More

  ಅರಾಜಕತೆ ಬಗ್ಗೆ ರಾಜ್ಯಪಾಲರು ರಾಷ್ಟ್ರಪತಿಗೆ ವರದಿ ಸಲ್ಲಿಸಲಿ

  ಹುಬ್ಬಳ್ಳಿ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೊಂಡ ನಂತರ ಹಿಂದುಗಳ ಮೇಲೆ ಹಲ್ಲೆ, ಕೊಲೆ ಹಾಗೂ ಲವ್​ಜಿಹಾದ್ ಪ್ರಕರಣಗಳು ಹೆಚ್ಚುತ್ತಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿನ ಅರಾಜಕತೆ ಕುರಿತು ರಾಜ್ಯಪಾಲರು ತಕ್ಷಣ ರಾಷ್ಟ್ರಪತಿ ಅವರಿಗೆ ವರದಿ ಸಲ್ಲಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದ್ದಾರೆ.

  ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಸರ್ಕಾರಕ್ಕೆ ಸೂಕ್ತ ಎಚ್ಚರಿಕೆ ನೀಡಬೇಕು. ರಾಜ್ಯದಲ್ಲಿನ ಅರಾಜಕತೆ ವಿವರಿಸುವುದಕ್ಕಾಗಿ ರಾಜ್ಯಪಾಲರನ್ನು ಭೇಟಿಯಾಗುವ ಬಗ್ಗೆ ಬಿಜೆಪಿ ಮುಖಂಡರು ರ್ಚಚಿಸುತ್ತಿದ್ದಾರೆ ಎಂದು ತಿಳಿಸಿದರು.

  ಕರ್ನಾಟಕದಲ್ಲಿ ಪಾಕಿಸ್ತಾನ ರೀತಿಯ ವಾತಾವರಣ ನಿರ್ವಣಗೊಂಡಿದೆ. ಒಂದು ಕೋಮಿನ ಜನರನ್ನು ಖುಷಿ ಪಡಿಸುವುದಕ್ಕಾಗಿ ಕಾಂಗ್ರೆಸ್ ಸರ್ಕಾರ ಅವರು ಮಾಡುವ ಅಪರಾಧಿ ಕೃತ್ಯಗಳನ್ನು ನಿರ್ಲಕ್ಷಿಸುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಕರ್ನಾಟಕದಲ್ಲಿ ಹಿಂದುಗಳನ್ನು ರಕ್ಷಿಸುವವರು ಯಾರು ? ಎಂದು ಪ್ರಶ್ನಿಸಿದರು.

  ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಕೊಲೆ ಒಂದು ಆಕಸ್ಮಿಕ ಘಟನೆ ಎಂದಿರುವ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಏನಾದರೂ ಜವಾಬ್ದಾರಿ ಇದೆಯಾ ? ಕಾನೂನು ವ್ಯವಸ್ಥೆ ಸಂಪೂರ್ಣ ಮುಸ್ಲಿಂರ ಪರ ಇದೆ. ಜಾತ್ಯಾತೀತ ಸರ್ಕಾರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲ ಜಾತಿಯವರನ್ನು ಸಮಾನವಾಗಿ ನೋಡಬೇಕು ಎಂದು ಒತ್ತಾಯಿಸಿದರು.

  ನೇಹಾಳನ್ನು ಕೊಲೆ ಮಾಡಿದ ಆರೋಪಿ ಫಯಾಜ್​ ಮನೆಗೆ ಪೊಲೀಸ್ ರಕ್ಷಣೆ ನೀಡಲಾಗಿದೆ. ಜನಸಾಮಾನ್ಯರಿಗೆ ಪೊಲೀಸ್ ರಕ್ಷಣೆ ಸಿಗದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

  ಉಡುಪಿ ಹಾಸ್ಟೆಲ್ ಘಟನೆ, ಕೊಡಗಿನಲ್ಲಿ ಹಿಂದುಗಳ ಮೇಲೆ ಹಲ್ಲೆ, ಗದಗನಲ್ಲಿ ನಾಲ್ವರ ಹತ್ಯೆ, ಕುಕ್ಕರ್ ಬಾಂಬ್ ಸ್ಪೋಟ ಇವೆಲ್ಲ ಕಾಂಗ್ರೆಸ್ ಸರ್ಕಾರದ ಅರಾಜಕತೆಗೆ ಹಿಡಿದ ಕನ್ನಡಿ. ಈ ಮಧ್ಯೆ ಡಿ.ಕೆ. ಶಿವಕುಮಾರ ಅವರು ಕಾಂಗ್ರೆಸ್​ಗೆ ಮತ ನೀಡದಿದ್ದರೆ ನೀರು ಕೊಡುವುದಿಲ್ಲವೆಂದು ಮತದಾರರಿಗೆ ಬೆದರಿಕೆ ಹಾಕಿದ್ದು, ಚುನಾವಣೆ ಆಯೋಗ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು.

  ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ನಿರೀಕ್ಷಿದಷ್ಟು ಸ್ಥಾನಗಳಲ್ಲಿ ಗೆಲ್ಲಲು ಆಗುವುದಿಲ್ಲ ಎಂಬ ಕಾರಣಕ್ಕೆ ಆ ಪಕ್ಷದ ಮುಖಂಡರು ಹತಾಶರಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್​ಗೆ ಹೆಚ್ಚಿನ ಸ್ಥಾನಗಳು ಬರದಿದ್ದರೆ ಮುಖ್ಯಮಂತ್ರಿ ಸ್ಥಾನ ಹೋಗುತ್ತದೆ ಎಂಬ ಭಯ ಸಿದ್ದರಾಮಯ್ಯ ಅವರನ್ನು ಕಾಡುತ್ತಿದೆ. ಈ ಮಧ್ಯೆ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಬಾರದು, ಆಗ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆಂದು ಡಿಸಿಎಂ ಡಿ.ಕೆ. ಶಿವಕುಮಾರ ಕಾಯುತ್ತಿದ್ದಾರೆ ಎಂದು ಟೀಕಿಸಿದರು.

  ಎನ್​ಕೌಂಟರ್ ಕಾನೂನು ಬರಬೇಕು ಎಂದು ಸಚಿವ ಸಂತೋಷ ಲಾಡ್ ಹೇಳಿದ್ದಾರೆ. ಸರ್ಕಾರಕ್ಕೆ ನೈತಿಕತೆ ಇದ್ದರೆ ನೇಹಾಳ ಹತ್ಯೆ ಮಾಡಿದ ಫೈಯಾಜ್​ನನ್ನು ಎನ್​ಕೌಂಟರ್ ಮಾಡಲಿ. ರೌಡಿಗಳು, ಕೊಲೆಗಾರರು, ಅತ್ಯಾಚಾರಿಗಳ ಮನೆಗೆ ಬುಲ್ಡೋಜರ್ ಹಚ್ಚಲಿ ಎಂದು ಸವಾಲು ಹಾಕಿದರು.

  ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆದರೆ ಮಾತ್ರ ದೇಶದಲ್ಲಿ ಹಿಂದುಗಳ ರಕ್ಷಣೆ ಸಾಧ್ಯ. ಇಲ್ಲದಿದ್ದರೆ ಹಿಂದುಗಳ ರಕ್ಷಣೆ ಮಾಡುವವರು ಯಾರು ? ಎಂದು ಪ್ರಶ್ನಿಸಿದರು.

  ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 24 ತಾಸುಗಳಲ್ಲಿ ಮೇಕೆದಾಟು ಯೋಜನೆ ಅನುಷ್ಠಾನಗೊಳಿಸುತ್ತೇವೆ ಎಂಬುದು ಹಾಸ್ಯಾಸ್ಪದ. ಮುಖ್ಯಮಂತ್ರಿ ಸಿದ್ದರಾಮಯ್ಯ ಚೂ ಮಂತ್ರದ ಜಾದು ಮೂಲಕ ಯೋಜನೆ ಅನುಷ್ಠಾನಗೊಳಿಸುತ್ತಾರೆಯೇ ಎಂದು ವ್ಯಂಗ್ಯವಾಡಿದ ಯತ್ನಾಳ, ಈ ಯೋಜನೆ ಅನುಷ್ಠಾನದ ಬಗ್ಗೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಹೇಳಿಕೆ ನೀಡಲಿ ಎಂದು ಒತ್ತಾಯಿಸಿದರು.

  ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಬದ್ಧ ಇದೆ ಎಂದು ಇದೇ ಸಂದರ್ಭದಲ್ಲಿ ಯತ್ನಾಳ ಹೇಳಿದರು.

  ಪೇಮೆಂಟ್ ಆಗಿದೆ : ಶಿರಹಟ್ಟಿ ಫಕೀರ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಅವರು ಧಾರವಾಡ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವರಿಗೆ ಪೇಮೆಂಟ್ ಆಗಿದೆ. ಪೇಮೆಂಟ್ ಮಾಡಿದವರು ಯಾರು ಎಂಬುದನ್ನು ಮೇ 7ರ ಮತದಾನದ ನಂತರ ಬಹಿರಂಗಪಡಿಸುವುದಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಸ್ವಾಮೀಜಿ ಸ್ಪರ್ಧೆಯಿಂದ ಬಿಜೆಪಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಹಿಂದೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಸ್ವಾಮೀಜಿ ಅವರನ್ನು ತೆಗಳುತ್ತಿದ್ದರು. ಈಗ ಹೊಗಳುತ್ತಿರುವುದನ್ನು ಗಮನಿಸಿದರೆ, ಅವರಿಗೆ ಪೇಮೆಂಟ್ ಆಗಿದೆ ಎಂಬರ್ಥ ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts