More

    ಮಾಜಿ ಪತ್ನಿ ಎರಡನೇ ಮದ್ವೆಯಾದ ಬೆನ್ನಲ್ಲೇ ತಾನೂ ಮತ್ತೊಂದು ವಿವಾಹಕ್ಕೆ ರೆಡಿಯಾದ IAS​ ಅಧಿಕಾರಿ

    ಜೈಪುರ: ಕಳೆದ ವರ್ಷ ಡಿವೋರ್ಸ್​ ಪಡೆದಿದ್ದ ಸೆಲೆಬ್ರಿಟಿ ಐಎಎಸ್​ ಅಧಿಕಾರಿ ಟೀನಾ ಡಾಬಿ ಅವರು ಎರಡನೇ ವಿವಾಹವಾದ ಬೆನ್ನಲ್ಲೇ ಅವರ ಮಾಜಿ ಪತಿ ಹಾಗೂ ಐಎಎಸ್​ ಅಧಿಕಾರಿ ಅಥರ್​ ಅಮೀರ್​ ಖಾನ್​ ಕೂಡ ಎರಡನೇ ಮದುವೆಗೆ ಸಿದ್ಧರಾಗಿದ್ದಾರೆ.

    ಅಥರ್​ ಖಾನ್​ ಅವರು ಮರು ವಿವಾಹದ ಸುದ್ದಿಯನ್ನು ಇನ್​ಸ್ಟಾಗ್ರಾಂನಲ್ಲಿ ಭಾವಿ ಪತ್ನಿಯ ಫೋಟೋ ಶೇರ್​ ಮಾಡುವ ಮೂಲಕ ಖಚಿತಪಡಿಸಿದ್ದಾರೆ. ಈಗಾಗಲೇ ನಿಶ್ಚಿತಾರ್ಥ ನೆರವೇರಿದೆ. ಅಥರ್​ ಅವರು ತಮ್ಮದೇ ಸಮುದಾಯದ ಡಾ. ಮೆಹ್ರೀನ್​ ಖಾಜಿ ಎಂಬುವರನ್ನು ವರಿಸಲಿದ್ದಾರೆ. ಮೆಹ್ರಿನ್​ ಅವರು ಕೂಡ ಅಥರ್​ ಜೊತೆಗಿರುವ ಫೋಟೋವನ್ನು ಪೋಸ್ಟ್​ ಮಾಡಿದ್ದಾರೆ.

    2015ರ ಬ್ಯಾಚ್​ನ ಐಎಎಸ್​ ಪರೀಕ್ಷೆಯಲ್ಲಿ ಟೀನಾ ಡಾಬಿ ಟಾಪರ್ ಆದರೆ, ಕಾಶ್ಮೀರ ಮೂಲದ ಅಥರ್​​ ಖಾನ್​ ಅವರು ಎರಡನೇ ರ್ಯಾಂಕ್​ ಪಡೆದಿದ್ದರು. ತರಬೇತಿ ಸಮಯದಲ್ಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿ, 2018ರ ಏಪ್ರಿಲ್​ 7ರಂದು ವಿವಾಹವಾಗಿದ್ದರು. ಇಬ್ಬರು ಸಹ ರಾಜಸ್ಥಾನ ಕೇಡರ್​ನ ಅಧಿಕಾರಿಗಳಾಗಿದ್ದು, ಜೈಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಆರಂಭದಲ್ಲಿ ಎಲ್ಲವೂ ಉತ್ತಮವಾಗಿತ್ತು. ಆದರೆ, ನಂತರದ ದಿನಗಳಲ್ಲಿ ಇಬ್ಬರ ನಡುವೆ ವೈಮನಸ್ಸು ಉಂಟಾಯಿತು. ಟೀನಾ ಡಾಬಿ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರಿನ ಮುಂದೆ ಖಾನ್ ಎಂಬ​ ಸರ್​ನೇಮ್​ ತೆಗೆದು ಹಾಕಿದಾಗಿನಿಂದ ಇಬ್ಬರ ನಡುವಿನ ವಿವಾಹ ಸಂಬಂಧ ಕುರಿತು ಸಾಕಷ್ಟು ಸುದ್ದಿಯಾಗಿತ್ತು. ಅದೇ ಸಮಯದಲ್ಲಿ ಅಥರ್​ ಸಹ ಇನ್​ಸ್ಟಾಗ್ರಾಂನಲ್ಲಿ ಟೀನಾ ಅವರನ್ನು ಅನ್​ಫಾಲೋ ಮಾಡಿದ್ದು, ಇಬ್ಬರ ನಡುವೆ ಯಾವುದೂ ಸರಿಯಿಲ್ಲ ಎಂಬುದಕ್ಕೆ ಪುಷ್ಠಿ ನೀಡಿತ್ತು. ಮದುವೆಯಾದ ಎರಡು ವರ್ಷಗಳ ಬಳಿಕ 2020ರ ನವೆಂಬರ್ ತಿಂಗಳದಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರು ಜೈಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದರು. 2021ರ ಆಗಸ್ಟ್​ ತಿಂಗಳಲ್ಲಿ ದಂಪತಿಯ ಡಿವೋರ್ಸ್​ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿತು.

    ಡಿವೋರ್ಸ್​ ಪಡೆದ ಬೆನ್ನಲ್ಲೇ ಟೀನಾ ಡಾಬಿ ಅವರು ಎರಡನೇ ಮದುವೆಗೆ ರೆಡಿಯಾಗಿದರು. ತನಗಿಂತ ಮೂರು ವರ್ಷ ಹಿರಿಯರಾದ ಐಎಎಸ್​ ಅಧಿಕಾರಿ ಪ್ರದೀಪ್​ ಗಾವಂಡೆ ಅವರನ್ನು ಏಪ್ರಿಲ್​ 22ರಂದು ಜೈಪುರದಲ್ಲಿ ನಡೆದ ಸರಳ ಮದುವೆ ಸಮಾರಂಭದಲ್ಲಿ ಟೀನಾ ಡಾಬಿ ಕೈಹಿಡಿದರು. ಟೀನಾ ಡಾಬಿ ಅವರು ಪ್ರಸ್ತುತ ರಾಜಸ್ಥಾನ ಸರ್ಕಾರದಲ್ಲಿ ಹಣಕಾಸು (ತೆರಿಗೆ) ಜಂಟಿ ಕಾರ್ಯದರ್ಶಿಯಾಗಿದ್ದಾರೆ. ಗಾವಂಡೆ ಸಹ 2013ನೇ ಸಾಲಿನ ರಾಜಸ್ಥಾನ ಕೇಡರ್​ನ ಐಎಎಸ್​ ಅಧಿಕಾರಿಯಾಗಿದ್ದು, ಜೈಪುರದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಾಬಿ ಅವರಿಗೆ ಇದು ಎರಡನೇ ಮದುವೆಯಾಗಿದ್ದರೆ, ಗಾವಂಡೆಗೆ ಮೊದಲ ಮದುವೆಯಾಗಿದೆ.

    ಮಾಜಿ ಪತಿ ಅಥರ್​ ಖಾನ್​ ಮತ್ತು ಟೀನಾ ಡಾಬಿ ಮದುವೆ ಬಹಳ ಅದ್ಧೂರಿಯಾಗಿ ನಡೆದಿತ್ತು. ಅನೇಕ ಹಿರಿಯ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಗಣ್ಯರು ಮದುವೆ ಸಮಾರಂಭದಲ್ಲಿ ಭಾಗಿಯಾಗಿ ಆಶೀರ್ವದಿಸಿದ್ದರು. ಇವರಿಬ್ಬರ ಮದುವೆ ಭಾರೀ ಸುದ್ದಿ ಸಹ ಆಗಿತ್ತು. ಕೆಲವರು ದಂಪತಿಗೆ ಶುಭಕೋರಿದರೆ, ಹಿಂದು ಮಹಾಸಭಾ, ಐಎಎಸ್​ ಅಧಿಕಾರಿಗಳಿಬ್ಬರ ಮದುವೆಯನ್ನು ಲವ್​ ಜಿಹಾದ್ ಎಂದು​ ಕರೆದಿತ್ತು. (ಏಜೆನ್ಸೀಸ್​)

    ಗಾಲ್ಫ್​ ಆಡುವಾಗ ಬೆನ್ನ ಹಿಂದೆಯೇ ಹೊಂಚು ಹಾಕಿ ಬರುತ್ತಿರೋ ಮೊಸಳೆ: ಮುಂದೇನಾಯ್ತು ನೀವೇ ನೋಡಿ

    ಐಸಿಸ್ ಸೇರ್ಪಡೆಯಾದ ಕೇರಳ ಯುವತಿಯರು..

    ರಜೆಯೂ ಇಲ್ಲ, ಭತ್ಯೆಯೂ ಸಿಗ್ತಿಲ್ಲ!; ಪೊಲೀಸ್ ಕಾನ್​ಸ್ಟೇಬಲ್​ಗಳಿಗೆ ಗೋಳು, ಠಾಣಾಧಿಕಾರಿಗೆ ಇಕ್ಕಟ್ಟು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts