More

    ಸೇನಾ ಹೆಲಿಕಾಪ್ಟರ್​ ಪತನ: ತನಿಖಾ ವರದಿ ಪೂರ್ಣ, ಸೇನಾ ಮೂಲಗಳು ಕೊಟ್ಟ ಕಾರಣ ಹೀಗಿದೆ…

    ನವದೆಹಲಿ: ಭಾರತೀಯ ಸೇನಾಪಡೆಗಳ ಮುಖ್ಯಸ್ಥ ಬಿಪಿನ್​ ರಾವತ್​ ಸೇರಿ 14 ಮಂದಿ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಪತನಕ್ಕೆ ಹವಾಮಾನ ವೈಪರಿತ್ಯವೇ ಕಾರಣ ಎಂದು ಸೇನಾ ಮೂಲಗಳು ತಿಳಿಸಿವೆ. ಸೇನಾ ಸಿಬ್ಬಂದಿ ನಡೆಸಿದ ತನಿಖೆ ಸಂಪೂರ್ಣಗೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ವರದಿಯನ್ನು ಸರ್ಕಾರಕ್ಕೆ ಸೇನೆ ಸಲ್ಲಿಸಲಿದೆ.

    ಡಿಸೆಂಬರ್​ 8ರಂದು ಭಾರತೀಯ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 14 ಮಂದಿ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್​ ತಮಿಳುನಾಡಿನ ಕೂನೂರಿನಲ್ಲಿ ಪತನಗೊಂಡಿತ್ತು. ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ಸೇರಿದಂತೆ 13 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು. ಬದುಕುಳಿದಿದ್ದ ಪೈಲಟ್​ ಕ್ಯಾಪ್ಟನ್​ ವರುಣ್​ ಸಿಂಗ್​ ಅವರು ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

    ಸೇನಾ ಹೆಲಿಕಾಪ್ಟರ್​ ಪತನಕ್ಕೆ ಕಾರಣವೇನು ಎಂಬ ಪ್ರಶ್ನೆ ಇದುವರೆಗೂ ಪ್ರಶ್ನೆಯಾಗಿಯೇ ಉಳಿದಿತ್ತು. ಇದೀಗ ಸೇನಾ ಸಿಬ್ಬಂದಿ ನಡೆಸಿರುವ ತನಿಖೆಯಲ್ಲಿ ಕಳಪೆ ವಾತಾವರಣವೇ ಹೆಲಿಕಾಪ್ಟರ್​ ಪತನಕ್ಕೆ ಕಾರಣ ಎಂದು ತಿಳಿದುಬಂದಿದೆ. ಇದುವರೆಗೂ ಸರ್ಕಾರವಾಗಲಿ ಸೇನೆಯಾಗಲಿ ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಆದರೆ, ಸೇನಾ ಮೂಲಗಳ ಪ್ರಕಾರ ಕಳಪೆ ವಾತಾವರಣದಿಂದ ಸ್ಪಷ್ಟವಾಗಿ ಗೋಚರಿಸದೇ ಇರುವುದೇ ಹೆಲಿಕಾಪ್ಟರ್​ ಪತನಕ್ಕೆ ಕಾರಣವೆಂದು ಹೇಳಲಾಗಿದೆ.

    ಪೈಲಟ್ ದೋಷವೇ ಪತನಕ್ಕೆ ಮೂಲ ಕಾರಣವಾಯ್ತಾ ಅಥವಾ ಗುಡ್ಡಗಾಡು ಪ್ರದೇಶಗಳಲ್ಲಿ ಮೋಡದೊಳಗೆ ಕಾರ್ಯಾಚರಣೆ ನಡೆಸುವ ನಿಯಮಗಳನ್ನು ಕಡೆಗಣಿಸಲಾಗಿದೆಯೇ ಎಂಬ ಬಗ್ಗೆ ಯಾವುದೇ ಹೇಳಿಕೆ ಅಥವಾ ವಿವರಣೆ ಲಭ್ಯವಾಗಿಲ್ಲ. ಆದರೆ, ಪತನದ ದಿನ ಕಳಪೆ ಹವಾಮಾನದಿಂದ ಸ್ಪಷ್ಟವಾಗಿ ಗೋಚರಿಸದ ಕಾರಣ ದಿಗ್ಭ್ರಮೆಗೊಂಡ ಪೈಲಟ್​, ಆಕಸ್ಮಿಕವಾಗಿ ಹೆಲಿಕಾಪ್ಟರ್​ ಅನ್ನು ಭೂಪ್ರದೇಶದ ಕಡೆಗೆ ಹಾರಿಸಿರಬಹುದೆಂದು ದೇಶದ ಅತ್ಯುನ್ನತ ಹೆಲಿಕಾಪ್ಟರ್​ ಪೈಲಟ್​ಗಳಲ್ಲಿ ಒಬ್ಬರಾದ ಏರ್​ ಮಾರ್ಷಲ್​ ಮನ್ವೇಂದ್ರ ಸಿಂಗ್​ ನೇತೃತ್ವದ ವಿಚಾರಣಾ ನ್ಯಾಯಾಲಯ ನಂಬಿರುವುದಾಗಿ ಮೂಲಗಳು ತಿಳಿಸಿವೆ.

    ಇನ್ನು ಹೆಲಿಕಾಪ್ಟರ್​ನ ತಾಂತ್ರಿಕ ದೋಷಗಳು ಅಥವಾ ಯಾಂತ್ರಿಕ ದೋಷಗಳ ಸಾಧ್ಯತೆಯನ್ನು ವಿಚಾರಣಾ ನ್ಯಾಯಾಲಯ ತಳ್ಳಿಹಾಕಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ವರದಿಯನ್ನು ಅಂತಿಮಗೊಳಿಸುವಲ್ಲಿ ವಾಯುಪಡೆಯ ಕಾನೂನು ವಿಭಾಗವು ತನಿಖಾ ತಂಡಕ್ಕೆ ಸಲಹೆ ನೀಡುತ್ತಿದ್ದು, ಐದು ದಿನಗಳಲ್ಲಿ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಅವರಿಗೆ ವರದಿ ಸಲ್ಲಿಸುವ ನಿರೀಕ್ಷೆಯಿದೆ.

    ನಡೆದಿದ್ದೇನು?
    ಡಿಸೆಂಬರ್​ 8ರಂದು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿರುವ ವೆಲ್ಲಿಂಗ್ಟನ್‌ನ ಮಿಲಿಟರಿ ಶಾಲೆಯಲ್ಲಿ ನಿಗದಿಯಾಗಿದ್ದ ಸೆಮಿನಾರ್​ಗೆಂದು ಸಿಡಿಎಸ್​ ಬಿಪಿನ್​ ರಾವತ್, ಅವರ ಪತ್ನಿ ಮಧುಲಿಕಾ ರಾವತ್​, ಬ್ರಿಗೇಡಿಯರ್​ ಎಲ್​.ಎಸ್​.ಲಿಡ್ಡರ್​, ಲೆಫ್ಟಿನೆಂಟ್ ಕರ್ನಲ್​ ಹರ್ಜಿಂದರ್ ಸಿಂಗ್​, ನಾಯಕ್​ ಗುರುಸೇವಕ್​ ಸಿಂಗ್, ನಾಯಕ್​ ಜಿತೇಂದರ್​ ಕುಮಾರ್​, ಲ್ಯಾನ್ಸ್ ನಾಯಕ್​ ವಿವೇಕ್ ಕುಮಾರ್​, ಲ್ಯಾನ್ಸ್ ನಾಯಕ್​ ಬಿ ಸಾಯ್​ತೇಜ್​, ಹವಲ್ದಾರ್​ ಸತ್ಪಾಲ್​ ಸೇರಿದಂತೆ 14 ಮಂದಿ ರಷ್ಯಾ ನಿರ್ಮಿತ ಸೇನಾ ಹೆಲಿಕಾಪ್ಟರ್ Mi-17V5 ​ನಲ್ಲಿ ಹೋಗುತ್ತಿದ್ದರು. ಮಾರ್ಗಮಧ್ಯೆ ಹೆಲಿಕಾಪ್ಟರ್​ ಪತನಗೊಂಡು ಸ್ಥಳದಲ್ಲೇ ಬಿಪಿನ್​ ರಾವತ್​ ದಂಪತಿ ಸೇರಿ 13 ಮಂದಿ ಮೃತಪಟ್ಟಿದ್ದರು. ಅಪಘಾತದಲ್ಲಿ ಬದುಕಿ ಉಳಿದಿದ್ದ ಏಕೈಕ ಯೋಧ ಐಎಎಫ್​ ಗ್ರೂಪ್​​ ಕ್ಯಾಪ್ಟನ್​ ವರುಣ್​ ಸಿಂಗ್ ಅವರನ್ನು ತಮಿಳುನಾಡಿನ ವೆಲ್ಲಿಂಗ್ಟನ್​ ಮಿಲಿಟರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕಮಾಂಡ್​ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ನುರಿತ ವೈದ್ಯರ ತಂಡ ವರುಣ್​ ಸಿಂಗ್​ರನ್ನು ಬದುಕಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿತ್ತಾದರೂ ಚಿಕಿತ್ಸೆ ಫಲಿಸದೆ ಡಿಸೆಂಬರ್​ 15ರಂದು ಕೊನೆಯುಸಿರೆಳೆದರು. (ಏಜೆನ್ಸೀಸ್​)

    ಒಂದು ವಾರದ ಹಿಂದಷ್ಟೇ ಮದುವೆ ಆಗಿದ್ದ ಸಬ್​ ಇನ್ಸ್​​ಪೆಕ್ಟರ್​ ಹೊಸ ವರ್ಷದಂದೇ ದುರಂತ ಸಾವು!

    ಟಿಕೆಟ್​ ದರ ಇಳಿಕೆ ವಿರೋಧಿಸುವವರೇ ಬಡವರ ನಿಜವಾದ ಶತ್ರುಗಳು: ಸಿನಿಮಂದಿಗೆ ಆಂಧ್ರ ಸಿಎಂ ತಿರುಗೇಟು

    ಟಿಕೆಟ್​ ದರ ಇಳಿಕೆ ವಿರೋಧಿಸುವವರೇ ಬಡವರ ನಿಜವಾದ ಶತ್ರುಗಳು: ಸಿನಿಮಂದಿಗೆ ಆಂಧ್ರ ಸಿಎಂ ತಿರುಗೇಟು

    ಯಾವ ಕೆಲ್ಸವೂ ಚಿಕ್ಕದಲ್ಲ: ಸೈಕಲ್​ನಲ್ಲಿ ಕಾಫಿ ಮಾರುವ ಈ ಇಂಜಿನಿಯರ್ ಕತೆ ಕೇಳಿದ್ರೆ​ ಮನಕಲಕುತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts