More

    ಮೊಟ್ಟ ಮೊದಲ ಬಾರಿಗೆ ಸಚಿವೆಯಾಗುವ ಮೂಲಕ ತನ್ನ ಮೇಲಿನ ಕಳಂಕ ತೊಡೆದು ಹಾಕಿದ ನಟಿ ರೋಜಾ!

    ಹೈದರಾಬಾದ್: ಎರಡು ದಶಕಗಳ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ನಟಿ ಹಾಗೂ ರಾಜಕಾರಣಿ ರೋಜಾ ಸೆಲ್ವಮಣಿ ಅವರು ಸಚಿವ ಸ್ಥಾನವನ್ನು ಅಲಂಕರಿಸಿದ್ದಾರೆ. ಆಂಧ್ರ ಮುಖ್ಯಮಂತ್ರಿ ವೈ.ಎಸ್​. ಜಗನ್​ಮೋಹನ್​ ರೆಡ್ಡಿ ನೇತೃತ್ವದ ಸಚಿವ ಸಂಪುಟದಲ್ಲಿ ರೋಜಾ ಸ್ಥಾನ ಪಡೆದಿದ್ದಾರೆ.

    ಅಂದಹಾಗೆ ರೋಜಾ ಅವರಿಗೆ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಯುವ ಸಬಲೀಕರಣ ಸಚಿವ ಸ್ಥಾನವನ್ನು ನೀಡಲಾಗಿದೆ. ಈ ಬಗ್ಗೆ ಮಾತನಾಡುತ್ತಾ ರೋಜಾ ತಮ್ಮ ಖುಷಿಯನ್ನು ವ್ಯಕ್ತಪಡಿಸಿದರು. ಸಿಎಂ ಜಗನ್ ಮೋಹನ್ ರೆಡ್ಡಿ ಅವರು ನನ್ನನ್ನು ಸಂಪುಟಕ್ಕೆ ಸೇರಿಸಿಕೊಂಡಿರುವುದಕ್ಕೆ ತುಂಬಾ ಸಂತೋಷವಾಗಿದೆ. ನಾನು ವಿಧಾನಸಭೆಯಲ್ಲಿ ಇರಲು ಟಿಡಿಪಿ ಬಯಸಲಿಲ್ಲ. ಆದರೆ, ಜಗನ್​ ಅವರು ನನ್ನನ್ನು ಎರಡು ಬಾರಿ ಶಾಸಕಿಯನ್ನಾಗಿ ಮಾಡಿದ್ದಲ್ಲದೆ, ಇದೀಗ ಸಚಿವೆ ಸ್ಥಾನವನ್ನು ನೀಡಿದ್ದಾರೆ. ಇದಕ್ಕಾಗಿ ನಾನು ಅವರಿಗೆ ತುಂಬಾ ಧನ್ಯವಾದಗಳನ್ನು ತಿಳಿಸುತ್ತೇನೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಸರ್ಕಾರ ಕಾರ್ಯಸೂಚಿಯಂತೆ ಜನರ ಪರವಾಗಿ ನಡೆಯುತ್ತೇನೆ ಎಂದಿದ್ದಾರೆ.

    ಆಕ್ರಮಣಕಾರಿ ಶೈಲಿಯ ರಾಜಕೀಯಕ್ಕೆ ಹೆಸರುವಾಸಿಯಾಗಿರುವ ರೋಜಾ, ಆಗಾಗ್ಗೆ ಅಸಭ್ಯ ಭಾಷೆ ಮತ್ತು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಾಗುತ್ತಿದ್ದರು. ಇದೇ ಕಾರಣದಿಂದ ಸಚಿವ ಸಂಪುಟಕ್ಕೆ ಸೇರಲು ಬಹಳ ದಿನಗಳಿಂದ ಹೆಣಗಾಡಿದ್ದಾರೆ. ರೋಜಾ ಅವರು 1991ರಲ್ಲಿ ತೆಲುಗು ಚಿತ್ರ ಪ್ರೇಮ ತಪಸ್ಸು ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಅವರು ಚಿರಂಜೀವಿ, ಬಾಲಕೃಷ್ಣ, ರಜನಿಕಾಂತ್, ಮಮ್ಮುಟ್ಟಿ, ರವಿಚಂದ್ರನ್​ ಮತ್ತು ವಿಷ್ಣುವರ್ಧನ್​ ಸೇರಿದಂತೆ ಇತರ ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳೊಂದಿಗೆ ನಟಿಸಿದರು.

    ಸಿನಿಮಾ ನಂತರ ರಾಜಕೀಯಕ್ಕೆ ಪ್ರವೇಶ ನೀಡಿದ ರೋಜಾ 2014 ರವರೆಗೆ ಕಳಪೆ ರಾಜಕೀಯ ಪ್ರಯಾಣವನ್ನು ಹೊಂದಿದ್ದರು. ರಾಜಕೀಯದಲ್ಲಿ ಒಳ್ಳೆಯ ಸ್ಥಾನ ಗಿಟ್ಟಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ರಾಜಕೀಯ ವಲಯಗಳಲ್ಲಿ ಅವರನ್ನು ‘ಐರನ್ ಲೆಗ್’ ಎಂದು ಕರೆಯಲಾಯಿತು. ಅವರಿದ್ದ ಪಕ್ಷದಲ್ಲಿ ದುರಾದೃಷ್ಟ ಖಂಡಿತ ಎಂದು ಬಿಂಬಿಸಲಾಯಿತು. ಅಲ್ಲದೆ, ಆಕೆಯ ರಾಜಕೀಯ ಜೀವನದಲ್ಲಿ ನಡೆದ ಅನೇಕ ದುರದೃಷ್ಟಕರ ಘಟನೆಗಳನ್ನು ವಿರೋಧಿಗಳು ಅವರ ವಿರುದ್ಧ ಅಸ್ತ್ರಗಳಾಗಿ ಬಳಸಿಕೊಂಡರು.

    ಆರಂಭದಲ್ಲಿ ಅಂದರೆ, 1998ರಲ್ಲಿ ರೋಜಾ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಸೇರಿದ್ದರು. ಅವರಿಗೆ ಟಿಡಿಪಿ ಮಹಿಳಾ ವಿಭಾಗದ ಅಧ್ಯಕ್ಷೆ ಪಟ್ಟವನ್ನು ಸಹ ಕೊಡಲಾಗಿತ್ತು. 2004ರಲ್ಲಿ ನಗರಿ ವಿಧಾನಸಭಾ ಕ್ಷೇತ್ರದಿಂದ ಟಿಡಿಪಿ ಪಾರ್ಟಿಯಿಂದ ಸ್ಪರ್ಧಿಸಿ ಸೋತಿದ್ದರು. 2009ರಲ್ಲಿ ಚಂದ್ರಗಿರಿ ಕ್ಷೇತ್ರದಿಂದ ಸ್ಪರ್ಧಿಸಿ ಮತ್ತೆ ಸೋಲುಂಡಿದ್ದರು. ಸರಣಿ ವೈಫಲ್ಯದ ಬಳಿಕ ಮಾಜಿ ಮುಖ್ಯಮಂತ್ರಿ ಹಾಗೂ ವೈಎಸ್​ ಜಗನ್​ ಮೋಗಹನ್​ ರೆಡ್ಡಿ ಅವರ ತಂದೆ ವೈಎಸ್​ ರಾಜಶೇಖರ್​ ರೆಡ್ಡಿ ನೇತೃತ್ವದ ಕಾಂಗ್ರೆಸ್​ ಪಾರ್ಟಿ ಸೇರಲು ನಿರ್ಧರಿಸಿದರು. ಇದಾದ ಕೆಲವೇ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ದುರಂತ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದರು.

    ಇದಾದ ನಂತರ ರಾಜಕಾರಣದಲ್ಲಿ ಕೆಲವು ಬದಲಾವಣೆಗಳಾಯಿತು. ಇದಾದ ಬಳಿಕ ರೋಜಾ 2009 ರಲ್ಲಿ ಜಗನ್ ಮೋಹನ್ ರೆಡ್ಡಿಯವರ ಹೊಸದಾಗಿ ರೂಪುಗೊಂಡ YSRCP ಪಕ್ಷವನ್ನು ಸೇರಿದರು. ಇದರ ಬೆನ್ನಲ್ಲೇ ಜಗನ್ ಅವರು ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಪಾಲಾದರು. ಈ ಘಟನೆಯು ಕೂಡ ರೋಜಾ ಅವರು ‘ಐರನ್ ಲೆಗ್’ ಎಂಬ ಭಾವನೆಯನ್ನು ಮತ್ತೊಮ್ಮೆ ನೆನಪು ಮಾಡಿತು.

    ಆದಾಗ್ಯೂ ನಂತರದ ದಿನಗಳಲ್ಲಿ ಅವರ ರಾಜಕೀಯ ಭವಿಷ್ಯವೇ ಬದಲಾಯಿತು. 2014 ಮತ್ತು 2019 ಎರಡರಲ್ಲೂ ನಗರಿಯಿಂದ ಶಾಸಕಿಯಾಗಿ ಎರಡು ಬಾರಿ ಗೆದ್ದರು. ಈ ಮೂಲಕ ತನ್ನ ಸೋಲಿನ ಸರಣಿಯನ್ನು ಕೊನೆಗೊಳಿಸುವುದರ ಜತೆ ತನ್ನ ಮೇಲಿನ ಕಳಂಕವನ್ನು ಹೊಡೆದು ಹಾಕಿದರು. ಶಾಸಕಿಯಾಗುವುದರ ಜೊತೆಗೆ ರೋಜಾ ಅವರು ತೆಲುಗು ಸಿನಿಮಾಗಳಲ್ಲಿ ಮತ್ತು ಟಿವಿಗಳಲ್ಲಿ ಸಾಂದರ್ಭಿಕವಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದನ್ನು ಮುಂದುವರೆಸಿದರು. ಆದರೆ, ಇದೀಗ ಅವರು ಸಚಿವೆಯಾಗಿದ್ದು, ಇನ್ನು ಮುಂದೆ ಯಾವುದೇ ಶೋಗಳಲ್ಲಿ ಅಥವಾ ಸಿನಿಮಾಗಳಲ್ಲಿ ತೊಡಗಿಕೊಳ್ಳುವುದಿಲ್ಲ. ಸಂಪೂರ್ಣ ರಾಜಕೀಯಕ್ಕೆ ಮೀಸಲಾಗಿರುತ್ತೇನೆಂದು ಹೇಳಿದ್ದಾರೆ. (ಏಜೆನ್ಸೀಸ್​)

    ಬಿಡುಗಡೆಯ ಬೆನ್ನಲ್ಲೇ ಕೆಜಿಎಫ್​ 2ಗೆ ಪೈರಸಿ ಶಾಕ್​: ಕೆಲ ವೆಬ್​ಸೈಟ್​ನಲ್ಲಿ ಇಡೀ ಚಿತ್ರ ಲೀಕ್​!

    ಚಿಕನ್​ ಅಂಗಡಿಯಲ್ಲಿ ಸನ್ನಿ ಲಿಯೋನ್​ ಫ್ಯಾನ್ಸ್​ಗೆ 10% ಡಿಸ್ಕೌಂಟ್!​ ಆ 3 ಷರತ್ತು ಪೂರೈಸಿದ್ರೆ ಸಿಗುತ್ತೆ ಮಂಡ್ಯದಲ್ಲಿ ಬಂಪರ್​ ಆಫರ್​…

    ಸಹ್ಯಾದ್ರಿ ಹುಲಿ ಸಂರಕ್ಷಿತಾರಣ್ಯದಲ್ಲಿ ಬೆಂಗಾಲ್​ ಮಾನಿಟರ್​ ಉಡದ ಮೇಲೆ ಗ್ಯಾಂಗ್​ರೇಪ್​: ನಾಲ್ವರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts