More

    ಇರಾನ್​ ಮಹಿಳೆಯರ ಮೇಲೆ ನೈತಿಕ ಪೊಲೀಸ್​ಗಿರಿ: ವಿವಸ್ತ್ರಳಾಗಿ ನನ್ನ ದೇಹ ನನ್ನ ಆಯ್ಕೆ ಎಂದ ಬಾಲಿವುಡ್​ ನಟಿ

    ನವದೆಹಲಿ: ಹಿಜಾಬ್​ ಸೇರಿದಂತೆ ವಿವಿಧ ಕಠಿಣ ನಿಯಮಗಳನ್ನು ವಿರೋಧಿಸುತ್ತಿರುವ ಹೆಣ್ಣು ಮಕ್ಕಳ ಮೇಲೆ ಇರಾನ್​ನಲ್ಲಿ ನಡೆಯುತ್ತಿರುವ ‘ನೈತಿಕ ಪೊಲೀಸ್​ ಗಿರಿ’ಗೆ ಎಲ್ಲೆಡೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಇರಾನ್​ ಮೂಲದ ಬಾಲಿವುಡ್​ ನಟಿ ಎಲ್ನಾಜ್ ನೊರೌಜಿ ವಿವಸ್ತ್ರಗಳಾಗುವ ಮೂಲಕ ನೈತಿಕ ಪೊಲೀಸ್​ ಗಿರಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

    ಎಲ್ನಾಜ್ ನೊರೌಜಿ ಅವರು ನೆಟ್​ಫ್ಲಿಕ್ಸ್​ ಸರಣಿಯ ‘ಸೇಕ್ರೆಡ್​ ಗೇಮ್ಸ್​’ನಲ್ಲಿ ನಟಿಸಿದ್ದಾರೆ. ಸದ್ಯ ಇನ್​ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿರುವ ಎಲ್ನಾಜ್, ನನ್ನ ದೇಹ ನನ್ನ ಆಯ್ಕೆ ಎಂದು ಹೇಳುವ ಮೂಲಕ ಬಯಸಿದ್ದನ್ನು ಧರಿಸುವ ಹಕ್ಕನ್ನು ಖಾತ್ರಿ ಪಡಿಸಿದ್ದಾರೆ.

    ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ವಿಡಿಯೋದಲ್ಲಿ ಎಲ್ನಾಜ್​ ಅವರು ತಾವು ಧರಿಸಿದ್ದ ಬಟ್ಟೆಯ ಹಲವು ಪದರಗಳನ್ನು ಒಂದೊಂದಾಗಿ ಕಳಚಿಡುವ ಮೂಲಕ ಅರೆಬೆತ್ತಲಾಗುತ್ತಾರೆ. ಈ ಮೂಲಕ ನನಗೆ ಅನಿಸಿದ್ದನ್ನು ನಾನು ಧರಿಸುತ್ತೇನೆ ಮತ್ತು ಇದು ನನ್ನ ಹಕ್ಕು ಸಹ ಹೌದು. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.

    ವಿಶ್ವದ ಯಾವುದೇ ಮೂಲೆಯಲ್ಲಿರುವ ಪ್ರತಿ ಮಹಿಳೆಗು ಆಕೆಯ ಬಯಸಿದ್ದನ್ನು ಧರಿಸುವ ಹಕ್ಕಿದೆ. ಆಕೆ ಎಲ್ಲಿಯವಳು ಎಂಬುದು ಮುಖ್ಯವಲ್ಲ. ಆಕೆ ಇಚ್ಛಿಸಿದ್ದನ್ನು ಧರಿಸುವ ಸಂಪೂರ್ಣ ಸ್ವಾತಂತ್ರ್ಯವಿದೆ. ಯಾವುದೇ ಪುರುಷ ಅಥವಾ ಇತರ ಯಾವುದೇ ಮಹಿಳೆಗೆ ಅವಳನ್ನು ನಿರ್ಣಯಿಸಲು ಅಥವಾ ಅವಳನ್ನು ಬೇರೆ ರೀತಿಯ ಉಡುಗೆ ಧರಿಸುವಂತೆ ಹೇಳುವ ಹಕ್ಕು ಹೊಂದಿಲ್ಲ. ಪ್ರತಿಯೊಬ್ಬರಿಗೂ ಅವರದ್ದೇಯಾದ ವಿಭಿನ್ನ ದೃಷ್ಟಿಕೋನ ಮತ್ತು ನಂಬಿಕೆಗಳು ಇರುತ್ತವೆ ಮತ್ತು ಅವುಗಳಿಗೆ ಗೌರವ ಕೊಡಬೇಕು. ಪ್ರಜಾಪ್ರಭುತ್ವ ಎಂದರೆ ನಿರ್ಧರಿಸುವ ಶಕ್ತಿ. ಪ್ರತಿಯೊಬ್ಬ ಮಹಿಳೆಗೆ ತನ್ನ ದೇಹದ ಮೇಲೆ ನಿರ್ಧರಿಸುವ ಅಧಿಕಾರವನ್ನು ಹೊಂದಿರಬೇಕು. ನಾನಿಲ್ಲಿ ನಗ್ನತೆಯನ್ನು ಪ್ರಚಾರ ಮಾಡುತ್ತಿಲ್ಲ, ನಾನು ಆಯ್ಕೆಯ ಸ್ವಾತಂತ್ರ್ಯವನ್ನು ಪ್ರಚಾರ ಮಾಡುತ್ತಿದ್ದೇನೆ ಎಂದು ಎಲ್ನಾಜ್​ ಬರೆದಿದ್ದಾರೆ.

    ಅಂದಹಾಗೆ ಎಲ್ನಾಜ್​ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು, 10 ವರ್ಷಗಳಿಗೂ ಹೆಚ್ಚು ಕಾಲ ಡಿಯರ್, ಲ್ಯಾಕೋಸ್ಟ್ ಮತ್ತು ಲೆ ಕಾಕ್ ಸ್ಪೋರ್ಟಿವ್‌ನಂತಹ ಬ್ರಾಂಡ್‌ಗಳಿಗೆ ಅಂರಾರಾಷ್ಟ್ರೀಯ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದರು. ಪರ್ಷಿಯನ್ ಸಾಂಪ್ರದಾಯಿಕ ನೃತ್ಯದಲ್ಲಿ ತರಬೇತಿ ಪಡೆದಿರುವುದಲ್ಲದೆ, ಭಾರತದಲ್ಲಿ ಅವರು ಕಥಕ್ ನೃತ್ಯವನ್ನು ಕಲಿಯುತ್ತಿದ್ದಾರೆ.

    ಇನ್ನು ಇರಾನ್​ನಲ್ಲಿ ಮಹಿಳೆಯರನ್ನು ಕಠಿಣ ನಿಯಮಗಳ ಒಳಗೆ ಇಡಲಾಗಿದೆ. ಇಸ್ಲಾಮಿಕ್ ರಿಪಬ್ಲಿಕ್‌ನ ಕಟ್ಟುನಿಟ್ಟಾದ ಡ್ರೆಸ್ ಕೋಡ್‌ನ ಉಲ್ಲಂಘನೆ ಮಾಡುವಂತಿಲ್ಲ. ಒಂದು ಉಲ್ಲಂಘನೆ ಕಂಡುಬಂದಲ್ಲಿ ಅಂಥವರಿಗೆ ಹಿಜಾಬ್​ ಹೇಗೆ ಧರಿಸಬೇಕು ಎಂಬುದರ ಕುರಿತು ಉಪನ್ಯಾಸಕ್ಕಾಗಿ ವೈಸ್ ಯೂನಿಟ್‌ಗಳ ಹಸಿರು ಮತ್ತು ಬಿಳಿ ಬಣ್ಣದ ವ್ಯಾನ್‌ ಒಳಗೆ ಎಳೆದು ಕ್ರೂರವಾಗಿ ಹೊಡೆಯುವ ಮೂಲಕ ನೈತಿಕ ಪೊಲೀಸ್​ ಗಿರಿ ಪ್ರದರ್ಶಿಸಲಾಗುತ್ತದೆ.

    ಈವರೆಗೂ ಅನೇಕ ಇರಾನಿನ ಮಹಿಳೆಯರು ತುಂಬಾ ಕೆಟ್ಟದ್ದನ್ನು ಎದುರಿಸಿದ್ದಾರೆ. ಅವರಲ್ಲಿ ಒಬ್ಬರಆದ ಮಹ್ಸಾ ಅಮಿನಿ (22) ಎಂಬಾಕೆಯನ್ನು ಸೆಪ್ಟೆಂಬರ್ 16 ರಂದು ಟೆಹ್ರಾನ್‌ನಲ್ಲಿ ನೈತಿಕ ಪೊಲೀಸರು ಬಂಧಿಸಿ ಕರೆದೊಯ್ದಿದ್ದರು. ಇದಾದ ಮೂರು ದಿನಗಳ ನಂತರ ಆಕೆ ಮೃತಪಟ್ಟಳು. ಆಕೆಯನ್ನು ಹೊಡೆದು ಸಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಘಟನೆ ಇರಾನ್​ನಲ್ಲಿ ಮಹಿಳೆಯರು ಬೀದಿಗೆ ಇಳಿದು ಹೋರಾಡಲು ಪ್ರಚೋದನೆ ನೀಡಿದ್ದು, ಅಂದಿನಿಂದ ನಡೆದುಕೊಂಡು ಬರುತ್ತಿರುವ ಪ್ರತಿಭಟನೆಗೆ ವಿಶ್ವಾದ್ಯಂತ ಸಾಕಷ್ಟು ಬೆಂಬಲ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್​)

    ಆರ್ಥಿಕ ಏಳಿಗೆಗಾಗಿ ಮಹಿಳೆಯರಿಬ್ಬರ ಬಲಿ: ಕೇರಳ ಜನತೆಯನ್ನು ಬೆಚ್ಚಿಬೀಳಿಸಿದ ವಾಮಾಚಾರ ಪ್ರಕರಣವಿದು

    ವಿಧಿ ನೀನೆಷ್ಟು ಕ್ರೂರಿ? ಭಾರತದಿಂದ ಆಸ್ಕರ್​ ಪ್ರವೇಶ ಪಡೆದ ಗುಜರಾತಿ ಸಿನಿಮಾದ ಬಾಲನಟ ಇನ್ನಿಲ್ಲ

    ಬೆಂಗ್ಳೂರು ವಿವಿಯಲ್ಲಿ ಬಿಬಿಎಂಪಿಯಿಂದ ಅವೈಜ್ಞಾನಿಕ ಹಂಪ್ಸ್​ ನಿರ್ಮಾಣ: ಒಂದೇ ದಿನ 3 ಅಪಘಾತ, ಕೋಮಾಗೆ ಜಾರಿದ ಬೈಕ್​ ಸವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts