More

    ಜೈಲಿನಲ್ಲಿಯೂ ಒಂದು ಕೊಠಡಿ ಕ್ವಾರಂಟೈನ್ ಸೆಲ್

    ಅವಿನ್ ಶೆಟ್ಟಿ ಉಡುಪಿ
    ಕರೊನಾ ಮುಂಜಾಗ್ರತಾ ಕ್ರಮವಾಗಿ ಜೈಲಿನಲ್ಲಿಯೂ ಒಂದು ಕೊಠಡಿಯನ್ನು ಕ್ವಾರಂಟೈನ್ ಸೆಲ್ ಆಗಿ ಪರಿವರ್ತಿಸಲಾಗಿದೆ. ಹಿರಿಯಡಕ ಅಂಜಾರಿನಲ್ಲಿನ ಕಾರಾಗೃಹ, ಮಂಗಳೂರು ಕೊಡಿಯಲ್‌ಬೈಲ್‌ನಲ್ಲಿನ ಉಪ ಕಾರಗೃಹದಲ್ಲಿ ವಿಚಾರಣಾಧೀನ ಮತ್ತು ಶಿಕ್ಷೆಗೊಳಪಟ್ಟ ಕೈದಿಗಳ ಆರೋಗ್ಯ ಸುರಕ್ಷತೆಗಾಗಿ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.

    ಸದ್ಯ ಕಾರಗೃಹಕ್ಕೆ ಭೇಟಿ ನೀಡುವ ಕೈದಿಗಳ ಸಂಬಂಧಿಕರು, ಸ್ನೇಹಿತರು ಸಂದರ್ಶಕರ ಸಮಯವನ್ನು ತಾತ್ಕಲಿಕವಾಗಿ ರದ್ದುಪಡಿಸಲಾಗಿದೆ. ಜೈಲಿನಲ್ಲಿರುವ ಪ್ರಿಸನ್ ಕಾಲ್ ಸಿಸ್ಟಂ ದೂರವಾಣಿ ಮೂಲಕ ಸಂಬಂಧಿಕರು ಮತ್ತು ವಕೀಲರು ಕೈದಿಗಳ ಜತೆ ಮಾತನಾಡಲು ಅವಕಾಶ ಕಲ್ಪಿಸಲಾಗಿದೆ. ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯಿಂದ ಉಡುಪಿ ಜಿಲ್ಲೆಗೆ ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳು ಪೂರೈಕೆಯಾಗಿವೆ. ಜೈಲಿನ ಒಳಗೆ ಪ್ರವೇಶಿಸಿವ ಸಿಬ್ಬಂದಿ, ಅಧಿಕಾರಿಗಳು ಸ್ಯಾನಿಟೈಸರ್‌ನಲ್ಲಿ ಕೈತೊಳೆದು, ಮಾಸ್ಕ್ ಧರಿಸಿಯೇ ಹೊರಗೆ ಹೋಗಬೇಕು. ಸಾಮೂಹಿಕ ಟಿವಿ ವೀಕ್ಷಣೆ ಸೇರಿದಂತೆ ಎಲ್ಲ ರೀತಿಯ ಗುಂಪು ಚಟುವಟಿಕೆಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಶುಚಿತ್ವ ಕ್ರಮಗಳನ್ನು ಮೊದಲಿನಿಂದ ಹೆಚ್ಚಾಗಿ ಅನುಸರಿಸಲಾಗುತ್ತಿದ್ದು, ಕೈದಿಗಳು ಉತ್ತಮ ಸಹಕಾರ ನೀಡುತ್ತಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.

    ಕೈದಿಗಳಿಗೆ ವೈದ್ಯಕೀಯ ತಪಾಸಣೆ: ಜೈಲಿಗೆ ಹೊಸದಾಗಿ ದಾಖಲಾಗುವ ಎಲ್ಲ ವಿಚಾರಣಾಧೀನ ಮತ್ತು ಸಜಾ ಬಂಧಿಗಳು ಹಾಗೂ ಪರೋಲ್ ರಜೆಗಳಿಂದ ಹಿಂದಿರುಗುವವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಈ ಸಮಯದಲ್ಲಿ ಕೆಲ ಕೈದಿಗಳಿಗೆ ಸಾಮಾನ್ಯ ಶೀತ, ಜ್ವರ, ಕೆಮ್ಮು ಕಾಡುತ್ತಿರುತ್ತದೆ. ಹೀಗೆ ಅನಾರೋಗ್ಯ ಸಮಸ್ಯೆಗೆ ಒಳಗಾದ ಕೈದಿಗಳನ್ನು ನಿರ್ಲಕ್ಷೃ ಮಾಡದೆ ಕೂಡಲೇ ಜಿಲ್ಲಾ ಪೊಲೀಸ್ ಎಸ್ಕಾರ್ಟ್‌ನಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಿರಿಯಡ್ಕ ಅಂಜಾರು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

    9 ಕೈದಿಗಳು ಕ್ವಾರಂಟೈನ್‌ನಲ್ಲಿ: ಜೈಲಿನಲ್ಲಿ ಪ್ರತ್ಯೇಕ ಬ್ಯಾರಾಕ್ ಒಂದನ್ನು ಕ್ವಾರಂಟೈನ್ ಸೆಲ್ ಮಾಡಲಾಗಿದೆ. ಹೊಸದಾಗಿ ಬರುವ, ಇನ್ನಿತರೆ ವೈದ್ಯಕೀಯ ಚಿಕಿತ್ಸೆ ಪಡೆದು ಜೈಲಿಗೆ ಪುನಃ ಬಂದ ಕೈದಿಗಳಿಗೆ ಇಲ್ಲಿ 14 ದಿನಗಳ ಕ್ವಾರಂಟೈನ್ ಮಾಡಲಾಗುತ್ತದೆ. ಸದ್ಯ ಮಂಗಳೂರಿನ ಕಾರಾಗೃಹದಲ್ಲಿ 7, ಹಿರಿಯಡ್ಕ ಕಾರಾಗೃಹದಲ್ಲಿ ಇಬ್ಬರು ಕೈದಿಗಳು ಕ್ವಾರಂಟೈನ್‌ನಲ್ಲಿದ್ದಾರೆ. ಕ್ವಾರಂಟೈನ್ ಅವಧಿ ಮುಗಿದ ಬಳಿಕ ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆ ನಡೆಸಿ ಸೋಂಕಿನ ಲಕ್ಷಣಗಳಿಲ್ಲ ಎಂಬುದನ್ನು ಖಚಿಸಿತಪಡಿಸಿಯೇ ಸಾಮಾನ್ಯ ಸೆಲ್‌ಗೆ ಕೈದಿಯನ್ನು ಸ್ಥಳಾಂತರಿಸಲಾಗುತ್ತದೆ. ಜೈಲಿನ ಅಧೀಕ್ಷಕರು ನಿರಂತರವಾಗಿ ಡಿಎಚ್‌ಒ ಮತ್ತು ಸರ್ಜನ್‌ರೊಂದಿಗೆ ಸಂಪರ್ಕದಲ್ಲಿದ್ದಾರೆ.

    ಕರೊನಾ ಮುಂಜಾಗ್ರತಾ ಕ್ರಮ ಸಂಬಂಧಿಸಿ ಜೈಲಿನಲ್ಲಿ ಸರ್ಕಾರ ಮತ್ತು ಗೃಹ ಇಲಾಖೆ ನೀಡಿರುವ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ಬಂಧಿಗಳ ಸಣ್ಣಪುಟ್ಟ ಅನಾರೋಗ್ಯವನ್ನೂ ನಿರ್ಲ್ಯಕ್ಷೃ ಮಾಡದೆ ವೈದ್ಯಕೀಯ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಗುತ್ತಿದೆ. ಸಾಮಾಜಿಕ ಅಂತರ ಮತ್ತು ಶುಚಿತ್ವಕ್ಕೆ ಆದ್ಯತೆ.
    – ಶ್ರೀನಿವಾಸ, ಉಡುಪಿ ಜಿಲ್ಲಾ ಕಾರಗೃಹ ಅಧೀಕ್ಷಕ, ಹಿರಿಯಡಕ ಅಂಜಾರು ಜೈಲು.

    ಮಂಗಳೂರು ಸಬ್‌ಜೈಲ್‌ನಲ್ಲಿ ಕ್ವಾರಂಟೈನ್ ಸೆಲ್ ಮಾಡಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ ಹಾಗೂ ಹೊಸದಾಗಿ ಬಂದ ವಿಚಾರಣಾಧೀನ ಕೈದಿಗಳನ್ನು ಈ ಸೆಲ್‌ನಲ್ಲಿ ಇರಿಸಲಾಗುತ್ತದೆ. ಪ್ರಸ್ತುತ 7 ಮಂದಿ ಕ್ವಾರಂಟೈನ್ ಸೆಲ್‌ನಲ್ಲಿದ್ದಾರೆ. ಜೈಲ್‌ನಲ್ಲಿರುವ ಎಲ್ಲ ಕೈದಿಗಳಿಗೆ ಮಾಸ್ಕ್ ವಿತರಣೆ ಮಾಡಲಾಗಿದೆ.
    – ಚಂದನ್ ಪಟೇಲ್ ಅಧೀಕ್ಷಕ, ಮಂಗಳೂರು ಸಬ್‌ಜೈಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts