More

    ಅಸ್ಸಾಂ-ಮಿಜೋರಾಂ ಗಡಿ ವಿವಾದದ ಘರ್ಷಣೆಯಲ್ಲಿ ಅಸ್ಸಾಂನ ಐವರು ಪೊಲೀಸ್​ ಸಿಬ್ಬಂದಿಯ ದುರಂತ ಸಾವು

    ಗುವಾಹಟಿ: ಅಸ್ಸಾಂ ಮತ್ತು ಮಿಜೋರಾಂ ಗಡಿ ವಿಚಾರವಾಗಿ ನಡೆದ ಸಂಘರ್ಷದಲ್ಲಿ ಅಸ್ಸಾಂನ ಐವರು ಪೊಲೀಸ್​ ಸಿಬ್ಬಂದಿ ಹತ್ಯೆಯಾಗಿರುವುದಾಗಿ ಸಿಎಂ ಹಿಮಂತ ಶರ್ಮಾ ತಿಳಿಸಿದ್ದಾರೆ. ಗೃಹ ಸಚಿವ ಅಮಿತ್​ ಷಾ ಅವರು ಎರಡು ರಾಜ್ಯಗಳ ಸಿಎಂ ಜತೆ ಮಾತುಕತೆ ನಡೆಸಿದ್ದಾರೆ.

    ಐವರು ಪೊಲೀಸ್​ ಸಿಬ್ಬಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ ಎಂದು ಅಸ್ಸಾಂ ಸರ್ಕಾರ ತಿಳಿಸಿದೆ. ಕ್ಯಾಚರ್ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿ ಗುಂಡೇಟಿನಿಂದ ಗಂಭೀರ ಸ್ಥಿತಿಯಲ್ಲಿದ್ದಾರೆ.

    ಸಿಲ್ಚಾರ್​ ಪ್ರದೇಶಕ್ಕೆ ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ ಭೇಟಿ ನೀಡಲಿದ್ದಾರೆ. ಘಟನೆ ಕುರಿತು ಟ್ವೀಟ್​ ಮಾಡಿರುವ ಅವರು ಮಿಜೋರಾಂ ಪೊಲೀಸರು ಅಸ್ಸಾಂ ಪೊಲೀಸ್ ಸಿಬ್ಬಂದಿಯ ವಿರುದ್ಧ ಲೈಟ್ ಮೆಷಿನ್ ಗನ್ ಬಳಸಿದ್ದಾರೆ ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯಗಳು ಹೊರಹೊಮ್ಮುತ್ತಿವೆ. ಇದು ನಿಜಕ್ಕೂ ದುಃಖಕರ ಹಾಗೂ ದುರಾದೃಷ್ಟಕರ ಎಂದು ಹೇಳಿದ್ದಾರೆ.

    ಮಿಜೋರಾಂ ತನ್ನ ಸೇನಾ ಕ್ಯಾಂಪ್​ ಅಳವಡಿಸಿ, ಅಸ್ಸಾಂನ ಲೈಲಾಪುರದಲ್ಲಿರುವ ಮೀಸಲು ಅರಣ್ಯ ಪ್ರದೇಶವನ್ನು ನಾಶ ಮಾಡಿ ರಸ್ತೆ ನಿರ್ಮಾಣ ಮಾಡುತ್ತಿದೆ ಎಂದು ಅಸ್ಸಾಂ ಆರೋಪಿಸಿದೆ. ಪರಿಸ್ಥಿತಿಯ ಪರಿಹರಿಸಲು ಪ್ರಯತ್ನಿಸಿದಾಗ ಮೊದಲು ಕೆಲವು ದುಷ್ಕರ್ಮಿಗಳು ದಾಳಿ ಮಾಡಿದರು. ಆನಂತರ ಮಿಜೋರಾಂ ಪೊಲೀಸರು ಕೂಡ ಹಿಂಸೆಗೆ ಇಳಿದರು ಎಂದು ಅಸ್ಸಾಂ ಆರೋಪಿಸಿದೆ.

    ಅಸ್ಸಾಂ ಆರೋಪವನ್ನು ಅಲ್ಲಗೆಳೆದಿರುವ ಮಿಜೋರಾಂ, ಅಸ್ಸಾಂ ಪೊಲೀಸರು ನಮ್ಮ ಗಡಿಯನ್ನು ದಾಟಿದಾಗ ಹಿಂಸೆ ಆರಂಭವಾಯಿತು ಎಂದಿದೆ. ಅಸ್ಸಾಂ ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಮ್ಮ ವಾಹನಗಳನ್ನು ಹಾನಿಗೊಳಿಸಿದರು ಮತ್ತು ರಾಜ್ಯ ಪೊಲೀಸರಿಗೆ ಗುಂಡು ಹಾರಿಸಿದ್ದಾರೆಂದು ಮಿಜೋರಾಂ ಹೇಳಿದೆ.

    ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಈಶಾನ್ಯದ ಎಲ್ಲ ಮುಖ್ಯಮಂತ್ರಿಗಳನ್ನು ಶಿಲ್ಲಾಂಗ್‌ನಲ್ಲಿ ಭೇಟಿಯಾದ ಎರಡು ದಿನಗಳ ನಂತರ ಈ ಹಿಂಸಾಚಾರ ನಡೆದಿದೆ. ಇಂದು ಎರಡು ರಾಜ್ಯದ ಮುಖ್ಯಮಂತ್ರಿಗಳಿಗೆ ಅಮಿತ್​ ಷಾ ಕರೆ ಮಾಡಿ ಗಡಿ ವಿವಾದವನ್ನು ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಇದಕ್ಕೂ ಮೊದಲು ಅಸ್ಸಾಂ ಸಿಎಂ ಶರ್ಮಾ ಮತ್ತು ಮಿಜೋರಾಂ ಮುಖ್ಯಮಂತ್ರಿ ಜೋರಮ್ತಂಗ ಟ್ವಿಟ್ಟರ್​ನಲ್ಲಿ ಸಂಘರ್ಷಕ್ಕೆ ಇಳಿದಿದ್ದರು. ಹಿಂಸಾಚಾರದ ವಿಡಿಯೋಗಳನ್ನು ಪೋಸ್ಟ್ ಮಾಡಿ ಅಮಿತ್​ ಷಾ ಅವರು ಮಧ್ಯಸ್ತಿಕೆ ವಹಿಸಬೇಕೆಂದು ಕೋರಿದ್ದರು.

    ಮಿಜೋರಾಂನ ಮೂರು ಜಿಲ್ಲೆಗಳಾದ ಐಜಾಲ್, ಕೋಲಾಸಿಬ್ ಮತ್ತು ಮಾಮಿತ್, ಅಸ್ಸಾಂನ ಕ್ಯಾಚರ್, ಹೈಲಕಂಡಿ ಮತ್ತು ಕರಿಮಗಂಜ್ ಜಿಲ್ಲೆಗಳೊಂದಿಗೆ 164.6 ಕಿ.ಮೀ ಉದ್ದದ ಅಂತರಾಜ್ಯ ಗಡಿಯನ್ನು ಹಂಚಿಕೊಂಡಿವೆ. ಈ ಪ್ರದೇಶವು ದಶಕಗಳಿಂದ ಘರ್ಷಣೆಗೆ ಒಳಗಾಗುತ್ತಲೇ ಇದೆ. ಸ್ಥಳೀಯರು ಮತ್ತು ಭದ್ರತಾ ಪಡೆಗಳು ಪ್ರತಿ ಕಡೆ ಒಳನುಗ್ಗುವಿಕೆ ಸಾಮಾನ್ಯವಾಗಿವೆ ಎಂದು ಆರೋಪಿಸಿವೆ.

    ಗಡಿ ಗುರುತಿಸುವಿಕೆಯನ್ನು ಎದುರಿಸಲು ಮಿಜೋರಾಂ ಸರ್ಕಾರ ಗಡಿ ಆಯೋಗವನ್ನು ರಚಿಸಿದೆ. ಅಸ್ಸಾಂ ಮೇಘಾಲಯ ಮತ್ತು ಅರುಣಾಚಲ ಪ್ರದೇಶದೊಂದಿಗೆ ಗಡಿ ವಿವಾದಗಳನ್ನು ಮಿಜೋರಾಂ ಹೊಂದಿದೆ. (ಏಜೆನ್ಸೀಸ್​)

    ಯಡಿಯೂರಪ್ಪ ಭಾವುಕ ವಿದಾಯ | ಸಿಎಂ ಸ್ಥಾನಕ್ಕೆ ರಾಜೀನಾಮೆ; 2 ವರ್ಷದ ಸಂಭ್ರಮಾಚರಣೆಯಲ್ಲಿ ಕಟ್ಟೆಯೊಡೆದ ದುಃಖ..

    ಜನನಾಯಕ ಯಡಿಯೂರಪ್ಪ | ಹೋರಾಟಕ್ಕಿಟ್ಟ ಚಿನ್ನ; ಜನ ಮೆಚ್ಚಿದ ಧೀಮಂತ..

    ಒಲಿಂಪಿಕ್ಸ್‌ನಲ್ಲಿ ಇಂದು ಭಾರತಕ್ಕೆ ಏನೇನು ಸ್ಪರ್ಧೆ, ಯಾವ ಕ್ರೀಡೆಯಲ್ಲಿದೆ ಪದಕ ನಿರೀಕ್ಷೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts