More

    ಐಸಿಸ್ ಸೇರ್ಪಡೆಯಾದ ಕೇರಳ ಯುವತಿಯರು..

    ಐಸಿಸ್ ಸೇರ್ಪಡೆಯಾದ ಕೇರಳ ಯುವತಿಯರು..ಉಗ್ರವಾದಿ ಕೃತ್ಯಗಳ ಬಗ್ಗೆ ತನಿಖೆ ನಡೆಸುವ ರಾಷ್ಟ್ರೀಯ ತನಿಖಾ ದಳ (ಎನ್​ಐಎ)ದ ಮುಂಬೈ ಕಚೇರಿಗೆ 2019 ರ ಅಂತ್ಯದ ಒಂದು ದಿನ ಬಂದ 45 ವರ್ಷದ ಮಹಿಳೆ ಹೀಗೆ ದೂರು ನೀಡಿದಳು: ‘ನನ್ನ ಹೆಸರು ಮಿನಿ ಸೆಬಾಸ್ಟಿಯನ್. ನಾನು ಕೇರಳದ ಮಧ್ಯಮ ವರ್ಗದ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿರುವೆ. ನನ್ನ ಮಗಳು ಸೋನಿಯಾ ತನ್ನ 22ನೆಯ ವರ್ಷಕ್ಕೆ ಕಣ್ಣಾನೂರಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಳು. 2011ರಲ್ಲಿ ಕ್ಯಾಂಪಸ್ ನೇಮಕಾತಿಯಲ್ಲಿ ಆಕೆಗೆ ಪ್ರತಿಷ್ಠಿತ ಐಬಿಎಂ ಕಂಪನಿಯಲ್ಲಿ ಮುಂಬೈನಲ್ಲಿ ಉತ್ತಮ ಸಂಬಳದ ನೌಕರಿ ದೊರೆಯಿತು. ಕೆಲಕಾಲ ನಮ್ಮ ಸಂಬಂಧಿಕರೊಬ್ಬರ ಮನೆಯಲ್ಲಿದ್ದು ಆನಂತರ ಪಿಜಿಯಲ್ಲಿ ಸಹೋದ್ಯೋಗಿಗಳ ಜತೆಗೆ ವಾಸಿಸತೊಡಗಿದಳು.

    ಸುಮಾರು ಆರು ತಿಂಗಳ ನಂತರ, 2012 ರಲ್ಲಿ, ಆಕೆಯಿಂದ ಎಂದಿನಂತೆ ಫೋನ್ ಬರದಿದ್ದಾಗ ನಾವು ಗಾಬರಿಗೊಂಡು ಅವಳ ಕಚೇರಿಯಲ್ಲಿ ವಿಚಾರಿಸಿದೆವು. ಆಕೆ ನೌಕರಿಗೆ ರಾಜೀನಾಮೆ ನೀಡಿರುವುದಾಗಿ ತಿಳಿದಾಗ ನಮಗೆ ಆಘಾತವಾಯಿತು. ನಾವು ಸೋನಿಯಾಳ ಬಗ್ಗೆ ಎಲ್ಲಿ ವಿಚಾರಿಸಿದರೂ ಯಾವ ಸುಳಿವೂ ಸಿಗಲಿಲ್ಲ. ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಬೇಕೆಂದು ಹೋದಾಗ ಮುಂಬೈಗೆ ಹೋಗಿ ದೂರು ನೀಡಲು ಪೊಲೀಸರು ಸೂಚಿಸಿದರು. ಅಷ್ಟು ದೂರ ಹೋಗಲಾರದ ನಾವು ಸುಮ್ಮನಾದರೂ ಮುಂಬೈನಲ್ಲಿನ ನಮ್ಮ ಪರಿಚಯಸ್ಥರಿಗೆ ಅವಳನ್ನು ಹುಡುಕಲು ತಿಳಿಸಿದೆವು.

    2013 ರ ಒಂದು ದಿನ ಸೋನಿಯಾಳಿಂದ ನನಗೆ ಇದ್ದಕ್ಕಿದ್ದಂತೆ ಕರೆ ಬಂದಿತು. ಫೇಸ್​ಬುಕ್ ಹುಡುಕುವಾಗ ತನ್ನ ಶಾಲಾ ಮಿತ್ರ ವಿನ್ಸೆಂಟ್​ನ ಫೋಟೋ ಕಂಡಿದ್ದಾಗಿಯೂ, ಆತನಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದಾಗ ಆತ ಕೂಡಲೇ ಮಿತ್ರನಾದನೆಂದೂ ತಿಳಿಸಿದಳು. ವಿನ್ಸೆಂಟ್ ನಮ್ಮ ಕುಟುಂಬಕ್ಕೆ ಪರಿಚಯವಿದ್ದ. ಆತ ಮತ್ತು ಸೋನಿಯಾ ಒಂದೇ ಶಾಲೆಯಲ್ಲಿ ಆರು ವರ್ಷಗಳ ಕಾಲ ಕಲಿತಿದ್ದು ಒಬ್ಬರಿಗೊಬ್ಬರು ಹತ್ತಿರವಾಗಿದ್ದರು. ನಂತರ ವಿನ್ಸೆಂಟ್​ನ ತಂದೆಗೆ ಬೇರೆ ಊರಿಗೆ ವರ್ಗವಾಗಿದ್ದ ಕಾರಣ ಅವರ ಕುಟುಂಬ ಇಲ್ಲಿಂದ ಹೊರಟುಹೋಗಿತ್ತು. ಬಹಳ ವರ್ಷಗಳ ನಂತರ ವಿನ್ಸೆಂಟ್ ಸಿಕ್ಕಿದ್ದು ಬಹಳ ಖುಷಿಯಾಯಿತೆಂದ ಸೋನಿಯಾ, ಆತ ತಾನೂ ಮುಂಬೈನಲ್ಲಿ ಇರುವುದಾಗಿ ಹೇಳಿದನೆಂದು ತಿಳಿಸಿದಳು. ಆನಂತರ ಅವರಿಬ್ಬರೂ ಭೇಟಿಯಾದಾಗ ವಿನ್ಸೆಂಟ್ 3 ವರ್ಷಗಳಿಂದ ಮುಂಬೈನಲ್ಲಿಯೇ ಸಹೋದರನ ಜತೆ ವಾಸಿಸುತ್ತಿರುವುದಾಗಿ ತಿಳಿಸಿದನಂತೆ. ವಿನ್ಸೆಂಟ್ ತಾನು ನೌಕರಿ ಮಾಡುತ್ತಿಲ್ಲ; ಇಸ್ಲಾಂ ಧರ್ಮದತ್ತ ಆಕರ್ಷಣೆಗೊಂಡು ಅದನ್ನು ಹೆಚ್ಚಾಗಿ ಅಭ್ಯಸಿಸಲು ಮುಂಬೈಗೆ ಬಂದಿದ್ದಾಗಿ ಹೇಳಿದನಂತೆ. ಮುಂಬೈನಲ್ಲಿ ಧರ್ಮಪ್ರಚಾರಕ ಝಾಕಿರ್ ನಾಯಕ್ ನಡೆಸುತ್ತಿರುವ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ಕೇಂದ್ರದಲ್ಲಿ ಅಧ್ಯಯನ ಮಾಡುತ್ತಿರುವುದಾಗಿ ತಿಳಿಸಿ ತಾನು ಮತ್ತು ಸಹೋದರ ಕ್ರಿಶ್ಚಿಯನ್ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು ತಮ್ಮ ಹೆಸರುಗಳನ್ನು ರಷೀದ್ ಹಾಗೂ ಯಾಹ್ಯಾ ಎಂಬುದಾಗಿ ಬದಲಾಯಿಸಿಕೊಂಡಿರುವುದಾಗಿ ಆತ ಹೇಳಿದಾಗ ತಾನು ಗಾಬರಿಗೊಂಡಿದ್ದಾಗಿ ಸೋನಿಯಾ ತಿಳಿಸಿದಳು.

    ಮುಂದಿನ ದಿನಗಳಲ್ಲಿ ವಿನ್ಸೆಂಟ್ ಪದೇಪದೆ ಭೇಟಿಯಾಗಿ ಲಗ್ನವಾಗಲು ಪೀಡಿಸಿದ್ದಲ್ಲದೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಪ್ರೇರೇಪಿಸಿ ತನ್ನನ್ನು ಲಗ್ನವಾಗಿರುವುದಾಗಿ ತಿಳಿಸಿ ಸೋನಿಯಾ ಫೋನ್ ಕಟ್ ಮಾಡಿದಳು. ನಾವು ಅವಳನ್ನು ಸಂರ್ಪಸಲು ಮಾಡಿದ ಪ್ರಯತ್ನಗಳೆಲ್ಲಾ ವ್ಯರ್ಥವಾದವು. ಕೆಲ ತಿಂಗಳುಗಳ ಹಿಂದೆ ನಿಮ್ಮ ಪೊಲೀಸ್ ಠಾಣೆಯಲ್ಲಿ ಕೇರಳ ರಾಜ್ಯಕ್ಕೆ ಸಂಬಂಧಿಸಿದ ಇಂತಹುದೇ ಒಂದು ಲವ್ ಜಿಹಾದ್ ಪ್ರಕರಣ ದಾಖಲಾಗಿದೆ ಎಂದು ನನಗೆ ವೃತ್ತಪತ್ರಿಕೆಗಳ ಮೂಲಕ ತಿಳಿಯಿತು. ಸೋನಿಯಾಳನ್ನು ವಿನ್ಸೆಂಟ್ ಬಲವಂತದಿಂದ ಲಗ್ನವಾಗಿ ಬೇರೆಲ್ಲಿಯೋ ಅಡಗಿಸಿಟ್ಟಿರಬಹುದೆಂಬ ಸಂಶಯವಿದೆ. ದಯವಿಟ್ಟು ಕಾಣೆಯಾಗಿರುವ ನನ್ನ ಮಗಳನ್ನು ಹುಡುಕಿಕೊಡಿ.’

    ‘ಮೇಡಂ 2016ರ ಸೆಪ್ಟೆಂಬರ್​ನಲ್ಲಿ ನಿಮ್ಮ ಮಗಳಂತೆ ಹಲವಾರು ಯುವಕ ಯುವತಿಯರನ್ನು ಪುಸಲಾಯಿಸಿ ಇಸ್ಲಾಂಧರ್ಮಕ್ಕೆ ಪರಿವರ್ತಿಸಿ ಅವರನ್ನು ಐಸಿಸ್ (ಇಸ್ಲಾಮಿಕ್ ಸ್ಟೇಟ್) ಎಂದು ಕರೆಯಲಾಗುವ ಗುಂಪಿನ ಸದಸ್ಯರನ್ನಾಗಿ ಮಾಡಿ ಆ ಉಗ್ರರ ಪ್ರಾಬಲ್ಯದಲ್ಲಿರುವ ಸಿರಿಯಾ ಇಲ್ಲವೇ ಅಫ್ಘಾನಿಸ್ತಾನಕ್ಕೆ ಕರೆದೊಯ್ದಿರಬೇಕು ಎಂದು ದೂರಿರುವ ಪ್ರಕರಣ ದಾಖಲಾಗಿದೆ. ನಿಮ್ಮ ಮಗಳ ಪ್ರಕರಣವನ್ನೂ ಅದರೊಂದಿಗೆ ಸೇರಿಸಿ ತನಿಖೆ ನಡೆಸುತ್ತೇವೆ’ ಎಂದು ಅಧಿಕಾರಿಗಳು ಆಕೆಗೆ ತಿಳಿಸಿದರು.

    ಕೇರಳದ ಕಾಸರಗೋಡಿನ ನಿವಾಸಿ ಅಬ್ದುಲ್ ರಷೀದ್ ಅಬ್ದುಲ್ಲಾ, ಝಾಕಿರ್ ನಾಯಕನ ಸೂಚನೆಯಂತೆ ಯುವಕ ಯುವತಿಯರನ್ನು ಇಸ್ಲಾಂಧರ್ಮಕ್ಕೆ ಪರಿವರ್ತಿಸಲು ಆರಂಭಿಸಿದ್ದ. ಆನಂತರ ಆತ ಐಸಿಸ್​ನತ್ತ ಆಕರ್ಷಿತನಾಗಿ ಈ ಉಗ್ರ ಸಂಘಟನೆಗೆ ಸೇರಲು ತಾನು ಪರಿವರ್ತನೆ ಮಾಡುತ್ತಿದ್ದ ಜನರನ್ನು ಪ್ರಚೋದಿಸುತ್ತಿದ್ದ ಎಂಬ ದೂರಿನ ಮೇರೆಗೆ ಆ ಪ್ರಕರಣ ದಾಖಲಾಗಿತ್ತು. ರಷೀದ್ ಕೇರಳದ ಸುಮಾರು 20 ಯುವಕ ಯುವತಿಯರನ್ನು ಭಾರತದಿಂದ ವಿದೇಶಕ್ಕೆ ಕರೆದುಕೊಂಡು ಹೋಗಿರುವುದಾಗಿ ಭಾರತದ ಗೂಢಚರ ವಿಭಾಗದ ಅಧಿಕಾರಿಗಳಿಗೆ ತಿಳಿದುಬಂದಿತ್ತು. ಈ ಬಗ್ಗೆ ಮಾಹಿತಿ ಪಡೆದಿದ್ದ ಎನ್​ಐಎ ಮುಂಬೈನಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿತ್ತು.

    ಮುಂದಿನ ತನಿಖೆಯಲ್ಲಿ ತಿಳಿದಿದ್ದೇನೆಂದರೆ ರಷೀದ್ ತಾನು ಇಸ್ಲಾಂ ಧರ್ಮಕ್ಕೆ ಪರಿವರ್ತನೆಗೊಂಡ ನಂತರ ತನಗೆ ಪರಿಚಿತವಿರುವ ಯುವಕ ಯುವತಿಯರನ್ನು ಫೇಸ್​ಬುಕ್, ವಾಟ್ಸಪ್ ಮತ್ತು ಇನ್​ಸ್ಟ್ಟಾಗ್ರಾಂ ಮುಂತಾದವುಗಳ ಮೂಲಕ ಸಂರ್ಪಸಿ ಅವರಿಗೆ ಇಸ್ಲಾಂ ಧರ್ಮದ ಬಗ್ಗೆ ಮಾಹಿತಿ ನೀಡಿ ಆ ಧರ್ಮಕ್ಕೆ ಮತಾಂತರಹೊಂದಿ ಇಡೀ ವಿಶ್ವವನ್ನೇ ಇಸ್ಲಾಂ ಧರ್ವಿುಯವಾಗಿ ಪರಿವರ್ತಿಸಬೇಕೆಂದು ಪ್ರಚೋದಿಸುತ್ತಿದ್ದ. ಆ ಧರ್ಮಕ್ಕೆ ಸೇರಿದರೆ ಸ್ವರ್ಗ ಸುಖ ಸಿಗುತ್ತದೆ ಎಂದು ಆತ ಮನಸೆಳೆಯುವ ವಿಡಿಯೋಗಳನ್ನು ಮಾಡಿ ಪ್ರಸಾರ ಮಾಡುತ್ತಿದ್ದ. ಇದಲ್ಲದೆ ಟೆಲಿಗ್ರಾಂ ಆಪ್ ಮೂಲಕ ನೂರಾರು ಜನರಿಗೆ ಆಡಿಯೋ ಮೆಸೇಜುಗಳನ್ನು ಕಳಿಸಿ ಇಸ್ಲಾಮಿಕ್ ಸ್ಟೇಟ್ ಬಗ್ಗೆ ಪ್ರಚಾರ ನಡೆಸುತ್ತಿದ್ದ. ಭಾರತದಲ್ಲಿ ಅವನಿಗೆ ಸಹಕಾರ ನೀಡಲು ರಿಜ್ವಾನ್ ಖಾನ್, ಅರ್ಷಿ ಖುರೇಷಿ ಮತ್ತು ಶಿಹಾಸ್ ಎನ್ನುವ ಮೂವರು ಕೇರಳ ಮೂಲದ ಜನರಿದ್ದರು.

    ಸೋನಿಯಾಳ ಬಗ್ಗೆ ಆರಂಭದಿಂದಲೂ ಪ್ರೇಮಭಾವ ಹೊಂದಿದ್ದ ವಿನ್ಸೆಂಟ್ (ರಷೀದ್) ಅವಳು ಮುಂಬೈನಲ್ಲಿರುವುದಾಗಿ ಅರಿತ ಕೂಡಲೇ ಅವಳನ್ನು ವಾರಕ್ಕೊಮ್ಮೆ ಭೇಟಿಯಾಗತೊಡಗಿದ. ಕಾಲಕ್ರಮೇಣ ತನ್ನನ್ನು ಮದುವೆಯಾಗಲು ಸೋನಿಯಾಳನ್ನು ಒಪ್ಪಿಸಿದ. ನಂತರ ಆಕೆಯನ್ನು ಕೆಲಸದಿಂದ ಬಿಡಿಸಿ ಕಾಸರಗೋಡಿನಲ್ಲಿದ್ದ ತನ್ನ ಮನೆಗೆ ಕರೆದೊಯ್ದ. ಅಲ್ಲಿ ಆತ ಅವಳಿಗೆ ಪವಿತ್ರ ಕುರಾನ್ ಗ್ರಂಥವನ್ನು ಕೊಟ್ಟು ಅದರಲ್ಲಿರುವ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳಲು ಸೂಚಿಸಿದ. ‘ನೀನು ನನ್ನನ್ನು ಮದುವೆಯಾಗಬೇಕಾದರೆ ಮೊದಲು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಬೇಕು’ ಎಂದು ಹೇಳಿ ಒಪ್ಪಿಸಿದ.

    ಏತನ್ಮಧ್ಯೆ ರಷೀದ್​ನ ಸೋದರ ಬೆಸ್ಟಿನ್ (ಯಾಹ್ಯಾ) ಮೆರ್ರಿನ್ ಎಂಬ ಕೇರಳದ ಕ್ರೈಸ್ತ ಹುಡುಗಿಯನ್ನು ಪ್ರೇಮಿಸಿದ್ದ. ಅವರಿಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಮೆರ್ರಿನ್​ಳಿಗೂ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಬೇಕೆಂದು ಯಾಹ್ಯಾ ತಿಳಿಸಿದ್ದ. ಅದಕ್ಕವಳು ಒಪ್ಪಿದ್ದಳು. ಅವಳನ್ನೂ ಕಾಸರಗೋಡಿಗೆ ಕರೆದುಕೊಂಡು ಬಂದು ಸೋನಿಯಾಳಿದ್ದ ರೂಮಿನಲ್ಲಿಯೇ ಇರಿಸಲಾಯಿತು. ಕೆಲ ವಾರಗಳ ಕಾಲ ಇಬ್ಬರಿಗೂ ಕಾಸರಗೋಡಿನ ಮೌಲಾನಾ ಹನೀಫಾ ಎಂಬ ಹೆಸರಿನ ಇಮಾಂ, ಇಸ್ಲಾಂಗೆ ಪರಿವರ್ತನೆಗೊಳ್ಳುವಂತೆ ಹೇಳಿದ್ದಲ್ಲದೆ ಧರ್ಮಯುದ್ಧ ಮಾಡಲು ಆತಂಕವಾದವೇ ಸೂಕ್ತ ಎಂದು ಅವರನ್ನು ಪ್ರಚೋದಿಸಿದ. ಸೋನಿಯಾಗೆ ಆಯೇಷಾಳೆಂದೂ, ಮೆರ್ರಿನ್​ಗೆ ಮರಿಯಂಳೆಂದೂ ಮರುನಾಮಕರಣ ಮಾಡಲಾಯಿತು. 2013 ರಲ್ಲಿ ಎರಡೂ ಜೋಡಿಗಳು ವಿವಾಹವಾದವು.

    ಎರಡೂ ಜೋಡಿಗಳು ಮಧುಚಂದ್ರಕ್ಕೆಂದು ಶ್ರೀಲಂಕಾಕ್ಕೆ ಹೋದರು. ಅಲ್ಲಿಂದ ಕೇರಳಕ್ಕೆ ವಾಪಸಾದ ನಂತರ ರಷೀದ್ ತಾವೆಲ್ಲರೂ ಇಸ್ಲಾಂಗಾಗಿ ಧರ್ಮಯುದ್ಧ ಮಾಡಬೇಕು, ತಾವು ನಾಲ್ಕು ಜನರಲ್ಲಿ ಇಬ್ಬರು ಇಂಜಿನಿಯರಿಂಗ್ ಪದವಿ ಪಡೆದಿರುವುದರಿಂದ ಸಂಘಟನೆಯಲ್ಲಿ ಉತ್ತಮ ಸ್ಥಾನಮಾನ ಸಿಗುತ್ತದೆ ಎಂದು ಹೇಳಿದ. ಇಸ್ಲಾಮಿಕ್ ಸ್ಟೇಟ್ ಆಳುತ್ತಿರುವ ಪ್ರಾಂತಗಳಲ್ಲಿ ಷರಿಯಾ ಕಾನೂನು ಜಾರಿಯಿದ್ದು ಕಾಫಿರರ ದೇಶವಾದ ಭಾರತವನ್ನು ತಾವು ಬಿಟ್ಟು ಹೋಗಬೇಕು ಎಂದ. ಆತ ಇಂಟರ್​ನೆಟ್ಟಿನ ಡಾರ್ಕ್ ವೆಬ್ ಮೂಲಕ ಐಸಿಸ್ ನಾಯಕರನ್ನು ಸಂರ್ಪಸಿ ತಾನು ಇತರರೊಂದಿಗೆ ಐಸಿಸ್ ಸೇರಲಿಚ್ಛಿಸಿರುವುದಾಗಿ ತಿಳಿಸಿ ಅವರಿಂದ ಮುಂದಿನ ಸೂಚನೆಗಳನ್ನು ಪಡೆದ.

    ಏತನ್ಮಧ್ಯೆ ರಷೀದನ ತಂಡಕ್ಕೆ ಪಾಲಕ್ಕಾಡ್​ನ ಯುವತಿ ನಿಮಿಷಾ ಸೇರ್ಪಡೆಗೊಂಡಳು. ಅವಳನ್ನೂ ಇಸ್ಲಾಂಗೆ ಪರಿವರ್ತಿಸಿ ಫಾತಿಮಾ ಎಂದು ಹೆಸರಿಡಲಾಯಿತು. ಆನಂತರ ಐದೂ ಜನರು 2016 ರ ಸೆಪ್ಟೆಂಬರಿನಲ್ಲಿ ವಿಮಾನದ ಮೂಲಕ ದುಬೈಗೆ ಹೋದರು. ಅಲ್ಲಿಂದ ಇರಾನ್​ಗೆ ಹೋಗಿ ಮುಂದೆ ಅಫ್ಘಾನಿಸ್ತಾನದ ಹೇರತ್ ಪಟ್ಟಣ ತಲುಪಿ ಅಲ್ಲಿಂದ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತದ ಅಧಿಕಾರದಲ್ಲಿರುವ ಪ್ರದೇಶವನ್ನು ತಲುಪಿದರು. ಅದೊಂದು ಸಣ್ಣ ಪಟ್ಟಣವಾಗಿತ್ತು.

    ಐಸಿಸ್ ಸಂಘಟಕರು ಅವರಿಗೆ ಮನೆಯೊಂದನ್ನು ಕೊಟ್ಟರು. ಎಲ್ಲರ ಭಾರತೀಯ ಪಾಸ್​ಪೋರ್ಟ್​ಗಳನ್ನೂ ಅವರು ವಶಪಡಿಸಿಕೊಂಡರು. ನಿಮಿಷಾಗೆ ಲಗ್ನವಾಗಿರದಿದ್ದ ಕಾರಣ ಅವಳಿಗೆ ಇತರ ಯುವತಿಯರೊಂದಿಗೆ ಇರುವ ವ್ಯವಸ್ಥೆ ಮಾಡಲಾಯಿತು. ಎಲ್ಲರಿಗೂ ಊಟ, ತಿಂಡಿಯನ್ನು ಪುಕ್ಕಟೆಯಾಗಿ ಸರಬರಾಜು ಮಾಡಲಾಗುತ್ತಿತ್ತು. ಹೊಸದಾಗಿ ಭರ್ತಿಗೊಂಡ ಎಲ್ಲರಿಗೂ ಒಂದು ತಿಂಗಳ ಕಾಲ ಬಾಂಬುಗಳ ತಯಾರಿಕೆ, ಅವುಗಳನ್ನು ಸ್ಪೋಟಿಸುವುದು, ಏಕೆ 47 ರೈಫಲ್ಲಿನ ಉಪಯೋಗ, ಯುದ್ಧ ತಂತ್ರ ಮುಂತಾದವುಗಳ ಬಗ್ಗೆ ತರಬೇತಿ ಕೊಡಲಾಯಿತು. ಕಾಫಿರರನ್ನು ಶಿರಚ್ಛೇದ ಮಾಡುವ ವಿಡಿಯೋಗಳನ್ನೂ ಅವರಿಗೆ ತೋರಿಸಲಾಯಿತು.

    (ಮುಂದುವರಿಯುವುದು)

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts