More

    ಶುದ್ಧ ಕುಡಿಯುವ ನೀರಿಗೆ ತಪ್ಪದ ಅಲೆದಾಟ

    ಅರಟಾಳ: ಗ್ರಾಮಗಳಲ್ಲಿನ ಶುದ್ಧ ನೀರಿನ ಘಟಕಗಳು ಪದೇ ಪದೆ ದುರಸ್ತಿಗೆ ಬರುತ್ತಿರುವುದರಿಂದ ಜನರು ಶುದ್ಧ ನೀರಿಗಾಗಿ ಪರದಾಡುತ್ತಿದ್ದಾರೆ.

    ಅರಟಾಳ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದ್ದು, ಇದ್ದೂ ಇಲ್ಲದಂತಾಗಿದೆ. ಸಮಸ್ಯೆ ಪರಿಹರಿಸಲು ಮುಂದಾಗದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಥಣಿ ತಾಲೂಕಿನ ಅರಟಾಳ ಗ್ರಾಪಂ ವ್ಯಾಪ್ತಿಯಲ್ಲಿ ಬಾಡಗಿ, ಹಾಲಳ್ಳಿ ಗ್ರಾಮಗಳು ಬರುತ್ತವೆ. ಒಟ್ಟು ಮೂರು ಹಳ್ಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳು ಹೆಸರಿಗೆ ಮಾತ್ರ ಇದ್ದಂತಿವೆ. ಪ್ರಾರಂಭದಿಂದಲೂ ಒಂದಿಲ್ಲೊಂದು ಸಮಸ್ಯೆಯಿಂದ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ಭೂ ಸೇನಾ ನಿಗಮದವರನ್ನು ಕೇಳಿದರೆ, ‘ನಾವು ಘಟಕ ಅಳವಡಿಸಿ ಎರಡ್ಮೂರು ವರ್ಷ ಕಳೆದಿವೆ.

    ಇದಕ್ಕೆ ಗ್ರಾಮ ಪಂಚಾಯಿತಿಯೇ ಹೊಣೆ’ ಎನ್ನುತ್ತಾರೆ. ಗ್ರಾಪಂನವರನ್ನು ಕೇಳಿದರೆ, ‘ಗುತ್ತಿಗೆದಾರರು ಕಳಪೆ ಸಾಮಗ್ರಿ ಅಳವಡಿಸಿರುವುದರಿಂದ ಘಟಕಗಳು ಕೆಟ್ಟು ನಿಲ್ಲುತ್ತಿವೆ’ ಎನ್ನುತ್ತಾರೆ. ಹೀಗಾಗಿ ಸಾರ್ವಜನಿಕರಿಗೆ ಶುದ್ಧ ನೀರು ದೊರೆಯದೇ ಸಮಸ್ಯೆಯಾಗಿದೆ. ಕೆಲವರು ಶುದ್ಧ ನೀರಿಗಾಗಿ ದೂರದ ಊರುಗಳಿಗೆ ಹೋಗಿ ತರುತ್ತಿದ್ದಾರೆ.

    ಶುದ್ಧ ನೀರು ಕುಡಿಯಿರಿ ಎಂದು ತಿಳಿವಳಿಕೆ ನೀಡುವ ಅಧಿಕಾರಿಗಳು ಜನರಿಗೆ ಶುದ್ಧ ನೀರು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಜನರು ಅನಿವಾರ್ಯವಾಗಿ ಅಶುದ್ಧ ನೀರು ಸೇವಿಸಿ ಕಾಯಿಲೆಗೊಳಗಾಗುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಶುದ್ಧ ಕುಡಿಯುವ ನೀರು ದೊರಕಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಗ್ರಾಮ ಪಂಚಾಯಿತಿ ಸಭೆಗಳಲ್ಲಿ ಶುದ್ಧ ನೀರಿನ ಘಟಕಗಳ ಸಮಸ್ಯೆಗಳ ಬಗ್ಗೆ ಠರಾವಿನ ಮೂಲಕ ಹಲವು ಬಾರಿ ಮೇಲಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂಬುದು ಗ್ರಾಪಂ ಸದಸ್ಯರ ಆರೋಪವಾಗಿದೆ.

    ಗ್ರಾಮಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಗೆ ಬಂದಿರುವ ಕುರಿತು ಗಮನಹರಿಸಲಾಗುವುದು. ಸಂಬಂಧಿಸಿದವರೊಂದಿಗೆ ಈ ಕುರಿತು ಮಾತನಾಡಿ ಸಮಸ್ಯೆ ಬಗೆ ಹರಿಸಲಾಗುವುದು.
    | ರವೀಂದ್ರ ಬಂಗಾರೆಪ್ಪನವರ ತಾಪಂ ಇಒ

    ಶುದ್ಧ ನೀರಿನ ಘಟಕಕ್ಕೆ ಹಾಕಿರುವ ಸಾಮಗ್ರಿಗಳು ಕಳಪೆಯಿಂದ ಕೂಡಿವೆ. ನಾವು ಎಷ್ಟೇ ರಿಪೇರಿ ಮಾಡಿದರೂ ಸರಿಯಾಗಿ ನೀರು ಒದಗಿಸಲು ಆಗುತ್ತಿಲ್ಲ. ಪದೇ ಪದೆ ರಿಪೇರಿಗೆ ಬರುತ್ತಿವೆ. ಆದರೂ ಶೀಘ್ರದಲ್ಲಿ ಶುದ್ಧ ನೀರಿನ ಘಟಕಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
    | ಎ.ಜಿ. ಎಡಕೆ ಗ್ರಾಪಂ ಪಿಡಿಒ ಅರಟಾಳ

    ಗ್ರಾಮದಲ್ಲಿನ ಶುದ್ಧ ನೀರಿನ ಘಟಕ ನೀರು ಒದಗಿಸುವಲ್ಲಿ ವಿಫಲವಾಗಿದೆ. ಶುದ್ಧ ನೀರು ಬೇಕಾದರೆ ದೂರದ ಊರುಗಳಿಗೆ ತೆರಳಿ ತರಬೇಕು. ಆದರೆ, ಇದು ಜನರಿಗೆ ಕಷ್ಟಕರ ಕಾರ್ಯವಾಗಿದೆ. ಗ್ರಾಮದಲ್ಲಿನ ಕುಡಿಯುವ ನೀರಿನ ಘಟಕ ಸಂಪೂರ್ಣ ಕಳಪೆ ಮಟ್ಟದಾಗಿದೆ. ಇದರ ಬಗ್ಗೆ ಗ್ರಾಮ ಸಭೆಯಲ್ಲಿ ಚರ್ಚಿಸಿದರೂ ಪ್ರಯೋಜನವಾಗಿಲ್ಲ.
    | ಮಾಳಪ್ಪ ಕಾಂಬಳೆ ಅರಟಾಳ ಗ್ರಾಮಸ್ಥ

    | ಶ್ರೀಶೈಲ ಮಾಳಿ ಅರಟಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts