More

    ಸ್ವಂತ ಸೂರಿಗಾಗಿ ಸರ್ಕಾರಿ ಕಚೇರಿ ಸುತ್ತಿ ಬಸವಳಿದ ಕುಟುಂಬ

    ಪುತ್ತೂರು: ಮನೆ ಕುಸಿತ ಭೀತಿಯಲ್ಲಿದೆ. ಸ್ವಂತ ಸೂರಿಗೆ ವ್ಯವಸ್ಥೆ ಮಾಡಿಕೊಡಿ ಎಂಬ ಕೋರಿಕೆಯೊಂದಿಗೆ ಈ ಕುಟುಂಬ ಸದಸ್ಯರು ನಗರಸಭೆಯ ಕದ ತಟ್ಟಿ ಐದು ವರ್ಷಗಳೇ ಕಳೆದಿವೆ. ಆದರೂ, ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ.
    – ಇದು ಪುತ್ತೂರು ನಗರಭಾ ವ್ಯಾಪ್ತಿಯ ಕೆಮ್ಮಿಂಜೆ ಸಮೀಪದ ಮಂದಾರ ಬೈಲು ನಿವಾಸಿ ಸುರಕ್ಷಾ ಅವರ ಕುಟುಂಬದ ಕತೆ.

    ಸುರಕ್ಷಾ ಅನಾರೋಗ್ಯ ಪೀಡಿತ ತಂದೆ ಪ್ರಕಾಶ್ ಪೂಜಾರಿ, ತಾಯಿ ಮೀನಾಕ್ಷಿ ಹಾಗೂ ತಮ್ಮನ ಜತೆ ವಾಸವಾಗಿದ್ದಾರೆೆ. ಸರ್ಕಾರಿ ಜಮೀನಿನಲ್ಲಿ 25 ವರ್ಷಗಳಿಂದ ವಾಸಿಸುತ್ತಿದ್ದ ಪ್ರಕಾಶ್, 2018ರಲ್ಲಿ 94 ಸಿಸಿ ಯೋಜನೆಯಡಿ 2.5 ಸೆಂಟ್ಸ್ ನಿವೇಶನ ಹೊಂದಿದ್ದಾರೆ. ಆದರೆ ಕಳೆದ ಮಳೆಗಾಲದಲ್ಲಿ ಕುಸಿದ ಈ ಹಳೆಯ ಮನೆ, ಈಗ ವಾಸಕ್ಕೆ ಯೋಗ್ಯವಾಗಿಲ್ಲ. ಮನೆಯಲ್ಲಿ ಇರುವುದು ಒಂದೇ ದೀಪ. ಅದೇ ದೀಪದಡಿ ಮಕ್ಕಳಿಬ್ಬರು ಓದಿ ಶಿಕ್ಷಣ ಪಡೆದಿದ್ದಾರೆ. ಮನೆ ಕಟ್ಟಲು ಅರ್ಜಿ ಹಿಡಿದು ಇದುವರೆಗೆ ಸರ್ಕಾರಿ ಕಚೇರಿ ಅಲೆದಾಡಿದ ಹಣದಲ್ಲೇ ನಾವು ಸಣ್ಣ ಗುಡಿಸಲು ಕಟ್ಟಬಹುದಿತ್ತು ಎಂದು ಹೇಳುವಾಗ ಮನೆಯವರ ಕಣ್ಣಿನಂಚಿನಲ್ಲಿ ಹನಿ ನೀರು ಕಾಣುತ್ತದೆ.

    ಹಣ ಸಂಗ್ರಹಿಸಿದ ಕೇರಳದ ಸಂಸ್ಥೆ: ಕೇರಳ ಮೂಲದ ಸಂಸ್ಥೆಯೊಂದು ಪ್ರಕಾಶ್ ಪೂಜಾರಿ ಅವರನ್ನು ಸಂಪರ್ಕಿಸಿ, ವಿದೇಶದ ದಾನಿಗಳಿಂದ 10 ಲಕ್ಷ ರೂ. ಸಂಗ್ರಹಿಸಿ, ಮನೆ ನಿರ್ಮಿಸಿ ಕೊಡುತ್ತೇವೆಂದು ತಿಳಿಸಿತ್ತು. ಮನೆ, ಮನೆಮಂದಿಯ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿ, ಹಣಕ್ಕಾಗಿ ನಿವೇದಿಸಿಕೊಂಡಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈಗಾಗಲೇ ಸಂಸ್ಥೆ ಖಾತೆಗೆ 5 ಲಕ್ಷ ರೂ.ಗೂ ಅಧಿಕ ಮೊತ್ತ ಜಮೆಯಾಗಿರುವ ಸುದ್ದಿ ಹರಡಿದಿದೆ. ಈ ಮಾಹಿತಿ ಪಡೆದ ಸ್ಥಳೀಯ ಹಿಂದು ಸಂಘಟನೆ ಕಾರ್ಯಕರ್ತರು, ಮನೆ ನಿರ್ಮಾಣದ ಆಮಿಷ ನೀಡಿ ಕುಟುಂಬದ ಮತಾಂತರ ಮಾಡಲು ಯತ್ನ ಮಾಡಲಾಗುತ್ತಿದೆ ಎಂಬ ಆರೋಪಿಸಿದೆ.

    ಅಲೆದಾಟಕ್ಕೆ ಸಿಗದ ಮುಕ್ತಿ: ತಮ್ಮ ಕುಟುಂಬ ಅಪಾಯದಲ್ಲಿದ್ದು, ಸೂಕ್ತ ನಿವೇಶನದ ವ್ಯವಸ್ಥೆ ಮಾಡಬೇಕೆಂದು ಸುರಕ್ಷಾ, ನಗರಸಭೆಗೆ ಈ ಹಿಂದಿನ ಆಡಳಿತಾವಧಿಯಲ್ಲಿ ಮನವಿ ಮಾಡಿದ್ದರು. ಕಚೇರಿಯಿಂದ ಕಚೇರಿಗೆ ಅಲೆದಾಡಿ ದಾಖಲೆಪತ್ರವನ್ನೂ ನೀಡಿದ್ದರು. ಆದರೆ ನಗರಸಭೆ ಕ್ರಮ ಕೈಗೊಂಡಿಲ್ಲ. ವಿಡಿಯೋ ವೈರಲ್ ಅಗುತ್ತಿದ್ದಂತೆ ಚುರುಕಾದ ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾಗೌರಿ, ಸದಸ್ಯ ಪಿಜಿ ಜಗನ್ನಿವಾಸ್ ರಾವ್, ಬಜರಂಗದಳ ಮುಖಂಡ ಮುರಳಿಕೃಷ್ಣ ಹಸಂತಡ್ಕ ಸಹಿತ ಹಲವರು ಮನೆಗೆ ಭೇಟಿ ನೀಡಿ, ಸ್ಥಿತಿಗತಿ ಪರಿಶೀಲಿಸಿದ್ದಾರೆ.

    ಮನವಿ: ಈ ಕುಟುಂಬಕ್ಕೆ ಮನೆ ಕಟ್ಟಲು ನೆರವಾಗುವವರು ಪ್ರಕಾಶ್ ಪೂಜಾರಿ ಅವರ ಪತ್ನಿ ಮೀನಾಕ್ಷಿ ಅವರ ಬ್ಯಾಂಕ್ ಖಾತೆಗೆ ಹಣ ಪಾವತಿಸಬಹುದು. ಎಸ್‌ಸಿಡಿಸಿಸಿ ಬ್ಯಾಂಕ್ ಪುತ್ತೂರು ಶಾಖೆ. ಖಾತೆ ಸಂಖ್ಯೆ-00203020116289, ಐಎ್ಎಸ್‌ಸಿ ಸಂಖ್ಯೆ – ಐಬಿಕೆಎಲ್078ಎಸ್‌ಸಿಡಿಸಿ.

    ಕೇರಳ ಸಂಸ್ಥೆ ನಮ್ಮನ್ನು ಸಂಪರ್ಕಿಸಿ, ನಿಮಗೆ ಐದು ವರ್ಷ ಕಳೆದರೂ ಸರ್ಕಾರದಿಂದ ಮನೆ ನಿರ್ಮಾಣ ಆಗಲ್ಲ. ನಮ್ಮ ಸಂಘ ಮೂರು ತಿಂಗಳೊಳಗೆ ಮನೆ ನಿರ್ಮಿಸಿ ಕೊಡುತ್ತದೆ ಎಂದು ಭರವಸೆ ನೀಡಿತ್ತು. ಅನಾರೋಗ್ಯದಿಂದ ಇರುವ ಕಾರಣ, ಮನೆ ನಿರ್ಮಾಣ ನಮಗೆ ಕಷ್ಟ. ಆದುದರಿಂದ ಕೇರಳದ ಸಂಸ್ಥೆಯ ಮನೆ ನಿರ್ಮಾಣ ಯೋಜನೆಗೆ ಒಪ್ಪಿಗೆ ಸೂಚಿಸಿದ್ದೆವು.
    – ಪ್ರಕಾಶ್ ಪೂಜಾರಿ, ಮಂದಾರಬೈಲು ನಿವಾಸಿ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts