More

    ಉತ್ಪನ್ನದಲ್ಲಿ ದೋಷವಿದ್ದರೆ ಪ್ರಶ್ನಿಸಿ; ಗ್ರಾಹಕರಿಗೆ ಕಾನೂನು ಪರಿಣಿತರ ಸಲಹೆ

    ರಾಷ್ಟ್ರೀಯ ಗ್ರಾಹಕ ದಿನದ ಹಿನ್ನೆಲೆಯಲ್ಲಿ ವಿಜಯವಾಣಿ ಹಾಗೂ ದಿಗ್ವಿಜಯ ಸುದ್ದಿವಾಹಿನಿ ಗುರುವಾರ ಕ್ಲಬ್​ಹೌಸ್ ಸಂವಾದ ಆಯೋಜಿಸಿದ್ದವು. ಗ್ರಾಹಕರ ಹಕ್ಕುಗಳು ಹಾಗೂ ಉತ್ಪನ್ನ ಖರೀದಿಯಲ್ಲಿ ಆಗುವ ಮೋಸಗಳ ವಿರುದ್ಧ ನ್ಯಾಯ ಪಡೆಯುವ ಕುರಿತು ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ನ್ಯಾಯಾಂಗ ಸದಸ್ಯ ರವಿಶಂಕರ್ ಹಾಗೂ ಹೈಕೋರ್ಟ್ ಹಿರಿಯ ವಕೀಲ ಪಿ.ಪಿ.ಹೆಗಡೆ ನೀಡಿದ ಉಪಯುಕ್ತ ಮಾಹಿತಿ ಇಲ್ಲಿದೆ.

    ಉತ್ಪನ್ನದಲ್ಲಿ ದೋಷವಿದ್ದರೆ ಪ್ರಶ್ನಿಸಿ; ಗ್ರಾಹಕರಿಗೆ ಕಾನೂನು ಪರಿಣಿತರ ಸಲಹೆಗ್ರಾಹಕರ ಮೇಲಿನ ಶೋಷಣೆಗೆ ಕಡಿವಾಣ: ವಸ್ತುಗಳನ್ನು ಸೇರು, ಪಾವು, ತಕ್ಕಡಿಗಳಿಂದ ಅಳೆದು ಮಾರಾಟ ಮಾಡುತ್ತಿದ್ದ ಕಾಲದಿಂದ ಹಿಡಿದು ಡಿಜಿಟಲ್ ಮಾಪಕಗಳಿಂದ ಅಳತೆ ಮಾಡುವ ಈ ಕಾಲದವರೆಗೂ ಗ್ರಾಹಕ ಒಂದಲ್ಲ ಒಂದು ರೀತಿಯಲ್ಲಿ ಮೋಸ ಹೋಗುತ್ತಲೇ ಇದ್ದಾನೆ. ಗ್ರಾಹಕರ ಮೇಲಾಗುವ ಇಂಥ ಶೋಷಣೆ ತಡೆಯಲೆಂದೇ ಸರ್ಕಾರ 1986ರಲ್ಲಿ ‘ಗ್ರಾಹಕರ ಸಂರಕ್ಷಣಾ ಕಾಯ್ದೆ’ಯನ್ನು ಜಾರಿಗೊಳಿಸಿದೆ. ಹಣ ಪಾವತಿಸಿ ಖರೀದಿಸುವ ಯಾವುದೇ ವಸ್ತು ಅಥವಾ ಸೇವೆಯಲ್ಲಿ ಲೋಪದೋಷಗಳಿದ್ದರೆ ಅದನ್ನು ಪ್ರಶ್ನಿಸುವ ಅಧಿಕಾರ ಗ್ರಾಹಕರಿಗಿದೆ. ಕಾಯ್ದೆ ಜಾರಿಯಾದ ನಂತರ ಕ್ರಮೇಣ ಗ್ರಾಹಕರ ಮೇಲಿನ ಶೋಷಣೆ ಕಡಿಮೆಯಾಗುತ್ತಿದೆ. 1986ರಲ್ಲಿ ಗ್ರಾಹಕ ಹಿತರಕ್ಷಣಾ ಕಾಯ್ದೆ ಜಾರಿಗೆ ತಂದಾಗ ಆನ್​ಲೈನ್ ಮಾರುಕಟ್ಟೆಗಳಿರಲಿಲ್ಲ. ಆಗ ನೇರ ವ್ಯಾಪಾರವಿತ್ತು.

    ಇತ್ತೀಚಿನ ವರ್ಷಗಳಲ್ಲಿ ಆನ್​ಲೈನ್ ಪ್ಲಾಟ್​ಫಾಮರ್್​ಗಳು ಬಂದಿವೆ. ಇದನ್ನು ಗಮನದಲ್ಲಿಟ್ಟುಕೊಂಡು 2019ರಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಆನ್​ಲೈನ್ ವೇದಿಕೆಗಳನ್ನು ಕಾಯ್ದೆಯ ವ್ಯಾಪ್ತಿಗೆ ತರಲಾಗಿದೆ. ಸೇವೆಯಲ್ಲಿ ಲೋಪ ಕಂಡುಬಂದರೆ ತಯಾರಕರು ಅಥವಾ ಮಾರಾಟಗಾರರ ವಿರುದ್ಧ ಜಿಲ್ಲಾ ಗ್ರಾಹಕ ವೇದಿಕೆಗಳಿಗೆ ದೂರು ಸಲ್ಲಿಸಿ ಪರಿಹಾರ ಪಡೆಯಬಹುದು. ಪೆಟ್ರೋಲ್ ಬೆಲೆ ಹೆಚ್ಚಳವಾಗುತ್ತಿದೆ. ಅದಕ್ಕೆ ತೆರಿಗೆ ಕಟ್ಟುತ್ತಿದ್ದೇವೆ. ಬೆಲೆ ಹೆಚ್ಚಳ ಮಾಡಿರುವ ಸರ್ಕಾರ ಸೇವಾಲೋಪ ಎಸಗಿದೆ ಎನ್ನಲಾಗುವುದಿಲ್ಲ. ಏಕೆಂದರೆ, ಸರ್ಕಾರ ಮಾರಾಟಗಾರ ಅಲ್ಲ, ಪ್ರಜೆಗಳು ಖರೀದಿದಾರರಲ್ಲ. ಸರ್ಕಾರದ ನೀತಿ-ನಿರ್ಣಯದ ವಿಚಾರಗಳು ಗ್ರಾಹಕರ ಹಿತರಕ್ಷಣಾ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ. ಆದ್ದರಿಂದ, ಪೆಟ್ರೋಲ್, ಡೀಸೆಲ್, ಎಲ್​ಪಿಜಿ ಬೆಲೆ ಹೆಚ್ಚಳ ಗ್ರಾಹಕರ ಹಕ್ಕುಗಳ ಉಲ್ಲಂಘನೆ ಎನಿಸುವುದಿಲ್ಲ.

    ಭಾಷೆ ವಿಷಯ: ಬಹುತೇಕ ಉತ್ಪನ್ನಗಳು ದೇಶದ ಬೇರೆ ಬೇರೆ ಭಾಗಗಳಲ್ಲಿ ತಯಾರಿಸಲ್ಪಟ್ಟು, ದೇಶದಾದ್ಯಂತ ಪೂರೈಸಲಾಗುತ್ತದೆ. ಅವುಗಳ ಮೇಲೆ ನಿರ್ದಿಷ್ಟ ಭಾಷೆಯ ಮಾಹಿತಿ ಮುದ್ರಿಸಬೇಕು ಎಂದು ಆದೇಶಿಸಲು ಗ್ರಾಹಕ ನ್ಯಾಯಾಲಯಗಳಿಗೆ ಅಧಿಕಾರವಿಲ್ಲ. ಮೇಲಾಗಿ ವಸ್ತುಗಳ ಮೇಲಿನ ಭಾಷೆಯ ವಿಚಾರ ಸೇವಾನ್ಯೂನ್ಯತೆ ಎನ್ನಲಾಗುವುದಿಲ್ಲ. ಪ್ರಾದೇಶಿಕ ಭಾಷೆಯಲ್ಲೇ ಮಾಹಿತಿ ಇರಬೇಕು ಎನ್ನುವುದು ಸರ್ಕಾರ ತೆಗೆದುಕೊಳ್ಳಬೇಕಾದ ನಿರ್ಧಾರ.

    ದುಬಾರಿ ಬಡ್ಡಿ ಪಡೆಯುವಂತಿಲ್ಲ: ರಾಜ್ಯದಲ್ಲಿ ಬಡ್ಡಿ ದರ ವಿಧಿಸಲು ಮಾರ್ಗಸೂಚಿ ಇದೆ. ಇಂತಿಷ್ಟೇ ಬಡ್ಡಿ ಪಡೆಯಬೇಕೆಂದು ಹೇಳಲಾಗಿದೆ. ಹೆಚ್ಚಿನ ಬಡ್ಡಿ ಪಡೆದ ಪ್ರಕರಣಗಳಲ್ಲಿ ಪೊಲೀಸ್ ಠಾಣೆಗೆ ದೂರು ಕೊಟ್ಟರೆ ಎಫ್​ಐಆರ್ ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಸುಪ್ರೀಂಕೋರ್ಟ್ ಹೇಳಿದೆ. ಲೇವಾದೇವಿ, ಗಿರವಿ ಅಂಗಡಿಗಳಿಗೆ ಸಂಬಂಧಿಸಿದ ವಿಚಾರವಾದರೆ ಗ್ರಾಹಕರ ವೇದಿಕೆಯಲ್ಲಿ ನ್ಯಾಯ ಕೋರಬಹುದು.

    ಶಿಕ್ಷಿಸುವ ಹಕ್ಕೂ ಇದೆ: ಗ್ರಾಹಕರ ಹಕ್ಕುಗಳ ರಕ್ಷಣೆಗಾಗಿ ಗ್ರಾಹಕ ವೇದಿಕೆಗಳು ಹಾಗೂ ಆಯೋಗಗಳನ್ನು ಸ್ಥಾಪಿಸಲಾಗಿದೆ. ಜತೆಗೆ, ಗ್ರಾಹಕ ವೇದಿಕೆಗಳ ಆದೇಶಗಳನ್ನು ಉಲ್ಲಂಘಿಸಿದವರಿಗೆ ಜೈಲುಶಿಕ್ಷೆ ವಿಧಿಸುವ ಅಧಿಕಾರವನ್ನೂ ಗ್ರಾಹಕ ನ್ಯಾಯಾಲಯಗಳಿಗೆ ನೀಡಲಾಗಿದೆ. ಜೈಲುಶಿಕ್ಷೆ ವಿಧಿಸುವ ಹಕ್ಕು ಗ್ರಾಹಕರ ನ್ಯಾಯಾಲಯಗಳಿಗೆ ನೀಡಬಹುದೇ ಎಂಬ ಜಿಜ್ಞಾಸೆ ಮೂಡಿತ್ತು. ಕರ್ನಾಟಕ ಹೈಕೋರ್ಟ್ ಒಂದು ಹಂತದಲ್ಲಿ ಗ್ರಾಹಕರ ವೇದಿಕೆಗಳಿಗೆ ಈ ರೀತಿಯ ಹಕ್ಕು ನೀಡುವಂತಿಲ್ಲ ಎಂದೂ ಹೇಳಿತ್ತು. ಆದರೆ, ಆದೇಶ ಉಲ್ಲಂಘಿಸುವವರಿಗೆ ಶಿಕ್ಷೆ ಕೊಡುವ ಅಧಿಕಾರ ಗ್ರಾಹಕರ ವೇದಿಕೆಗೆ ಕೊಡಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ಜಿಲ್ಲಾ ಗ್ರಾಹಕರ ವೇದಿಕೆ, ರಾಜ್ಯ ಹಾಗೂ ರಾಷ್ಟ್ರೀಯ ಆಯೋಗಗಳು ಆದೇಶಗಳನ್ನು ನೀಡುವುದಷ್ಟೇ ಅಲ್ಲ, ಆ ಆದೇಶಗಳ ಅನುಷ್ಠಾನದ ಸಂಪೂರ್ಣ ಹೊಣೆ ಹೊತ್ತಿವೆ. ಆದೇಶ ಉಲ್ಲಂಘಿಸಿದರೆ ಜೈಲುಶಿಕ್ಷೆ ವಿಧಿಸುವ, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ನೀಡಲಾಗಿದೆ. ಗ್ರಾಹಕ ನ್ಯಾಯಾಲಯಗಳು ಕೇವಲ ನ್ಯಾಯಾಧಿಕರಣವಾಗಿ ಉಳಿಯದೆ ಸಿವಿಲ್ ಹಾಗೂ ಕ್ರಿಮಿನಲ್ ನ್ಯಾಯಾಲಯಗಳ ರೀತಿಯಲ್ಲೂ ಕಾರ್ಯನಿರ್ವಹಿಸಲು ಅವಕಾಶವಾಗಿದೆ.

    ಮಾರಾಟ ವಸ್ತುಗಳ ಮೇಲೆ ಇಂತಿಷ್ಟೇ ಗಾತ್ರದ ಅಕ್ಷರದಲ್ಲಿ ಮುಕ್ತಾಯದ ಅವಧಿ ಮತ್ತು ಬೆಲೆಯನ್ನು ಬರೆಯಬೇಕೆಂಬ ನಿಯಮ ಇದೆ. ಇದನ್ನು ಅನುಷ್ಠಾನಕ್ಕೆ ತರುವ ಹೊಣೆ ಮಾಪನ ಇಲಾಖೆಯದ್ದು. ಈ ಇಲಾಖೆ ಕಟ್ಟುನಿಟ್ಟಾಗಿ ಕಾನೂನು ಅನುಷ್ಠಾನ ಮಾಡಿದರೆ ಗ್ರಾಹಕರಿಗೆ ಅನುಕೂಲ.

    ಕಾಂಪ್ರಮೈಸ್ ಮನಸ್ಥಿತಿ ಬದಲಾಗಬೇಕು: ಖರೀದಿಸಿದ ವಸ್ತುಗಳಿಗೆ ರಸೀದಿ ಪಡೆಯದಿರುವುದು ಒಳ್ಳಯದಲ್ಲ. ನಮ್ಮ ಜನರಲ್ಲಿ ಹೇಗೋ ನಡೆಯುತ್ತದೆ ಎನ್ನುವ ಕಾಂಪ್ರಮೈಸ್ ಮನೋಭಾವ ಹೆಚ್ಚಾಗಿದೆ. ಬಿಲ್ ಕೇಳದೇ ಇರುವುದು, ಚಿಲ್ಲರೆ ಪಡೆಯದಿರುವುದು ಇಂಥ ಮನೋಭಾವಗಳಿಂದಲೇ ಗ್ರಾಹಕ ಶೋಷಣೆಗೊಳಗಾಗುತ್ತಾನೆ. ಆದ್ದರಿಂದ, ಯಾವುದೇ ವಸ್ತು ಅಥವಾ ಸೇವೆ ಪಡೆದುಕೊಂಡಾಗ ಅದಕ್ಕೆ ರಸೀದಿಯನ್ನು ಕೇಳಿ ಪಡೆಯಬೇಕು. ಆಗ ಮುಂದೆ ವಸ್ತು ಅಥವಾ ಸೇವೆಯಲ್ಲಿ ಲೋಪ ಕಂಡುಬಂದಾಗ ಪರಿಹಾರ ಕೇಳಲು ಆ ರಸೀದಿಗಳು ಪ್ರಮುಖ ಅಸ್ತ್ರವಾಗಿ ಬಳಕೆಯಾಗುತ್ತವೆ.

    ಗ್ರಾಹಕರೇ ಹೇಳಿಕೆ ದಾಖಲಿಸಬಹುದು: ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಅಥವಾ ಆಯೋಗಗಳಲ್ಲಿ ಕೇವಲ 100 ರೂ.ಗಳಿಂದ ಶುಲ್ಕ ಆರಂಭವಾಗುತ್ತದೆ. ವಕೀಲರನ್ನೇ ನೇಮಕ ಮಾಡಬೇಕೆಂದಿಲ್ಲ. ಗ್ರಾಹಕರೇ ಖುದ್ದು ತಮ್ಮ ಸಮಸ್ಯೆಗಳ ಕುರಿತು ನ್ಯಾಯಾಲಯಕ್ಕೆ ದೂರು ನೀಡಿ ಪರಿಹಾರ ಪಡೆಯಬಹುದು. ಇದೊಂದು ಸರಳವಾದ ಕಾನೂನು ಪ್ರಕ್ರಿಯೆಯಾಗಿದ್ದು, ಸಿವಿಲ್ ಪ್ರೊಸೀಜರ್ ಕೋಡ್​ನಲ್ಲಿರುವ ಕಠಿಣ ನಿಯಮಗಳಾಗಲಿ, ಸಾಕ್ಷ್ಯಾಧಾರ ಕಾಯ್ದೆಯ ನಿಯಮಗಳನ್ನಾಗಲಿ ಪಾಲನೆ ಮಾಡಬೇಕೆಂದಿಲ್ಲ. ಗ್ರಾಹಕ ವೇದಿಕೆಗಳಿಗೆ ಅವುಗಳದೇ ಆದ ಕಾರ್ಯವಿಧಾನ ಅಳವಡಿಸಿಕೊಳ್ಳುವ ಅಧಿಕಾರ ಹಾಗೂ ಸತ್ಯಾನ್ವೇಷಣೆಯ ಹಕ್ಕುಗಳನ್ನು ನೀಡಲಾಗಿದೆ. ಸಿವಿಲ್ ಪ್ರಕರಣಗಳಂತೆ ಪಾಟಿ ಸವಾಲು ನಡೆಸುವ ಅಗತ್ಯವಿಲ್ಲ. ಗ್ರಾಹಕ ಹಾಗೂ ಮಾರಾಟಗಾರರು ಲಿಖಿತವಾಗಿ ತಮ್ಮ ಹೇಳಿಕೆಗಳನ್ನು ದಾಖಲಿಸಬಹುದಾಗಿದೆ. ಇದರಿಂದ, ಗ್ರಾಹಕ ವೇದಿಕೆಯಲ್ಲಿ ದೂರುದಾರರಿಗೆ ಸುಲಭವಾಗಿ ಹಾಗೂ ತ್ವರಿತವಾಗಿ ನ್ಯಾಯ ಸಿಗುತ್ತದೆ.

    ಪೂರ್ಣಪ್ರಮಾಣದ ಸಿಬ್ಬಂದಿ ಬೇಕು: ಗ್ರಾಹಕರ ಹಿತರಕ್ಷಣಾ ಕಾಯ್ದೆ, ಗ್ರಾಹಕರ ಹಕ್ಕುಗಳ ಬಗ್ಗೆ ಸರ್ಕಾರಗಳು ಜನರಿಗೆ ಮಾಹಿತಿ ನೀಡುವ ಜತೆಗೆ, ಗ್ರಾಹಕ ನ್ಯಾಯಾಲಯಗಳಿಗೆ ಸಿಬ್ಬಂದಿ ಹಾಗೂ ಮೂಲಸೌಕರ್ಯಗಳನ್ನು ಒದಗಿಸಬೇಕು. ಅನೇಕ ಸಂದರ್ಭಗಳಲ್ಲಿ ನಿವೃತ್ತರಾದವನ್ನು ಗ್ರಾಹಕ ವೇದಿಕೆಗಳಿಗೆ ನೇಮಕ ಮಾಡುತ್ತಿದೆ. ನಿವೃತ್ತಿ ಹೊಂದಿದವರಿಂದ ವೇಗದ ಕೆಲಸ ನಿರೀಕ್ಷಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಇತರ ನ್ಯಾಯಾಲಯಗಳಂತೆ ಗ್ರಾಹಕ ವೇದಿಕೆಗಳಲ್ಲೂ ಪೂರ್ಣಪ್ರಮಾಣದ ನ್ಯಾಯಾಧೀಶರನ್ನು ನೇಮಕ ಮಾಡುವಂತಾಗಬೇಕು. ಇದರಿಂದ, ಗ್ರಾಹಕರಿಗೆ ತ್ವರಿತ ನ್ಯಾಯ ಸಿಗುವಂತಾಗುತ್ತದೆ. ಸಾರ್ವಜನಿಕರು, ಸಂಘ-ಸಂಸ್ಥೆಗಳು ನ್ಯಾಯವ್ಯವಸ್ಥೆ ಗಟ್ಟಿಗೊಳಿಸುವಂತೆ ಸರ್ಕಾರಗಳ ಮೇಲೆ ಒತ್ತಡ ಹೇರಬೇಕು.

    ಕಾನೂನು ಇನ್ನಷ್ಟು ಬಲಗೊಳ್ಳಬೇಕು: ಸುಳ್ಳು ಜಾಹೀರಾತು ನೀಡಿ ವಸ್ತುಗಳ ಮಾರಾಟ ಮಾಡುವುದರ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ಮತ್ತಷ್ಟು ಬಲಗೊಳ್ಳಬೇಕು. ಇಂತಹ ಕೃತ್ಯಕ್ಕೆ ವಿದೇಶದಲ್ಲಿ ಕಠಿಣ ಶಿಕ್ಷೆ ಇದೆ. ನಕಲಿ ವಸ್ತುಗಳು ಮತ್ತು ಕಲಬೆರಕೆ ವಸ್ತುಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಪ್ರತ್ಯೇಕ ಇಲಾಖೆಗಳೇ ಇವೆ. ಕಲಬೆರಕೆ, ನಕಲಿ ವಸ್ತುಗಳ ಮಾರಾಟ ಮಾಡುವವರ ವಿರುದ್ಧ ದೂರು ದಾಖಲಿಸ ಬೇಕು. ಸುಳ್ಳು ಜಾಹೀರಾತುಗಳಲ್ಲಿ ಭಾಗವಹಿಸುವ ರೂಪದರ್ಶಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಷ್ಟು ಕಾನೂನು ಬಲಗೊಂಡಿಲ್ಲ.

    ವಿದ್ಯುತ್ ಸಂಪರ್ಕ: ಬಾಡಿಗೆದಾರ ಅಥವಾ ಗುತ್ತಿಗೆದಾರನ ಹೆಸರಿನಲ್ಲಿ ವಿದ್ಯುತ್ ಸಂಪರ್ಕ ನೀಡಬೇಕು. ಕಟ್ಟಡ ಅಥವಾ ಸೈಟ್ ಮಾಲೀಕನ ಹೆಸರಿನಲ್ಲೇ ವಿದ್ಯುತ್ ಸಂಪರ್ಕ ನೀಡುತ್ತೇವೆ ಎಂದು ವಿದ್ಯುತ್ ಪೂರೈಕೆ ಕಂಪನಿಗಳು ಹೇಳುವಂತಿಲ್ಲ. ಈ ಬಗ್ಗೆ ಸಾಕಷ್ಟು ಮಂದಿ ಕೋರ್ಟ್ ಮೊರೆ ಹೋಗಿ ಜಯ ಗಳಿಸಿರುವ ಉದಾರಣೆಗಳು ಇವೆ. ವಿದ್ಯುತ್ ಬೆಲೆ ನಿಗದಿ ಮಾಡುವ ಅಧಿಕಾರ ನ್ಯಾಯ ಮಂಡಳಿಗಳಿಗೆ ಇದೆ. ಆದರೆ, ಇದು ಗ್ರಾಹಕರ ವೇದಿಕೆ ವ್ಯಾಪ್ತಿಗೆ ಬರುವುದಿಲ್ಲ.

    ಉಚಿತ ಸೇವೆ ಕೊಡಲಿ: ಅಡುಗೆ ಅನಿಲ (ಎಲ್​ಪಿಜಿ ಸಿಲಿಂಡರ್) ಪೂರೈಕೆ ಮಾಡುವ ಏಜೆನ್ಸಿಗಳು 5 ಕಿಲೋಮೀಟರ್ ಒಳಗಿನ ಗ್ರಾಹಕರಿಗೆ ಉಚಿತ ಸೇವೆ ಒದಗಿಸಬಹುದು. ನಂತರ ಇಂತಿಷ್ಟು ಹೆಚ್ಚಿನ ಹಣ ಪಡೆಯಬಹುದು ಎಂಬ ಮಾರ್ಗಸೂಚಿ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts