More

    ಬೈತ್ತಡ್ಕ ಮುಳುಗು ಸೇತುವೆಯ ಅಪಾಯಕಾರಿ ಸ್ಥಳಕ್ಕೆ ತಡೆಬೇಲಿ

    ಕಡಬ: ಪುತ್ತೂರು-ದರ್ಬೆ-ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ಕಾಣಿಯೂರು ಪೇಟೆ ಸಮೀಪದ ಬೈತ್ತಡ್ಕ ಎಂಬಲ್ಲಿರುವ ಮುಳುಗು ಸೇತುವೆಯ ಒಂದು ಭಾಗದ ಅಪಾಯಕಾರಿ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯಿಂದ ತಡೆಬೇಲಿ ನಿರ್ಮಾಣವಾಗಿದೆ. ಬೈತಡ್ಕ ಮುಳುಗು ಸೇತುವೆಯಾದ ಕಾರಣ ಸೇತುವೆಯ ಅಪಘಾತ ಸಂಭವಿಸುವ ಸ್ಥಳದಲ್ಲಿ ಸುಮಾರು 25 ಮೀಟರ್ ಉದ್ದದ ತಡೆಗೋಡೆ ನಿರ್ಮಿಸಲಾಗಿದೆ.

    ಈ ಸೇತುವೆಯಲ್ಲಿ ಹಲವು ಅಪಘಾತಗಳು ಸಂಭವಿಸಿವೆ. ಕೆಲವರ್ಷಗಳ ಹಿಂದೆಯಷ್ಟೇ ಮಳೆಗಾಲ ಸಂದರ್ಭ ಸೇತುವೆಯಿಂದ ಕಾರೊಂದು ಹೊಳೆಗೆ ಬಿದ್ದು ಕಾರಿನಲ್ಲಿದ್ದ ಯುವಕರಿಬ್ಬರು ಪ್ರಾಣ ಕಳೆದುಕೊಂಡಿದ್ದರು. ಕಾರು-ಬೈಕುಗಳು ಬಿದ್ದು ಅಪಘಾತಗಳು ನಡೆದಿದ್ದವು. ಪುತ್ತೂರು ಭಾಗದಿಂದ ಕಾಣಿಯೂರು ಕಡೆಗೆ ಬರುವ ವಾಹನಗಳು ವೇಗವಾಗಿ ಬಂದಾಗ ಬೈತ್ತಡ್ಕ ತಿರುವು ರಸ್ತೆಯ ಈ ಮುಳುಗು ಸೇತುವೆ ಅಂದಾಜಿಸುವಲ್ಲಿ ವಿಫಲವಾಗಿ ನಿಯಂತ್ರಣ ತಪ್ಪಿ ವಾಹನಗಳು ಹೊಳೆಗೆ ಬಿದ್ದು ಅಪಘಾತ ಸಂಭವಿಸುತ್ತಿತ್ತು.

    ಮೇಲ್ದರ್ಜೆಗೇರಿಸುವಂತೆ ಆಗ್ರಹ

    ಪ್ರಮುಖ ಯಾತ್ರಾ ಸ್ಥಳವಾದ ಕುಕ್ಕೆಸುಬ್ರಹ್ಮಣ್ಯ ಸೇರಿದಂತೆ ಕಾಣಿಯೂರು, ಪಂಜ, ಪುತ್ತೂರು ಮೊದಲಾದ ಪ್ರಮುಖ ಪೇಟೆಗಳಿಗೆ ಇದೇ ಸಂಪರ್ಕ ರಸ್ತೆಯಾಗಿದೆ. ರಾತ್ರಿ ಸಂಚರಿಸುವ ವಾಹನಗಳಿಗೆ ಅಪಾಯಕಾರಿಯಾಗಿದೆ. ಹೀಗಾಗಿ ಇಲ್ಲಿ ಸರ್ವಋತು ಸೇತುವೆ ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

    ಸೇತುವೆಯಲ್ಲಿ ಅಪಘಾತ ನಡೆಯುವ ಸ್ಥಳಕ್ಕೆ ತಡೆಬೇಲಿ ನಿರ್ಮಿಸುವ ಮೂಲಕ ಇಲಾಖೆ ಹೆಚ್ಚಿನ ಅಪಾಯವನ್ನು ದೂರ ಮಾಡಿದೆ. ಸರ್ವಋತು ಸೇತುವೆ ನಿರ್ಮಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು.
    – ಮೋಹನ್ ಚಂದ್ರ, ಖಂಡಿಗ, ಪ್ರಯಾಣಿಕ

    ಮುಳುಗು ಸೇತುವೆಯಾದ ಕಾರಣ ಸೇತುವೆಯ ಇಕ್ಕೆಡೆಗಳಲ್ಲಿ ಸಂಪೂರ್ಣ ತಡೆಗೋಡೆ ನಿರ್ಮಿಸಲು ಸಾಧ್ಯವಿಲ್ಲ. ಲೋಕೋಪಯೋಗಿ ಇಲಾಖೆಯ ವಾರ್ಷಿಕ ನಿರ್ವಹಣೆಯಲ್ಲಿ ಹಿರಿಯ ಅಧಿಕಾರಗಳ ಸೂಚನೆಯಂತೆ ತಡೆಗೊಡೆ ರಚಿಸಲಾಗಿದೆ. ಈ ರಾಜ್ಯ ಹೆದ್ದಾರಿಯಲ್ಲಿ ಬರುವ ಸರ್ವೆ, ಬೈತ್ತಡ್ಕ, ಪುಣ್ಚತ್ತಾರು ಮುಳುಗು ಸೇತುವೆಗಳನ್ನು ಮೇಲ್ದರ್ಜೆಗೇರಿಸಲು ಕೆಆರ್‌ಡಿಸಿಎಲ್‌ಗೆ ಮನವಿ ಸಲ್ಲಿಸಲಾಗಿದೆ.
    – ಕಾನಿಷ್ಕ, ಸಹಾಯಕ ಇಂಜಿನಿಯರ್
    ಲೋಕೋಪಯೋಗಿ ಇಲಾಖೆ ಪುತ್ತೂರು ಉಪ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts