More

    2036ರವರೆಗೂ ಪುತಿನ್ ರಷ್ಯಾ ಅಧ್ಯಕ್ಷ? ಸಂಸತ್ ಕೆಳಮನೆಯಲ್ಲಿ ತಿದ್ದುಪಡಿ ಪಾಸ್|

    ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್​ರ ಅಧಿಕಾರ ಅವಧಿಯನ್ನು ಇನ್ನೂ ಎರಡು ಅವಧಿಗೆ ವಿಸ್ತರಿಸುವ ಪ್ರಸ್ತಾವನೆ ಒಳಗೊಂಡ ಸಾಂವಿಧಾನಿಕ ತಿದ್ದುಪಡಿಗೆ ರಷ್ಯಾ ಸಂಸತ್​ನ ಕೆಳಮನೆಯಲ್ಲಿ ಬುಧವಾರ ಅಂಗೀಕಾರ ಸಿಕ್ಕಿದೆ. ಈ ಪ್ರಸ್ತಾವನೆ ಮುಂದಿನ ಎಲ್ಲ ಹಂತಗಳನ್ನೂ ದಾಟಿದರೆ ಪುತಿನ್ 2036ರವರೆಗೂ ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ.

    ಸಂಸತ್​ನ ಕೆಳಮನೆ ‘ಸ್ಟೇಟ್ ಡುಮಾ’ದಲ್ಲಿ ಸಾಂವಿಧಾನಿಕ ತಿದ್ದುಪಡಿ ಪ್ರಸ್ತಾವನೆ ಪರವಾಗಿ ಒಟ್ಟು 383 ಸದಸ್ಯರು ಮತಚಲಾಯಿಸಿದ್ದು, 43 ಸದಸ್ಯರು ಮತದಾನದಿಂದ ದೂರ ಉಳಿದಿದ್ದಾರೆ. ಯಾರೊಬ್ಬರೂ ಕೂಡ ಪ್ರಸ್ತಾವನೆಗೆ ವಿರುದ್ಧವಾಗಿ ಮತಚಲಾಯಿಸಿಲ್ಲ. ಪ್ರಸ್ತಾವನೆಯನ್ನು ಸಂಸತ್​ನ ಮೇಲ್ಮನೆ ಫೆಡರೇಶನ್ ಕೌನ್ಸಿಲ್​ನಲ್ಲಿ ಅಂಗೀಕರಿಸಿದ ನಂತರ, ಏಪ್ರಿಲ್ 22ರಂದು ಸಾರ್ವಜನಿಕ ಮತದಾನಕ್ಕೆ ಹಾಕಲಾಗುತ್ತದೆ. ಸಾಂವಿಧಾನಿಕ ನ್ಯಾಯಾಲಯ ಇದಕ್ಕೆ ಅನುಮತಿ ನೀಡಿ ಕಾನೂನಿನಲ್ಲಿ ಬದಲಾವಣೆಯಾದರೆ ಪುತಿನ್ ಮತ್ತೆ ಎರಡು ಬಾರಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ. ಸದ್ಯ ರಷ್ಯಾದಲ್ಲಿ ಒಬ್ಬರು ನಾಲ್ಕು ಬಾರಿ ಅಧ್ಯಕ್ಷರಾಗಲು ಮಾತ್ರ ಅವಕಾಶವಿದೆ.

    67 ವರ್ಷದ ವ್ಲಾದಿಮಿರ್ ಪುತಿನ್ ಈಗಾಗಲೇ ಎರಡು ಬಾರಿ ಪ್ರಧಾನಿ ಹಾಗೂ ನಾಲ್ಕನೇ ಬಾರಿ ಅಧ್ಯಕ್ಷರಾಗಿ ಅಧಿಕಾರ ನಿರ್ವಹಿಸುತ್ತಿದ್ದಾರೆ. 1999ರಿಂದ 2000ವರೆಗೆ ಪ್ರಧಾನಮಂತ್ರಿಯಾಗಿದ್ದ ಪುತಿನ್, 2000 ದಿಂದ 2008ರವರೆಗೆ ಎರಡು ಬಾರಿ ಅಧ್ಯಕ್ಷರಾಗಿ ಅಧಿಕಾರಕ್ಕೇರಿದ್ದರು. ನಂತರ ಮತ್ತೆ 2008ರಿಂದ 2012ರವರೆಗೆ ಪ್ರಧಾನಿ ಹುದ್ದೆಗೇರಿದರು. 2012ರಲ್ಲಿ ಮತ್ತೆ ಅಧ್ಯಕ್ಷರಾದ ಅವರು 2018ರ ಚುನಾವಣೆಯಲ್ಲಿ ಮರು ಆಯ್ಕೆಯಾಗಿದ್ದಾರೆ. ಅವರ ಪ್ರಸ್ತುತ ಕಾರ್ಯಾವಧಿ 2024ಕ್ಕೆ ಪೂರ್ಣಗೊಳ್ಳಲಿದೆ. ನಂತರವೂ ಎರಡು ಚುನಾವಣೆ ಎದುರಿಸಲು ಪುತಿನ್​ಗೆ ಅವಕಾಶ ಸಿಕ್ಕರೆ 2024 ಮತ್ತು 2030ರ ಚುನಾವಣೆಯಲ್ಲಿ ಮತ್ತೆ ಅಧ್ಯಕ್ಷ ಹುದ್ದೆಗೇರಲಿದ್ದಾರೆ.

    ಚೀನಾದಲ್ಲೂ ಜೀವಿತಾವಧಿಗೆ ಅಧ್ಯಕ್ಷ: ಕಮ್ಯುನಿಸ್ಟ್ ಆಡಳಿತವಿರುವ ಚೀನಾದಲ್ಲೂ ಜೀವಿತಾವಧಿಯವರಿಗೆ ಅಧ್ಯಕ್ಷರಾಗಿ ಮುಂದುವರಿಯುವಂಥ ತಿದ್ದುಪಡಿಯನ್ನು ಮಾಡಲಾಗಿದೆ. ಈ ಮೂಲಕ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ತಾವು ಬದುಕಿರುವವರೆಗೂ ಅಧಿಕಾರದಲ್ಲಿ ಮುಂದುವರಿಯಬಹುದಾಗಿದೆ.

    ಪುತಿನ್ ವಿರುದ್ಧ ಟೀಕೆ

    ಮತ್ತೆರಡು ಅವಧಿಗೆ ಅಧ್ಯಕ್ಷರಾಗಿ ಮುಂದುವರಿಯಲು ಬಯಸಿರುವ ಪುತಿನ್ ನಡೆಯನ್ನು ಪ್ರತಿಪಕ್ಷ ನಾಯಕ ಅಲೆಕ್ಸಿ ನವಲ್ನಿ ತೀವ್ರವಾಗಿ ಖಂಡಿಸಿದ್ದಾರೆ. ಪುತಿನ್ ತಮ್ಮ ಜೀವನದುದ್ದಕ್ಕೂ ಅಧ್ಯಕ್ಷರಾಗಿರಲು ಬಯಸುತ್ತಾರೆ, ಆ ಪ್ರಯತ್ನದೆಡೆಗೆ ಇದು ಒಂದು ಹೆಜ್ಜೆ. ಇದು ಸಂವಿಧಾನದ ಮೂಲ ಮನೋಭಾವದ ಉಲ್ಲಂಘನೆ ಎಂದಿದ್ದಾರೆ. ಆದಾಗ್ಯೂ ಪುತಿನ್​ಗೆ ಹೆಚ್ಚಿನ ಜನ ಬೆಂಬಲವಿದ್ದು, ರಷ್ಯಾದ ಪ್ರಗತಿಗಾಗಿ ಪುತಿನ್ ಅಧ್ಯಕ್ಷರಾಗಿ ಉಳಿಯುವುದು ಅವಶ್ಯಕ ಎಂದು ಬಹುತೇಕರು ಅಭಿಪ್ರಾಯಪಟ್ಟಿದ್ದಾರೆ.

    ರಷ್ಯಾ ಅಧ್ಯಕ್ಷರ ಅವಧಿ

    ಅಮೆರಿಕದಂತೆ ರಷ್ಯಾ ಕೂಡ ಅಧ್ಯಕ್ಷೀಯ ಮಾದರಿಯ ಸಂಸತ್ ಹೊಂದಿದೆ. ಆದರೆ, ಪ್ರಧಾನಿ ಹುದ್ದೆಯೂ ಇದೆ. ರಷ್ಯಾ ಅಧ್ಯಕ್ಷರು ಜನರಿಂದಲೇ ನೇರವಾಗಿ ಆಯ್ಕೆ ಆಗಲಿದ್ದು, 6 ವರ್ಷ ಅಧಿಕಾರ ಅವಧಿ ಹೊಂದಿದ್ದಾರೆ. ರಷ್ಯಾದಲ್ಲಿ ಓರ್ವ ನಾಯಕ ನಾಲ್ಕು ಸಾರಿ ಮಾತ್ರ ಅಧ್ಯಕ್ಷ ಸ್ಥಾನ ಅಲಂಕರಿಸಲು ಸಂವಿಧಾನದಲ್ಲಿ ಅವಕಾಶ ಇದೆ.

    ಮಾರಣಾಂತಿಕ ಕರೊನಾಗೆ ಸೆಡ್ಡು ಹೊಡೆದು 103 ವರ್ಷದ ಶತಾಯುಷಿ ಬದುಕುಳಿದಿದ್ದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts