More

    ಲ್ಯಾಂಡ್ ಆರ್ಮಿ ಕಾಮಗಾರಿ ಪರಿಶೀಲಿಸಿ

    ಆಳಂದ: ಜನರಿಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಗಳನ್ನು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸಿದರೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಶಾಸಕ ಬಿ.ಆರ್.ಪಾಟೀಲ್ ಎಚ್ಚರಿಕೆ ನೀಡಿದರು.


    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕು ಸೌಧದ ೩ನೇ ಅಂತಸ್ತು ಹಾಗೂ ಕಾಂಪೌಂಡ್ ನಿರ್ಮಿಸುವುದಕ್ಕೆ ೧೦ ಕೋಟಿ ರೂ. ಮೀಸಲಿಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕೆಲಸ ಪ್ರಾರಂಭಿಸಬೇಕು. ಗುಣಮಟ್ಟಕ್ಕೆ ಆದ್ಯತೆ ನೀಡಿ ಕಾಲಮಿತಿಯೊಳಗೆ ಕಾಮಗಾರಿ ಮುಗಿಸಬೇಕು ಎಂದು ಸೂಚನೆ ನೀಡಿದರು.
    ಭೂ ಸೇನಾ ನಿಗಮಕ್ಕೆ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕಾಗಿ ರಾಜೋಳದಲ್ಲಿ ೬೩ ಲಕ್ಷ ರೂ., ೨೦೧೯-೨೦ನೇ ಸಾಲಿನ ಯಾತ್ರಿ ನಿವಾಸಕ್ಕಾಗಿ ತಡಕಲ್‌ನಲ್ಲಿ ೨೫ ಲಕ್ಷ ರೂ., ಮಾಡಿಯಾಳದಲ್ಲಿ ೧ ಕೋಟಿ ರೂ., ಯಳಸಂಗಿಯಲ್ಲಿ ೨೫ ಲಕ್ಷ ರೂ., ಆಳಂದ ೨೫ ಲಕ್ಷ ರೂ., ಸುಂಟನೂರ ೨೫ ಲಕ್ಷ ರೂ., ಮಾದನಹಿಪ್ಪರಗಾ ೨೫ ಲಕ್ಷ ರೂ., ಅಂಗನವಾಡಿ ಕಟ್ಟಡ ನಿರ್ಮಾಣಕ್ಕಾಗಿ ಗೋಳಾ (ಬಿ), ತಡಕಲ್, ಕವಲಗಾ, ಜವಳಗಾ (ಜೆ)ದಲ್ಲಿ ತಲಾ ೧೦.೮೦ ಲಕ್ಷ ರೂ., ೨೦೧೬-೧೭ರಲ್ಲಿ ಆಳಂದನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ೧೨ ಲಕ್ಷ ರೂ., ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಎಲ್‌ಪಿಜಿ ಸಿಲಿಂಡರ್ ಗ್ಯಾಸ್ ಸುರಕ್ಷತಾ ಯಂತ್ರ ಅಳವಡಿಸಲು ೫೦ ಲಕ್ಷ ರೂ. ಅನುದಾನ ನೀಡಲಾಗಿದೆ. ಇಲ್ಲಿವರೆಗೂ ಯಾವ್ಯಾವ ಕಾಮಗಾರಿ ಮುಗಿದಿದೆ ಎಂದು ಇಲಾಖೆ ಅಧಿಕಾರಿಗಳಿಗೆ ಪ್ರಶ್ನಿಸಿದರು.

    ಭೂಸೇನಾ ನಿಗಮದ ಅಧಿಕಾರಿ ಬಸವರಾಜ ರಾಠೋಡ್ ಉತ್ತರ ನೀಡಲು ತಡಬಡಿಸಿದರು. ಯಾವ್ಯಾವ ಅಂಗನವಾಡಿ ಕೇಂದ್ರಗಳಲ್ಲಿ ಸುರಕ್ಷತಾ ಯಂತ್ರ ಅಳವಡಿಸಲಾಗಿದೆ ಎಂಬ ಪ್ರಶ್ನೆಗೆ ಸಿಡಿಪಿಒ ಶ್ರೀಕಾಂತ ಮೇಂಗಜಿ ಪ್ರತಿಕ್ರಿಯಿಸಿ, ಅಂಗನವಾಡಿಗಳಿಗೆ ಬಂದು ಡೆಮೋ ತೋರಿಸಲಾಗಿದೆ, ಆದರೆ ಯಾವುದೇ ಕೇಂದ್ರಗಳಲ್ಲು ಯಂತ್ರ ಅಳವಡಿಸಿಲ್ಲ ಎಂದು ಹೇಳಿದರು. ಇದರಿಂದ ಕೋಪಗೊಂಡ ಶಾಸಕರು, ಕೂಡಲೇ ಹಣವನ್ನು ಇಲಾಖೆ ಮರಳಿಸಿ. ಅಲ್ಲದೆ ಭೂ ಸೇನಾ ನಿಗಮದ ಎಲ್ಲ ಕಾಮಗಾರಿಗಳನ್ನು ತಹಸೀಲ್ದಾರ್ ಹಾಗೂ ತಾಪಂ ಇಒ ಜಂಟಿಯಾಗಿ ಪರಿಶೀಲನೆ ಮಾಡಿ ವರದಿಕೊಡಿ ಎಂದು ತಾಕೀತು ಮಾಡಿದರು.

    ವಾಟರ್‌ಶೆಡ್ ಯೋಜನೆಯಲ್ಲಿ ಎಷ್ಟು ಹಣ್ಣಿನ ಗಿಡಿಗಳನ್ನು ಹಚ್ಚಿದ್ದೀರಿ ? ಪೋಟೋಗಳೊಂದಿಗೆ ಮಾಹಿತಿ ಸಲ್ಲಿಸಿ. ನಾನು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುತ್ತೇನೆ. ಕ್ಷೇತ್ರದಲ್ಲಿ ಬರ ಆವರಿಸಿದ್ದು, ಹೀಗಿರುವಾಗ ಸಸಿ ನೆಡಲು ಅರಣ್ಯ ಇಲಾಖೆ ಮುಂದಾಗಿದೆ. ನಿಮಗೇನು ತಿಳಿವಳಿಕೆ ಇಲ್ಲವೇ ? ಈಗ ನೆಟ್ಟ ಸಸಿಗಳ ಪೋಷಣೆ ನೀರು ಎಲ್ಲಿಂದ ತರುತ್ತೀರಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

    ನರೇಗಾ ಯೋಜನೆಯಡಿ ಧಂಗಾಪುರದಲ್ಲಿ ನೂತನ ಕೆರೆ ನಿರ್ಮಾಣಕ್ಕೆ ಸಮೀಕ್ಷೆ ಕೈಗೊಳ್ಳಿ. ಪಿಜಿ ಸೆಂಟರ್‌ಗೆ ಸ್ವಂತ ಕಟ್ಟಡಕ್ಕೆ ೨೬ ಎಕರೆ ಜಮೀನು ಬೇಕಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿ. ಮೊಬೈಲ್ ಟವರ್ ಅಳವಡಿಸಲು ಅನುಮತಿ ಕಡ್ಡಾಯಗೊಳಿಸಿ. ಕ್ಷೇತ್ರದಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಿ. ಸಭೆಗೆ ಆಗಮಿಸಿದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಎಂದು ಸೂಚಿಸಿದರು.

    ತಹಸೀಲ್ದಾರ್ ಯಲ್ಲಪ್ಪ ಸುಬೇದಾರ್, ತಾಪಂ ಇಒ ಮಾನಪ್ಪ ಕಟ್ಟಿಮನಿ, ಅಧಿಕಾರಿಗಳಾದ ಡಾ. ಸಂಜಯ ರೆಡ್ಡಿ, ರಾಮಚಂದ್ರ ಗೋಳಾ, ಆನಂದಕುಮಾರ, ಶರಣಗೌಡ ಪಾಟೀಲ್, ನಟರಾಜ ಪೂಜಾರಿ, ಗೌತಮ ಕಾಂಬಳೆ, ಅರವಿಂದ ಭಾಸಗಿ, ಶಿವಮ್ಮ ದೊಡ್ಡಮನಿ, ಸಂಗಮೇಶ ಬಿರಾದಾರ, ಸುನೀಲ್ ಜಿ.ಎಚ್, ಸಚಿನ್‌ಕುಮಾರ, ಜಾಫರ್ ಅನ್ಸಾರಿ, ಭೀಮಣ್ಣ ರಾಠೋಡ್, ಅಬ್ದುಲ್ ಫಜಲ್, ರವಿಶಂಕರ, ಡಾ. ಸುಶೀಲಕುಮಾರ, ಮಹಾಂತಪ್ಪ ಹಾಳಮಳ್ಳಿ ಇತರರಿದ್ದರು.

    ಮನೆ ಮನೆಗಳಲ್ಲೂ ಸಾರಾಯಿ ಮಾರಾಟ: ಕ್ಷೇತ್ರದಲ್ಲಿ ಮಟಕಾ, ಜೂಜಾಟ, ಗಾಂಜಾ ಮಾರಾಟ ಜೋರಾಗಿ ನಡೆಯುತ್ತಿದೆ. ಪೊಲೀಸ್ ಹಾಗೂ ಅಬಕಾರಿ ಅಧಿಕಾರಿಗಳು ತಮಗೇನು ಗೊತ್ತಿಲ್ಲ ಎಂಬAತೆ ವರ್ತಿಸುತ್ತಿದ್ದಾರೆ. ರೌಡಿ ಶೀಟರ್‌ಗಳನ್ನು ಹೆಚ್ಚಿಸುವ ಕೆಲಸ ಬಿಡಿ, ಅವರ ಮನಃಪರಿವರ್ತನೆ ಮಾಡಿ. ನಿಜವಾದ ರೌಡಿಶೀಟರ್‌ಗಳನ್ನು ಬಿಟ್ಟು, ಅಮಾಯಕರ ಮೇಲೆ ರೌಡಿಶೀಟ್ ಓಪನ್ ಮಾಡಲಾಗುತ್ತಿದೆ. ಇಲ್ಲಿವರೆಗೂ ಕ್ಷೇತ್ರದಲ್ಲಿ ಮಟಕಾ, ಸಾರಾಯಿ, ಗಾಂಜಾ ಬಗ್ಗೆ ಎಷ್ಟು ಪ್ರಕರಣ ದಾಖಲಾಗಿವೆ ? ಇಷ್ಟೆಲ್ಲ ಅಕ್ರಮ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿದ್ದರೂ ನಿವೇಕೆ ಕಣ್ಮುಚ್ಚಿ ಕುಳಿತಿದ್ದೀರಿ ? ಎಂದು ಸಿಪಿಐ ಪ್ರಕಾಶ ಯಾತನೂರ, ಪಿಐ ಮಹಾದೇವ ಪಂಚಮುಖಿ, ಅಬಕಾರಿ ಪಿಎಸ್‌ಐ ಭೀಮಣ್ಣ ರಾಠೋಡ್ ಅವರ ವಿರುದ್ಧ ಶಾಸಕ ಬಿ.ಆರ್.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts