ್.ಎಸ್.ಗೋಪಾಲನ್, ಎಸ್.ಕೃಷ್ಣ ಕುಮಾರ್, ಎಸ್.ಪಿ. ವೈದ್, ಬಿ.ಎಲ್. ವೋಹ್ರಾ, ಮಾಜಿ ರಾಯಭಾರಿ ನಿರಂಜನ್ ದೇಸಾಯಿ, ಸೇನೆಯ ನಿವೃತ್ತ ಅಧಿಕಾರಿಗಳ ಪೈಕಿ ಲೆ.ಜನರಲ್ ವಿ.ಕೆ. ಚತುರ್ವೆದಿ, ಏರ್ ಮಾರ್ಷಲ್ ಎಸ್.ಪಿ.ಸಿಂಗ್ ಸೇರಿ 117 ಮಂದಿ ನಿವೃತ್ತ ಅಧಿಕಾರಿಗಳ ಸಹಿ ಪತ್ರದಲ್ಲಿ ಇದೆ.

    ಕಾನ್ಪುರ ಹಿಂಸಾಚಾರದ ಆರೋಪಿ ಸೆರೆ: ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ ಖಂಡಿಸಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣದ ಆರೋಪಿ ಹಾಜಿ ವಾಸಿಯನ್ನು ಲಖನೌ ವಿಮಾನ ನಿಲ್ದಾಣದ ಬಳಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

    ಹಲವರಿಗೆ ಬೆದರಿಕೆ: ಔಷಧ ವ್ಯಾಪಾರಿ ಉಮೇಶ್ ಪ್ರಹ್ಲಾದರಾವ್ ಕೊಲ್ಹೆ ಹತ್ಯೆ ಮಾಡಿದ ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿರುವ ಮಧ್ಯೆ, ನೂಪುರ್ ಶರ್ವರ ವಿವಾದಾತ್ಮಕ ಕಾಮೆಂಟ್​ಗಳನ್ನು ಬೆಂಬಲಿಸಿದ ಅಮರಾವತಿ ಮೂಲದ ಮೂವರು ನಿವಾಸಿಗಳಿಗೆ ಜೀವ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಒಬ್ಬರು ದೂರು ನೀಡಿದ್ದಾರೆ.

    ಹೊಂಚು ಹಾಕಿದ್ದ ಹಂತಕರು: ಉಮೇಶ್​ರನ್ನು ಕೊಲ್ಲುವ ಮೊದಲ ಪ್ರಯತ್ನವನ್ನು ಜೂನ್ 20ಕ್ಕೆ ನಡೆದಿತ್ತು. ಆದರೆ ಅವರು ಅಂಗಡಿಯನ್ನು ಬೇಗ ಮುಚ್ಚಿದ್ದರಿಂದ ಹತ್ಯೆ ಮಾಡಲು ಸಾಧ್ಯವಾಗಿರಲಿಲ್ಲ. ಜೂನ್ 21ರಂದು ರಾತ್ರಿ 10 ಗಂಟೆ ನಂತರ ಉಮೇಶ್ ಮೆಡಿಕಲ್ ಶಾಪ್​ನಿಂದ ಮನೆಗೆ ಸ್ಕೂಟರ್​ನಲ್ಲಿ ಹಿಂತಿರುಗುತ್ತಿದ್ದಾಗ ಇಬ್ಬರು ಹಂತಕರು ಬೈಕ್​ನಲ್ಲಿ ಅವರನ್ನು ಹಿಂಬಾಲಿಸಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹತ್ಯೆಗೆ 17 ನಿಮಿಷಕ್ಕೆ ಮುನ್ನವೇ ಸ್ಥಳಕ್ಕೆ ಬಂದಿದ್ದ ಮೂವರು ದುಷ್ಕರ್ವಿುಗಳು ತಮ್ಮ ಮುಖವನ್ನು ಕಪ್ಪು ಬಟ್ಟೆಯಿಂದ ಮುಚ್ಚಿಕೊಂಡಿದ್ದರು ಎಂಬುದು ವಿಡಿಯೋದಲ್ಲಿ ಸೆರೆಯಾಗಿದೆ.

    ಮರಣೋತ್ತರ ಪರೀಕ್ಷೆಯ ವರದಿ: ಉಮೇಶ್ ಕುತ್ತಿಗೆಯ ಮೇಲಿನ ಇರಿತವು ಐದು ಇಂಚು ಅಗಲ, ಏಳು ಇಂಚು ಉದ್ದ ಮತ್ತು 5 ಇಂಚು ಆಳವಾಗಿದೆ ಎಂಬುದನ್ನು ಬಹಿರಂಗ ಪಡಿಸಿದೆ. ಹರಿತವಾದ ಆಯುಧವನ್ನು ಬಳಸಿ ತಕ್ಷಣವೇ ಸಾಯ ಬೇಕು ಎಂಬಂತೆ ದಾಳಿ ಮಾಡಲಾಗಿದೆ. ಮಿದುಳು, ಗಂಟಲು, ಕಣ್ಣುಗಳಿಗೆ ಸಂರ್ಪಸುವ ನರಗಳನ್ನು ಗುರಿ ಯಾಗಿಸಿಯೇ ದಾಳಿ ಮಾಡಲಾಗಿದೆ ಎಂದು ವರದಿ ಹೇಳಿದೆ.

    ಮತ್ತೊಬ್ಬನ ಬಂಧನ: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ ಲಾಲ್ ಹತ್ಯೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಮತ್ತೊಬ್ಬನನ್ನು ಬಂಧಿಸಿದೆ. ಬಂಧಿತ ಆರೋಪಿ ಮೊಹಮ್ಮದ್ ಮೊಹ್ಸಿನ್ ಮಾಂಸದ ಅಂಗಡಿ ನಡೆಸುತ್ತಿದ್ದ ಎನ್ನಲಾಗಿದೆ. ಆತನ ಮನೆಯಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗೊತ್ತಾಗಿದೆ.ಕನ್ಹಯ ಹತ್ಯೆಗೆ ಸಂಬಂಧಿಸಿ ಅಂತಾರಾಷ್ಟ್ರೀಯ ಉಗ್ರ ಸಂಪರ್ಕಗಳ ಬಗ್ಗೆ ತನಿಖೆ ನಡೆಸುತ್ತಿರುವ ಎನ್​ಐಎ, ಪಾಕಿಸ್ತಾನದ ಕರಾಚಿ ಮೂಲದ ದಾವತ್-ಎ-ಇಸ್ಲಾಮಿ ಸಂಘಟನೆ ಪಾತ್ರದ ಬಗ್ಗೆಯೂ ಪರಿಶೀಲಿಸುತ್ತಿದೆ.

    ದಾವೆಗೆ ಅನುಮತಿ ಕೋರಿಕೆ: ನೂಪುರ್ ವಿರುದ್ಧ ಸುಪ್ರೀಂಕೋರ್ಟ್ ಅಭಿಪ್ರಾಯಗಳನ್ನು ಬೇಜವಾಬ್ದಾರಿ, ಕಾನೂನುಬಾಹಿರ ಮತ್ತು ಆಕ್ಷೇಪಾರ್ಹ ಎಂದು ಟೀಕಿಸಿದ್ದ ದೆಹಲಿ ಹೈಕೋರ್ಟ್​ನ ಮಾಜಿ ನ್ಯಾಯಮೂರ್ತಿ ಎಸ್.ಎನ್. ಧಿಂಗ್ರಾ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಒಪ್ಪಿಗೆ ಕೋರಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್​ಗೆ ಮನವಿ ಸಲ್ಲಿಕೆಯಾಗಿದೆ. ಅದೇ ರೀತಿ ಸುಪ್ರೀಂಕೋರ್ಟನ್ನು ಪ್ರಶ್ನೆ ಮಾಡಿದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮನ್ ಲೇಖಿ ಮತ್ತು ಹಿರಿಯ ವಕೀಲ ಕೆ. ರಾಮ ಕುಮಾರ್ ವಿರುದ್ಧವೂ ಇದೇ ರೀತಿಯ ಕ್ರಮ ಕೈಗೊಳ್ಳುವಂತೆ ವಕೀಲ ಸಿ.ಆರ್.ಜಯ ಸುಕಿನ್ ಪತ್ರದಲ್ಲಿ ಕೋರಿದ್ದಾರೆ.

    ನೂಪುರ್ ಹತ್ಯೆಗೆ ಇನಾಮು ಘೋಷಿಸಿದ ಚಿಸ್ತಿ: ಅಜ್ಮೀರ್ ದರ್ಗಾದ ಧರ್ಮಗುರುಗಳಲ್ಲಿ ಒಬ್ಬರಾದ ಸೈಯದ್ ಸಲ್ಮಾನ್ ಚಿಸ್ತಿ ನೂಪುರ್ ಶರ್ಮಾ ಅವರ ಶಿರಚ್ಛೇದ ಮಾಡಿದವ ರಿಗೆ ತಮ್ಮ ಮನೆ ಮತ್ತು ಆಸ್ತಿಯನ್ನು ನೀಡುವುದಾಗಿ ಘೊಷಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನೂಪುರ್​ರನ್ನು ಕೊಲ್ಲುವಂತೆ ಮನವಿ ಮಾಡುವ ಚಿಸ್ತಿ, ಖ್ವಾಜಾ ಸಾಹೇಬ್ ಮತ್ತು ಮಹಮ್ಮದ್ ಸಾಹೇಬರ ಗೌರವಕ್ಕೆ ಆಕೆ ಚ್ಯುತಿ ತಂದಿದ್ದಾಳೆ. ಹೀಗಿರುವಾಗ ಆಕೆಯ ಶಿರಚ್ಛೇದ ಮಾಡುವವರಿಗೆ ಮನೆ ಮತ್ತು ಆಸ್ತಿ ನೀಡುತ್ತೇನೆ ಎಂದಿದ್ದಾರೆ. ಈ ವಿಡಿಯೋ ಆಧಾರದಲ್ಲಿ ಚಿಸ್ತಿ ವಿರುದ್ಧ ಎಫ್​ಐಆರ್ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts